ವರಿಷ್ಟರ ವಿರುದ್ಧ ಯುದ್ಧಕ್ಕೆ ಸಜ್ಜಾಗುತ್ತಿದ್ದಾರಾ ಯಡಿಯೂರಪ್ಪ?

0
110

ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಡಿನ ಪ್ರಭಾವಿ ಮಠವೊಂದಕ್ಕೆ ಹೋದರು.
ಹೀಗೆ ಹೋದವರು ನಿಗದಿತ ಕಾರ್ಯಕ್ರಮ ಮುಗಿದ ನಂತರ ತಮ್ಮ ಜತೆಗಿದ್ದ ಸಚಿವರು,ಶಾಸಕರನ್ನು ಬಿಟ್ಟು ಮಠಾಧಿಪತಿಗಳನ್ನು ಭೇಟಿ ಮಾಡಿದರು.
ಮಠಾಧಿಪತಿಗಳ ಜತೆ ಅವರು ನಡೆಸಿದ ರಹಸ್ಯ ಚರ್ಚೆಯ ವಿವರ ಏನೆಂಬುದು ಇದುವರೆಗೆ ಬಹಿರಂಗವಾಗಿಲ್ಲ.
ಆದರೆ ಇದಾದ ಕೆಲವೇ ದಿನಗಳಲ್ಲಿ ಬಿಜೆಪಿ ಪಾಳೆಯದಲ್ಲಿ ಒಂದು ಸಂಶಯ ತೊಳಲಾಡುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದ ವರಿಷ್ಟರ ವಿರುದ್ಧ ಬಂಡೇಳಲು ಸಜ್ಜಾಗುತ್ತಿದ್ದಾರಾ?ಎಂಬುದು ಈ ಅನುಮಾನ.
ಈ ಅನುಮಾನದ ಬಗ್ಗೆ ಕೇಳಿದರೆ ಯಡಿಯೂರಪ್ಪ ಅವರ ಆಪ್ತರು:ಅಂತಹ ಚಾನ್ಸೇ ಇಲ್ಲ ಎನ್ನುತ್ತಾರೆ.
ಅಷ್ಟೇ ಅಲ್ಲ,ಇತ್ತೀಚೆಗೆ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ದಿಲ್ಲಿಗೆ ಹೋದಾಗ ರಾಜ್ಯ ಬಿಜೆಪಿಯ‌ ಉಸ್ತುವಾರಿ ವಹಿಸಿಕೊಂಡ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.ಈ ಸಂದರ್ಭದಲ್ಲಿ ಅವರು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಖಚಿತವಾಗಿ ಹೇಳಿದ್ದಾರೆ.
ಹಾಗೆಯೇ,ರಾಜ್ಯದಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಯಡಿಯೂರಪ್ಪ ಅವರು ಹಗಲಿರುಳು ಹೋರಾಡುತ್ತಿದ್ದರೆ ಅವರ ಸಂಪುಟದ ಬಹುತೇಕ ಮಂತ್ರಿಗಳು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ.
ಹೀಗಾಗಿ ಸಧ್ಯದಲ್ಲೇ ರಾಜ್ಯ ಸಚಿವ ಸಂಪುಟವನ್ನು ಪುನರ್ರಚಿಸಲು ವರಿಷ್ಟರು ಚಿಂತನೆ ನಡೆಸಿದ್ದಾರೆ.ನಾಯಕನಿಗೆ ಸಮರ್ಥ ತಂಡ ಒದಗಿಸುವುದು ಈಗ ನಮ್ಮ ಆದ್ಯತೆ ಎಂದಿದ್ದಾರೆ.
ಹೀಗೆ ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ವರಿಷ್ಟರು ಇಷ್ಟು ವಿಶ್ವಾಸ ಹೊಂದಿರುವಾಗ ಯಡಿಯೂರಪ್ಪ ಅವರೇಕೆ ಬಂಡಾಯ ಏಳುತ್ತಾರೆ?ಎಂದು ಮರುಪ್ರಶ್ನೆ ಮಾಡುತ್ತಾರೆ.


ಯಡಿಯೂರಪ್ಪ ಅವರ ಬೆಂಬಲಿಗರಿಂದ ವ್ಯಕ್ತವಾಗುತ್ತಿರುವ ಈ ಆತ್ಮವಿಶ್ವಾಸವೇನೋ ಕುತೂಹಲಕಾರಿಯಾಗಿದೆ.
ಆದರೆ ಯಡಿಯೂರಪ್ಪ ವಿರೋಧಿ ಕ್ಯಾಂಪಿನವರು ಬೇರೆಯೇ ಕತೆ ಹೇಳುತ್ತಾರೆ.
ಅವರ ಪ್ರಕಾರ:ಪೂಜಾರಿಯ ಭರವಸೆಯನ್ನು ಆಂಜನೇಯ ಸ್ವಾಮಿಯ ಆಭಯ ಅಂತ ಬಣ್ಣಿಸಲು ಸಾಧ್ಯವಿಲ್ಲ.ಯಾಕೆಂದರೆ ನಾಯಕತ್ವ ಬದಲಾವಣೆಯ ವಿಷಯ ಯಾವತ್ತೋ ತೀರ್ಮಾನವಾಗಿದೆ.ಆದರೆ ಕೊರೋನಾ ಸಂಕಟದಿಂದ ರಾಜ್ಯ ಬಳಲುತ್ತಿರುವಾಗ,ಲಾಕ್ ಡೌನ್ ಮುಂದುವರಿದಿರುವಾಗ ಏಕಾಏಕಿ ಈ ಕೆಲಸಕ್ಕೆ ಕೈ ಹಾಕಬಾರದು ಎಂದು ವರಿಷ್ಟರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಒಂದು ವೇಳೆ ನಾಯಕತ್ವ ಬದಲಾವಣೆಯ ಪ್ರಸ್ತಾಪವೇ ಇಲ್ಲದೆ ಹೋಗಿದ್ದರೆ ಕೇಂದ್ರ ಸಚಿವ ಪ್ರಹ್ಲಾದ ರ ಜೋಷಿ ಮತ್ತು‌ ರಾಜ್ಯದ ಗಣಿ ಸಚಿವ ಮುರುಗೇಶ್ ನಿರಾಣಿ ಅವರ ಹೆಸರುಗಳು ಹೇಗೆ ರೇಸಿಗೆ ಬರುತ್ತಿದ್ದವು?
ಈ ಪೈಕಿ ಪ್ರಹ್ಲಾದ್ ಜೋಷಿ ಅವರಂತೂ ಪ್ರಧಾನಿಯ ಕಣ್ಣಳತೆಯಲ್ಲೇ ಇರುವವರು.ಹೀಗಾಗಿ ಅವರ ಹೆಸರು ಹೇಗೆ ರೇಸಿಗೆ ಬಂತು ಅಂತ ಹೇಳುವುದು ಕಷ್ಟವಲ್ಲ.
ಆದರೆ ಮುರುಗೇಶ್ ನಿರಾಣಿ ಹೆಸರು ಹೇಗೆ ರೇಸಿಗೆ ಬಂತು ಎಂಬ ಸತ್ಯ ಕಣ್ಣೆದುರಿಗೇ ಇದೆಯಲ್ಲ?ಪಕ್ಷದ ನಾಯಕ ಅಮಿತ್ ಷಾ ಪದೇ ಪದೇ ನಿರಾಣಿ ಅವರನ್ನು ಕರೆದು ಮಾತನಾಡುತ್ತಿರುವುದೇಕೆ?ಆರ್.ಎಸ್ .ಎಸ್ ವರಿಷ್ಟರಾದ ಮೋಹನ್ ಭಾಗವತ್ ಅವರೇಕೆ ನಿರಾಣಿ ಅವರನ್ನು ಕರೆಸಿ ರಹಸ್ಯ ಚರ್ಚೆ ಮಾಡಿದ್ದಾರೆ?ಹೀಗಾಗಿ ಕಾದು ನೋಡುತ್ತಿರಿ.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಎರಡು ವರ್ಷ ಕಳೆಯುತ್ತಿದ್ದಂತೆಯೇ‌ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಬರುತ್ತಾರೆ.


ಹೀಗೆ ಯಡಿಯೂರಪ್ಪ ಅವರ ಪರ-ವಿರೋಧದ ಚರ್ಚೆ ಚಾಲ್ತಿಯಲ್ಲಿರುವಾಗಲೇ ಕೆಲವು ವಿಸ್ಮಯಕಾರಿ ಘಟನೆಗಳು ನಡೆದಿವೆ.
ಈ ಪೈಕಿ ಯಡಿಯೂರಪ್ಪ ಅಭಿಮಾನಿಗಳ ಹೆಸರಿನಲ್ಲಿ ಎಲ್ಲೆಡೆ ಹರಿದಾಡುತ್ತಿರುವ ಸಂದೇಶವೂ ಒಂದು.
ಸಾವಿರಾರು ವ್ಯಾಟ್ಸ್ ಅಪ್ ಗ್ರೂಪುಗಳ ಮೂಲಕ ಹರಿದಾಡುತ್ತಿರುವ ಈ ಸಂದೇಶ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬ್ರಾಹ್ಮಣ ಸಮುದಾಯದ ಪ್ರಹ್ಲಾದ ಜೋಷಿ ಅವರನ್ನು ತಂದು ಕೂರಿಸಲು ಸಂತೋಷ್ ಸಂಚು ನಡೆಸಿದ್ದಾರೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುತ್ತದೆ.
ಪಕ್ಷದ ಶಾಸಕರನ್ನು ಒಗ್ಗೂಡಿಸಲು ಸಚಿವ ವಿ.ಸೋಮಣ್ಣ ಅವರಿಗೆ ಹೇಳಿ,ನಿರಾಣಿ ತರದವರನ್ನು ಎತ್ತಿ ಕಟ್ಟಿ ಅವರವರೇ ಜಗಳವಾಡುವಂತೆ ನೋಡಿಕೊಂಡು ಇದರ ಮಧ್ಯೆ ಪ್ರಹ್ಲಾದ್ ಜೋಷಿ ಅವರನ್ನು ನುಸುಳಿಸಿ ಮುಖ್ಯಮಂತ್ರಿ‌ ಹುದ್ದೆಯ ಮೇಲೆ ಕೂರಿಸುವುದು ಈ ಸಂಚಿನ ವಿಸ್ತ್ರತ ಭಾಗ ಎಂಬುದು ಈ ಸಂದೇಶದ ಧ್ವನಿ.
ಕುತೂಹಲದ ಸಂಗತಿ ಎಂದರೆ ಈ ಸಂದೇಶ ಮುಂದುವರಿದು,ಮಹಾರಾಷ್ಟ್ರದಲ್ಲಿ ಮರಾಠರ ಬೆಂಬಲ ಪಡೆದು ಕೊನೆಗೆ ಬ್ರಾಹ್ಮಣ ಸಮುದಾಯದ ದೇವೇಂದ್ರ ಫಡ್ನವೀಸ್ ಅವರನ್ನು ಸಿಎಂ ಹುದ್ದೆಗೆ ತಂದು ಕೂರಿಸಲಾಗಿತ್ತು ಎಂದು ಬಿಜೆಪಿ ವರಿಷ್ಟರಿಗೂ ಡಿಚ್ಚಿ ಹೊಡೆಯುತ್ತದೆ
ಮುಂದುವರಿದು,ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಬೆಂಬಲ ಪಡೆದು ಈಗ ಅಡ್ಡ ದಾರಿಯಲ್ಲಿ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಷಿ ಅವರನ್ನು ತಂದು ಕೂರಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಕಿಕ್ ಜತೆಗೆ ಈ ಸಂದೇಶ ಮುಕ್ತಾಯವಾಗುತ್ತದೆ.
ಅಂದ ಹಾಗೆ ಈ ಸಂದೇಶ ಲಿಂಗಾಯತ ಮತದಾರರಿಗೆ ಎಷ್ಟು‌ ವ್ಯವಸ್ಥಿತವಾಗಿ ತಲುಪುತ್ತಿದೆ ಎಂದರೆ, ಪರಿಸ್ಥಿತಿ ಕೈ ಮೀರಿ ಯಡಿಯೂರಪ್ಪ ಅವರೇನಾದರೂ ಕೆಳಗಿಳಿದರೆ ಸಮುದಾಯ ಬಿಜೆಪಿ ವಿರುದ್ಧ ಸಿಡಿದು ನಿಲ್ಲಬೇಕು ಅಂತ ಪರೋಕ್ಷವಾಗಿ ಸೂಚಿಸುವಲ್ಲಿ ಯಶ ಕಂಡಿದೆ.
ಯಡಿಯೂರಪ್ಪ ಅವರ ವಿರೋಧಿಗಳ ಪ್ರಕಾರ,ಮುಖ್ಯಮಂತ್ರಿಗಳು‌ ಈ ನಾಡಿನ‌ ಪ್ರಮುಖ ಮಠಾಧಿಪತಿ ಒಬ್ಬರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಕ್ಕೂ,ಇಂತಹ ಮಿಸೈಲ್ ಸಂದೇಶ ಹರಿದಾಡುತ್ತಿರುವುದಕ್ಕೂ ಸಂಬಂಧ ಇದೆ.


ಈ ಮಧ್ಯೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನೆನಪಿಸಿಕೊಂಡ ಒಂದು ಘಟನೆ ಯಡಿಯೂರಪ್ಪ ಅವರ ವಿರುದ್ಧದ ಅಸಮಾಧಾನವನ್ನು ಸಂಕೇತಿಸುವಂತಿದೆ.
ವಿಜಯ ನಗರ ಸಾಮ್ರಾಜ್ಯ ಪತನವಾಗಲು ಏನು ಕಾರಣ?ಎಂಬುದನ್ನು ಕೇಂದ್ರೀಕರಿಸಿಕೊಂಡ ಈ ಬರಹ ಅಳಿಯ ರಾಮರಾಯ ಮಾಡಿದ ತಪ್ಪೇನು ಎಂದು ಗುರುತಿಸುತ್ಯದೆ.
ತನ್ನ ಸುತ್ತ ನಿಷ್ಟಾವಂತರನ್ನು ಬಿಟ್ಟು ಭಟ್ಟಂಗಿಗಳನ್ನು, ಅಸಮರ್ಥರನ್ನು ಅಳಿಯ ರಾಮರಾಯ ಇಟ್ಟುಕೊಂಡ ಕಾರಣಕ್ಕಾಗಿ ವಿಜಯನಗರ ಸಾಮ್ರಾಜ್ಯ ಪತನವಾಯಿತು ಎಂಬಲ್ಲಿಗೆ ಸಿ.ಟಿ.ರವಿಯವರ ವಿಷಾದ ತಲುಪುತ್ತದೆ.
ಇಲ್ಲಿ ಸಿ.ಟಿ.ರವಿ ಉದಾಹರಿಸಿದ ಅಳಿಯ ರಾಮರಾಯ ಯಡಿಯೂರಪ್ಪ ಅಲ್ಲದೆ ಬೇರೆಯಲ್ಲ ಅಂತ ವಿರೋಧಿಗಳು ಮಾತ್ರವಲ್ಲ,ಪರವಾಗಿರುವವರೂ ಹೇಳತೊಡಗಿದ್ದಾರೆ.
ಅಂದ ಹಾಗೆ ಅಳಿಯ ರಾಮರಾಯನ ಕತೆ ಹೇಳಿದ ಸಿ.ಟಿ.ರವಿ ನೇರವಾಗಿ ಸಂತೋಷ್ ಗ್ಯಾಂಗಿನವರು.ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದ ಅವರಿಗೆ ರಾಷ್ಟ್ರ ರಾಜಕಾರಣದ ಕನಸು ತೋರಿಸಿ ಕರೆದೊಯ್ದವರೂ ಇದೇ ಸಂತೋಷ್.
ಅರ್ಥಾತ್,ಯಡಿಯೂರಪ್ಪ ಅವರ ಪರ ಹೇಗೆ ಒಂದು ಸಂದೇಶ ತಿರುಗತೊಡಗಿದೆಯೋ?ಅದೇ ವೇಗದಲ್ಲಿ ಸಿ.ಟಿ.ರವಿ ಅವರ ಅಳಿಯ ರಾಮರಾಯನ ಎಪಿಸೋಡು ಬಿಜೆಪಿ ಪಾಳೆಯದಲ್ಲಿ ಬಂಪರ್ ಟಿ.ಆರ್.ಪಿ ಗಳಿಸಿಕೊಂಡಿದೆ.
ಅಲ್ಲಿಗೆ ಯಡಿಯೂರಪ್ಪ ಮತ್ತು ಸಂತೋಷ್ ನಡುವೆ ಷೆಲ್ ಬಾಂಬ್ ವಿದ್ಯುಕ್ತವಾಗಿ ಸ್ಪೋಟಗೊಂಡಿರುವುದು ಸ್ಪಷ್ಟವಾಗಿದೆ.


ಹೀಗೆ ಯಡಿಯೂರಪ್ಪ‌ ವರ್ಸಸ್ ಸಂತೋಷ್ ಕದನ ಕಣ್ಣಿಗೆ ಬೀಳುತ್ತಿದ್ದಂತೆಯೇ ಮತ್ತೊಂದು ಷೆಲ್ ಬಾಂಬ್ ಬಿದ್ದಿರುವುದು‌ ಕುತೂಹಲಕಾರಿ.
ಇದನ್ನು ಹಾಕಿರುವವರು ದಿವಂಗತ ಅನಂತಕುಮಾರ್ ಅವರ ಪತ್ನಿ,ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ.
ಸಿಎಂ ಯಡಿಯೂರಪ್ಪ‌ ಮತ್ತು ಸಂತೋಷ್ ಮಧ್ಯದ ಕದನ ಶುರುವಾಗುತ್ತಿದ್ದಂತೆಯೇ ತೇಜಸ್ವಿನಿ ಅನಂತಕುಮಾರ್ ಕೂಡಾ ಇತಿಹಾಸದ ಗರ್ಭದೊಳಗೆ ನುಗ್ಗಿ,ಜಗತ್ತಿನ ಇತಿಹಾಸದಲ್ಲಿ ಏಕಚಕ್ರಾಧಿಪತಿಗಳಾಗಿರುವವರೆಲ್ಲ ತಮ್ಮ ಸರ್ವಾಧಿಕಾರಿ ಧೋರಣೆಯಿಂದಲೇ ಪತನವಾಗಿದ್ದಾರೆ ಎಂಬ ಸತ್ಯವನ್ನು ಹೆಕ್ಕಿದ್ದಾರೆ.
ಅಷ್ಟೇ ಅಲ್ಲ,ದೇಶದ ಸಧ್ಯದ ಬೆಳವಣಿಗೆಗಳು ಹಾಗೇ ಇವೆ ಅಂತ ಗಂಧಕದ ಪುಡಿ ಬೆರೆಸಿ ರಣಭೂಮಿಯ ಮಧ್ಯೆ ಬಿಸಾಡಿದ್ದಾರೆ.
ಅವರ ಷೆಲ್ ಬಾಂಬಿನ ಗುರಿ ಏಕಕಾಲಕ್ಕೆ ಪ್ರಧಾನಿ ಮೋದಿ ಅವರಿಗೆ ಬಡಿದು ಅದರ ತುಣುಕುಗಳು ಸಂತೋಷ್ ಮೇಲೆ ಬಿದ್ದಿರುವುದು ಸ್ಪಷ್ಟ.
ಒಂದು ಕಾಲದಲ್ಲಿ ರಾಜ್ಯ ಬಿಜೆಪಿಯ ಮೇಲಿನ ಅಧಿಪತ್ಯಕ್ಕಾಗಿ ತೇಜಸ್ವಿನಿ ಅವರ ಪತಿ ಅನಂತಕುಮಾರ್ ಮತ್ತು ಯಡಿಯೂರಪ್ಪ ಬಡಿದಾಡಿದ್ದರಾದರೂ ಬದಲಾದ ಸನ್ನಿವೇಶದಲ್ಲಿ ತೇಜಸ್ವಿನಿ ಅವರು ಯಡಿಯೂರಪ್ಪ ಕ್ಯಾಂಪಿನ ಸನಿಹದಲ್ಲಿದ್ದಾರೆ.
ಹಾಗಂತ ಬಿಜೆಪಿಯ ಬಣ ರಾಜಕೀಯದಲ್ಲಿ ಅವರು ಗುರುತಿಸಿಕೊಂಡಿಲ್ಲವಾದರೂ ಯಡಿಯೂರಪ್ಪ ಅವರಂತೆಯೇ ಸಂತೋಷ್ ಅವರನ್ನು ಕಂಡರೆ ಕುದಿಯುತ್ತಾರೆ.
ಇದಕ್ಕೆ ಕಾರಣವೂ ಇದೆ.ಅದೆಂದರೆ ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ದಿಸಲು ತಮಗೆ ಸಿಗಬೇಕಿದ್ದ ಬಿಜೆಪಿ‌ ಟಿಕೆಟ್ ತಪ್ಪಿಸಿದವರು ಇದೇ ಸಂತೋಷ್ ಅನ್ನುವುದು.
ಅವತ್ತು ತಮಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಪ್ರಯತ್ನಿಸಿದರು.ಆದರೆ ಅದಕ್ಕೆ ಅಡ್ಡಗಾಲು ಹಾಕಿದ ಸಂತೋಷ್ ಅವರು ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಕೊಡಿಸಿದರು ಎಂಬುದು ಅವರ ಕುದಿ.ಈ ಸ್ಥಿತಿಯಲ್ಲಿಯೇ ಅವರು ಎರಡು ವರ್ಷ ಸವೆಸಿದ್ದಾರೆ.
ಯಡಿಯೂರಪ್ಪ ಹಾಗೂ ಸಂತೋಷ್ ನಡುವೆ ಕದನ ಶುರುವಾಗುತ್ತಿದ್ದಂತೆಯೇ ಅವರ ಸಿಟ್ಟು ಏಕಕಾಲಕ್ಕೆ ಪ್ರಧಾನಿ ಮೋದಿ ಹಾಗೂ ಸಂತೋಷ್ ವಿರುದ್ಧ ಸಿಡಿದಿರುವುದರಿಂದ ನಾನಾ ಬಗೆಯ ವ್ಯಾಖ್ಯಾನಗಳು ಶುರುವಾಗಿವೆ.
ಇದಕ್ಕೆ ಯಡಿಯೂರಪ್ಪ ಅವರ ಪರವಾಗಿ ಲಿಂಗಾಯತ ಸಮುದಾಯದ ಮಧ್ಯೆ ಹರಿದಾಡುತ್ತಿರುವ ಸಂದೇಶ ಸೇರಿದರೆ ಆ ಅನುಮಾನಕ್ಕೆ ಪುಷ್ಟಿ ದೊರೆಯುತ್ತದೆ.
ಅದೆಂದರೆ,ತಾವು ಕೆಳಗಿಳಿಯುವುದು ಅನಿವಾರ್ಯವಾದರೆ ಪಕ್ಷದ ವರಿಷ್ಟರ ವಿರುದ್ಧ ಯುದ್ಧ ಸಾರಲು ಯಡಿಯೂರಪ್ಪ ಹಿಂಜರಿಯುವುದಿಲ್ಲ ಎಂಬುದು.
ಪರಿಣಾಮವಾಗಿ ರಾಜ್ಯ ಬಿಜೆಪಿಯ ನೆತ್ತಿಯ ಮೇಲೆ ಯುದ್ಧದ ಕಾರ್ಮೋಡಗಳು ಆವರಿಸತೊಡಗಿವೆ.
ಮುಂದೇನಾಗುತ್ತದೋ? ಕಾದು ನೋಡಬೇಕು.

ಆರ್.ಟಿ.ವಿಠ್ಢಲಮೂರ್ತಿ

LEAVE A REPLY

Please enter your comment!
Please enter your name here