ಪ್ರದರ್ಶನ, ಮಾರಾಟ ಮೇಳಕ್ಕೆ ಅವಕಾಶವಿಲ್ಲ -ಜಿಲ್ಲಾಧಿಕಾರಿ ನಿತೇಶ್ ಪಾಟೀಲ

0
88

ಧಾರವಾಡ : ಕೋವಿಡ್ ಸದ್ಯ ನಿಯಂತ್ರಣದಲ್ಲಿರುವುದರಿಂದ ಸರ್ಕಾರವು ಕೋವಿಡ್ ಸುರಕ್ಷತಾ ನಿಯಮಗಳ ಪಾಲನೆಯೊಂದಿಗೆ ವ್ಯಾಪಾರ, ವಹಿವಾಟಿಗೆ ಮಾತ್ರ ಅವಕಾಶ ನೀಡಿದೆ. ಆದರೆ ವಿವಿಧ ಬಗೆಯ ವಸ್ತುಪ್ರದರ್ಶನ, ಮಾರಾಟ ಮೇಳಗಳ ಆಯೋಜನೆಗೆ ಅವಕಾಶ ನೀಡಿಲ್ಲ. ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಪೂರ್ವಾನುಮತಿಯಿಲ್ಲದೇ ಇಂತಹ ಮಾರಾಟಮೇಳ, ಪ್ರದರ್ಶನ ಏರ್ಪಡಿಸುವವರು ಹಾಗೂ ಸ್ಥಳಬಾಡಿಗೆ ನೀಡಿದ ಸಭಾಂಗಣ, ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ನಿತೇಶ ಕೆ. ಪಾಟೀಲ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿಯ ಗುಜರಾತ ಭವನದಲ್ಲಿ ಜುಲೈ 15 ರಿಂದ ನ್ಯೂ ಕ್ರಾಫ್ಟ್ ಇಂಡಿಯಾ ಸಿಲ್ಕ್ ಮೇಳ ಆಯೋಜಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಇಂತಹ ಮೇಳ ಆಯೋಜಿಸುವುದಕ್ಕೆ ಅವಕಾಶ ಇಲ್ಲ. ಸರ್ಕಾರದ ನಿರ್ದೇಶನದ ಪ್ರಕಾರ ಜುಲೈ 19 ರವರೆಗೆ ಈ ನಿಯಮಗಳು ಜಾರಿಯಲ್ಲಿರುತ್ತವೆ. ನಂತರ ಪ್ರಕಟವಾಗುವ ಮಾರ್ಗಸೂಚಿಗಳನ್ನೂ ಕೂಡ ಜಿಲ್ಲೆಯಲ್ಲಿ ಕಡ್ಡಾಯವಾಗಿ ಪಾಲಿಸಲಾಗುವುದು. ಈಗಾಗಲೇ ಕಲ್ಯಾಣಮಂಟಪಗಳ ಮಾಲೀಕರ ಸಭೆ ನಡೆಸಿ ಈ ಬಗ್ಗೆ ತಿಳುವಳಿಕೆ ನೀಡಲಾಗಿದೆ. ಸರ್ಕಾರ ಅನುಮತಿ ನೀಡಿದ ಮದುವೆ, ಕೌಟುಂಬಿಕ ಕಾರ್ಯಕ್ರಮಗಳಿಗೆ ನೂರಕ್ಕಿಂತ ಹೆಚ್ಚು ಜನ ಸೇರದಂತೆ ಎಚ್ಚರಿಕೆ ವಹಿಸುವುದರೊಂದಿಗೆ ಮಾತ್ರ ಕಲ್ಯಾಣಮಂಟಪ, ಛತ್ರ, ಹಾಲ್‍ಗಳನ್ನು ಬಾಡಿಗೆ ನೀಡಬಹುದು. ವಸ್ತು ಪ್ರದರ್ಶನ, ಮಾರಾಟ ಮೇಳಗಳಿಗೆ ಬಾಡಿಗೆ ನೀಡಬಾರದು.

ಕೋವಿಡ್ ಸದ್ಯ ನಿಯಂತ್ರಣದಲ್ಲಿದೆ ಆದರೆ ವ್ಯಾಪಾರಸ್ಥರು, ಸಾರ್ವಜನಿಕರು, ಗ್ರಾಹಕರು ಜನಸಂದಣಿಗೆ ಅವಕಾಶ ನೀಡುವಂತಹ ಮಾರಾಟಮೇಳ, ವಸ್ತುಪ್ರದರ್ಶನದಂತಹ ಚಟುವಟಿಕೆಗಳನ್ನು ಆಯೋಜಿಸುವ, ಭಾಗವಹಿಸುವ ಕಾರ್ಯಗಳನ್ನು ಮಾಡಬಾರದು. ಮುಂಜಾಗ್ರತೆ, ಸುರಕ್ಷತಾ ಕ್ರಮಗಳ ಪಾಲನೆಯ ಮೂಲಕವೇ ಕೋವಿಡ್ ಸಂಭಾವ್ಯ ಮೂರನೇ ಅಲೆ ತಡೆಯಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here