ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶಾಸಕರ ಭೇಟಿ

0
98

ಮಡಿಕೇರಿ :-ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಸೋಮವಾರ ಭೇಟಿ ನೀಡಿ ವಾರ್ಡ್‍ಗಳನ್ನು ಪರಿಶೀಲಿಸಿ ಸೋಂಕಿತ ರೋಗಿಗಳೊಂದಿಗೆ ಚರ್ಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳಿವೆ. ಕೆಲವೊಂದು ಸಣ್ಣ ಲೋಪಗಳನ್ನೇ ದೊಡ್ಡದು ಮಾಡಿ ಹೇಳುವುದು ಸರಿಯಲ್ಲ. ಇದರಿಂದಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ಮಾನಸಿಕ ಸ್ಥೈರ್ಯದ ಮೇಲೆ ಪರಿಣಾಮ ಬೀರುತ್ತದೆ. ಅವರೂ ಕೂಡ ಸಂಸಾರ ಹೊಂದಿದವರೇ, ಸೋಂಕಿತರನ್ನು ಗುಣಮುಖವಾಗಿಸಲು ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತವರ ಮೇಲೆ ಅನಗತ್ಯ ದೂರು ಹೇಳಬಾರದು ಎಂದು ಅವರು ಹೇಳಿದರು.
ವಾರ್ಡ್‍ನಲ್ಲಿರುವವರೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ, ಸೌಲಭ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಶುಶ್ರೂಷೆ ಚೆನ್ನಾಗಿದೆ ಎಂದು ಹೇಳಿದ್ದಾರೆ. ಸದ್ಯಕ್ಕೆ 250 ಹಾಸಿಗೆಗಳು ಕೋವಿಡ್ ಆಸ್ಪತ್ರೆಯಲ್ಲಿದೆ ಎಂದರು.
ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಬೇರೆ ಕಡೆ ಹೋಲಿಸಿದರೆ ಉತ್ತಮ ಚಿಕಿತ್ಸೆ ಲಭ್ಯವಿದೆ. ಅಪಪ್ರಚಾರಗಳಿಗೆ ಕಿವಿಗೊಡದೇ ರೋಗ ಲಕ್ಷಣಗಳಿದ್ದಲ್ಲಿ ಕೂಡಲೇ ಆಸ್ಪತ್ರೆಗೆ ಬರಬೇಕು ಎಂದು ಶಾಸಕರು ಮನವಿ ಮಾಡಿದರು.
ಮಾಸ್ಕ್ ಬೇಕಾಬಿಟ್ಟಿ ಧರಿಸದೇ ಸರಿಯಾಗಿ ಧರಿಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು. ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಕೊರೊನಾ ನಿರ್ಮೂಲನೆ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಕಾರ್ಯಪ್ಪ, ವೈದ್ಯಾಧಿಕಾರಿಗಳಾದ ಡಾ.ಲೋಕೇಶ್, ಡಾ.ರೂಪೇಶ್, ಇತರರು ಇದ್ದರು.

LEAVE A REPLY

Please enter your comment!
Please enter your name here