ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ‌.ಅತೀಕ್ ಅವರಿಂದ ಪ್ರಗತಿ ಪರಿಶೀಲನೆ, ಅಂಗನವಾಡಿ, ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ನೀಡಲು ಕಟ್ಟುನಿಟ್ಟಿನ ಸೂಚನೆ

0
147

ಬೆಳಗಾವಿ, ನ.6 : ಎಲ್ಲ ಶಾಲೆಗಳು, ಅಂಗನವಾಡಿ ಕೇಂದ್ರಗಳು ಇದೀಗ ಪೂರ್ಣಪ್ರಮಾಣದಲ್ಲಿ ಆರಂಭಗೊಳ್ಳುತ್ತಿದ್ದು, ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇದಲ್ಲದೇ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲ ವಸತಿ ನಿಲಯಗಳಲ್ಲಿ ಸರಕಾರದ ಮೆನು ಪ್ರಕಾರ ಕಡ್ಡಾಯವಾಗಿ ಊಟೋಪಹಾರ ಒದಗಿಸುವುದರ ಜತೆಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ನ.6) ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ, ಹಿಂದುಳಿದ ಹಾಗೂ ಪರಿಶಿಷ್ಟ ವರ್ಗಗಳ ಇಲಾಖೆಯ ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಸರಕಾರದ ಮೆನು ಪ್ರಕಾರ ಕಡ್ಡಾಯವಾಗಿ ಊಟೋಪಹಾರ ಒದಗಿಸಬೇಕು.
ಶುದ್ಧ ಕುಡಿಯುವ ನೀರು ಪೂರೈಸಬೇಕು. ಹಾಸಿಗೆ-ಹೊದಿಕೆ ಸರಿಯಾಗಿ ನೀಡಬೇಕು. ಶೌಚಾಲಯ ವ್ಯವಸ್ಥೆ ಸರಿಯಾಗಿ ನಿರ್ವಹಿಸಬೇಕು. ಸಾಧ್ಯವಾದರೆ ಸೋಲಾರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುಂಬರುವ ದಿನಗಳಲ್ಲಿ ವಿದ್ಯಾರ್ಥಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಊಟೋಪಹಾರದ ಗುಣಮಟ್ಟ ಮತ್ತು ಸೌಕರ್ಯಗಳನ್ನು ಪರಿಶೀಲಿಸುತ್ತೇನೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ, ಸಿಇಓ ಅವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳು ಕೂಡ ವಸತಿನಿಲಯಗಳಿಗೆ ಅನೀರಿಕ್ಷಿತ ಭೇಟಿ ನೀಡಿ, ಸೌಕರ್ಯಗಳನ್ನು ಪರಿಶೀಲಿಸಬೇಕು.
ಗ್ರಾಮ, ಪಟ್ಟಣಗಳಿಂದ ದೂರದಲ್ಲಿ ಹೊಸ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಬಾರದು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾಧ್ಯವಾದಷ್ಟು ಸಮೀಪದಲ್ಲಿ ಜಾಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಪ್ರಸಕ್ತ ಸಾಲಿನ ಶಿಷ್ಯವೇತನವನ್ನು ಸಕಾಲದಲ್ಲಿ ನೀಡಲು ಕ್ರಮವಹಿಸುವಂತೆ ತಿಳಿಸಿದರು.
ಅಂಗನವಾಡಿಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಮಾಡಬೇಕು. ಜಲಜೀವನ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಒಂದು ವೇಳೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದರೆ ತಕ್ಷಣವೇ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಅಂಗನವಾಡಿಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ ಹುದ್ದೆಗಳನ್ನು ಭರ್ತಿ ಮಾಡಬೇಕು.
ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಸಂಬಂಧಿಸಿದ ಅಧಿಕಾರಿಗಳು ಕಡ್ಡಾಯವಾಗಿ ಆಹಾರದ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.
ನಿವೇಶನ ಲಭ್ಯವಿರುವ ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯ ನಿವೇಶನ(ಸಿಎ ಸೈಟ್) ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಅಂಗನವಾಡಿ ಕೇಂದ್ರಗಳಿಗೆ ನಿವೇಶನ, ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ವಿವಿಧ ಇಲಾಖೆಯ ಸಮನ್ವಯತೆ ಸಾಧಿಸಿ ಜಿಲ್ಲಾಧಿಕಾರಿಗಳ ಮೂಲಕ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.
ಶಾಲಾ ಆವರಣದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕು.
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು. ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಹಂತದಲ್ಲಿ ಸಭೆ ನಡೆಸಿ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸರಿಪಡಿಸಬೇಕು ಎಂದು ಉಪ ನಿರ್ದೇಶಕರಗಳಿಗೆ ಸೂಚನೆ ನೀಡಿದರು.

ಪಂಚಾಯಿತಿಗೊಂದು ಕೆರೆ ನಿರ್ಮಿಸಲು ಸೂಚನೆ:

ಗ್ರಾಮ ಪಂಚಾಯಿಗೊಂದು ಕೆರೆ ಇರಬೇಕು ಎಂಬುದು ಸರಕಾರದ ಆಶಯವಾಗಿದೆ. ಆದ್ದರಿಂದ ಪ್ರತಿ ಗ್ರಾಮಗಳಲ್ಲಿ ಕನಿಷ್ಠ ಒಂದು ಕೆರೆ ಇರಬೇಕು.
ಒಂದು ವೇಳೆ ಕೆರೆ ಇರದಿದ್ದರೆ ಹೊಸ ಕೆರೆ ನಿರ್ಮಾಣ ಮಾಡಬೇಕು ಎಂದು ಅತೀಕ್ ತಿಳಿಸಿದರು.
ಮುಂದಿನ ಮಳೆಗಾಲದ ವೇಳೆಗೆ ನಿಗದಿತ ಗುರಿ ಪ್ರಕಾರ ಸಸಿಗಳನ್ನು ನೆಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು.

ಲಸಿಕಾಕರಣ ಚುರುಕುಗೊಳಿಸಲು ಸಲಹೆ:

ಕೋವಿಡ್ ಲಸಿಕಾಕರಣದಲ್ಲಿ ನಿಗದಿತ ಗುರಿಗಿಂತ ಕಡಿಮೆ ಸಾಧನೆಯಾಗಿರುವ ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ ಲಸಿಕಾಕರಣ ಚುರುಕುಗೊಳಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಬಿತ್ತನೆ, ಗೊಬ್ಬರ ಲಭ್ಯತೆ, ಬೆಳೆಹಾನಿ ಸಮೀಕ್ಷೆ, ಬೆಳೆಪರಿಹಾರ ವಿತರಣೆ ಸೇರಿದಂತೆ ಪ್ರತಿಯೊಂದು ವಿಷಯದ ಕುರಿತು ಮಾಹಿತಿಯನ್ನು ಪಡೆದುಕೊಂಡರು.

ಜಲಜೀವನ ಮಿಷನ್; ಗ್ರಾಮಸ್ಥರ ಸಲಹೆ ಸ್ವೀಕರಿಸಲು ನಿರ್ದೇಶನ:

ಜಲಜೀವನ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಹೊಸ ಡಿಪಿಆರ್ ಮಾಡುವುದಕ್ಕಿಂತ ಮುಂಚೆ ಕಡ್ಡಾಯವಾಗಿ ಗ್ರಾಮಸಭೆ ನಡೆಸಬೇಕು; ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಲಹೆಗಳನ್ನು ಆಧರಿಸಿ ಯೋಜನೆಯನ್ನು ರೂಪಿಸಬೇಕು.
ಮುಂಚಿತವಾಗಿ ನಳ ಸಂಪರ್ಕ ಇರುವ ಮನೆಗಳಿಗೆ ಅದೇ ಸಂಪರ್ಕವನ್ನು ಮುಂದುವರಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅತೀಕ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಗಳಿಗೆ ಸಚಿವ ಸಂಪುಟದ ಅನುಮೋದನೆ ಪಡೆಯಲು ಅಗತ್ಯವಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಸದ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯ ಇರುವುದರಿಂದ ಲಸಿಕಾಕರಣ ಚುರುಕಿನಿಂದ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಈಗಾಗಲೇ ನಿರ್ಧರಿಸಿದಂತೆ ಬಾಕಿ ಇರುವ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.
ಇತ್ತೀಚಿನ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 16,272 ಮನೆಗಳಿಗೆ ಹಾನಿಯಾಗಿದೆ. ಪರಿಹಾರ ವಿತರಣಾ‌ ಕಾರ್ಯ ಚಾಲ್ತಿಯಲ್ಲಿದೆ 74 ಸಾವಿರ ರೈತರಿಗೆ 66 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟಾರೆ 35.66 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮೊದಲ ಡೋಸ್ ಶೇ. 89 ರಷ್ಟು ಗುರಿ ಸಾಧಿಸಲಾಗಿದೆ. ಇನ್ನೂ 3.93 ಲಕ್ಷ ಜನರಿಗೆ ಲಸಿಕೆ ನೀಡಬೇಕಿದೆ.
ಎರಡನೇ ಡೋಸ್ ಶೇ.86 ಗುರಿ ಸಾಧಿಸಲಾಗಿದ್ದು, 1.79 ಲಕ್ಷ ಜನರಿಗೆ ಎರಡನೇ ಡೋಸ್ ಲಸಿಕೆ ನೀಡುವುದು ಬಾಕಿಯಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟಾರೆ 80 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಅದರಲ್ಲಿ ಇಬ್ಬರು ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮರಣ ಪ್ರಮಾಣ ಸದ್ಯಕ್ಕೆ ಶೂನ್ಯವಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಸಭೆಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಯಾವುದೇ ರೀತಿಯ ಗೊಬ್ಬರದ ಕೊರತೆಯಿಲ್ಲ. ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಶಿಷ್ಯವೇತನ ಯೋಜನೆ ಜಾರಿಗೆ ತಂದಿದ್ದು, 2913 ಜನರು ಸದ್ಯಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟಾರೆ 5.72 ರೈತ ಕುಟುಂಬಗಳಿವೆ. ಈ ಕುಟುಂಬಗಳ ಅರ್ಹ ಕಲಿಯುವ ಮಕ್ಕಳನ್ನು ನವೆಂಬರ್ 30 ರೊಳಗೆ ಗರಿಷ್ಠ ನೋಂದಣಿ ಮಾಡಿಕೊಳ್ಳಲಾಗುವುದು.
1.15,661 ಹೆಕ್ಟೇರ್ ಬೆಳೆಹಾನಿ ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. ಕಳೆದಬಾರಿಯ ಬೆಳೆವಿಮೆ ಪರಿಹಾರ ಜಮೆಯಾಗಿರುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.
16 ಸಾವಿರಕ್ಕೂ ಅಧಿಕ ರೈತರಿಗೆ ಕೋವಿಡ್ ಸಂದರ್ಭದಲ್ಲಿನ ಪರಿಹಾರಧನವನ್ನು ಖಾತೆಗೆ ಜಮಾ‌ ಮಾಡಲಾಗಿರುತ್ತದೆ. ಇತ್ತೀಚಿನ ಅತಿವೃಷ್ಟಿ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ 559 ಲಕ್ಷ ರೂಪಾಯಿ ತೋಟಗಾರಿಕೆ ಬೆಳೆಹಾನಿಯಾಗಿರುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ ವಿವರಿಸಿದರು.
ತೋಟಗಾರಿಕೆ ಉತ್ಪನ್ನ ಸಂಗ್ರಹಕ್ಕೆ ಸರಕಾರದ ಶೈತ್ಯಾಗಾರ ನಿರ್ಮಿಸುವ ಅಗತ್ಯವಿದೆ ಎಂದರು.
ಶಾಲೆಗಳು ಪೂರ್ಣಪ್ರಮಾಣದಲ್ಲಿ ಆರಂಭಗೊಂಡಿದ್ದು, ಬಿಸಿಯೂಟ ಹಾಗೂ ಕ್ಷೀರಭಾಗ್ಯ ಯೋಜನೆಯನ್ನು ಸರಕಾರದ ಮಾರ್ಗಸೂಚಿ ಪ್ರಕಾರ ಆರಂಭಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎ.ಬಿ.ಪುಂಡಲೀಕ ಹೇಳಿದರು.
ಶೇ.96 ರಷ್ಟು ಮಕ್ಕಳಿಗೆ ಪಠ್ಯಪುಸ್ತಕ ಸರಬರಾಜು ಮಾಡಲಾಗಿದೆ. ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಸಮವಸ್ತ್ರ ಕೂಡ ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಒಟ್ಟಾರೆ 94 ವಿದ್ಯಾರ್ಥಿ ವಸತಿನಿಲಯಗಳಿವೆ. ಅದರಲ್ಲಿ 87 ಸ್ವಂತ ಕಟ್ಟಡಗಳಿದ್ದು, ಇನ್ನೂ ಮೂರು ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡರ ತಿಳಿಸಿದರು.

ನ.8 ರಿಂದ ಅಂಗನವಾಡಿ ಆರಂಭ:

ಇದೇ ನ.8 ರಿಂದ ಅಂಗನವಾಡಿಗಳನ್ನು ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಪ್ರಾರಂಭಿಸಲಾಗುತ್ತಿದೆ. ಉಪಾಹಾರವನ್ನು ಮನೆಗೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಬಸವರಾಜ ವರವಟ್ಟಿ ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಸರಕಾರದ ಮಾರ್ಗಸೂಚಿ ಪ್ರಕಾರ‌ ಶಾಲಾ ಆವರಣದಲ್ಲಿ ಅಂಗನವಾಡಿ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ, ಶಶಿಧರ್ ‌ಬಗಲಿ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here