ಅಹಿಂಸೆ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಯುಗಪುರುಷ ಮಹಾತ್ಮ ಗಾಂಧೀಜಿ: ಡಾ.ಕೆ.ಸಿ ನಾರಾಯಣಗೌಡ.

0
101

ಮಂಡ್ಯ.ಅ 02 :- ಶಾಂತಿ ಹಾಗೂ ಅಹಿಂಸೆ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಯುಗಪುರುಷ ಮಹಾತ್ಮ ಗಾಂಧೀಜೀ ಎಂದು ರೇಷ್ಮೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ ನಾರಾಯಣಗೌಡ ಹೇಳಿದರು.

ಇಂದು ಮದ್ದೂರಿನ ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ನಡೆದ 153 ನೇ ಮಹಾತ್ಮ ಗಾಂಧೀಜಿ ಹಾಗೂ 118 ನೇ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಕ್ಷಿಣ ಆಫ್ರಿಕಾದಲ್ಲಿ ಕರಿಯರು ಮತ್ತು ಬಿಳಿಯರ ನಡುವೆ ಹೋರಾಟ ನಡೆಯುತ್ತಿತ್ತು, ಗಾಂಧಿಜಿ ದಕ್ಷಿಣ ಆಫ್ರಿಕಾದಲ್ಲಿ ರೈಲಿನಲ್ಲಿ ಹೋಗುತ್ತಿದ್ದಾಗ ಕರಿಯರು ಎಂದು ಮೂದಲಿಸಿ ರೈಲಿನಿಂದ ಹೊರಗೆ ತಳ್ಳುತ್ತಾರೆ. ಆಗ ಬಿಳಿಯರ ದಬ್ಬಾಳಿಕೆಯನ್ನು ಖಂಡಿಸಿ ಹೋರಾಟ ಆರಂಭಿಸುತ್ತಾರೆ. ಅಲ್ಲಿಂದ ಗಾಂಧಿಜಿಯವರ ಹೋರಾಟದ ಬದುಕು ಆರಂಭವಾಯಿತು ಎಂದರು.

ಹಲವು ವರ್ಷಗಳ ಕಾಲ ಅಲ್ಲೇ ನೆಲೆಸಿದ್ದ ಗಾಂಧಿಜಿ ಅವರು 1915 ರಲ್ಲಿ ಭಾರತಕ್ಕೆ ಬರುತ್ತಾರೆ. ಅಲ್ಲಿಂದ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭಿಸುತ್ತಾರೆ. ನಮ್ಮ ರಾಜ್ಯಕ್ಕೆ 18 ಬಾರಿ ಮಹಾತ್ಮಾ ಗಾಂಧಿಜಿ ಅವರು ಬಂದಿದ್ದರು ಎಂದರು.

ಗಾಂಧಿಜಿಯವರು ಬಂದು ಹೋದ ಮೇಲೆ ನಮ್ಮಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಹೆಚ್ಚಾಯಿತು. ಮೈಸೂರಿನಲ್ಲಿ ತ್ರಿವರ್ಣ ಧ್ವಜ ಹಾರಿಸಿದಾಗ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಲಾಯಿತು ಎಂದರು.

ಹೀಗಾಗಿ ಮೈಸೂರಿನಿಂದ ಹೊರಗೆ ಧ್ವಜಸತ್ಯಾಗ್ರಹಕ್ಕೆ ತೀರ್ಮಾನಿಸಲಾಯಿತು. ಇದೇ ಊರಿನ ತಿರುಮಲಗೌಡ ಅವರ ಜಮೀನಿನಲ್ಲಿ ಧ್ವಜಸ್ಥಂಬ ನಿಲ್ಲಿಸಿದಾಗ, ಬ್ರಿಟಿಷ್ ಸರ್ಕಾರ ನಿಷೇಧಾಜ್ಞೆ ಹೇರಿತು. ನಿಷೇಧಾಜ್ಞೆ ಉಲ್ಲಂಘಿಸಿ ಶಿವಪುರದ ಈ ಪ್ರದೇಶದಲ್ಲಿ 1938ರ ಎಪ್ರಿಲ್ 9 ರಂದು ಟಿ. ಸಿದ್ದಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಮಾಡಲಾಯಿತು ಎಂದರು.

ಆ ಬಳಿಕ ಮೂರು ದಿನಗಳ ಕಾಲ ನಡೆದ ಧ್ವಜ ಸತ್ಯಾಗ್ರಹ ಸ್ವಾತಂತ್ರ್ಯದ ಕಿಚ್ಚನ್ನೇ ಹೊತ್ತಿಸಿತು ಎಂದರು.

ಗಾಂಧಿಜಿಯವರ ಇನ್ನೊಂದು ವಿಶೇಷವೆಂದರೆ ಸರಳತೆ ಹಾಗೂ ನಡಿಗೆ. ಅವರು ಪ್ರತಿ ದಿನ ಸರಾಸರಿ 18 ಕಿ.ಮಿ. ನಡೆಯುತ್ತಿದ್ದರು ಎಂದು ಹೇಳಿದರು.

ಒಂದು ಅಂದಾಜಿನ ಪ್ರಕಾರ ಅವರ ಹೋರಾಟದ ಜೀವನದಲ್ಲಿ ನಡೆದಾಡಿದ್ದನ್ನು ಲೆಕ್ಕ ಹಾಕಿದರೆ ಪ್ರಪಂಚವನ್ನು ಎರಡುಬಾರಿ ಸುತ್ತು ಹಾಕುವಷ್ಟು ನಡೆದಿದ್ದಾರಂತೆ. ಗಾಂಧಿಜಿಯವರ ಸರಳತೆ, ಶಾಂತಿ, ಅಂಹಿಸೆ ಇಂದಿನ ಕಾಲಕ್ಕೆ ಅಗತ್ಯವಾಗಿದೆ. ನಾವೆಲ್ಲ ಅದನ್ನು ಪಾಲಿಸಬೇಕಿದೆ ಎಂದರು.

ಗಾಂಧಿಜಿ ಅವರು ಗ್ರಾಮಗಳ ಅಭಿವೃದ್ಧಿ ಆಗಬೇಕು ಎನ್ನುತ್ತಿದ್ದರು. ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಜಾರಿಗೆ ತರುವ ಮೂಲಕ ಗಾಂಧಿಜಿಯವರ ಆಶಯವನ್ನು ನಮ್ಮ ಸರ್ಕಾರ ಈಡೇರಿಸುತ್ತಿದೆ. ಈ ಯೋಜನೆಯಿಂದ ಗ್ರಾಮದಲ್ಲಿರುವ ಬಡ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲ ಯೋಜನೆ ತಲುಪಲಿದೆ. ಆ ಮೂಲಕ ಬಡವರ ಉದ್ದಾರವಾಗಲಿದೆ. ಜೊತೆ ಗ್ರಾಮಗಳ ಅಭಿವೃದ್ಧಿಯೂ ಆಗಲಿದೆ. ಎನ್‍ಎಸ್‍ಎಸ್‍ ಸ್ವಯಂ ಸೇವಕರು, ಅಧಿಕಾರಿಗಳು ಈ ಯೋಜನೆಯ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಕೇವಲ 17 ತಿಂಗಳ ಕಾಲ ಪ್ರಧಾನಿ ಆಗಿದ್ದರೂ ಎಂದೂ ಮರೆಯದಂತಹ ಆಡಳಿತ ನಡೆಸಿದವರು ನಮ್ಮ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು. ಜೈ ಜವಾನ್ ಜೈ ಕಿಸಾನ್ ಎಂಬ ಘೋಷವಾಕ್ಯ ಮೊಳಗಿಸಿದವರು. ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿ ಜಯಿಸಿದವರು‌. ಅತ್ಯಂತ ಸರಳ, ಪ್ರಾಮಾಣಿಕ ವ್ಯಕ್ತಿ ಶಾಸ್ತ್ರಿಜಿ ಅವರು. ಇಂದು ಅವರ ಜನ್ಮದಿನ. ಅವರ ಬದುಕೇ ನಮಗೆಲ್ಲ ಆದರ್ಶ‌ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮದ್ದೂರಿನ ಶಾಸಕ ಡಿ.ಸಿ ತಮ್ಮಣ್ಣ, ವಿಧಾನಪರಿಷತ್ ಶಾಸಕ ಕೆ.ಟಿ ಶ್ರೀಕಂಠೇಗೌಡ, ಸಾಹಿತಿ ತೈಲೂರು ವೆಂಕಟಕೃಷ್ಣ, ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ, ಜಿ.ಪಂ ಸಿಇಒ ದಿವ್ಯಪ್ರಭು, ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜಾ, ಉಪವಿಭಾಗಾಧಿಕಾರಿ ಐಶ್ವರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here