ಅಂತರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆ ಅಂಗವಾಗಿ ಪೊಲೀಸ್ ಇಲಾಖೆ ವಶಪಡಿಸಿಕೊಂಡ 8 ಕೆ.ಜಿ. ಅಕ್ರಮ ಗಾಂಜಾ ನಾಶಪಡಿಸಲಾಯಿತು.

0
147

ಧಾರವಾಡ.26: ಅಕ್ರಮ ಗಾಂಜಾ ಮತ್ತು ಇನ್ನಿತರೆ ಮಾದಕ ವಸ್ತುಗಳ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಸ್ಥಳೀಯ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ಕಚೇರಿಗೆ ಮಾಹಿತಿ ನೀಡುವ ಮೂಲಕ ಅಪರಾಧ ಕೃತ್ಯಗಳನ್ನು ತಡೆಯುವಲ್ಲಿ ಇಲಾಖೆಗೆ ಸಹಕಾರ ನೀಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಹೇಳಿದರು.

ಅವರು ಇಂದು ಬೆಳಿಗ್ಗೆ 11 ಗಂಟೆಗೆ, ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ರಿವೋಗ್ರೀನ್ ಇಂಡಿಯಾ ಲಿಮಿಟೆಡ್, ಕಾಮನ್ ಬಯೋಮೆಡಿಕಲ್ ವೇಸ್ಟ್‍ಟ್ರೀಟಮೆಂಟ್ ಮತ್ತು ಡಿಸ್ಪೋಸಲ್ ಫೆಸಿಲಿಟಿ (ಅಃಒWಖಿಈ)ಕೈಗಾರಿಕೆಯಲ್ಲಿ ಜೂನ್ 26 ರ ಅಂತರರಾಷ್ಟ್ರಿಯ ಮಾದಕ ವಸ್ತುಗಳ ರಹಿತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಪೊಲೀಸ್ ಇಲಾಖೆಯಿಂದ ದಾಳಿ ಮಾಡಿ ವಶಪಡಿಸಿಕೊಂಡಿದ್ದ, ಗಾಂಜಾ ನಾಶಗೊಳಿಸಿದ ನಂತರ ಅವರು ಮಾತನಾಡಿದರು.

ಜಿಲ್ಲೆಯ ಪೊಲೀಸ್ ಇಲಾಖೆಯಿಂದ ಗಾಂಜಾ ಸೇರಿದಂತೆ ವಿವಿಧ ಡ್ರಗ್ಸ್ ಸರಬರಾಜು ಮಾಡುವುದನ್ನು ತಡೆಯುವಲ್ಲಿ ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಕುರಿತು ಕಾರ್ಯಾಚರಣೆ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಸಾರ್ವಜನಿಕರು ಅಕ್ರಮ ಗಾಂಜಾ ಮತ್ತು ಇನ್ನಿತರ ಮಾದಕ ವಸ್ತುಗಳ ಬಗ್ಗೆ ಮಾಹಿತಿ ಇದ್ದಲ್ಲಿ ದೂರವಾಣಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಅವರು ತಿಳಿಸಿದರು.

ಅಂತರರಾಷ್ಟ್ರಿಯ ಮಾದಕ ವಸ್ತುಗಳ ರಹಿತ ದಿನಾಚರಣೆ ಅಂಗವಾಗಿ ಧಾರವಾಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಧಾರವಾಡ ಗ್ರಾಮೀಣ, ಕಲಘಟಗಿ, ಗರಗ ವೃತ್ತ, ಕುಂದಗೋಳ ಹಾಗೂ ಸಿಇಎನ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿಯಲ್ಲಿ ದಾಳಿ ಮಾಡಿ ವಿವಿಧ ದಿನಗಳಂದು ದಾಖಲಿಸಿದ 6 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು ಒಂದುವರೆ ಲಕ್ಷ ರೂ. ಮೌಲ್ಯದ (1,50,000/-ರೂ.) 8 ಕೆ.ಜಿ.766 ಗ್ರಾಂ ಗಾಂಜಾವನ್ನು ಧಾರವಾಡ ಡ್ರಗ್‍ಡಿಸ್ಪೋಸಲ್ ಕಮಿಟಿ ಅಧ್ಯಕ್ಷರು ಆಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಅವರ ಅಧ್ಯಕ್ಷತೆಯಲ್ಲಿ ಇಂದು ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ರಿವೋಗ್ರೀನ್ ಇಂಡಿಯಾ ಲಿಮಿಟೆಡ್, ಕಾಮನ್ ಬಯೋಮೆಡಿಕಲ್ ವೇಸ್ಟ್‍ಟ್ರೀಟಮೆಂಟ್ ಮತ್ತು ಡಿಸ್ಪೋಸಲ್ ಫೆಸಿಲಿಟಿ, ಕೈಗಾರಿಕೆಯಲ್ಲಿ ವಿಲೇವಾರಿ ಮಾಡಿ ನಾಶಪಡಿಸಲಾಯಿತು.

ಈ ಹಿಂದೆ ಮಾರ್ಚ್ 06, 2021 ರಂದು 19 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು ಎರಡುವರೆ ಲಕ್ಷ ರೂ. (2,50,000/-ರೂ.) ಮೌಲ್ಯದ 11 ಕೆ.ಜಿ. 146 ಗ್ರಾಂ. ಗಾಂಜಾವನ್ನು ವಿಲೇವಾರಿ ಮಾಡಿ ನಾಶ ಪಡಿಸಲಾಗಿತ್ತು

LEAVE A REPLY

Please enter your comment!
Please enter your name here