ಮಾವು ಬೆಳೆಗಾರರ ನಷ್ಟ ತಪ್ಪಿಸಲು ಮಾವು ಸಂಸ್ಕರಣಾ ಮತ್ತು ಶೀತಲ ಸಂಗ್ರಹ ಘಟಕಗಳ ಸ್ಥಾಪನೆ – ಆರ್.ಶಂಕರ್

0
105

ಕೋಲಾರ,: ಮಾವು ಬೆಳೆದ ರೈತರಿಗೆ ಬೆಲೆ ನಷ್ಟ ಆಗದಂತೆ ಸರ್ಕಾರದಿಂದ ಶೇ. 50ರಷ್ಟು ಅನುದಾನದೊಂದಿಗೆ ಹೆಚ್ಚಿನ ಮಾವು ಸಂಸ್ಕರಣಾ ಘಟಕಗಳನ್ನು ಮತ್ತು ಶೀತಲ ಸಂಗ್ರಹ ಘಟಕಗಳನ್ನು ಸ್ಥಾಪಿಸಬೇಕು. ಈ ಘಟಕಗಳ ಸದುಪಯೋಗದಿಂದ ರೈತರಿಗೆ ಬೆಲೆ ಕುಸಿತ ಆಗುವುದಿಲ್ಲ ಎಂದು ತೋಟಗಾರಿಕೆ ಹಾಗೂ ರೇಷ್ಮೆ ಸಚಿವರಾದ ಆರ್.ಶಂಕರ್ ಅವರು ತಿಳಿಸಿದರು.
ಇಂದು ಶ್ರೀನಿವಾಸಪುರದ ಸನ್ ಸಿಪ್ ಮಾವು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿ, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ರೈತರಿದ್ದಾರೆ. ಈ ವರ್ಷ ಕೋವಿಡ್ ಸಂಕಷ್ಟದಿಂದ ಮಾವು ಬೆಳೆಯ ಬೆಲೆ ಕುಸಿತಗೊಂಡಿದೆ. ವಿಶೇಷವಾಗಿ ತೋತಾಪುರಿ ಮಾವಿನ ಕಾಯಿಗೆ ಸರಿಯಾದ ಬೆಲೆ ಸಿಗದೆ ರೈತರಿಗೆ ತುಂಬಾ ತೊಂದರೆಯಾಗಿದೆ ಎಂದು ತಿಳಿಸಿದರು.
ಶ್ರೀನಿವಾಸಪುರ ಮಾವು ಉತ್ಪನ್ನ ಸಂಸ್ಥೆಯನ್ನು ಸಾವಿರಾರು ರೈತರು ಸೇರಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಮೂಲಕ ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ರೈತರು ಉಪಯೋಗಿಸಿಕೊಳ್ಳುತ್ತಿದ್ದಾರೆ. ಸಂಸ್ಥೆಯವರಿಗೆ ಮಾವು ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಬೇಕಾಗುವ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗುವುದು. ಈ ಸಂಸ್ಥೆಯಿಂದ ಸ್ಥಳೀಯ ರೈತರು ಬೆಳೆದ ಮಾವು ಬೆಳೆಗಳನ್ನು ರೈತರೇ ಸಂಸ್ಕರಣೆ ಮಾಡಿ ಮಾರಾಟ ಮಾಡಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 1200 ರಿಂದ 1800 ಅಡಿ ಅಂತರ್ಜಲ ಕುಸಿತ ಆಗಿರುವುದರಿಂದ ಹನಿ ನೀರಾವರಿಗೆ
ಶೇ. 90 ರಷ್ಟು ಸಬ್ಸಿಡಿ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಯದರೂರು ಎನ್.ಹೆಚ್.ಎಂ ಪಾಲಿಹೌಸ್‍ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿ ಮತ್ತು ಸಮುದಾಯ ಕೃಷಿ ಹೊಂಡದ ವೀಕ್ಷಣೆ ಮಾಡಿ ನೀರಾವರಿ ವ್ಯವಸ್ಥೆ ಇನ್ನಷ್ಟು ಅಭಿವೃದ್ಧಿಪಡಿಸಲು ರೈತರಿಗೆ ಸೂಚಿಸಿದರು.
ಹೊಸಹಳ್ಳಿ ರೈತರ ಮಾವು ಹಣ್ಣು ಮಾಗಿಸುವ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿ.ನಾರಾಯಣಗೌಡ ತೋಟಗಾರಿಕಾ ಕ್ಷೇತ್ರಕ್ಕೆ ಭೇಟಿ ನೀಡಿ ರೇಷ್ಮೆ ಇಲಾಖೆಯಡಿಯಲ್ಲಿ ಸಹಾಯಧನ ಪಡೆದ ರೈತರ ತಾಕುಗಳ ಸಮಸ್ಯೆಗಳನ್ನು ಆಲಿಸಿ ರೈತರೊಂದಿಗೆ ಮಾತನಾಡಿದರು.
ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ (ಹನಿ ನೀರಾವರಿ) ಕದಿರೇಗೌಡ, ಬೆಂಗಳೂರು ವಿಭಾಗೀಯ ತೋಟಗಾರಿಕೆ ಜಂಟಿ ನಿರ್ದೇಶಕರಾದ ಎಂ.ವಿಶ್ವನಾಥ್, ರೇಷ್ಮೆ ಇಲಾಖೆಯ ಅಪರ ನಿರ್ದೇಶಕರಾದ ಬಿ.ಆರ್.ನಾಗಭೂಷಣ್, ಬೆಂಗಳೂರು ವಿಭಾಗೀಯ ರೇಷ್ಮೆ ಜಂಟಿ ನಿರ್ದೇಶಕರಾದ ಟಿ.ಹೆಚ್.ಭೈರಪ್ಪ, ಕೋಲಾರ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಗಾಯಿತ್ರಿ, ಮಾವು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಕೆ.ವಿ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕರಾದ ಡಾ|| ನಾಗರಾಜ್, ಶ್ರೀನಿವಾಸಪುರ ತಹಶೀಲ್ದಾರರಾದ ಎಸ್.ಎನ್.ಶ್ರೀನಿವಾಸ್, ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಭೈರರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here