ವಿಜಯನಗರ ಜಿಲ್ಲಾ ಕಾಂಗ್ರೆಸ್: ಸಂತೋಷ್ ಲಾಡ್ V/S ಸಿರಾಜ್ ಶೇಖ್ ಮದ್ಯೆ ಬಿಗ್ ಫೈಟ್..!

0
192

ಮಾಜಿ ಸಚಿವ ಸಂತೋಷ್ ಲಾಡ್ ಹಾಗೂ ಮಾಜಿ ಶಾಸಕ ಸಿರಾಜ್ ಶೇಖ್ ನಡುವೆ ಬಹು ದಿನಗಳಿಂದಲೂ ತಣ್ಣಗಾಗಿದ್ದ ಭಿನ್ನಮತ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರ ನೇಮಕಾತಿ ಸಂಬಂಧವಾಗಿ ಮತ್ತೇ ಬುಗಿಲೇದ್ದಿದೆ. ಸಂಡೂರಿನ ಪುರಾತನ ರಾಜಕಾರಣ ಬಲ್ಲವರಿಗೆ ಲಾಡ್ ಸಹೋದರರು ಹಾಗೂ ಸಿರಾಜ್ ಶೇಖ್ ನಡುವಿನ ರಾಜಕೀಯ ವೈರತ್ವದ ಪರಿ ಯಾವ ಮಟ್ಟದಲ್ಲಿತ್ತೆನ್ನುವುದು ಗೊತ್ತಿದೆ. ಆದರೆ ನಿನ್ನೆ, ಮೊನ್ನೆ ರಾಜಕಾರಣಕ್ಕೆ ಹಾಗೂ ಮಾಧ್ಯಮ ಕ್ಷೇತ್ರದೊಳಕ್ಕೆ ಎಂಟ್ರೀ ಆದವರಿಗೆ ಇದು ಅಷ್ಟಾಗಿ ಗೊತ್ತಿರದ ಸಂಗತಿ.

ಎಸ್.ಎಂ.ಕೃಷ್ಣ ಸಿಎಂ ಆಗಿದ್ದ ಕಾಲ ದಿಂದಲೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಹಾಗೂ ಆಗ ಶಾಸಕರಾಗಿದ್ದ ಸಿರಾಜ್ ಶೇಖ್ ನಡುವೆ ಉತ್ತಮ ಸಂಬಂಧವಿತ್ತು. ಕೃಷ್ಣರ ಅಚ್ಚುಮೆಚ್ಚಿನ ಹತ್ತು ಶಾಸಕರಲ್ಲಿ ಡಿಕೆ ಶಿವಕುಮಾರ ಜೊತೆಗೆ ಸಿರಾಜ್ ಸಹ ಒಬ್ಬರಾಗಿದ್ರು. ಅವತ್ತಿನ ಸ್ನೇಹ ಇಬ್ಬರ ಮಧ್ಯೆ ಆಗೇಯೇ ಮುಂದುವರೆದು ಕೊಂಡು ಬಂದಿದೆ. ಡಿಕೆಶಿಯವರು ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಪಕ್ಷದಲ್ಲಿ ಸಿರಾಜ್ ಶೇಖ್ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

ವಿಜಯನಗರ ಡಿಸಿಸಿಗೆ ತನ್ನ ಆಪ್ತ ಸಿರಾಜ್ ಶೇಖ್ ರನ್ನು ನೂತನ ಸಾರಥಿಯಾಗಿಸಲು ಕೆಪಿಸಿಸಿ ಅಧ್ಯಕ್ಷರು ಇಷ್ಟಪಟ್ಟಿದ್ದಾರೆ ಎನ್ನುವ ಕ್ಲೂ ಗೊತ್ತಾಗುತ್ತಲೆ ಹೊಸ ಜಿಲ್ಲೆಯಲ್ಲಿ ಪಕ್ಷದ ಜವಾಬ್ದಾರಿ ನಿಭಾಯಿಸಲು ಸಿರಾಜ್ ಶೇಖ್ ಸಿದ್ದತೆಯಲ್ಲಿ ತೊಡಗಿರುವಾಗಲೇ, ಈ ಪ್ರಯತ್ನವನ್ನು ಹಿಮ್ಮೆಟ್ಟಿಸಲು, ಅವರ ಉಮೇದುವಾರಿಕೆ ಸಲ್ಲಿಕೆ ಆಗದಂತೆ ತಡೆಯಲು ಮಾಜಿ ಸಚಿವ ಸಂತೋಷ್ ಲಾಡ್ ರವರು ಇದ್ದಕ್ಕಿದ್ದಂತೆಯೇ ವಿಜಯನಗರ ಜಿಲ್ಲಾ ಕಾಂಗ್ರೆಸ್ ರಾಜಕಾರಣದ ರಂಗ ಪ್ರವೇಶ ಮಾಡಿದ್ದಾರೆ.

ಸಂಡೂರು ಶಾಸಕರು,ಮಾಜಿ ಸಚಿವರಾದ ಈ.ತುಕರಾಂ, ಕಂಪ್ಲಿ ಶಾಸಕ ಜೆಎನ್.ಗಣೇಶ್, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಸಂತೋಷ್ ಲಾಡ್ ಗೆ ಸಾಥ್ ಕೊಟ್ರೇ, ಇತ್ತ ಮಾಜಿ ಮಂತ್ರಿ, ಹೂವಿನಹಡಗಲಿ ಕೈ ಶಾಸಕ ಪಿಟಿ.ಪರಮೇಶ್ವರನಾಯ್ಕ್ , ಎಮ್ಮೆಲ್ಸಿ ಕೆಸಿ.ಕೊಂಡಯ್ಯ ರವರು ಸಿರಾಜ್ ಶೇಖ್ ಬೆನ್ನಿಗೆ ನಿಂತಿದ್ದಾರೆ. ಇದರ ನಡುವೆ ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಮಾಜಿ ಸಂಸದ ವಿ ಎಸ್.ಉಗ್ರಪ್ಪ ಹೈಕಮಾಂಡ್ ತೀರ್ಮಾನಕ್ಕೆ ಬೆಂಬಲ ಎಂದಿದ್ದಾರೆ.

ನೂತನ ಜಿಲ್ಲೆಯಲ್ಲಿ ಬಹು ಸಂಖ್ಯೆಯಲ್ಲಿರುವ ಮುಸ್ಲಿಂರಿಗೆ ಡಿಸಿಸಿ ಹುದ್ದೆ ನೀಡುವ ಪ್ರಸ್ತಾಪದೊಂದಿಗೆ ತಮ್ಮ ಆಪ್ತರಾದ, ಮಾಜಿ ಶಾಸಕ ಸಿರಾಜ್ ಶೇಖ್ ಅವರ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮುನ್ನೆಲೆಗೆ ಬಿಟ್ಟಿರುವುದೇ ವಿಜಯನಗರ ಡಿಸಿಸಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಪರ ಮತ್ತು ವಿರೋಧದ ಚಟುವಟಿಕೆಗಳು ಗರಿಬಿಚ್ಚುವಂತೆ ಮಾಡಿವೆ

ಯಾವಾಗ ಕೆಪಿಸಿಸಿ ಅಧ್ಯಕ್ಷರು ಸಿರಾಜ್ ಶೇಖ್ ಹೆಸರನ್ನು ಮುನ್ನೆಲೆಗೆ ತರುತ್ತಿದ್ದಂತೆಯೇ ದಿಗ್ಗನ್ನೇ ಎಚ್ಚರಗೊಂಡಿರುವ ಮಾಜಿ ಸಚಿವ ಸಂತೋಷ ಲಾಡ್, ಮುಸ್ಲಿಂರಿಗೆ ನೀಡೊದಾದರೇ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ರಫೀಕ್ ರನ್ನೇ ಬಳ್ಳಾರಿ ಜಿಲ್ಲೆಯ ನೂತನ ಅಧ್ಯಕ್ಷರನ್ನಾಗಿ ಮುಂದುವರೆಸಿ, ಆಗೇನೆ ವಿಜಯನಗರದಲ್ಲಿ ಈ ಸಲ ಕುರುಬರಿಗೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಯನ್ನು ನೀಡಬೇಕು ಎನ್ನುವ ಅಜೆಂಡಾದೊಂದಿಗೆ ವಿಜಯನಗರ ಕೈ ರಾಜಕಾರಣದೊಳಕ್ಕೆ ರಂಗ ಪ್ರವೇಶ ಮಾಡಿದ್ದಾರೆ. ಇತ್ತಿಚಿಗೆ ಬಳ್ಳಾರಿ ಮತ್ತು ಸಂಡೂರಿಗೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ನವರ ಕಿವಿ ಮೇಲೆ ಈ ಅಂಶವನ್ನು ಬಲವಾಗಿಯೇ ಒತ್ತಿದ್ದಾರೆ. ಮಾಜಿ ಸಿಎಂ ಸಕರಾತ್ಮಾಕವಾಗಿ ಸ್ಪಂದಿಸಿದ್ದಾರೆನ್ನುವ ಸುದ್ದಿ ತಿಳಿದ ಮೇಲೆ ಕುರುಬರ ಕೋಟಾದಲ್ಲಿ ಡಿಸಿಸಿ ಅಧ್ಯಕ್ಷರಾಗಲು ಹಲವರು ತುದಿಗಾಲ ಮೇಲೆ ನಿಂತವರು ಈ ತನಕವೂ ಇನ್ನೂ ಕೂಡ ವಿಶ್ರಾಮಿಸಿಲ್ಲ!

ಇತ್ತ ಸಿದ್ದರಾಮಯ್ಯರ ಸಮ್ಮುಖದಲ್ಲಿಯೇ ಜಿಲ್ಲೆಯಲ್ಲಿರುವ ಹಲವು ಕೈ ಶಾಸಕರು ಸಂತೋಷ್ ಲಾಡ್ ಅವರ ಪ್ರಸ್ತಾವನೆಯನ್ನು ಬೆಂಬಲಸಿದ್ದಲ್ಲದೆ, ಶಿವಕುಮಾರ ಮುಂದೆ ಮಾಡಿರುವ ಸಿರಾಜ್ ಶೇಖ್ ಹೆಸರಿಗೆ ತಮ್ಮ ತೀವ್ರ ವಿರೋಧವನ್ನು ದಾಖಲಿಸಿದ್ದಾರೆ. ಅಲ್ಲದೆ ಕುರುಬರಿಗೆ ನೀಡಲೇ ಬೇಕೆಂದು ಒತ್ತಾಯಿಸಿದ್ದಾರೆ ಕೂಡ. ಇದರಿಂದಾಗಿ ವಿಜಯನಗರ ಡಿಸಿಸಿ ಅಧ್ಯಕ್ಷ ಹುದ್ದೆ ಸುತ್ತ ಜಾತಿ ರಾಜಕಾರಣದ್ದೇ ಕಾರುಬಾರು ಜೋರಾಗಿದೆ

ಜಾತಿ ಲಾಬಿಗಳ ಒತ್ತಡಗಳ ಜೊತೆ, ಜೊತೆಗೇನೆ ಮುಂದಿನ ಸಿಎಂ ಕೂಗಿನ ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ಉದ್ಭವಿಸಿರುವ ಬಣ ರಾಜಕಾರಣ ಕೂಡ ವಿಜಯನಗರ ಡಿಸಿಸಿ ಅಧ್ಯಕ್ಷರ ನೇಮಕಾತಿ ಮೇಲೆ ಸಾಕಷ್ಟು ಅಡ್ಡಿಯ ಮೋಡವಾಗಿಯೇ ದಟ್ಟೈಸಿದೆ ಕೂಡ. ಅಳಕ್ಕೇ ಬೇರೂರುತ್ತೀರುವ ಬಣ ರಾಜಕಾರಣ ನೂತನ ಜಿಲ್ಲೆಯಲ್ಲಿ ಕೈ ಪಕ್ಷವನ್ನು ಎರಡು ದಂಡೆಗಳನ್ನಾಗಿ ನಿರ್ಮಿಸಿರುವುದಂತು ದಿಟ.

ಒಂದು ದಂಡೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬಣ ನಿಂತಿದ್ದಾರೆ, ಅದರ ಎದುರಿನ ತೀರದ ಮೇಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲಿರು ಲಂಗರು ಹಾಕಿದ್ದಾರೆ. ಎರಡು ಬಣಗಳಿಗೆ ವಿಜಯನಗರ ಡಿಸಿಸಿ ಅಧ್ಯಕ್ಷ ಹುದ್ದೆಯ ಮೇಲೆ ತಮ್ಮದೆ ಬಣದ ಬಾವುಟ ನೆಟ್ಟು, ಹಾರಾಡಿಸಬೇಕೆನ್ನುವ ಛಲ. ಈ ಕಾರಣಕ್ಕೇನೆ ನೂತನ ಜಿಲ್ಲೆಯಲ್ಲಿ ಕೈ ಪಕ್ಷದ ಅಧಿಪತ್ಯ ಯಾವ ಬಣದ ವಶಕ್ಕೆ ಸಿಗಲಿದೆ ಎನ್ನುವ ವಿಚಾರದತ್ತ ಜಿಲ್ಲೆಯ ಕಾಂಗ್ರೆಸಿಗರು, ಜನತೆ ತೀವ್ರ ಕುತೂಹಲ ದಿಂದ ನೋಡುವಂತೆ ಮಾಡಿದೆ.

ವಿಜಯನಗರ ಜಿಲ್ಲೆಯಲ್ಲಿ
ಮಾಜಿ ಸಚಿವ ಸಂತೋಷ ಲಾಡ್ ಸಿದ್ದರಾಮಯ್ಯ ಬಣದ ನೇತೃತ್ವವಹಿಸಿದ್ದರೇ, ಇತ್ತ ಡಿಕೆ ಶಿವಕುಮಾರ ಬಣವನ್ನು ಮಾಜಿ ಶಾಸಕ ಸಿರಾಜ್ ಶೇಖ್ ಮುನ್ನಡೆಸುತ್ತೀದ್ದಾರೆ. ಇಬ್ಬರೂ ಮೂಲತ ಸಂಡೂರಿನವರು ಎನ್ನುವುದು ವಿಶೇಷ. ಇಬ್ಬರು ಕಾಂಗ್ರೆಸ್ ಪಕ್ಷದಲ್ಲಿದ್ರು ರಾಜಕೀಯವಾಗಿ ಇಬ್ಬರು ಪರಸ್ಪರ ಕಡು ವಿರೋಧಿಗಳೆ. ಜೊತೆಗೆ ಇಬ್ಬರ ನಡೆಗಳು ವಿಭಿನ್ನ ಕೂಡ. ವಿಜಯನಗರ ಜಿಲ್ಲಾ ಕಾಂಗ್ರೆಸ್ ಪಕ್ಷದ ಮೇಲೆ ನಿಯಂತ್ರಣ ಸಾಧಿಸಲು ಇಬ್ಬರು ಸೇರಿಗೆ ಸವ್ಹಾಸೇರಿನಂತೆ ಪೈಪೋಟಿಗೆ ಬಿದ್ದಿದ್ದಾರೆ.

ಈ ನಡುವೆ ಡಿಸಿಸಿ ಜಿಲ್ಲಾಧ್ಯಕ್ಷರ ನೇಮಕ ಸೇರಿದಂತೆ ನೂತನ ಜಿಲ್ಲೆಯಲ್ಲಿ ಮುಂಬರುವ ಜಿಪಂ,ತಾಪಂ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು ಸೇರಿದಂತೆ ಸಂಘಟನಾತ್ಮಾಕ ವಿಚಾರಗಳ ಕುರಿತಂತೆ ಕಳೆದ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ ಅಧ್ಯಕ್ಷತೆಯಲ್ಲಿ ಬಳ್ಳಾರಿ ಹಾಗೂ ವಿಜಯನಗರ ಅವಿಭಜಿತ ಬಳ್ಳಾರಿ ಜಿಲ್ಲೆಯ ಪಕ್ಷದ ಹಿರಿಯ ಮುಖಂಡರ ಸಭೆ ಜರುಗಿತು. ಈ ಸಭೆಯಲ್ಲಿ ವಿಜಯನಗರ ಡಿಸಿಸಿ ಅಧ್ಯಕ್ಷರ ನೇಮಕ ವಿಚಾರ ಪ್ರತಿಧ್ವನಿಸಿತು. ಸಭೆಯಲ್ಲಿ ಮಾಜಿ ಶಾಸಕ ಸಿರಾಜ್ ಶೇಖ್ ಹಾಗೂ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ನಡುವೆ ಮಾತಿನ ಚಕಮಕಿಯು ನಡೆದಿದೆ. ಕೆಪಿಸಿಸಿ ಅಧ್ಯಕ್ಷರು ಮಧ್ಯ ಪ್ರವೇಶಿಸಿ ಚಕಮಕಿ ತಹಬದಿಗೆ ತಂದಿದ್ದಾರೆ.

ಇದರ ನಡುವೆ ಜಿಲ್ಲಾ ವಿಭಜನೆಗೂ ಮುಂಚೆ ಬಳ್ಳಾರಿ ನಗರ ಹಾಗೂ ಬಳ್ಳಾರಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಅಸ್ಥಿತ್ವದಲ್ಲಿದ್ದವು. ಗ್ರಾಮೀಣಾ ಜಿಲ್ಲಾ ಕಾಂಗ್ರೆಸ್ ನಲ್ಲಿದ್ದ ಸಂಡೂರು, ಕಂಪ್ಲಿ, ಸಿರುಗುಪ್ಪಾ ಕ್ಷೇತ್ರಗಳು ಬಳ್ಳಾರಿ ಜಿಲ್ಲೆಗೆ ಸೇರಿದರೆ. ಗ್ರಾಮೀಣಾ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿದ್ದ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹೂವಿನಹಡಗಲಿ, ಹರಪನಹಳ್ಳಿ ಕ್ಷೇತ್ರಗಳು ವಿಜಯನಗರ ಜಿಲ್ಲೆಗೆ ಸೇರಿವೆ. ಕಳೆದ ಒಂದು ದಶಕ ದಿಂದಲೂ ಗ್ರಾಮೀಣಾ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹುದ್ದೆಯನ್ನು ವೀರಶೈವ ಲಿಂಗಾಯಿತರಿಗೇನೆ ನೀಡಲಾಗಿದೆ.

ತಮ್ಮ ಪರ ಇರುವರನ್ನು ಅಧ್ಯಕ್ಷ ಹುದ್ದೆ ಮೇಲೆ ಪ್ರತಿಷ್ಠಾಪಿಸಿ. ಆ ಮೂಲಕ ಗಣಿ, ಅರಣ್ಯ ಹಾಗೂ ಪ್ರವಾಸೋದ್ಯಮದ ಸಂಪತ್ತಿನ ಖಣಿಯ ವಿಜಯನಗರದ ಮೇಲೆ ಹಿಡಿತ ಸಾಧಿಸಲು ಅಧ್ಯಕ್ಷರ ನೇಮಕ ವಿಚಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಪ್ರತಿಷ್ಠೆ ಆಗಿ ತೆಗೆದುಕೊಂಡು ಇಬ್ಬರೂ ನೇರವಾಗಿ ಅಖಾಡಕ್ಕೆ ಇಳಿದಿರುವುದು ಬಲು ಇಂಟರೆಸ್ಟಿಂಗ್ ಆಗಿದೆ.

ಈ ಕಾರಣಕ್ಕೇನೆ ವಿಜಯನಗರ ಡಿಸಿಸಿ ಅಧ್ಯಕ್ಷ ಗಾದಿ ಯಾರ ಪಾಲಿಗೆ ದಕ್ಕ ಬಹುದು? ಸಿದ್ದು,ಡಿಕೆ ಈ ಇಬ್ಬರಲ್ಲಿ ಯಾರು ಮೆಲುಗೈ ಸಾಧಿಸುತ್ತಾರೆ? ಎನ್ನುವ ಪ್ರಶ್ನೆಗೆ ಉತ್ತರ ತಿಳಿಯಲು ಎಐಸಿಸಿ ಅಂತಿಮವಾಗಿ ಅಖೈರುಗೊಳಿಸುವ ನೂತನ ಡಿಸಿಸಿ ಪ್ರೆಸಿಡೆಂಟ್ ಗಳ ಲಿಸ್ಟ್ ಗಾಗಿಯೇ ಜಿಲ್ಲೆಯ ಕಾಂಗ್ರೆಸಿಗರು ಜೊತೆಗೆ ಜನರು ಕೂಡ ಕುತುಹಲಿಗಳಾಗಿ ಕಾಯುವಂತಹ ಸನ್ನಿವೇಶ ಸದ್ಯ ವಿಜಯನಗರ ಜಿಲ್ಲೆಯಾದ್ಯಂತ ನಿರ್ಮಾಣಗೊಂಡಿದೆ.

ಹುಳ್ಳಿಪ್ರಕಾಶ
ಸಂಪಾದಕರು
ಬಳ್ಳಾರಿ ಸುನಾಮಿಪತ್ರಿಕೆ.

LEAVE A REPLY

Please enter your comment!
Please enter your name here