ಮಂತ್ರಿಯಾಗಬೇಕು ಎಂಬ ಕನಸನ್ನು ವಾಟಾಳ್ ನಾಗರಾಜ್ ತ್ಯಜಿಸಿದ್ದು ಯಾಕೆ ಗೊತ್ತಾ?

0
132

ಒಂದು ಅಪರೂಪದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಅವರ ಮುಂದೆಯೇ ಹಾದು ಹೋಯಿತು.ಹೀಗೆ ಹಾದು ಹೋಗುವಾಗ ಅರೆಕ್ಷಣ ಅವರಿಗೆ ತಗಲಿಕೊಂಡಿದ್ದರೆ ಈ ನಾಡು ಕಂಡ ಮಹಾನ್ ಸಮಾಜವಾದಿ ನಾಯಕರೊಬ್ಬರು ಮುಖ್ಯಮಂತ್ರಿಯಾಗುತ್ತಿದ್ದರು.ವಿಪರ್ಯಾಸವೆಂದರೆ ಅದು ಆಗಲೇ ಇಲ್ಲ.
ಹಾಗಂತ ವಿಷಾದವೇ ಹೊದ್ದ ಧ್ವನಿಯಲ್ಲಿ ಅವರು ಹೇಳಿದಾಗ,ಸುತ್ತ ಮುಕುರಿಕೊಂಡಿದ್ದ ನಾವೆಲ್ಲ ಗೆಳೆಯರು ತಾದಾತ್ಮ್ಯ ಬಾವದಿಂದ ಅದನ್ನು ಕೇಳತೊಡಗಿದೆವು.ಅಂದ ಹಾಗೆ ಇದನ್ನು ಶುರು ಮಾಡಿದವರು ವಾಟಾಳ್ ನಾಗರಾಜ್.ನಾಡಿಗೆ ಎಷ್ಟು ಜನ ಮುಖ್ಯಮಂತ್ರಿಗಳು ಬೇಕಾದರೂ ಬರಬಹುದು.ಆದರೆ ಕನ್ನಡಕ್ಕೊಬ್ಬರೇ ವಾಟಾಳ್ ಅಂತ ನಾನು ಪದೇ ಪದೇ ಹೇಳುತ್ತೇನೆ.ಅವರಿವರ ಬಳಿ ಮಾತ್ರವಲ್ಲ.ಖುದ್ದು ಅವರ ಎದುರೇ ಹೇಳಿದ್ದೇನೆ.ಪ್ರೀತಿಯಿಂದ ಅವರೂ ನಗು ಬೀರುತ್ತಾರೆ.
ಅದಿರಲಿ,ಅಂದ ಹಾಗೆ 1969 ರಲ್ಲಿ ಕಾಂಗ್ರೆಸ್ ಇಬ್ಬಾಗವಾದಾಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೀರೇಂದ್ರಪಾಟೀಲರು ಕೆಳಗಿಳಿಯಬೇಕಾಯಿತು ಎಂಬುದು ನಮಗೆ ಗೊತ್ತಿತ್ತು.ಅದೇ ರೀತಿ ಸಿಎಂ ಆಗುವ ಅವಕಾಶ ಗೋಪಾಲಗೌಡರ ಮುಂದೆ ಹಾದು ಹೋಗಿತ್ತು ಎಂಬುದೂ ಗೊತ್ತಿತ್ತು.
ಆದರೆ ಆ ಘಟನೆಯ ತಳ ಬುಡ ಮಾತ್ರ ಗೊತ್ತಿರಲಿಲ್ಲ.ಹಾಗಂತಲೇ ಈ ಘಟನೆಯ ವಿವರ ಹೇಳುವಂತೆ ನಾವು ಗೆಳೆಯರು ಅವರಿಗೆ ತಗಲಿಕೊಂಡೆವು.ಹೀಗೆ ವಾಟಾಳ್ ಅವರಂತಹ ಹಿರಿಯರು,ತಮ್ಮ ಅನುಭವಗಳನ್ನು ಬಿಚ್ಚಿಡತೊಡಗಿದರೆ,ಮುಂದೆ?ಮುಂದೆ?ಅಂತ ನಾವು ಉತ್ಸಾಹದಿಂದ ಕೋರಸ್ ಕೊಡುತ್ತಾ ಹೋಗಬೇಕು.ಆಗ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ ನೋಡಿ ಸ್ಟೋರಿ.
ರಿಯಲಿ ಅಮೇಜಿಂಗ್ ಅನ್ನುವಂತಹ ಘಟನೆಗಳು ನಮಗೆ ದಕ್ಕುವುದೇ ಹೀಗೆ ಮೈಯ್ಯೆಲ್ಲ ಕಿವಿ ಮಾಡಿಕೊಳ್ಳುವ ಸಂದರ್ಭದಲ್ಲಿ.ಸರಿ.ಆ ಘಟನೆಯ ವಿವರವನ್ನು ವಾಟಾಳ್ ಹೇಳುತ್ತಾ ಹೋದರು.
ವಿಠ್ಠಲಮೂರ್ತಿ.1971 ರಲ್ಲಿ ವೀರೇಂದ್ರಪಾಟೀಲರು ಕೆಳಗಿಳಿದಾಗ ನಾವು ಎಪ್ಪತ್ತರಷ್ಟು ಶಾಸಕರು ಸೇರಿ ಒಂದು ನಿರ್ಧಾರಕ್ಕೆ ಬಂದೆವು.ಅದೆಂದರೆ,ನಾಡಿನ ಬಡವರ ಧ್ವನಿಯಾದ ಶಾಂತವೇರಿ ಗೋಪಾಲಗೌಡರನ್ನು ಸಿಎಂ ಮಾಡಬೇಕು ಅಂತ.
ಕುತೂಹಲದ ಸಂಗತಿ ಎಂದರೆ ಶಾಂತವೇರಿ ಗೋಪಾಲಗೌಡರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಬೇಕು ಎಂದು ನಾವು ಎಪ್ಪತ್ತರಷ್ಟು ಮಂದಿ ಶಾಸಕರು ನಿರ್ಧರಿಸಿದಾಗ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರಿಗೂ ಅದು ಇಷ್ಟವಾಗಿತ್ತು.ಹಾಗಂತಲೇ ಅವರು:ನೀವು ಹೇಳುವುದು ಸರಿ.ಮುಖ್ಯಮಂತ್ರಿ ಹುದ್ದೆಗೆ ಅವರೇ ಸಮರ್ಥ ನಾಯಕ.ನಾವೂ ಅವರಿಗೆ ಬೆಂಬಲ ಕೊಡುತ್ತೇವೆ ಅಂತ ಮುಂದೆ ಬಂದರು.
ಲೆಕ್ಕ ಹಾಕಿ ನೋಡಿದರೆ ವಿಧಾನಸಭೆಯ ಇನ್ನೂರಾ ಇಪ್ಪತ್ನಾಲ್ಕು ಶಾಸಕರ ಪೈಕಿ ಅರ್ಧಕ್ಕೂ ಹೆಚ್ಚು ಮಂದಿ ಗೋಪಾಲಗೌಡರನ್ನು ಸಿಎಂ ಮಾಡಲು ಮುಕ್ತ ಮನಸ್ಸಿನಿಂದ ತೀರ್ಮಾನಿಸಿದ್ದರು.ಯಾವಾಗ ತಮಗೆ ಮುಖ್ಯಮಂತ್ರಿ ಹುದ್ದೆ ಸಿಗಬಹುದು ಎಂಬುದು ನಿಕ್ಕಿಯಾಯಿತೋ?
ಆಗ ಗೋಪಾಲಗೌಡರು ಕೂಡಾ ಮುಕ್ತ ಮನಸ್ಸಿನಿಂದ:ನಾನು ಮುಖ್ಯಮಂತ್ರಿಯಾದರೆ ವಾಟಾಳ್ ನಾಗರಾಜ್ ಅವರನ್ನು ಗೃಹ ಮಂತ್ರಿ ಮಾಡುತ್ತೇನೆ ಎಂದರು.ಹೀಗೆ ನೋಡ ನೋಡುತ್ತಿದ್ದಂತೆಯೇ ಹೊಸ ಸರ್ಕಾರದಲ್ಲಿ ಪಾಲುಗೊಳ್ಳಲು ಹಲವರು ಮುಂದೆ ಬರತೊಡಗಿದರು.
ಪಟೇಲರಿಂದ ಹಿಡಿದು ಹಲ ನಾಯಕರು ಮಂತ್ರಿಗಳಾಗಲು ಸಜ್ಜಾಗಿದ್ದರು.ಅರೇಸ್ಕಿ.ಮಂತ್ರಿಗಳಾಗಲು ದೊಡ್ಡದೊಂದು ಸರತಿಯ ಸಾಲೇ ಶುರುವಾಗಿದೆ.ಇನ್ನು ನನಗೆಲ್ಲಿಯ ಮಂತ್ರಿ ಸ್ಥಾನ?ಅಂದುಕೊಂಡೆ.ಆದರೆ ಗೋಪಾಲಗೌಡರದು ಒಂದೇ ಮಾತು.ನಾನು ಮುಖ್ಯಮಂತ್ರಿಯಾದರೆ ನೀನು ಗೃಹ ಸಚಿವ ಅಂತ.
ಹೀಗೆ ಯಾರಿಗೆ ಯಾವ ಖಾತೆ ಎಂಬುದೂ ಸರ ಸರನೆ ತೀರ್ಮಾನವಾಗತೊಡಗಿತು.ಆಗ ರಾಜ್ಯಪಾಲರಾಗಿದ್ದವರು ಧರ್ಮವೀರ.ಹೀಗಾಗಿ ನಾವೆಲ್ಲ ಎಪ್ಪತ್ತು ಶಾಸಕರು ಹೋಗಿ ಅವರನ್ನು ಭೇಟಿ ಮಾಡಿದೆವು.ಶಾಂತವೇರಿ ಗೋಪಾಲಗೌಡರ ನೇತೃತ್ವದಲ್ಲಿ ಸರ್ಕಾರ ರಚಿಸಲು ನಾವು ಸಿದ್ಧ ಎಂದಿವಿ.ಸರಿ,ರಾಜ್ಯಪಾಲರು ಆಹ್ವಾನ ನೀಡಿದ ನಂತರ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಬೇಕು ಎಂಬ ತೀರ್ಮಾನವೂ ಆಯಿತು.
ಹೀಗೆ ತೀರ್ಮಾನವಾದ ದಿನ ನಮ್ಮನ್ನೆಲ್ಲ ಕರೆಸಿಕೊಂಡ ಶಾಂತವೇರಿ ಗೋಪಾಲಗೌಡರು:ನೋಡಿ.ಈ ಸರ್ಕಾರ ಆರು ತಿಂಗಳಿಗಿಂತ ಹೆಚ್ಚು ಕಾಲ ಬಾಳುವುದಿಲ್ಲ.ಬೆಂಬಲ ನೀಡುವವರಿಗೆ ಅವರದೇ ಉದ್ದೇಶಗಳಿರುತ್ತವೆ.ಅದು ಈಡೇರದೆ ಹೋದಾಗ ಅವರು ಬೆಂಬಲ ವಾಪಸ್ ತೆಗೆದುಕೊಳ್ಳುತ್ತಾರೆ ಎಂಬ ವಾಸ್ತವಿಕ ಮಾತನ್ನು ಹೇಳಿದರು.
ಅಷ್ಟೇ ಅಲ್ಲ.ಸರ್ಕಾರ ರಚನೆಯಾದರೂ ನಾನು ಮುಖ್ಯಮಂತ್ರಿಗೆ ಅಂತ ಮೀಸಲಾಗಿರುವ ಮನೆಗೆ ಹೋಗುವುದಿಲ್ಲ.ಕಾರನ್ನೂ ಬಳಸುವುದಿಲ್ಲ.ಮಂತ್ರಿಗಳಾಗುವವರೂ ಅಷ್ಟೇ.ಮಂತ್ರಿಗಳಿಗೆ ಅಂತ ನಿಗದಿಯಾಗಿರುವ ಮನೆಗಳಿಗೆ ಯಾರೂ ಹೋಗಬೇಡಿ.ಸರ್ಕಾರ ಕೊಡುವ ಕಾರನ್ನೂ ತೆಗೆದುಕೊಳ್ಳಬೇಡಿ ಎಂದರು.ಅಬ್ಬಾ,ಅದೆಂತಹ ಮಾತು ವಿಠ್ಠಲಮೂರ್ತಿ?ಇವತ್ತು ಅಂತಹದನ್ನು ಮಾಡುವುದು ಇರಲಿ.ಅಂತಹ ಮಾತುಗಳನ್ನಾದರೂ ಕೇಳಲು ಸಾಧ್ಯವೇ?
ಸರಿ,ಇನ್ನೇನು ರಾಜ್ಯಪಾಲರು,ಸರ್ಕಾರ ರಚಿಸಲು ಆಹ್ವಾನ ನೀಡಬೇಕು.ಅಷ್ಟರಲ್ಲಿ ಗೋಪಾಲಗೌಡರ ಆರೋಗ್ಯ ಹದಗೆಟ್ಟಿತು.ಹೀಗಾಗಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.ದುರಂತವೆಂದರೆ,ಗೋಪಾಲಗೌಡರ ಆರೋಗ್ಯ ಚೇತರಿಸಿಕೊಳ್ಳಲೇ ಇಲ್ಲ.
ಚೇತರಿಸಿಕೊಳ್ಳುವ ಯಾವ ಲಕ್ಷಣವೂ ಕಾಣಲಿಲ್ಲ.ಯಾವಾಗ ಹೀಗಾಯಿತೋ?ಆಗ ನಾಯಕರೆನ್ನಿಸಿಕೊಂಡ ಕೆಲವರು ಒಳಗಿಂದೊಳಗೇ ಮಸಲತ್ತು ನಡೆಸಿದರು.ಗೋಪಾಲಗೌಡರು ಮುಖ್ಯಮಂತ್ರಿಯಾಗದಂತೆ ನೋಡಿಕೊಳ್ಳಬೇಕು ಎಂದು ಪಣ ತೊಟ್ಟರು.
ಇಂತಹ ಸಂದರ್ಭದಲ್ಲಿ ಗೋಪಾಲಗೌಡರ ಆರೋಗ್ಯ ಸರಿ ಇದ್ದಿದ್ದರೆ ನಾವೂ ರಾಜಕೀಯದ ಚದುರಂಗದಾಟದಲ್ಲಿ ಮುನ್ನುಗ್ಗಬಹುದಿತ್ತು.ಆದರೆ ಅವರೇ ಮಲಗಿಬಿಟ್ಟಿದ್ದಾರೆ.ನಾವೇನು ಮಾಡುವುದು?ಹಾಗಂತ ಯೋಚಿಸುತ್ತಿದ್ದಾಗಲೇ ಖುದ್ದು ಶಾಂತವೇರಿ ಗೋಪಾಲಗೌಡರು ರಾಜ್ಯಪಾಲ ಧರ್ಮವೀರ ಅವರಿಗೆ ಒಂದು ಪತ್ರ ಬರೆದರು.
ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ.ಹೀಗಾಗಿ ಮುಖ್ಯಮಂತ್ರಿಯಾಗಲು ನನಗೆ ಇಷ್ಟವಿಲ್ಲ.ಹೀಗಾಗಿ ಈ ಹಿಂದೆ ಮುಖ್ಯಮಂತ್ರಿಯಾಗಲು ನನಗೆ ಬೆಂಬಲವಿದೆ.,ಹೀಗಾಗಿ ನನಗೆ ಅವಕಾಶ ಕೊಡಿ ಎಂದು ನಿಮಗೆ ನೀಡಿದ್ದ ಪತ್ರವನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ ಅಂತ.
ಅಲ್ಲಿಗೆ ಎಲ್ಲವೂ ಮುಗಿದು ಹೋಯಿತು.ಹಾಗೊಂದು ವೇಳೆ ಶಾಂತವೇರಿ ಗೋಪಾಲಗೌಡರ ಆರೋಗ್ಯ ಹದಗೆಡದೆ ಹೋಗಿದ್ದರೆ,ಬಡವರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸಬೇಕು ಎಂಬ ವಿಷಯ ಬಂದಾಗ ಮಿಂಚಿನಂತೆ ಓಡುತ್ತಿದ್ದ ಅವರ ಮನಸ್ಸಿಗೆ ದೇಹ ಪೂರಕವಾಗಿ ಕೆಲಸ ಮಾಡಿದ್ದರೆ ಕತೆಯೇ ಬೇರೆಯಾಗುತ್ತಿತ್ತು.
ಆದರೆ ವಿಧಿ ಅವಕಾಶ ನೀಡಲಿಲ್ಲ.ಬದಲಿಗೆ ದಿನದಿಂದ ದಿನಕ್ಕೆ ಗೋಪಾಲಗೌಡರ ಆರೋಗ್ಯ ಹದಗೆಡುತ್ತಾ ಹೋಗಿ ಕೊನೆಗೊಮ್ಮೆ ಅವರು ನಿಧನರಾದರು.ಇದೇ ಲಾಲ್ ಭಾಗ್ ಸಮೀಪದ ಸ್ಮಶಾನಕ್ಕೆ ಅವರ ಪಾರ್ಥೀವ ಶರೀರವನ್ನು ಒಯ್ಯಲಾಯಿತು.ನನಗೆ ಗೊತ್ತಿದ್ದಂತೆ ಒಬ್ಬ ನಾಯಕನಿಗಾಗಿ ಸ್ಮಶಾನದಲ್ಲೇ ಶ್ರದ್ಧಾಂಜಲಿ ಸಭೆ ನಡೆದಿದ್ದು ಅವತ್ತೇ ಮೊದಲ ಬಾರಿ.
ಜಾರ್ಜ್ ಫರ್ನಾಂಡೀಸ್,ಜೆ.ಹೆಚ್.ಪಟೇಲ್,ಸಿ.ಜಿ.ಕೆ.ರೆಡ್ಡಿ ಸೇರಿದಂತೆ ಅತಿರಥ ಮಹಾರಥ ನಾಯಕರೆಲ್ಲ ಅವತ್ತು ಸೇರಿದ್ದರು.ಅಲ್ಲೇ ಶ್ರದ್ಧಾಂಜಲಿ ಸಭೆ ನಡೆಯಿತು.ಅವತ್ತು ಸಿ.ಜಿ.ಕೆ.ರೆಡ್ಡಿ ಅವರು ಮಾತನಾಡಲು ಎದ್ದು ನಿಂತಾಗ:ನನಗೆ ಗೋಪಾಲಗೌಡರ ಬಗ್ಗೆ ಮಾತನಾಡಬೇಕು ಅನ್ನಿಸುತ್ತಿದೆ.ಆದರೆ ನನಗೆ ಕನ್ನಡ ಚೆನ್ನಾಗಿ ಬರುವುದಿಲ್ಲ.ಕನ್ನಡದಲ್ಲಿ ಮಾತನಾಡದಿದ್ದರೆ ವಾಟಾಳ್ ನಾಗರಾಜ್ ಬಿಡುತ್ತಾರೋ ಇಲ್ಲವೋ?ಎಂದರು.
ನಾನು ತಕ್ಷಣವೇ,ಇದು ನೋವಿನ ಸಂದರ್ಭ.ನಿಮಗನ್ನಿಸಿದ್ದನ್ನು ನಿಮಗೆ ಹೇಳಬೇಕು ಅನ್ನಿಸಿದ ಭಾಷೆಯಲ್ಲಿ ಹೇಳಿ ಎಂದೆ.ಅಷ್ಟೇ ಅಲ್ಲ.ಇನ್ನು ಮಂತ್ರಿಯಾಗುವುದು ಬೇಡ ಎಂದು ಅವತ್ತೇ ತೀರ್ಮಾನಿಸಿದೆ.ಒಂದು ವೇಳೆ ಗೋಪಾಲಗೌಡರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ,ನಾನು ಗೃಹ ಮಂತ್ರಿಯಾಗಿದ್ದರೆ ಅದಕ್ಕೊಂದು ಸಾರ್ಥಕ್ಯ ಬಾವ ಇರುತ್ತಿತ್ತು ವಿಠ್ಠಲಮೂರ್ತಿ.
ಆದರೆ ಮುಂದೆ ನಾನು ಇಂತವರ ಕೈ ಕೆಳಗೆ ಮಂತ್ರಿಯಾಗಬೇಕು ಎಂಬ ಬಾವನೆಯೇ ಬರಲಿಲ್ಲ.ಮಂತ್ರಿಯಾಗುವುದಕ್ಕೂ ಸಾರ್ಥಕ್ಯ ಬಾವನೆ ಇರಬೇಕು.ಇಲ್ಲದೇ ಹೋದರೆ ಮಂತ್ರಿಯಾಗುವುದರಲ್ಲಿ ಅರ್ಥವಿಲ್ಲ ಅಲ್ಲವೇ?ಅಂದರು ವಾಟಾಳ್ ನಾಗರಾಜ್.ನಾವೆಲ್ಲ ಗೆಳೆಯರು ತಲೆ ಅಲ್ಲಾಡಿಸಿ ಮೌನವಾದೆವು.

ಆರ್.ಟಿ.ವಿಠ್ಠಲಮೂರ್ತಿ

ವಾಟಾಳ್ ನಾಗರಾಜ್ ಅವರೊಂದಿಗೆ

LEAVE A REPLY

Please enter your comment!
Please enter your name here