ಆಜಾದಿ ಕಾ ಅಮೃತ್ ಮಹೋತ್ಸವ್, ಕಾನೂನು ಸೇವಾ ಪ್ರಾಧಿಕಾರದಡಿ ಅ. 02 ರಿಂದ ನ.14 ರವರೆಗೆ ಜಾಗೃತಿ ಕಾರ್ಯಕ್ರಮಗಳ ಆಯೋಜನೆ- ರಾಜೇಶ್ವರಿ ಹೆಗಡೆ.

0
84

ದಾವಣಗೆರೆ ಸೆ. 27:ಭಾರತ ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರವು ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾನೂನು ಸೇವೆಗಳು ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಜನರನ್ನು ತಲುಪುವಂತಾಗಲು ಜಿಲ್ಲೆಯಲ್ಲಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಅಕ್ಟೋಬರ್ 02 ರಿಂದ ನವೆಂಬರ್ 14 ರವರೆಗೆ ಹಾಗೂ ಕಾನೂನು ಸೇವೆಗಳ ಸಪ್ತಾಹವನ್ನು ನವೆಂಬರ್ 08 ರಿಂದ 14 ರವರೆಗೆ ಆಯೋಜಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಅವರು ಹೇಳಿದರು.
ಜಿಲ್ಲೆಯಲ್ಲಿ ಪ್ಯಾನ್ ಇಂಡಿಯಾ ಅವೇರ್‍ನೆಸ್ ಅಂಡ್ ಔಟ್ ರೀಚ್ ಪ್ರೋಗ್ರಾಮ್ ಆಯೋಜನೆ ಕುರಿತಂತೆ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕಾನೂನು ಸೇವೆಗಳು, ಕಾನೂನು ಸೇವಾ ಪ್ರಾಧಿಕಾರದ ಸವಲತ್ತುಗಳನ್ನು ಪಡೆಯುವ ಬಗೆ, ಕಾನೂನು ಸೇವೆಗಳ ಸದ್ಬಳಕೆ ಮಾಡಿಕೊಳ್ಳುವ ಕುರಿತು ಪ್ರತಿಯೊಬ್ಬ ವ್ಯಕ್ತಿಗೂ ಮಾಹಿತಿ ತಲುಪಿಸುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಲ್ಲದೆ ಕಾನೂನು ಸೇವೆಗಳು ಎಲ್ಲರಿಗೂ ದೊರೆಯಬೇಕು ಎನ್ನುವ ಆಶಯದಿಂದ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅಕ್ಟೋಬರ್ 02 ರಿಂದ ನವೆಂಬರ್ 14 ರವರೆಗೆ ಪ್ರತಿ ದಿನ ನಿರ್ದಿಷ್ಟ ವಿಷಯದೊಂದಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು. ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಅಕ್ಟೋಬರ್ 02 ರಂದು ಗಾಂಧಿ ಜಯಂತಿ ಆಚರಣೆಯ ಜೊತೆಗೆ ಲೋಕ ಅದಾಲತ್‍ನ ಉಪಯುಕ್ತತೆ, ಅ. 03 ರಂದು ಪೋಕ್ಸೊ ಕಾಯ್ದೆ ಮತ್ತು ಮಾನವ ಸಾಗಾಣಿಕೆ ತಡೆ, 04 ರಂದು ತೃತೀಯ ಲಿಂಗಿಗಳಿಗೆ ಕಾನೂನು ರಕ್ಷಣೆ ಕಾಯ್ದೆ, 05 ರಂದು ವರದಕ್ಷಿಣೆ ನಿಷೇಧ ಕಾಯ್ದೆ, 06 ರಂದು ದತ್ತು ಸ್ವೀಕಾರ ಬಗ್ಗೆ ಇತ್ತೀಚಿನ ಕಾನೂನುಗಳು. 07 ರಂದು ಆಸ್ತಿ ಮತ್ತು ನೊಂದಣಿ ಕಾನೂನುಗಳು. 08 ರಂದು ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿ ನಿಷೇಧ ಕಾನೂನು. ನವೆಂಬರ್ 09 ರಂದು ಕಾನೂನು ಸೇವೆಗಳ ದಿನ ಆಚರಣೆ ಜೊತೆಗೆ ಜಾಗೃತಿ ಕಾರ್ಯಕ್ರಮ. ನವೆಂಬರ್ 10 ರಿಂದ 13 ರವರೆಗೆ ನಗರ, ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧೆಡೆ ಸ್ವಚ್ಛತಾ ಅಭಿಯಾನ, ಘನತ್ಯಾಜ್ಯ ವಿಲೇವಾರಿ, ಒಣ ಮತ್ತು ಹಸಿ ಕಸಗಳ ವಿಂಗಡಣೆ ಮತ್ತು ವಿಲೇವಾರಿ, ಪ್ಲಾಸ್ಟಿಕ್ ಬಳಕೆ ನಿಯಂತ್ರಣ, ಜನ ಮತ್ತು ಜಾನುವಾರುಗಳ ಆರೋಗ್ಯ ರಕ್ಷಣೆ ಕುರಿತಂತೆ ಜನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು. ನವೆಂಬರ್ 14 ರಂದು ಮಕ್ಕಳ ದಿನಾಚರಣೆಯ ಜೊತೆಗೆ ವಿಶೇಷ ಜಾಗೃತಿ ಕಾರ್ಯಕ್ರಮದ ಸಮಾರೋಪ ಏರ್ಪಡಿಸಲಾಗುವುದು. ಉಳಿದಂತೆ ಆಯಾ ತಾಲ್ಲೂಕು ಕಾನೂನು ಸೇವಾ ಸಮಿತಿಗಳಿಂದಲೂ ಸಂಬಂಧಪಟ್ಟ ತಾಲ್ಲೂಕುಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಈ ಎಲ್ಲ ಕಾರ್ಯಕ್ರಮಗಳಿಗೆ ವಿವಿಧ ಇಲಾಖೆಗಳು ಸಕ್ರಿಯವಾಗಿ ತೊಡಗಿಸಿಕೊಂಡು ಸಹಕಾರ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಅವರು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲಾ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು, ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಆಯಾ ಕಾಲೇಜು ಮಟ್ಟದ ಎನ್‍ಎಸ್‍ಎಸ್ ಘಟಕವನ್ನು ಸಂಯೋಜಿಸಿಕೊಂಡು ಜನ ಜಾಗೃತಿ ನಾಟಕ, ಜಾಗೃತಿ ಹಾಡುಗಳನ್ನು ಪ್ರಸ್ತುತಪಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕಂದಾಯ ಇಲಾಖೆಯಿಂದ ಆಧಾರ್ ಕಾರ್ಡ್, ಮತದಾರರ ನೊಂದಣಿ, ಬಿಪಿಎಲ್ ಕಾರ್ಡ್, ಮಾಸಾಶನ ಅರ್ಜಿ ವಿಲೇವಾರಿಯಂತಹ ಶಿಬಿರಗಳನ್ನು ಆಯೋಜಿಸಬೇಕು. ಆರೋಗ್ಯ ಇಲಾಖೆಯಿಂದ ಕೋವಿಡ್19 ಜಾಗೃತಿ ಕಾರ್ಯಕ್ರಮ, ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ನೊಂದಣಿಯಂತಹ ವಿಶೇಷ ಶಿಬಿರವನ್ನು ಆಯೋಜಿಸಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹೇಳಿದರು. ಸಭೆಯಲ್ಲಿ ಉಪಸ್ಥಿತರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಅವರು, ಬಾಲ್ಯ ವಿವಾಹ ನಿಷೇಧ, ವರದಕ್ಷಿಣೆ ನಿಷೇಧ, ಪೋಕ್ಸೋ ಕಾಯ್ದೆ ಮುಂತಾದ ಜಾಗೃತಿ ಕಾರ್ಯಕ್ರಮಗಳನ್ನು ಸ್ವಸಹಾಯ ಸಂಘಗಳು, ಶಿಕ್ಷಣ ಇಲಾಖೆ ನೆರವಿನೊಂದಿಗೆ ಆಯೋಜಿಸಲಾಗುವುದು. ಇದರ ಜೊತೆಗೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೋಷಣ್ ಅಭಿಯಾನ, ಅಪೌಷ್ಠಿಕ ಮತ್ತು ತೀವ್ರ ಅಪೌಷ್ಠಿಕ ಮಕ್ಕಳ ಆರೋಗ್ಯ ಸುಧಾರಣೆಗಾಗಿ ವಿಶೇಷ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಔಷಧ ನೀಡಿಕೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಅವರು ಮಾತನಾಡಿ, ವಿವಿಧ ಇಲಾಖೆಗಳು ಏರ್ಪಡಿಸುವ ಕಾರ್ಯಕ್ರಮಗಳ ಕುರಿತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಬಾರ್ ಕೌನ್ಸಿಲ್ ಅಧ್ಯಕ್ಷ ಡಿ.ಪಿ. ಬಸವರಾಜ್ ಅವರು, ಕಾನೂನುಗಳ ಜಾಗೃತಿಗೆ ಸಂಬಂಧಿಸಿದಂತೆ ಆಯಾ ವಿಷಯಕ್ಕೆ ಅನುಗುಣವಾಗಿ ಸಂಪನ್ಮೂಲ ವ್ಯಕ್ತಿಗಳ ವ್ಯವಸ್ಥೆಯನ್ನು ಸಂಘದಿಂದ ಹಾಗೂ ಪ್ರಾಧಿಕಾರದಿಂದ ಮಾಡಲಾಗುವುದು ಎಂದರು. ಕಾರ್ಯದರ್ಶಿ ಎಲ್.ಹೆಚ್. ಪ್ರದೀಪ್ ಮಾತನಾಡಿ, ಕಾರ್ಯಕ್ರಮಗಳಿಗೆ ಕಾನೂನು ಕಾಲೇಜುಗಳ ಸಹಕಾರ ಪಡೆಯಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿ.ಪಂ. ಉಪಕಾರ್ಯದರ್ಶಿ ಆನಂದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ನ್ಯಾಯಾಧೀಶರುಗಳಾದ ಪ್ರಭು ಎನ್. ಬಡಿಗೇರ್, ಪ್ರೀತಿ ಸದ್ಗುರು ಜೋಷಿ, ಅಫ್ತಾಬ್, ವಿಜಯಾನಂದ, ಶ್ರೀಪಾದ್, ಬಿ. ದಶರಥ್, ಜಿಲ್ಲಾ ಬಾರ್ ಕೌನ್ಸಿಲ್ ಅಧ್ಯಕ್ಷ ಡಿ.ಪಿ. ಬಸವರಾಜ್, ಕಾರ್ಯದರ್ಶಿ ಎಲ್.ಹೆಚ್. ಪ್ರದೀಪ್, ಸೇರಿದಂತೆ ವಿವಿಧ ವಕೀಲರು, ಸಾರ್ವಜನಿಕ ಅಭಿಯೋಜಕರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here