“ಸೆಪ್ಟೆಂಬರ್ ನಲ್ಲಿ ನೋಡು ಸಂಡೂರ್ ನ ಕಾಡು”

0
194

ಮಹಾತ್ಮ ಗಾಂಧೀಜಿಯವರು1934 ರ ಸೆಪ್ಟೆಂಬರ್ ತಿಂಗಳಲ್ಲಿ ಸಂಡೂರಿಗೆ ಭೇಟಿ ನೀಡಿದ್ದರು. ಇಲ್ಲಿನ ಹಚ್ಚ ಹಸಿರಿನ ಬೆಟ್ಟ ಗುಡ್ಡಗಳು ಮನಮೋಹಕ ಪರಿಸರ ಹಾಗೂ ದಟ್ಟ ಕಾಡನ್ನು ನೋಡಿ ತುಂಬಾ ಪ್ರಭಾವಿತರಾದರಂತೆ. ಆದ್ದರಿಂದ “ಸೆಪ್ಟೆಂಬರ್ ನಲ್ಲಿ ನೋಡು ಸಂಡೂರಿನ ಕಾಡು”
(ಸಿ ಸಂಡೂರ್ ಇನ್ ಸೆಪ್ಟೆಂಬರ್) ಎಂದು ಉದ್ಗರಿಸಿದರಂತೆ. ಹೌದು. ಈ ಭಾಗಕ್ಕೆ ಹೊಸಬರನ್ನು ಅನಾಮತ್ತಾಗಿ ತಂದು ಬಿಟ್ಟರೆ ಅವರಿಗೆ ತಾವು ಪಶ್ಚಿಮ ಘಟ್ಟ ದಲ್ಲಿದ್ದೇವೆನೋ ಎಂದು ಭ್ರಮಿಸುತ್ತಾರೆ ಬಳ್ಳಾರಿ ಅಂದ ಕೊಡಲೇ ಬಿರು ಬಿಸಿಲ ಬಯಲು ಸೀಮೆ ಎನ್ನುವವರು ಜೂನ್ ಜನವರಿ ಮದ್ಯೆ ಅಥವಾ ಸಾಧ್ಯವಾದರೆ ಸೆಪ್ಟೆಂಬರ್ ನಲ್ಲಿ ಸಂಡೂರಿಗೆ ಬನ್ನಿ.ಗಾಂಧೀಜಿಯವರು ನೋಡಿದ್ದಾಗ ಇದ್ದಂತಹ ವನರಾಶಿ ಈಗ ಇಲ್ಲದಿದ್ದರೂ ಬಳ್ಳಾರಿ ಜಿಲ್ಲೆಯಲ್ಲೊಂದು ಓಯಸಿಸ್ ಇದೆ ಎಂದು ತಿಳಿಯುತ್ತಿರಿ.

ದೂರದಿಂದ ನೋಡಿದಾಗ ಕಲಾವಿದನ ಕುಂಚದಲ್ಲಿ ಚಿತ್ರಿಸಿದಂತೆ ಕಾಣುವ ವಿಶಾಲವಾದ ಪರ್ವತ ಶ್ರೇಣಿ ಇಲ್ಲಿದೆ. ಹೊಸಪೇಟೆಯ ಟಿಬಿ ಡ್ಯಾಮ್ ನಿಂದ ಆರಂಭವಾಗುವ ಈ ಪರ್ವತ ಶ್ರೇಣಿ ಸಂಡೂರಿನ ಸ್ವಾಮಿಹಳ್ಳಿ ಯವರಿಗೆ ಒಟ್ಟು 48 ಕಿ.ಮೀ ಉದ್ಧವಿದೆ ತನ್ನ ಗರ್ಭದಲ್ಲಿ ಅಪಾರ ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರು ತುಂಬಿಸಿಟ್ಟುಕೊಂಡಿರಿವ ಈ ಬೆಟ್ಟ ಗುಡ್ಡಗಳ ಮೇಲೆ ದಟ್ಟ ಮರಗಿಡಗಳ ಹಸಿರು ಚಾದರ ಹೊದ್ದುಕೊಂಡಿದೆ.

ಇದು ಶುಷ್ಕ ಎಲೆ ಉದುರುವ ಕಾಡು. ಈ ಕಾಡಿನಲ್ಲಿ ವೈವಿಧ್ಯಮಯ ಜೀವರಾಶಿ ಇದೆ. ಆಮ್ಲಜನಕದ ಖರ್ಖಾನೆಯಂತಿರಿವ ಈ ಸಾಲು ವಾತಾವರಣದ ಅರ್ದತೆಯನ್ನು ನಿಯಂತ್ರಿಸುತ್ತದೆ. ಹಾಗಾಗಿ ಉರಿ ಬಿಸಿಲಿನ ಬಳ್ಳಾರಿಯಿಂದ ಸಂಡೂರನ್ನು ಅದರಲ್ಲೂ ದೋಣಿಮಲೈ. ನಂದಿಹಳ್ಳಿ. ಹಾಗೂ ಗಿರಿದಾಮಗಳಾದ ದೇವಗಿರಿ. ರಾಮಘಡಗಳಿಗೆ ಪ್ರವೇಶಿಸುತ್ತಿದ್ದಂತೆ ಎಸಿ ಕೋಣೆಯೊಳಗೆ ಬಂದ ಅನುಭವ ಆಗುತ್ತದೆ. ಈ ಪ್ರದೇಶಗಳು ಬಳ್ಳಾರಿ ಜಿಲ್ಲೆಯ ಬೆಟ್ಟ ದೂರುಗಳೆಂದು ಹೇಳಬಹುದು. ಸೆಪ್ಟೆಂಬರ್ ಮಳೆ ಹೆಚ್ಚು ಹಾಗಾಗಿ ಎಲ್ಲೇ ಕಣ್ಣು ಹಾಯಿಸಿದರು ಹಸಿರು ಚಿಗುರಿರುತ್ತದೆ. ತೇಗ. ಗಂಧ. ಬಿದಿರು. ಕಮರ. ಮುಂತಾದ ಚೌಬಿನೇ ಮರಗಳು. ಕಾರೆ.ಅಳಲೆ. ನೆಲ್ಲಿ.ಒಷದಿಯ ಸಸ್ಯಗಳು ನೇರಳೆ. ಕಾರೇ. ಕವಳ. ಬಿಕ್ಕೆ .ಜಾನಿ. ಲೇಬಿ.ಕಾಡಹಣ್ಣಿನ ಗಿಡಗಳೂ ಇಲ್ಲಿ ಯಥೇಚ್ಛವಾಗಿವೆ. ಗೌರಿ ಹೂವು ಈ ಕಾಡಲ್ಲಿ ನೀವು ಹೋದಲೆಲ್ಲಾ ಪೊದೆಯೊಳಗಿಂದ ಇಣುಕುತ್ತಿರುತ್ತವೆ ಇದರ ಬೇರು ಹೌಷದಿಗೆ ಆಗುತ್ತದಂತೆ ಕೆಲವು ಸಾಧುಗಳು ಹಾಗೂ ನಾಟಿ ವೈದ್ಯರು ಇಲ್ಲಿನ ಬೆಟ್ಟ ಗುಡ್ಡಗಳಲ್ಲಿ ಅಲೆಯುತ್ತಾ ಒಷದಿಯ ಗಿಡ ಮೂಲಿಕೆಗಳನ್ನು ಸಂಗ್ರಹಿಸುತ್ತಾರೆ. ಯಶವಂತನಗರದ ಬಳಿ ಅರಣ್ಯ ಇಲಾಖೆಯ ಒಷದಿಯ ಸಸ್ಯ ಸಂರಕ್ಷಣಾ ಕ್ಷೇತ್ರವಿದೆ ಇಲ್ಲಿ ತರಾವರಿ ಗಿಡಮೂಲಿಕೆಗಳನ್ನು ಬೆಳೆಸಲಾಗುತ್ತಿದೆ.

ನಾವು ಸಣ್ಣವರಿದ್ದಾಗ ಉರ್ ಬಗ್ಲಿಗೆ ಭಯಂಕರ ಅಡವಿ ಇತ್ತು ಸಾ…ಹೊರಗೆ ಹೋಗಾಕೆ ಹೆದರಿಕೆ ಆಗ್ತಿತ್ತು …ಅದ್ವಿಯಲ್ಲಿ ಹುಲಿ. ಚಿರತೆಗಳು ವಿಪರೀತ ಇದ್ವು. ಎನ್ನುತ್ತಾರೆ ಊರಿನ ಹಿರಿಯರು. ಆದರೆ ಈಗ ಕಾಡಿನಲ್ಲಿ ಹುಲಿ.ಸಿಂಹಗಳಿಲ್ಲ. ಚಿರತೆ. ತೋಳ. ನರಿ. ಕತ್ತೆ ಕಿರುಬ. ಕರಡಿ. ಕಾಡುಕುರಿ. ಜಿಂಕೆ ನವಿಲು. ಕೌಜುಗ ಇನ್ನು ಅನೇಕ ವನ್ಯ ಜೀವಿಗಳಿವೆ.

ವಾರ್ಷಿಕ ಸರಾಸರಿ 890 ಮಿ. ಮೀ. ಮಳೆಯಾಗುವ ಈ ಕಾಡು ಬಡ ಜನರಿಗೆ ಬದುಕನ್ನು ನೀಡುತ್ತಿದೆ ಇಲ್ಲಿ ಯಥೇಚ್ಛವಾಗಿ ಬೆಳೆಯುವ ಬಾಧೆ ಹುಲ್ಲು ಗುಡಿಸಲುಗಳಿಗೆ ಭದ್ರ ಚಾವಣಿ ಆಗುತ್ತದೆ. ಅಳೆತ್ತರ ಬೆಳೆಯುವ ಈ ಹುಲ್ಲನ್ನು ಬೇಸಿಗೆಯಲ್ಲಿ ಕೊಯ್ದು ತಂದು ಮಾರಾಟ ಮಾಡಿ ಅನೇಕ ಬಡ ಕುಟುಂಬಗಳು ಬದುಕುತ್ತಿವೆ.

ದನಕರುಗಳಿಗೆ ಪುಷ್ಕಳ ಮೇವಾಗುವ ಕರಡ ಹುಲ್ಲು ಈ ಕಾಡಲ್ಲಿ ಸಿಗುತ್ತದೆ. ಕಾಡು ಫಲಗಳಾದ ನೇರಳೆ. ನೆಲ್ಲಿ. ಕಾರೇ.ಜಾನಿಹಣ್ಣು. ಲೇಬಿಹಣ್ಣು. ತಿನ್ನುವ ಅಂಟು. ಮುತ್ತುಗದ ಎಲೆ. ಬೀಡಿ ಎಲೆ. ಅಂಟುವಾಳ ಇತ್ಯಾದಿ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಣೆಯಿಂದ ನೂರಾರು ಜನರಿಗೆ ಕೂಲಿ ಸಿಗುತ್ತದೆ.

ಯಶವಂತನಗರ ದ ಬಳಿಯ ಓಬಳಗಂಡಿ ಹಾಗೂ ಮುರಾರಿಪುರದ ಬಳಿಯ ಭೀಮನಗಂಡಿ ಮದ್ಯೆ ಹರಿಯುವ ನಾರಿಹಳ್ಳಕ್ಕೆ ತಾರಾನಗರದ ಬಳಿ ಅಣೆಕಟ್ಟನ್ನು ಕಟ್ಟಲಾಗಿದೆ ಅಪಾರ ಜಲಾರಾಶಿಯ ಸುತ್ತಲೂ ಹಸಿರು ಬೆಟ್ಟ ಗುಡ್ಡಗಳನ್ನು ನೋಡಲು ಎರೆಡು ಕಣ್ಣು ಸಾಲವು. ಹಾಗಾಗಿ ಪುಟ್ಟಣ್ಣ ಕಣಗಾಲ್ ರಿಗೆ ಈ ಸ್ಥಳ ಮಾನಸ ಸರೋವರವಾಹಿತು ಇದರೊಂದಿಗೆ ಇನ್ನೂ ಅನೇಕ ಚಲನ ಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ.

ಇಡೀ ಈಶಾನ್ಯ ಕರ್ನಾಟಕಕ್ಕೆ ಸೂಕ್ಷ್ಮ ಪರಿಸರ ವ್ಯವಸ್ಥೆ ನಿಯಂತ್ರಿಸುವ ಸಂಡೂರಿನ ಕಾಡು ಇಂದು ಗಣಿಗಾರಿಕೆ ಎಂಬ ರಕ್ತ ಬೀಜಾಸುರನ ದಾಳಿಯಿಂದ ತತ್ತರಿಸುತ್ತಿದೆ. ನಿನ್ನೆ ಮೊನ್ನೆಯವರೆಗೂ ಹಸಿರು ಕಾಡಿನಿಂದ ಕಂಗೊಳಿಸುತ್ತಿದ್ದ ಬೆಟ್ಟ ಗುಡ್ಡಗಳು ಇಂದು ಕೆಂಪು ಮಣ್ಣಿನ ರಾಶಿಯಿಂದ ತುಂಬಿಕೊಳ್ಳುತ್ತಿದೆ. ತನ್ನ ಒಡಲಲ್ಲಿ ಅಡಗಿಸಿಟ್ಟುಕೊಂಡಿರಿವ ಅಪಾರ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಈ ಕಾಡಿಗೆ ಮುಳುವಾಗಿದೆ. ಇಲ್ಲಿ ಸಿಗುವ ಹೇಮಟೈಟ್ ಎಂಬ ಅದಿರಿನಲ್ಲಿ ಶೇಕಡಾ 60 ರಿಂದ 70 ರಷ್ಟು ಕಬ್ಬಿಣವಿದೆ. ಕುದುರೆಮುಖದ ಶೇ 30 ರ ಅದುರುಗೆ ಹೋಲಿಸಿದರೆ ಇದು ಉತ್ತಮ ಅದಿರು. ಒಂದು ಅಂದಾಜಿನ ಪ್ರಕಾರ 1000 ರಿಂದ 1250 ದಶ ಲಕ್ಷ ಟನ್ ಅದಿರು ಇಲ್ಲಿ ಅಡಗಿದೆಯಂತೆ.

ಇಂದು ರಾಷ್ಟ್ರೀಯ ಖನಿಜಾವೃದ್ಧಿ ಮಂಡಳಿಯವರು ಸಾವಿರಾರು ಅರಣ್ಯ ಭೂಮಿಯಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ. ಮರಗಿಡಗಳನ್ನು ಸವರಿ ಮೇಲ್ಮಣ್ಣನ್ನು ಕೆತ್ತಿ ಸ್ಪೋಟಕಗಳನ್ನು ಸಿಡಿಸಿ ಅದಿರನ್ನು ತೆಗೆಯುತ್ತಿದ್ದಾರೆ. ಸಾವಿರಾರು ಲಾರಿಗಳು ಭರದಿಂದ ಅದಿರನ್ನು ರೈಲು ನಿಲ್ದಾಣಗಳಿಗೆ ಸಾಗಿಸುತ್ತಿವೆ. ಹಾಗಾಗಿ ಇಲ್ಲಿನ ಅಪಾರ ಸಸ್ಯರಾಶಿ ಕ್ಷೀಣಿಸುತ್ತಿವೆ ಅಸಂಖ್ಯಾತ ವನ್ಯಜೀವಿಗಳು ಕಣ್ಮರೆಯಾಗುತ್ತಿವೆ. ಸೂಕ್ಷ್ಮ ಪರಿಸರ ಜಾಲ ಛಿದ್ರ ಆಗುತ್ತಿದೆ. ಮಳೆ ನೀರಲ್ಲಿ ಕೊಚ್ಚಿ ಕೊಂಡು ಬರುವ ಗಣಿಯ ಮಣ್ಣು ಹೊಲಗದ್ದೆ ಗಳನ್ನು ಬರಡು ಮಾಡುತ್ತಿದೆ. ಕೆರೆ-ಕುಂಟೆ. ಹಳ್ಳ-ಕೊಳ್ಳ. ಹೂಳಿನಿಂದ ತುಂಬಿಕೊಂಡಿವೆ. ಸ್ವಚ್ಛ ನೀರಿನ ಸೆಲೆಗಳೆಲ್ಲಾ ಅದಿರಿನ ಕೆಂಪು ರಾಡಿ ನೀರಿನಿಂದ ಹರಿಯುತ್ತಿವೆ. ಎಲ್ಲೆಲ್ಲೂ ಹರಡಿಕೊಂಡಿರಿವ ಕೆಂಪು ದೂಳು ಬೆಳೆಗಳ ಮೇಲೆ ಬಿದ್ದು ಉತ್ಪಾದನೆ ಕ್ಷೀಣಿಸುತ್ತಿದೆ. ಇದೇ ದೂಳನ್ನು ಉಸಿರಾಡುತ್ತ ಸಾವಿರಾರು ಜನರು ಶ್ವಾಸಕೋಶದ ಖಾಯಿಲೆಯಿಂದ ನರಳುತ್ತಿದ್ದಾರೆ. ತೊಟ್ಟ ಬಟ್ಟೆ ನಿಮಿಷದಲ್ಲೇಕೆಂಪು ರಂಗಿನ ಕೊಳೆ ಇಂದ ರಾರಾಜಿಸುತ್ತದೆ. ಮೈ ಕೈಯೆಲ್ಲಾ ಕೆಂಪು. ಈ ಕೊಳೆ ತೆಗೆಯಲು ಬೇಕು ಬಾರುಗಟ್ಟಲೆ ಸೋಪು ಟ್ಯಾಂಕುಗಟ್ಟಲೇ ನೀರು.

ಸರ್ಕಾರದ ಒಂದು ಅಂಗವೇ ಗಣಿ ಮಾಫಿಯಾ ಆಗಿದ್ದರೆ ಪರಿಸರ-ಅರಣ್ಯ ಇಲಾಖೆ ಹಲ್ಲು ಉಗುರುಗಳಿಲ್ಲದ ಹುಲಿಯಂತೆ ಆಸಹಾಯಕವಾಗಿದೆ.ಪಚ್ಚಿಮಘಟ್ಟದ ರಕ್ಷಣೆಗೆ ಸಾಹಿತಿಗಳು ಸ್ವಾಮೀಜಿಗಳು ಸಂಘಟನೆಗಳು ಮುಂದಾದಂತೆ ಈ ಉದುರೆಲೆಅರಣ್ಯದ ರಕ್ಷಣೆಗೆ ಯಾರು ದಿಕ್ಕು..?

ಗಣಿಗಾರಿಕೆ ಈ ವನರಾಶಿಯನ್ನು ಈ ಜೀವಸಂಕುಲವನ್ನು ವಿನಾಶದಂಚಿಗೆ ತಂದ್ದಿದ್ದರೂ ನಿಸರ್ಗ ತನ್ನ ಉಳಿವಿಗಾಗಿ ತಾನೊಬ್ಬನೇ ಹೋರಾಟ ಸಾಗಿಸಿದೆ. ಇದರ ನೆರವಿಗೆ ಉಳುವಿಗೆ ಸಾಹಿತಿಗಳೂ.ಪರಿಸರ ಪ್ರೇಮಿಗಳು. ಸ್ವಾಮಿಜಿಗಳೂ. ಸಂಘ ಸಂಸ್ಥೆಯವರು. ಸಮಾನಮನಸ್ಕ ಜನಗಳು.ಪ್ರಘ್ನವಂತರು ವಿದ್ಯಾರ್ಥಿ/ನಿ ಗಳು ಮುಂದೆ ಬಂದು ಹೋರಾಟ ಮಾಡಬೇಕಿದೆ.

ಈ ನಿಸರ್ಗ ಸಂಪೂರ್ಣವಾಗಿ ಕಣ್ಮರೆ ಆಗುವ ಮುನ್ನ ಬನ್ನಿ ಒಮ್ಮೆಯಾದರು ಈ ಸುಂದರ ಸಂಡೂರು ಕಾಡನ್ನು ನೋಡಿ ಆಗ “ಬಳ್ಳಾರಿ ಎಂದರೆ ಬರೀ ಬಿರು ಬಿಸಿಲ ಸೀಮೆಯಲ್ಲೋ ಎಂದು ಉದ್ಘರಿಸುತ್ತೀರಿ..

ಸಂಗ್ರಹ ಲೇಖನ:-
ಗೋಪಾಲ್

LEAVE A REPLY

Please enter your comment!
Please enter your name here