ಪ್ರತಿ ತಾಲೂಕಿಗೊಂದು ಮಕ್ಕಳ ಕೋವಿಡ್ ಕೇರ್ ಸೆಂಟರ್,ಜಿಲ್ಲಾಸ್ಪತ್ರೆ ಮಕ್ಕಳ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಬಾಲಚೈತನ್ಯ ಯೋಜನೆ ರಾಜ್ಯಾದ್ಯಂತ ವಿಸ್ತರಣೆಗೆ ಕ್ರಮ:ಸಚಿವೆ ಶಶಿಕಲಾ ಜೊಲ್ಲೆ

0
63

ಬಳ್ಳಾರಿ, ಜೂ.11: ಕೊರೊನಾ ಸಂಭಾವ್ಯ 3ಅಲೆಯಿಂದ ಮಕ್ಕಳನ್ನು ಪಾರುಮಾಡುವ ನಿಟ್ಟಿನಲ್ಲಿ ಹಾಗೂ ಅಪೌಷ್ಟಿಕ ಮಕ್ಕಳನ್ನು ರಕ್ಷಿಸುವ ಸದುದ್ದೇಶದಿಂದ ಬಳ್ಳಾರಿಯಲ್ಲಿ ಜಾರಿಗೆ ತಂದಿರುವ ಬಾಲಚೈತನ್ಯ ಯೋಜನೆಯು ಅತ್ಯಂತ ವಿಶಿಷ್ಠವಾಗಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ರಾಜ್ಯಾದ್ಯಂತ ವಿಸ್ತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಕೊರೊನಾ ಸಂಭಾವ್ಯ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
3ನೇ ಅಲೆಯ ಸಂದರ್ಭದಲ್ಲಿ ತೀವ್ರ ಅಪೌಷ್ಠಿಕ ಮಕ್ಕಳು ಹಾಗೂ ಸಾಧಾರಣ ಅಪೌಷ್ಠಿಕ ಮಕ್ಕಳು, ಕೋವಿಡ್ ಸೊಂಕಿನಿಂದಾಗಿ ಮರಣ ಹೊಂದುವ ಪ್ರಮಾಣವನ್ನು ಕಡಿಮೆಗೊಳಿಸಲು ಸದರಿ ಮಕ್ಕಳಿಗಾಗಿ ಪೂರ್ವಭಾವಿಯಾಗಿ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೇವೆಗಳ ವ್ಯವಸ್ಥೆ ಮಾಡಲು ಬಾಲಚೈತನ್ಯ ಯೋಜನೆ ಜಾರಿಗೆ ತರಲಾಗಿದ್ದು, ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 827 ತೀವ್ರ ಅಪೌಷ್ಠಿಕ ಮಕ್ಕಳಿದ್ದು, 45,774 ಸಾಧರಣಾ ಅಪೌಷ್ಠಿಕ ಮಕ್ಕಳನ್ನು ಗುರುತಿಸಲಾಗಿದ್ದು, ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ 827 ಮಕ್ಕಳನ್ನು ಜಿಲ್ಲೆಯ ಎಲ್ಲ ತಾಲೂಕುಗಳ ಬಾಲಚೈತನ್ಯ ಆರೈಕೆ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಿ ಆ ಮಕ್ಕಳಿಗೆ ಹಾಗೂ ತಾಯಂದಿರಿಗೆ 14 ದಿನಗಳ ಕಾಲ ಪೌಷ್ಠಿಕ ಆಹಾರ ಒದಗಿಸುವುದರ ಜೊತೆಗೆ ಅವರ ಆರೋಗ್ಯ ತಪಾಸಣೆ ಹಾಗೂ ಪೌಷ್ಠಿಕ ಆಹಾರ ತಯಾರಿಸುವ ಮತ್ತು ಮಕ್ಕಳಿಗೆ ನೀಡುವ ಕುರಿತು ಸಹ ತರಬೇತಿ ನೀಡಲಾಗುತ್ತಿದೆ. 14 ದಿನಗಳ ನಂತರವೂ ಒಂದು ವರ್ಷಗಳ ಕಾಲ ಸಹ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಗಾವಹಿಸಲಾಗುತ್ತದೆ;ಇದಕ್ಕೆ ಜಿಲ್ಲೆಯಲ್ಲಿ 60 ಜನ ಖಾಸಗಿ ಮಕ್ಕಳ ತಜ್ಞವೈದ್ಯರು ಉಚಿತವಾಗಿ ಚಿಕಿತ್ಸೆ ನೀಡಲು ಮುಂದೆ ಬಂದಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಹೇಳಿದ ಸಚಿವೆ ಜೊಲ್ಲೆ ಅವರು ಈ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಸ್ತರಿಸಲಾಗುವುದು ಎಂದರು.
*ಅಪೌಷ್ಠಿಕ ಮಕ್ಕಳ ಸಮೀಕ್ಷೆಗೆ ಸೂಚನೆ: ಸಂಭಾವ್ಯ 3ನೇ ಕೊವಿಡ್ ಅಲೆ ಎದುರಾಗುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ ಖಚಿತ ಅಪೌಷ್ಠಿಕ ಮಕ್ಕಳ ಅಂಕಿ-ಸಂಖ್ಯೆಯ ಮಾಹಿತಿ ಪಡೆದು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅಪೌಷ್ಠಿಕ ಮಕ್ಕಳ ಸಮೀಕ್ಷೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ನಿಂದ ತಂದೆ ಮತ್ತು ತಾಯಿ ಕಳೆದುಕೊಂಡ ಇಬ್ಬರು ಮಕ್ಕಳಿದ್ದಾರೆ.ಅದೇ ರೀತಿ 83 ಸಿಂಗಲ್ ಪೆರೆಂಟ್ ಮಕ್ಕಳಿದ್ದು,ಅವರಿಗೆ ಬಾಲಸೇವಾ ಯೋಜನಾ ಅಡಿ ಪರಿಹಾರ,ಉಚಿತ ಶಿಕ್ಷಣ ಸೇರಿದಂತೆ ಅಗತ್ಯ ಕ್ರಮಗಳನ್ನು ನಿಯಮಾನುಸಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸುವಂತೆ ಸಚಿವೆ ಜೊಲ್ಲೆ ಅವರು ಸೂಚಿಸಿದರು ಮತ್ತು ಬಾಲಸೇವಾ ಯೋಜನೆ ಹಾಗೂ ಇಲಾಖೆಯ ಪ್ರಮುಖ ಯೋಜನೆಗಳ ಕುರಿತು ಶಾಸಕರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
*ಬಳ್ಳಾರಿ ಜಿಲ್ಲಾಸ್ಪತ್ರೆ ಮಕ್ಕಳ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ: 3ನೇ ಸಂಭಾವ್ಯ ಅಲೆಯ ಸಂದರ್ಭದಲ್ಲಿ ಸಕಲ ಸೌಕರ್ಯಗಳಿರುವ ಬಳ್ಳಾರಿ ಜಿಲ್ಲಾಸ್ಪತ್ರೆಯನ್ನು ಮಕ್ಕಳ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುತ್ತಿದ್ದು,ವೆಂಟಿಲೇಟರ್,ಐಸಿಯು ಬೆಡ್ ಸೇರಿದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಸಚಿವೆ ಜೊಲ್ಲೆ ಅವರಿಗೆ ವಿವರಿಸಿದರು.
ಬಳ್ಳಾರಿ ಜಿಲ್ಲಾಸ್ಪತ್ರೆಯನ್ನು ಮಕ್ಕಳ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸುವುದರ ಜೊತೆಗೆ ಹೊಸಪೇಟೆ,ಹಡಗಲಿ,ಸಿರಗುಪ್ಪ ಆಸ್ಪತ್ರೆಗಳಲ್ಲಿ ಹಾಗೂ ವಿಮ್ಸ್‍ನ ನ್ಯೂಡೆಂಟಲ್ ಆಸ್ಪತ್ರೆಯಲ್ಲಿಯೂ ಸಹ ಮಕ್ಕಳಿಗಾಗಿ ಐಸಿಯು ಬೆಡ್‍ಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು,ಎಲ್ಲ ವೈದ್ಯಕೀಯ ಪರಿಕರಗಳು ಹಾಗೂ ಔಷಧಿಗಳನ್ನು ಈಗಾಗಲೇ ಖರೀದಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎಲ್ಲ ರೀತಿಯ ಸಿದ್ಧತೆಗಳನ್ನು ಜು.10ರೊಳಗೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 3809 ಮಕ್ಕಳು ಕೋವಿಡ್‍ಗೆ ಬಾಧಿತರಾಗಿದ್ದರು,ಸದ್ಯ 541 ಮಕ್ಕಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಎಚ್‍ಒ ಡಾ.ಜನಾರ್ಧನ್ ಅವರು ತಿಳಿಸಿದರು.
ಸಂಭಾವ್ಯ ಎಂದು ನಿರೀಕ್ಷಿಸಲಾಗುತ್ತಿರುವ 3ನೇ ಅಲೆ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ; ಆದರೇ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಬೇಕು; ಬಂದರೇ ಅಗತ್ಯ ಚಿಕಿತ್ಸೆ ನೀಡಲು ಕ್ರಮವಹಿಸಬೇಕು;ಇಲ್ಲದಿದ್ದಲ್ಲಿ ಈ ಸಿದ್ಧತೆಗಳು ಚಿಕ್ಕಮಕ್ಕಳ ಆರೋಗ್ಯ ಸೇವೆಯ ಬಲವರ್ಧನೆಗೆ ಅತ್ಯಂತ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯವನ್ನು 3ನೇ ಅಲೆಗೆ ಸಂಬಂಧಿಸಿದಂತೆ ನೇಮಿಸಲಾಗಿರುವ ತಜ್ಞರ ಸಮಿತಿಯಲ್ಲಿರುವ ಬಳ್ಳಾರಿಯ ಮಕ್ಕಳ ತಜ್ಞ ಡಾ.ಯೋಗಾನಂದರೆಡ್ಡಿ ಅವರು ಸಚಿವರಿಗೆ ವಿವರಿಸಿದರು.
*ಪ್ರತಿ ತಾಲೂಕಿಗೊಂದು ಮಕ್ಕಳ ಕೋವಿಡ್ ಕೇರ್ ಸೆಂಟರ್‍ಗಳ ಸ್ಥಾಪನೆಗೆ ಸಿದ್ಧತೆ: ಪ್ರತಿ ತಾಲೂಕಿಗೆ ಒಂದರಂತೆ ಮಕ್ಕಳ ಕೋವಿಡ್ ಕೇರ್ ಸೆಂಟರ್‍ಗಳ ಸ್ಥಾಪನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಸಚಿವೆ ಶಶಿಕಲಾ ಜೊಲ್ಲೆ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಪ್ರತಿ ತಾಲೂಕಿಗೆ ಒಂದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಡಿ ಬರುವ ವಸತಿ ನಿಲಯಗಳು,ಕಟ್ಟಡಗಳಲ್ಲಿ ಅಥವಾ ಇಲ್ಲದಿದ್ದಲ್ಲಿ ಬೇರೆ ವಸತಿ ಶಾಲೆಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಸ್ಥಾಪಿಸಿ. 1ತಿಂಗಳಿಂದ 10ವರ್ಷದವರೆಗೆ ಒಂದು ರೀತಿ ಮತ್ತು 10 ವರ್ಷದಿಂದ 18 ವರ್ಷದವರೆಗೆ ಬಾಲಕ ಮತ್ತು ಬಾಲಕೀಯರಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್‍ಗಳನ್ನು ಆರಂಭಿಸುವ ನಿಟ್ಟಿನಲ್ಲಿ ತಕ್ಷಣ ಸ್ಥಳಗಳನ್ನು ಗುರುತಿಸಿ ಸಿದ್ಧತೆ ಮಾಡಿಟ್ಟುಕೊಳ್ಳಿ ಎಂದರು.
ಈ ಕೋವಿಡ್ ಕೇರ್ ಸೆಂಟರ್‍ಗಳನ್ನು ಗುರುತಿಸುವ ಸಂದರ್ಭದಲ್ಲಿ ಎಲ್ಲ ರೀತಿಯ ಸೌಕರ್ಯಗಳಿರಬೇಕು ಮತ್ತು ಮಕ್ಕಳು ಅತ್ಯಂತ ಖುಷಿಯಿಂದ ಆಟವಾಡುವಂತಿರಬೇಕು ಎಂಬ ಅಂಶಗಳನ್ನು ಗಮನಹರಿಸಿ ಎಂದರು.
*ಗ್ರಾಪಂ ನಡೆ ಮಹಿಳಾ ಮತ್ತು ಮಕ್ಕಳ ಕಡೆ ಎಫೆಕ್ಟ್;ಬಾಲ್ಯ ವಿವಾಹ ಇಳಿಮುಖ: ಜಿಲ್ಲೆಯಲ್ಲಿ ಈ ವರ್ಷ ಬಳ್ಳಾರಿ ಜಿಪಂನಿಂದ ಕೈಗೊಂಡ ಗ್ರಾಪಂ ನಡೆ ಮಹಿಳಾ ಮತ್ತು ಮಕ್ಕಳ ಕಡೆ ಎಂಬ ವಿಶಿಷ್ಟ ಕಾರ್ಯಕ್ರಮದ ಪರಿಣಾಮ ಕಳೆದ ವರ್ಷಕ್ಕೆ ಹೊಲಿಸಿದರೇ ಈ ವರ್ಷ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಅತ್ಯಂತ ಇಳಿಮುಖವಾಗಿವೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸಚಿವೆ ಜೊಲ್ಲೆ ಅವರ ಗಮನಕ್ಕೆ ತಂದರು.
ಈ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಬಾಲ್ಯವಿವಾಹ ಮತ್ತು ದುಷ್ಪರಿಣಾಮ ಹಾಗೂ ಅದಕ್ಕೆ ಸಂಬಂಧಿಸಿದ ಕಾನೂನು ಮತ್ತು ಶಿಕ್ಷೆಗಳು, ಸಾಕ್ಷ್ಯಚಿತ್ರ, ಹೆಣ್ಮಕ್ಕಳ ಶಿಕ್ಷಣ ಮತ್ತು ಸೌಲಭ್ಯಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಹೆಣ್ಣುಮಕ್ಕಳ ಮೂಲಕವೇ ತಿಂಗಳಲ್ಲಿ ಪ್ರತಿ ಶುಕ್ರವಾರ ಗ್ರಾಪಂ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದ ಸಂದರ್ಭದಲ್ಲಿ ಅರಿವು ಮೂಡಿಸಲಾಗಿದೆ ಎಂದರು.
ಈ ಮುಂಚೆ ರಾಜ್ಯದಲ್ಲಿಯೇ ಅತಿಹೆಚ್ಚು ಬಾಲ್ಯವಿವಾಹ ಪ್ರಕರಣಗಳಿಂದ ಸುದ್ದಿಯಲ್ಲಿದ್ದ ಜಿಲ್ಲೆಯಲ್ಲಿ ಈ ಬಾರಿ ಕಡಿಮೆ ಪ್ರಕರಣಗಳು ವರದಿಯಾಗಿವೆ ಎಂದರು.
ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ 90 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 399 ಪ್ರಕರಣಗಳು ದಾಖಲಾಗಿದ್ದವು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ತಿಳಿಸಿದರು.
2020-21ನೇ ಸಾಲಿನಲ್ಲಿ 68 ಮತ್ತು 2021-22ರ ಸಾಲಿನಲ್ಲಿ 08 ಪೊಕ್ಸೊ ಪ್ರಕರಣಗಳು ದಾಖಲಾಗಿರುವ ಮಾಹಿತಿಯನ್ನು ಸಚಿವರಿಗೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ವಿಸ್ತøತವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಶಾಸಕರಾದ ಸೋಮಶೇಖರರೆಡ್ಡಿ, ಬಿ.ನಾಗೇಂದ್ರ, ಕೆ.ಸಿ.ಕೊಂಡಯ್ಯ,ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಜಿಪಂ ಸಿಇಒ ಕೆ.ಆರ್.ನಂದಿನಿ, ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಹನುಮಂತಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here