ಕೋವಿಡ್‌ನಿಂದ ಸಂಕಷ್ಟದಲ್ಲಿರುವ ಮಕ್ಕಳಿಗೆ ನೆರವು ನೀಡಿ : ನಾಗವೇಣಿ

0
134

ರಾಮನಗರ, ಅ.೦೫ : ಕೋವಿಡ್-೧೯ ಸೋಂಕಿನ ಕಾರಣ ಜಿಲ್ಲೆಯಲ್ಲಿ ಹಲವಾರು ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದು, ಕುಟುಂಬಗಳಲ್ಲಿನ ಮಕ್ಕಳಿಗೆ ವಿವಿಧ ಇಲಾಖೆಗಳು ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳ ಮುಖಾಂತರ ಅವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಿ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗವೇಣಿ ಅವರು ತಿಳಿಸಿದರು.

ಅವರು ಇಂದು ಕೋವಿಡ್ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ಮಕ್ಕಳ ಪಾಲನೆ, ರಕ್ಷಣೆ ಮತ್ತು ಪೋಷಣೆಗೆ ಅವಶ್ಯಕತೆ ಇರುವಂತಹ ಸೌಲಭ್ಯಗಳನ್ನು ಸಂಕಷ್ಟಕ್ಕೀಡಾದ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಕಲ್ಪಿಸುವ ಹಿನ್ನಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಅರಿವು-ನೆರವು ವೆಬಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಾಲಸ್ವರಾಜ್ ಪೋರ್ಟಲ್‌ನಲ್ಲಿ ೧ನೇ ಮಾರ್ಚ್ ೨೦೨೦ ರಿಂದ ಕೋವಿಡ್ ಹಾಗೂ ಕೋವಿಡೇತರ ಕಾರಣಗಳಿಂದ ಒಬ್ಬರು ಅಥವಾ ಇಬ್ಬರು ಪೋಷಕರನ್ನು ಕಳೆದುಕೊಂಡ ಮಕ್ಕಳ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಒಬ್ಬರು ಪೋಷಕರನ್ನು ಕಳೆದುಕೊಂಡ ೨೦೪ ಮಕ್ಕಳ ಮಾಹಿತಿ ಹಾಗೂ ಇಬ್ಬರು ಪೋಷಕರನ್ನು ಕಳೆದುಕೊಂಡ ೪ ಮಕ್ಕಳ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗಿದೆ ಎಂದರು.

ಇಬ್ಬರೂ ಪೋಷಕರನ್ನು ಕಳದುಕೊಂಡಿರುವ ೪ ಮಕ್ಕಳಿಗೆ ಬಾಲಸೇವಾ ಯೋಜನೆಯಡಿ ಮಾಸಿಕ ರೂ.೩೫೦೦/-ಸಹಾಯಧನ ನೀಡಲಾಗುತ್ತಿದೆ. ಪ್ರಧಾನಮಂತ್ರಿ ಪೋಷಣಾ ಯೋಜನೆಯಡಿಯಲ್ಲಿ ಇಬ್ಬರು ಪೋಷಕರನ್ನು ಕಳೆದುಕೊಂಡಿರುವ ನಾಲ್ಕು ಮಕ್ಕಳಿಗೆ ೨೩ ವರ್ಷಗಳ ನಂತರ ತಲಾ ೧೦.೦೦ಲಕ್ಷ ರೂಗಳ ಸೌಲಭ್ಯವನ್ನು ಒದಗಿಸಲು ಪೋರ್ಟಾಲ್‌ನಲ್ಲಿ ಮಕ್ಕಳ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗಿದೆ ಎಂದರು.

ಕೋವಿಡ್ ಹಿನ್ನಲೆಯಲ್ಲಿ ಪೋಷಕರು ಕೆಲಸ ಕಳೆದುಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ತೊಂದರೆಯಾಗಿ ಅವರನ್ನು ಬಾಲ ಕಾರ್ಮಿಕರನ್ನಾಗಿ ಮಾಡಬಹುದು. ಖಾಸಗಿ ಶಾಲೆಯಲ್ಲಿ ಶುಲ್ಕ ಪಾವತಿಸದಿರುವ ಹಿನ್ನಲೆಯಲ್ಲಿ ದಾಖಲಾತಿ ನೀಡದೆ ಇರಬಹುದು. ಮಕ್ಕಳ ದಾಖಲಾತಿ ಹಾಗೂ ಹಾಜರಾತಿಯ ಬಗ್ಗೆ ಶಿಕ್ಷಣ ಇಲಾಖೆ ಅವರು ನಿಗಾ ವಹಿಸಬೇಕು. ಜಿಲ್ಲೆಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.
ಕೋವಿಡ್-೧೯ ಸಂಕಷ್ಟದ ಹಿನ್ನಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ಪ್ರಕರಣಗಳು, ಬಾಲ್ಯವಿವಾಹ ಮುಂತಾದ ಪ್ರಕರಣಗಳು ಹೆಚ್ಚಾಗಿ ಕಂಡುಬರಬಹುದಾಗಿದ್ದು, ಪ್ರತಿ ತಿಂಗಳು ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿ ಸಭೆಗಳನ್ನು ಕಡ್ಡಾಯವಾಗಿ ನಡೆಸುವುದು ಹಾಗೂ ಇಂತಹ ಪ್ರಕರಣ ಕಂಡುಬಂದರೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವುದು ಎಂದರು.

ಕೋವಿಡ್-೧೯ರ ಸೋಂಕಿನ ಕಾರಣ ಸಂತ್ರಸ್ಥರಾಗುವ (ಏಕಪೋಷಕ/ ಅನಾಥ) ಮಕ್ಕಳಿಗೆ ನೈತಿಕ, ಭಾವನಾತ್ಮಕ ಮತ್ತು ಸಾಮಾಜಿಕ ನೆರವು ಒದಗಿಸಿ ಅವರನ್ನು ಮಾನಸಿಕ ಆಘಾತದಿಂದ ಹೊರತರಲು ಮಾರ್ಗದರ್ಶನ ನೀಡಲು ಸ್ವಯಂ ಪ್ರೇರಿತ ಮಾರ್ಗದರ್ಶಕರನ್ನು ಬೇಕಿದ್ದು, ಆಸಕ್ತಿವುಳ್ಳ ಮಾರ್ಗದರ್ಶಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಲು ಕೋರಿದರು.

ಬೆಂಗಳೂರು ನಗರದ ಅಸಾಂಸ್ಥಿಕ ಪೋಷಕದ ರಕ್ಷಣಾಧಿಕಾರಿ ಯೋಗೇಶ್ ಅವರು ಮಾತನಾಡಿ ಪೋಷಕರಿಲ್ಲದ ಅನಾಥ, ನಿರ್ಗತಿಕ ಹಾಗೂ ನಿರ್ಲಕ್ಷಿತ, ಪರಿತ್ಯಕ್ತ ಹಾಗೂ ಪೋಷಕರಿಂದ ಒಪ್ಪಿಸಲ್ಪಟ್ಟ ಮಕ್ಕಳಿಗೆ ಕುಟುಂಬದ ವಾತಾವರಣ ಕಲ್ಪಿಸುವ ದೃಷ್ಟಿಯಿಂದ ಬಾಲನ್ಯಾಯ (ಪಾಲನೆ ಮತ್ತು ರಕ್ಷಣೆ) ಕಾಯ್ದೆ-೨೦೧೫ ಸೆಕ್ಷನ್ ೫೬ರನ್ವಯ ದತ್ತು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ . ದತ್ತು ಮಾರ್ಗಸೂಚಿ-೨೦೧೭ರಲ್ಲಿ ನಿಗದಿಪಡಿಸಿರುವಂತೆ ದತ್ತು ಪಡೆಯಲು ತಿತಿತಿ.ಛಿಚಿಡಿಚಿ.ಟಿiಛಿ.iಟಿ ನಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.

ಕಾನೂನು ಬಾಹಿರ ದತ್ತು ಹಾಗೂ ಮಕ್ಕಳ ಅಕ್ರಮ ಸಾಗಾಟ ಹಾಗೂ ಮಾರಾಟ ಮಾಡಿದರೆ ಬಾಲನ್ಯಾಯ ಕಾಯ್ದೆ ೨೦೧೫, ಸೆಕ್ಷನ್ (೮೧) ರನ್ವಯ ಮಕ್ಕಳನ್ನು ಮಾರಾಟ ಮಾಡಿದವರಿಗೆ ಹಾಗೂ ಮಕ್ಕಳನ್ನು ಕೊಂಡುಕೊಂಡವರಿಗೆ ೫ ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಬಹುದಾಗಿದೆ. ಒಂದು ವೇಳೆ ಇಂತಹ ಪ್ರಕರಣಗಳಲ್ಲಿ ಆಸ್ಪತ್ರೆ ಸಿಬ್ಬಂದಿಯವರು ಒಳಗೊಂಡಿದ್ದಲ್ಲಿ ಅಂತಹವರಿಗೆ ೭ ವರ್ಷಗಳವರೆಗೆ ಕಠಿಣ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲು ಅವಕಾಶವಿರುತ್ತದೆ ಎಂದರು.
ವೆಬಿನಾರ್‌ನಲ್ಲಿ ತಾಲ್ಲೂಕು ಶಿಶುಅಭಿವೃದ್ಧಿ ಯೋಜನಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here