ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಆಚರಣೆ, ಹುತಾತ್ಮರ ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ: ಡಿಸಿ ಮಾಲಪಾಟಿ

0
306

ಬಳ್ಳಾರಿ,ಸೆ.11: ವನ್ಯಜೀವಿ ಹಾಗೂ ಪರಿಸರ ರಕ್ಷಣೆಗೆ ಜೀವಿ ಮುಡುಪಿಟ್ಟ ಹುತಾತ್ಮರ ನೆನಪು ಮಾಡಿಕೊಳ್ಳುವುದರ ಜೊತೆಗೆ ಪ್ರಾಣ ಕಳೆದುಕೊಂಡವರ ಕುಟುಂಬದ ನೆರವಿಗೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಹೇಳಿದರು.
ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹುತಾತ್ಮರಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಗಡಿ ಪ್ರದೇಶದಲ್ಲಿ ದೇಶದ ರಕ್ಷಣೆಗೆ ಹೋರಾಡುವ ಸೈನಿಕರಂತೆ ನಾಡಿನಲ್ಲಿ ಪರಿಸರ ರಕ್ಷಣೆಗೆ ಅರಣ್ಯ ಸಿಬ್ಬಂದಿ ಹೋರಾಡುತ್ತಿದ್ದಾರೆ. ಪರಿಸರ ಸಂರಕ್ಷಣೆಯಲ್ಲಿ ಅರಣ್ಯ ಸಿಬ್ಬಂದಿಯ ಪಾತ್ರ ಪ್ರಮುಖವಾದದ್ದು. ಜಿಲ್ಲೆಯಲ್ಲಿ ಕಳೆದೆರೆಡು ವರ್ಷಗಳಿಂದ ಹೆಚ್ಚಿನ ಮಳೆಯಾಗುತ್ತಿದೆ. ಜಿಲ್ಲೆಯ ಅರಣ್ಯ ಪ್ರದೇಶವು ಕೂಡ ಹೆಚ್ಚುತ್ತಿದೆ. ಎಲ್ಲಾ ಕಡೆ ಸಸಿ ನೆಡುವ ಕೆಲಸವೂ ನಡೆಯುತ್ತದೆ. ಇದರಿಂದ ಜಿಲ್ಲೆಯ ಜನತೆಗೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದು ಹೇಳಿದರು.


ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಲಿಂಗರಾಜು ಅವರು ಮಾತನಾಡಿ ಇದೊಂದು ಸ್ಪೂರ್ತಿಯ ದಿನ, ಅರಣ್ಯ ಸಂರಕ್ಷಣೆಗೆ ಪ್ರಾಣ ಕಳೆದುಕೊಂಡ ಹಲವರ ಬದುಕು ಇಂದು ನಮಗೆ ದೃಢ ಸಂಕಲ್ಪದಿಂದ ಕರ್ತವ್ಯ ನಿರ್ವಹಿಸಲು ನೆರವಾಗುತ್ತವೆ. ರಾಜ್ಯದಲ್ಲಿ 38 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವಿದೆ. 8 ಸಾವಿರ ಜನ ಅರಣ್ಯ ಸಿಬ್ಬಂದಿ ಕಾಯಂ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 8 ಸಾವಿರ ದಿನಗೂಲಿ ನೌಕರರಿದ್ದಾರೆ ಎಂದು ಅವರು ವಿವರಿಸಿದರು.
ಭೂ ಪ್ರದೇಶದ ರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಪಾತ್ರ ತುಂಬಾ ಮುಖ್ಯ. ಸಮತೋಲನ ಪರಿಸರ ನಿರ್ಮಾಣ ಮಾಡಿದರೆ ಮುಂದಿನ ಜೀವನ ಉತ್ತಮವಾಗಿರುತ್ತದೆ. ಮುಂದಿನ ಪೀಳಿಗೆಗೆ ಒಳ್ಳೆಯ ವಾತಾವರಣ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಪರಿಸರ ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಅರಣ್ಯ ಉಳಿಸುವ ಕಾಯಕ ನಿರಂತರವಾಗಿ ಸಾಗಲಿ. ಕರ್ತವ್ಯದ ಸಮಯದಲ್ಲಿ ಪ್ರಾಣ ಕಳೆದುಕೊಂಡವರಿಗೆ 30 ಲಕ್ಷ ಪರಿಹಾರ ನೀಡಲಾಗುತ್ತದೆ. ಈ ಪರಿಹಾರ ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂದಿ, ದಿನಗೂಲಿ ನೌಕರರಿಗೂ ದೊರೆಯುವಂತಾಗಬೇಕು. ಅರಣ್ಯ ಭೂಮಿ ನಾಶ ಮತ್ತು ಕಬಳಿಕೆಯಾಗದಂತೆ ನೋಡಿಕೊಳ್ಳುವ ಕಾರ್ಯ ಮಾಡಿ ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಮಾತನಾಡಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಪಾತ್ರ ಮಹತ್ವದ್ದು. ಅರಣ್ಯ ರಕ್ಷಿಸುವಲ್ಲಿ ಪ್ರಾಣ ಕಳೆದುಕೊಂಡ ಅರಣ್ಯ ಸಿಬ್ಬಂದಿಯ ಕುಟುಂಬದವರ ನೆರವಿಗೆ ನಿಲ್ಲಬೇಕಾದ ಕೆಲಸ ಮಾಡಬೇಕು. ಪರಿಸರ ರಕ್ಷಣೆ ನಿರಂತರವಾದ ಕೆಲಸ. ಶಿಸ್ತು, ನಡವಳಿಕೆಯಿಂದ ಬದುಕು ಕಟ್ಟಿಕೊಳ್ಳಲು ಇಲಾಖೆಯು ನೆರವಾಗಲಿದೆ ಎಂದರು.


ಬಳ್ಳಾರಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಎಂ.ಚಳಕಾಪುರೆ ಅವರು ಮಾತನಾಡಿ
ಕಾಡಿನ ಸಂಪತ್ತು, ವನ್ಯಜೀವಿ ಸಂರಕ್ಷಣೆ ಮಾಡುವ ಕಾಯಕದಲ್ಲಿ ತಮ್ಮ ಪ್ರಾಣ ಕಳೆದುಕೊಂಡ ಅನೇಕರನ್ನು ನೆನೆಪಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ. ದೇಶದ, ನಾಡಿನ ಜನತೆಗೆ ಸೇವೆ ಸಲ್ಲಿಸುವ ಮೂಲಕ ಅರಣ್ಯ ರಕ್ಷಣೆಯಿಂದ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಅವರನ್ನು ಸ್ಮರಿಸಿಕೊಳ್ಳಲಾಗುತ್ತಿದೆ ಎಂದರು.
ಕರ್ನಾಟಕದಲ್ಲಿ ಇಲ್ಲಿಯವರಗೆ 50 ಜನ ಜೀವದಾನ ಮಾಡಿದ್ದಾರೆ ಎಂದು ಹೇಳಿದ ಅವರು 1966 ರಿಂದ 2021ರವರೆಗೆ ಅರಣ್ಯ ಕಾಪಾಡುವಲ್ಲಿ ಜೀವ ಕಳೆದುಕೊಂಡ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನೆನಪು ಮಾಡಿಕೊಂಡರು.


ಈ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಜೂಯಾಲಾಜಿಕಲ್ ಪಾರ್ಕ್‍ನ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಿರಣ್ ಕುಮಾರ ಎಮ್.ಎನ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಕುಮಾರ್ ಎಂ.ಆರ್, ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ, ಬಳ್ಳಾರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಂಟೆಪ್ಪ, ಬಳ್ಳಾರಿ ವಲಯ ಅಧಿಕಾರಿ ಎಸ್.ವಿ.ಮಂಜುನಾಥ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here