ಹಿರಿಯ ಚಲನಚಿತ್ರ ಕಲಾವಿದೆ ಬಿ.ಶಾಂತಮ್ಮ ಅವರ ಸಂಸ್ಮರಣಾ ದಿನ

0
97

ಇಂದು ಕಲಾವಿದೆ ಬಿ. ಶಾಂತಮ್ಮ ಅವರ ಸಂಸ್ಮರಣಾ ದಿನ. ಶಾಂತಮ್ಮನವರು ಕಳೆದ 2020ರ ಜುಲೈ 19ರಂದು ಈ ಲೋಕವನ್ನಗಲಿದರು.

‘ಮೇಲೆ ಕವ್ಕೊಂಡ ಮುಂಗಾರು ಮೋಡ’ ಎಂದು ‘ಚಿನ್ನಾರಿ ಮುತ್ತ’ ಚಿತ್ರದ ಹಾಡಿಗೆ ಅಭಿನಯಿಸಿದ್ದ ಮತ್ತು ‘ದೀನ ನಾ ಬಂದಿರುವೆ’ ಎಂದು ‘ಸಂಧ್ಯಾರಾಗ’ದಲ್ಲಿ ರಾಜ್ ಹಾಡುವಾಗ ಅವರನ್ನು ಗುರುಪತ್ನಿಯಾಗಿ ಬರಮಾಡಿಕೊಳ್ಳುವ ಈ ಅಜ್ಜಿಯ ಅಭಿನಯ ಈಗಲೂ ಕಣ್ಣಿಗೆ ಕಟ್ಟಿದ್ದಂತಿದೆ.

ಶಾಂತಮ್ಮ ಅವರು ಕನ್ನಡ ಮತ್ತು ಇತರ ಭಾಷೆಗಳ ನೂರಾರು ಚಿತ್ರಗಳಲ್ಲಿ ನಟಿಸಿದ್ದರು. ಅವರು ನಟಿಸಿರುವ ಲಭ್ಯಚಿತ್ರಗಳ ಪಟ್ಟಿಯಲ್ಲಿ 1956 ವರ್ಷದಷ್ಟು ಹಿಂದಿನ ಹರಿಭಕ್ತ ಮತ್ತು ಓಹಿಲೇಶ್ವರ ಕೂಡಾ ಕಂಡುಬಂತು. ರಾಜ್‍ಕುಮಾರ್ ಅವರ ಪ್ರಾರಂಭಿಕ ಚಲನಚಿತ್ರ ಯುಗದಿಂದ ಕಳೆದ ದಶಕಗಳವರೆಗೂ ಅವರ ಅಭಿನಯ ಹರಿದಿತ್ತು.

ಶಾಂತಮ್ಮ ಅವರ ಪತಿ ಗೋಕಾಕ್ ಕಂಪೆನಿಯಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿದ್ದರು. ಅಭಿನಯಕ್ಕೆ ಅವಕಾಶ ಒದಗಿ, ಪತಿಯ ಪ್ರೋತ್ಸಾಹವೂ ದೊರಕಿ ಶಾಂತಮ್ಮ ಅವರು ಚಿತ್ರರಂಗಕ್ಕೆ ಬಂದರು. 15 ವರ್ಷ ಮದ್ರಾಸ್‌ನಲ್ಲಿ ಶಾಂತಮ್ಮ ಅವರ ಕುಟುಂಬ ನೆಲೆಸಿತ್ತು.

ರಾಜ್‍ಕುಮಾರ್, ರಜನೀಕಾಂತ್, ವಿಷ್ಣುವರ್ಧನ್, ಅಂಬರೀಷ್, ಶಂಕರನಾಗ್, ಅನಂತನಾಗ್ ಸೇರಿದಂತೆ ಎಲ್ಲ ಪ್ರಮುಖರ ಚಿತ್ರಗಳಲ್ಲಿ ಶಾಂತಮ್ಮನವರು ನಟಿಸಿದ್ದರು.

ಮಹಿಷಾಸುರ ಮರ್ಧಿನಿ, ರಣಧೀರ ಕಂಠೀರವ, ನಾಂದಿ, ಚಂದವಳ್ಳಿಯ ತೋಟ, ಮಲ್ಲಮ್ಮನ ಪವಾಡ, ಸಾಕ್ಷಾತ್ಕಾರ, ಇಂದಿನ ಭಾರತ, ವಸಂತ ಗೀತ, ಚಂದನದ ಗೊಂಬೆ, ಸನಾದಿ ಅಪ್ಪಣ್ಣ, ಭಾಗ್ಯದ ಲಕ್ಷ್ಮೀ ಭಾರಮ್ಮ, ವಾಲಿ, ಮುಸ್ಸಂಜೆ ಮುಂತಾದವು ಶಾಂತಮ್ಮನವರು ವಿವಿಧ ಕಾಲಘಟ್ಟಗಳಲ್ಲಿ ನಟಿಸಿದ್ದ ಇನ್ನಿತರ ಚಿತ್ರಗಳಲ್ಲಿ ಸೇರಿವೆ.

ಶಾಂತಮ್ಮನವರು 2020ರ ಜುಲೈ 19ರಂದು ಈ ಲೋಕವನ್ನಗಲಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಈ ತಾಯಿಗೆ ನೆನಪಿನ ನಮನ.

LEAVE A REPLY

Please enter your comment!
Please enter your name here