ಕೇಂದ್ರ ಕಾರಾಗೃಹ ಬಂಧಿಗಳಿಗೆ ಕಲಿಕೆಯಿಂದ ಬದಲಾವಣೆ ಸಾಕ್ಷರತಾ ಕಾರ್ಯಕ್ರಮ,ಅಕ್ಷರ ಜ್ಞಾನ ನೀಡಿ ಬಂಧಿಗಳ ಬಾಳಿಗೆ ಬೆಳಕಾಗಿ: ನ್ಯಾ.ಪುಷ್ಪಾಂಜಲಿದೇವಿ

0
83

ಬಳ್ಳಾರಿ,ನ.01: ಯಾವುದೋ ಒಂದು ಕಾರಣದಿಂದ ಕಾರಾಗೃಹದಲ್ಲಿ ಬಂಧಿಯಾಗಿ ನಮ್ಮ ಇಡೀ ಜೀವನವೇ ಮುಗಿದುಹೋಯ್ತು ಎಂದು ಚಿಂತೆ ಮಾಡುತ್ತಾ ಕಾಲದೂಡುತ್ತಿರುವ ಬಂಧಿಗಳಿಗೆ ಅಕ್ಷರಭ್ಯಾಸ ಮಾಡಿಸುವುದರ ಮೂಲಕ ಅವರನ್ನು ಅಕ್ಷರಸ್ಥರನ್ನಾಗಿ ಮಾಡಿ ಮತ್ತು ಅವರ ಮುಂದಿನ ಬಾಳು ಬೆಳಕಾಗಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್.ಪುಷ್ಪಾಂಜಲಿದೇವಿ ಅವರು ಹೇಳಿದರು.
ಲೋಕಶಿಕ್ಷಣ ನಿರ್ದೇಶನಾಲಯ ಮತ್ತು ಕಾರಾಗೃಹ ಸುಧಾರಣಾ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂ ಸಂಯುಕ್ತ ಆಶ್ರಯದಲ್ಲಿ ನಗರದ ಕೇಂದ್ರ ಕಾರಾಗೃಹದಲ್ಲಿ ಸೋಮವಾರ ಏರ್ಪಡಿಸಿದ್ದ 2021-22ನೇ ಸಾಲಿನ ಕಲಿಕೆಯಿಂದ ಬದಲಾವಣೆ ಸಾಕ್ಷರತಾ ಕಾರ್ಯಕ್ರಮಕ್ಕೆ ಬಂಧಿಗಳಿಗೆ ಅಕ್ಷರ ಕಲಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕಾರಾಗೃಹದಿಂದ ಬಂಧಿಗಳು ಹೊರಹೊಗಿ ಸಮಾಜದ ಜನರ ಜತೆಗೆ ಅತ್ಯಂತ ನೆಮ್ಮದಿಯಿಂದ ಜೀವನ ನಡೆಸುವಂತ ರೀತಿಯಲ್ಲಿ ಶಿಕ್ಷಣವನ್ನು ಕಲಿಸುವ ಕೆಲಸವನ್ನು ಮಾಡಬೇಕು. ಅನಕ್ಷರಸ್ಥ ಬಂಧಿಗಳಿಗೆ ಅಕ್ಷರ ಜ್ಞಾನ ಕಲಿಯಲು ಒಂದು ಸುವರ್ಣಾವಕಾಶ ಕಲ್ಪಿಸಲಾಗಿದ್ದು, ಇದನ್ನು ತಾವೆಲ್ಲರೂ ಅತ್ಯಂತ ಸದವಕಾಶ ಎಂದು ಭಾವಿಸಿ ಅಕ್ಷರಾಭ್ಯಾಸ ಮಾಡಿ ಅಕ್ಷರಸ್ಥರಾಗಬೇಕು ಮತ್ತು ಈ ಮೂಲಕ ನಾಡನ್ನು ಕಟ್ಟುವ ಕೆಲಸಕ್ಕೆ ತಾವೆಲ್ಲರೂ ಕೈಜೋಡಿಸೇಕು ಎಂದು ಹೇಳಿದರು.
ಬೋಧಕರು ಸಹ ಬಂಧಿಗಳಿಗೆ ನಿಗದಿಪಡಿಸಿದ ಅವಧಿಯಲ್ಲಿ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಅವರನ್ನು ಒಳ್ಳೆಯ ಅಕ್ಷರಸ್ಥರನ್ನಾಗಿಸುವ ಕೆಲಸವನ್ನು ಮಾಡಬೇಕು ಮತ್ತು ಈ ಕಾರಾಗೃಹದಲ್ಲಿರುವ ಎಲ್ಲ ಬಂಧಿಗಳು ಅಕ್ಷರಸ್ಥರಾಗಬೇಕು ಎಂದರು.
ಕಲಿಕೆಯಿಂದ ಬದಲಾವಣೆ ಕಾರ್ಯಕ್ರಮದಿಂದ ಅಕ್ಷರ ಕಲಿಕೆಯ ಮೂಲಕ ಜ್ಞಾನ ಪಡೆದು ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ,ಯಾವುದೋ ಕ್ಷಣಿಕ ಘಟನೆಯಲ್ಲಿ ತೊಡಗಿಸಿಕೊಂಡು ಕಾರಾಗೃಹಕ್ಕೆ ಬಂದಿರುತ್ತೀರಿ ಶಾಶ್ವತವಾಗಿ ಇಲ್ಲಿರದೆ. ಕಾರಾಗೃಹದಿಂದ ಹೊರಬಂದ ನಂತರ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕು ರೂಪಿಸಿಕೊಳ್ಳಿ ಎಂದರು.
ಜಿಪಂ ಸಿಇಒ ನಂದಿನಿ ಕೆ.ಆರ್ ಅವರು ಮಾತನಾಡಿ ಅನಕ್ಷರಸ್ಥರಿಗೆ ಅಕ್ಷರ ಜ್ಞಾನ ನೀಡುವ ಹೊಸ ಕಾರ್ಯಕ್ಕೆ ಸರ್ಕಾರ ನಾಂದಿ ಹಾಡಿದೆ. ಕಾರಾಗೃಹದ ಎಲ್ಲಾ ಬಂಧಿಗಳು ಕೂಡ ಇದರಲ್ಲಿ ಭಾಗಿಯಾಗಿ. ಅಕ್ಷರ ಜ್ಞಾನ ಪಡೆಯಿರಿ. ಕಾರಾಗೃಹದಿಂದ ಹೊರ ಹೋದ ನಂತರ ದೈನಂದಿನ ಚಟುವಟಿಕೆಗಳಲ್ಲಿ ಶಿಕ್ಷಣ ನಿಮಗೆ ಅತೀ ಅವಶ್ಯಕವಾಗಿ ಬೇಕಾಗುತ್ತದೆ; ಈ ಹಿನ್ನೆಲೆಯಲ್ಲಿ ತಾವೆಲ್ಲರೂ ಅಕ್ಷರ ಜ್ಞಾನ ಪಡೆದುಕೊಳ್ಳಿ ಎಂದರು.
ಅಕ್ಷರ ಜ್ಞಾನ ಪಡೆದುಕೊಂಡ ನಂತರ ಅಗಾಧ ಜ್ಞಾನಭಂಡಾರ ತೆರೆಯಲಿದ್ದು,ಇದರಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಮಾತನಾಡಿ ಹುಟ್ಟಿನಿಂದ ಯಾರೂ ಅಪರಾಧ ಮಾಡಿರಲ್ಲ, ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಮಾಡಿದ ಘಟನೆಗಳು ನಿಮ್ಮನ್ನು ಕಾರಾಗೃಹದಲ್ಲಿರುವಂತೆ ಮಾಡಿದೆ. ನಿಮ್ಮ ಜೀವನ ಇಲ್ಲಿಗೆ ಅಂತ್ಯವಲ್ಲ. ಇಲ್ಲಿ ತಪ್ಪುಗಳ ಮನವರಿಕೆ ಮಾಡಿಕೊಂಡು ಮುಂದಿನ ಬದುಕು ಉತ್ತಮವಾಗಿ ಕಟ್ಟಿಕೊಳ್ಳಲು ಅಕ್ಷರ ಜ್ಞಾನ ನೆರವಾಗಲಿದೆ ಎಂದರು.
ಅಂಧಕಾರವನ್ನು ಹೊಡೆದೋಡಿಸಿ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವನ ರೂಪಿಸಿಕೊಳ್ಳಲು ಒಂದೊಳ್ಳೆ ಅವಕಾಶ ಕಲ್ಪಿಸಿದ್ದು ಎಲ್ಲಾ ಬಂಧಿಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಡಿ.ಪವಿತ್ರಾ ಅವರು ಮಾತನಾಡಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ಲೋಕ ಶಿಕ್ಷಣ ನಿರ್ದೇಶನಾಲಯವು ಶಿಕ್ಷಣದಿಂದ ವಂಚಿತರಾದವರಿಗೆ ಅಕ್ಷರ ಜ್ಞಾನ ಕಲಿಸುವ ಕೆಲಸ ಮಾಡುತ್ತಿದೆ. 1978ರಿಂದ ಅನಕ್ಷರಸ್ಥ ರನ್ನು ಸಾಕ್ಷರತನ್ನಾಗಿಸುವ ಕೆಲಸ ನಮ್ಮ ಇಲಾಖೆಯು ಮಾಡುತ್ತಿದೆ. ಈ ಕಾರ್ಯಕ್ರಮದ ಮೂಲಕ ಬಂಧಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುತ್ತಿದೆ. ನಿಮ್ಮ ದಿನನಿತ್ಯದ ಬದುಕಿನ ವ್ಯವಹಾರದಲ್ಲಿ ಅಕ್ಷರ ಜ್ಞಾನ ತುಂಬಾ ಮುಖ್ಯ. ಅನಕ್ಷರಸ್ಥರಿಗೆ ಅಕ್ಷರ ಜ್ಞಾನ ತಿಳಿಸಲು ಬಾಳಿನ ಬೆಳಕು ಪುಸ್ತಕ ಮತ್ತು ಕೈಪಿಡಿ ನೆರವಾಗಲಿದೆ ಎಂದರು.
ಲೋಕಶಿಕ್ಷಣ ನಿರ್ದೇಶನಾಲಯದಿಂದ ನಿಯೋಜಿತರಾದ ಬೋಧಕರು ಮತ್ತು ಬಂಧಿಗಳಲ್ಲಿಯೇ ಅಕ್ಷರಭ್ಯಾಸ ಪಡೆದ ತರಬೇತುದಾರರು ಅನಕ್ಷರಸ್ಥ ಬಂಧಿಗಳಿಗೆ ತರಬೇತಿ ನೀಡಲಿದ್ದಾರೆ ಎಂದರು.
ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ನಂತರ ಅಕ್ಷರಭ್ಯಾಸ ಪಡೆದ ತರಬೇತುದಾರ ಬಂಧಿಗಳಿಗೆ ಬಾಳಿಗೆ ಬೆಳಕು ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಬಂಧಿಗಳು ಪ್ರದರ್ಶಿಸಿದ ಮದ್ಯಪಾನದಿಂದ ಉಂಟಾಗುವ ಅಪರಾಧಗಳ ಕುರಿತು ಕಿರುನಾಟಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.
ಈ ಸಂದರ್ಭದಲ್ಲಿ ಕೆಎಸ್‍ಐಎಸ್‍ಎಫ್ ಬಳ್ಳಾರಿ ಘಟಕದ ಇನ್ಸ್‍ಪೆಕ್ಟರ್ ಮಲ್ಲಿಕಾರ್ಜುನ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಪ್ಪ, ಕಾರಾಗೃಹದ ವೈದ್ಯಾಧಿಕಾರಿ ಗುಪ್ತಾ ಸೇರಿದಂತೆ ಕಾರಾಗೃಹದ ಬಂಧಿಗಳು ಇದ್ದರು.

LEAVE A REPLY

Please enter your comment!
Please enter your name here