ನಕಲಿ ವೆಬ್ ಸೈಟ್ ವಂಚಕ ಜಾಲ ಪತ್ತೆ, ವಂಚಕರು ತೆಲಂಗಾಣ ಪೊಲೀಸರ ಬಲೆಗೆ

0
723

ಈಗ ಮನೆಯಿಂದ ಹೊರಗೆ ಹೋಗಿ ಶಾಪಿಂಗ್ ಮಾಡಲು ಕಷ್ಟ. ಕೊರೊನಾ ಭಯದಲ್ಲಿ ಜನರು ಮನೆ ಬಿಟ್ಟು ಆಚೆ ಹೋಗಲು ಇಷ್ಟ ಪಡಲ್ಲ. ಇದನ್ನು ಅರಿತಿದ್ದ ಎಂಬಿಎ ಪದವೀಧರ ನಕಲಿ ವೆಬ್ ತಾಣಗಳನ್ನು ಸೃಷ್ಟಿಸಿ “ಬಿಗ್ ಡೀಲ್ ಆಫರ್” ಮೂಲಕ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾನೆ. ಈತನ ವಂಚಕ ಜಾಲವನ್ನು ಸೈಬರಾಬಾದ್ ಪೊಲಿಸರು ಬಯಲಿಗೆ ಎಳೆದಿದ್ದಾರೆ. ಕೇವಲ 1400 ರೂ. ವಂಚನೆ ಕೇಸಿನ ಜಾಡು ಹಿಡಿದು ದೇಶದಲ್ಲಿ ಹಬ್ಬಿದ್ದ ನಕಲಿ ವೆಬ್ ಸೈಟ್ ಜಾಲವನ್ನು ಕನ್ನಡಿಗ, ಸೈಬರಾಬಾದ್ ಪೊಲೀಸ್ ಕಮೀಷನರ್ ವಿ. ಸಜ್ಜನರ್ ಅವರು ಬಯಲಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ನಕಲಿ ವೆಬ್ ತಾಣ ವಂಚಕ ಜಾಲಕ್ಕೆ ಬೀಳದಂತೆ ಕಿವಿ ಮಾತು ಹೇಳಿದ್ದಾರೆ.

ನಕಲಿ ವೆಬ್ ತಾಣಗಳು ಸಾಮಾನ್ಯವಾಗಿ ವೆಬ್ ತಾಣಗಳು ಜನಪ್ರಿಯತೆ ಹಾಗೂ ವಹಿವಾಟು ಹೆಚ್ಚಿಸಿಕೊಳ್ಳಲು ಡಿಸ್ಕೌಂಟ್ ಆಫರ್ ಗಳನ್ನು ಪ್ರಕಟಿಸುತ್ತವೆ. ಜನರು ಈ ಆಫರ್ ಆಸೆಗೆ ಬಿದ್ದು ತಮಗೆ ಇಷ್ಟವಾಗುವ ವಸ್ತುಗಳನ್ನು ಖರೀದಿಸುತ್ತಾರೆ. ಇದನ್ನು ಅರಿತ ವಂಚಕರು ಪ್ರತಿಷ್ಠಿತ ವೆಬ್ ತಾಣಗಳ ಮಾದರಿಯಲ್ಲಿಯೇ ಆಹಾರ ಉತ್ಪನ್ನ ಮಾರಾಟ, ಪೀಠೋಪಕರಣ ಮಾರಾಟ ವೆಬ್ ತಾಣ ರಚಿಸಿ ಊಹೆಗೂ ಮೀರಿದ ಡಿಸ್ಕೌಂಟ್ ನೀಡಿ ಮೋಸ ಮಾಡುತ್ತಿದ್ದಾರೆ. ಲಕ್ಷಾಂತರ ಮಂದಿ ಡಿಸ್ಕೌಂಟ್ ಆಸೆಗೆ ಬಿದ್ದು ಲಕ್ಷಾಂತರ ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ. ಇದು ದೇಶದಲ್ಲೆಡೆ ದೊಡ್ಡ ಜಾಲವಾಗಿ ಪರಿಗಣಿಸಿದೆ. ಕೇವಲ ಹತ್ತು – ಇಪ್ಪತ್ತು ಸಾವಿರ ವೆಚ್ಚ ಮಾಡಿ ನಕಲಿ ವೆಬ್ ತಾಣ ಸೃಷ್ಟಿಸಿ ಮೋಸ ಮಾಡುವರ ಪಾಲಿಗೆ ಬೆಂಗಳೂರು ರಾಜಧಾನಿ ಎಂಬುದನ್ನು ಯಾರೂ ಮರೆಯುವಂತಿಲ್ಲ.

ವಂಚಕರು ತೆಲಂಗಾಣ ಪೊಲೀಸರ ಬಲೆಗೆ ಆಹಾರ ಸಾಮಗ್ರಿ ಹಾಗೂ ಪೀಠೋಪಕರಣ ಮಾರಾಟದ ನಕಲಿ ವೆಬ್ ತಾಣ ಸೃಷ್ಟಿಸಿ ಲಕ್ಷಾಂತರ ಜನರಿಂದ ಕೋಟ್ಯಂತರ ಹಣ ಸಂಗ್ರಹಿಸಿ ವಂಚನೆ ಮಾಡಿದ್ದ ವಂಚಕ ಗ್ಯಾಂಗ್ ನ ಕಿಂಗ್ ಪಿನ್ ನನ್ನು ತೆಲಂಗಾಣ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬನಶಂಕರಿಯ ಖಾಸಗಿ ಪಿಜಿಯಲ್ಲಿ ನೆಲೆಸಿದ್ದ ರಿಷಬ್ ಉಪಾಧ್ಯಾಯ್ ಬಂಧಿತ ಆರೋಪಿ. ಈತನ ಸಹಚರ ಪಂಜಾಬ್ ಮೂಲದ ರಾಹುಲ್ ತಲೆಮರಿಸಿಕೊಂಡಿದ್ದಾನೆ. ಬಂಧಿತ ರಿಷಬ್ ನಿಂದ 40 ಲಕ್ಷ ರೂ. ನಗದು ಹಣ, ಮೂರು ಮೊಬೈಲ್, ಎರಡು ಲ್ಯಾಪ್‌ಟಾಪ್, 20 ಡೆಬಿಟ್ ಕಾರ್ಡ್, ಆರು ಬ್ಯಾಂಕ್ ಪಾಸ್ ಬುಕ್ ವಶಪಡಿಸಿಕೊಳ್ಳಲಾಗಿದೆ.

ಸಿಂಪಲ್ ಪ್ಲಾನ್ ನಿಂದ ವಂಚನೆ ಉತ್ತರ ಪ್ರದೇಶ ಮೂಲದ ರಿಷಬ್ ಬಿಎಸ್ ಸಿ ಪದವೀಧರ. ಬೆಂಗಳೂರಿನಲ್ಲಿ ಡಿಜಿಟಲ್ ಮಾರ್ಕೆ ಟಿಂಗ್ ನಲ್ಲಿ ಎಂಬಿಎ ಮಾಡಿದ್ದ. ವೆಬ್ ಸೈಟ್ ತಯಾರಿಸಿ ಕೊಡುವ ಕಲೆ ಕರಗತ ಮಾಡಿಕೊಂಡಿದ್ದ. ಕೆಲಸ ಸಿಗದ ಕಾರಣಕ್ಕೆ ಈತ ವೆಬ್ ಸೈಟ್ ಗಳನ್ನು ಮಾಡಿಕೊಟ್ಟು ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದ. ಅಮೆರಿಕ ಮೂಲದ ಪ್ರಿನ್ಸ್ ಎಂಬಾತ ರಿಷಬ್ ಗೆ ಪರಿಚಯವಾಗಿ ಜಾಬ್ ಫೈಂಡರ್ ವೆಬ್ ತಾಣವನ್ನು ಮಾಡಿಕೊಡುವಂತೆ ಹೇಳಿದ್ದ. ಈತನಿಂದ ವೆಬ್ ತಾಣ ಮಾಡಿಸಿಕೊಂಡಿದ್ದ ಪ್ರಿನ್ಸ್ ಅದರಿಂದ ಜನರ ಬಳಿ ಲಕ್ಷಾಂತರ ಡಾಲರ್ ಹಣ ಪಡೆದು ಮೋಸ ಮಾಡಿದ್ದ. ಈ ವಿಚಾರವನ್ನು ತಿಳಿದ ರಿಷಬ್ ಸುಲಭವಾಗಿ ಹಣ ಮಾಡಲು ಇದೇ ರೀತಿ ಪ್ಲಾನ್ ಮಾಡಿದ. ಇದಕ್ಕಾಗಿ ಪಂಜಾಬ್ ಮೂಲದ ಸೋಷಿಯಲ್ ಮೀಡಿಯಾ ಮಾಸ್ಟರ್ ರಾಹುಲ್ ನ ಸಹಾಯ ಪಡೆದಿದ್ದ. ಅಮೆರಿಕಾ ವೀಸಾ, ಉದ್ಯೋಗ ಕೊಡಿಸುವ ವೆಬ್ ತಾಣ ಸೃಷ್ಟಿಸಿ ಹಲವು ಮಂದಿಗೆ ಟೋಪಿ ಹಾಕಿದ್ದರು. ಆನಂತರ ಕಡಿಮೆ ಬೆಲೆಗೆ ಮನೆ ಪೀಠೋಪಕರಣ ಆಫರ್ ಕೊಟ್ಟು www.deckup.com ವೆಬ್ ತಾಣ ರಚಿಸಿ ಹಲವರಿಗೆ ಮೋಸ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನ ಆನ್‌ಲೈನ್ ವಹಿವಾಟು ಜಾಸ್ತಿ ಮಾಡಿದ್ದನ್ನು ಅರಿತಿದ್ದ ವಂಚಕರು www.zopnow.com www.modwayoffurnute.com ವೆಬ್ ತಾಣ ಸೃಷ್ಟಿಸಿ ಜನರಿಗೆ ಬಿಗ್ ಆಫರ್ ನೀಡಿದ್ದರು. ಇವರು ನೀಡಿದ್ದ ಆಫರ್ ನೋಡಿ ಲಕ್ಷಾಂತರ ಮಂದಿ ಆನ್‌ಲೈನ್ ಶಾಪಿಂಗ್ ಮಾಡಿದ್ದು, ವಸ್ತುವೂ ಇಲ್ಲ, ಹಣವೂ ಇಲ್ಲದೇ ಮೋಸ ಹೋಗಿದ್ದಾರೆ. ಆನ್‌ಲೈನ್ ಪೇಮೆಂಟ್ ಮೂಲಕ ಲಕ್ಷಾಂತರ ಮಂದಿಯಿಂದ ಹಣ ಪಡದು ವಂಚಕರು ಮೋಸ ಮಾಡುತ್ತಿದ್ದರು.

ಜೋಪ್ ನೌ ವೆಬ್ ತಾಣದಲ್ಲಿ ಆಹಾರ ಉತ್ಪನ್ನ ಖರೀದಿ ಮಾಡಿದ್ದ ಮಹಿಳೆಯೊಬ್ಬಳಿಗೆ ಯಾವ ಡೆಲಿವರಿ ಸಿಗಲಿಲ್ಲ. ಕಸ್ಟಮರ್ ಕೇರ್ ಗೆ ಸಂಪರ್ಕಿಸಿದ್ರೂ ಪ್ರಯೋಜನ ಆಗಲಿಲ್ಲ. ಕೇವಲ 1400 ರೂ. ಮೋಸ ಹೋಗಿದ್ದ ಮಹಿಳೆ ಜಾಣ್ಮೆಯಿಂದ ರಾಯದುರ್ಗ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೈಬರಾಬಾದ್ ಪೊಲೀಸರು ತನಿಖೆ ನಡೆಸಿದಾಗ ಲಕ್ಷಾಂತರ ಮಂದಿ ಹಣ ಕಳೆದುಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಸಾವಿರ, ಐದು ನೂರು ರೂ. ಕಳೆದುಕೊಂಡ ಕಾರಣಕ್ಕೆ ಯಾರೂ ದೂರು ನೀಡಲು ಮುಂದಾಗಿಲ್ಲ.ಆದರೆ ತೆಲಂಗಾಣ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದಾಗ ನಕಲಿ ವೆಬ್ ತಾಣಗಳನ್ನು ಸೃಷ್ಟಿಸಿ ಬಿಗ್ ಆಫರ್ ಆಸೆ ತೋರಿಸಿ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದ ದೊಡ್ಡ ಜಾಲವನ್ನು ಬೆಳಕಿಗೆ ತಂದಿದ್ದಾರೆ. ಕೇವಲ 1400 ರೂ. ವಂಚನೆ ಎಂದು ನಂಬಿ ಸುಮ್ಮನೆ ಕೂತಿದ್ದರೆ, ಈ ಜಾಲ ಆಚೆಗೆ ಬರುತ್ತಿರಲಿಲ್ಲ.

ಸಜ್ಜನರ್ ನೀಡಿರುವ ಕಿವಿಮಾತು ಹೆಚ್ಚು ಡಿಸ್ಕೌಂಟ್ ಆಫರ್ ಕೊಡುವ ವೆಬ್ ತಾಣಗಳನ್ನು ನಂಬಿ ಹಣ ಕಳೆದುಕೊಳ್ಳಬೇಡಿ. ವಂಚಕ ವೆಬ್ ತಾಣಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ನಕಲಿ ವೆಬ್ ತಾಣದಲ್ಲಿ ಶಾಪಿಂಗ್ ಮಾಡಿ ಹಣ ಕಳೆದುಕೊಂಡರೆ ಕೂಡಲೇ ದೂರನ್ನು ನೀಡಿ ಎಂದು ಕನ್ನಡಿಗರು ಆಗಿರುವ ಸೈಬರಾಬಾದ್ ಪೊಲೀಸ್ ಕಮೀಷನರ್ ವಿ. ಸಿ. ಸಜ್ಜನರ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ನಕಲಿ ವೆಬ್ ತಾಣದಲ್ಲಿ ಶಾಪಿಂಗ್ ಮಾಡಿ ಹಣ ಕಳೆದುಕೊಂಡೆ, ಕೇವಲ ಐದು ನೂರು ರೂ. ಎಂದು ನಿರ್ಲಕ್ಷ್ಯ ಮಾಡಬಾರದು. ಪೊಲೀಸರಿಗೆ ದೂರು ನೀಡಿದರೆ, ಆಗಬಹುದಾದ ಕೋಟ್ಯಂತರ ರೂ. ವಂಚನೆ ತಪ್ಪಿಸಲು ಅವಕಾಶವಿದೆ. ಹೀಗಾಗಿ ಮೋಸ ಹೋದ ಕೂಡಲೇ ದೂರು ಕೊಡಿ ಎಂದು ಸಜ್ಜನರ್ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here