ಮಕ್ಕಳ ಮೊಬೈಲ್ ಬಳಕೆ ಗಂಭೀರ ಪರಿಣಾಮಕ್ಕೆ ಕಾರಣವಾಗುತ್ತಿದೆ ಹಕ್ಕು-ಕರ್ತವ್ಯ ಅರಿತು ಕಾನೂನು ಪಾಲನೆ ಅಗತ್ಯ : ನ್ಯಾ.ಮುಸ್ತಫಾ ಹುಸೇನ್.

0
138

ಶಿವಮೊಗ್ಗ, ನವೆಂಬರ್ 09: ಹಕ್ಕುಗಳೊಂದಿಗೆ ಕರ್ತವ್ಯಗಳನ್ನೂ ಅರಿತು ಅದನ್ನು ಪಾಲಿಸುವುದು ಅತಿ ಮುಖ್ಯವಾಗಿದೆ. ಕಾನೂನಿನ ಪರಿಣಾಮ ತಿಳಿಯಬೇಕಾದರೆ ಅದರ ಅರಿವು ಮುಖ್ಯವಾಗುತ್ತದೆ ಆದ್ದರಿಂದ ಮಕ್ಕಳಾದಿಯಾಗಿ ಎಲ್ಲರೂ ದಿನನಿತ್ಯದ ಕಾನೂನುಗಳನ್ನು ಅರಿತು, ಇತರರಿಗೂ ತಿಳಿಸುವ ಮೂಲಕ ಕಾನೂನು ಸಾಕ್ಷರತೆ ಹೆಚ್ಚಿಸಬೇಕೆಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಎಸ್.ಎ. ಕಿವಿಮಾತು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಸೇವಾ ಯೋಜನೆ, ಎಟಿಎನ್‍ಸಿಸಿ ಕಾಲೇಜು, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಎಟಿಎನ್‍ಸಿಸಿ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ‘ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರಿಗೂ ಸಮಾನವಾಗಿ ನ್ಯಾಯ ಒದಗಿಸಲು ಕಾನೂನು ಸೇವೆಗಳ ಅಧಿನಿಯಮವು ರಾಷ್ಟ್ರ ಮಟ್ಟದಿಂದ ತಾಲ್ಲೂಕು ಹಂತದವರೆಗೆ ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ಜನ ಸಾಮಾನ್ಯರಲ್ಲಿ ದಿನನಿತ್ಯದ ಕಾನೂನು ಅರಿವು ಮೂಡಿಸುವ ಮತ್ತು ಉಚಿತ ಕಾನೂನು ನೆರವು ನೀಡುವ ಕಾರ್ಯವೆಸಗುತ್ತಿದೆ.

ನಾವೆಲ್ಲ ನಮ್ಮ ನೆಲದ ಕರ್ತವ್ಯಗಳನ್ನು ಗೌರವಿಸಬೇಕು. ಆಗ ನೆಮ್ಮದಿ ವಾತಾವರಣ ಸಾಧ್ಯವಾಗುತ್ತದೆ. ಆದ ಕಾರಣ ಹಕ್ಕು, ಕರ್ತವ್ಯಗಳು ಮತ್ತು ಕಾನೂನಿನ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. 18 ವಯಸ್ಸಿನ ಒಳಗಿನ ಮಕ್ಕಳು ದ್ವಿಚಕ್ರ ಅಥವಾ ಇತರೆ ವಾಹನ ಓಡಿಸುವ ಮುನ್ನ ಇದಕ್ಕೆ ಸಂಬಂಧಿಸಿದ ಕಾನೂನುಗಳಾದ ಡ್ರೈವಿಂಗ್ ಲೈಸೆನ್ಸ್, ಇನ್ಶೂರೆನ್ಸ್ ಬಗ್ಗೆ ತಿಳಿದಿರಬೇಕು. ಇದನ್ನು ತಿಳಿಯದೇ ಅಪಘಾತ ಇತರೆ ಅನಾಹುತ ಸಂಭವಿಸಿದಲ್ಲಿ ಇಡೀ ಕುಟುಂಬ ನೋವನ್ನು ಅನುಭವಿಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಮನದಟ್ಟುಮಾಡಿದರು.
ಮೊಬೈಲ್ ಬಳಕೆ ಗಂಭೀರ ಪರಿಣಾಮ : ಪ್ರಸ್ತುತ ಮಕ್ಕಳ ಮೊಬೈಲ್ ಬಳಕೆ ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಇದರಿಂದ ಅನೇಕ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾಧದ ಸಂಗತಿಯಾಗಿದ್ದು, ಇದಕ್ಕೆ ಕಡಿವಾಣ ಹಾಕದಿದ್ದರೆ ಮಕ್ಕಳು, ಯುವಜನತೆ ಮಾನಸಿಕ, ದೈಹಿಕ ಮತ್ತು ಕಾನೂನಿನ ಸಂಘರ್ಷಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಮೊಬೈಲ್ ಬಳಕೆ ಮಾಡಬೇಕು. ಈ ನಿಟ್ಟಿನಲ್ಲಿ ಅರಿವು ಹೆಚ್ಚಬೇಕು ಎಂದು ಕಿವಿ ಮಾತು ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಹಾಗೂ ಮನೋವೈದ್ಯೆ ಡಾ.ಪ್ರೀತಿ ವಿ.ಶ್ಯಾನ್‍ಬಾಗ್ ಮಾತನಾಡಿ, ಕಾನೂನಿಗೂ ಮತ್ತು ಮಾನಸಿಕ ಆರೋಗ್ಯಕ್ಕೂ ಹತ್ತಿರದ ನಂಟಿದೆ. ಒಂದು ಅಪರಾಧದ ಹಿಂದೆ ಸಾಮಾನ್ಯವಾಗಿ ಮಾನಸಿಕ ಸ್ಥಿಮಿತ ಇಲ್ಲದಿರುವುದನ್ನು ಕಾಣಬಹುದು. ಆದ ಕಾರಣ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದು ಬಹುಮುಖ್ಯವಾಗಿದೆ. ಅದರಲ್ಲೂ ಹದಿಹರೆಯದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪ್ರೌಢಾವಸ್ಥೆಯಲ್ಲಿರುವ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವುದು ಅಗತ್ಯ.

ಮನಸ್ಸು ಮತ್ತು ದೇಹ ಒಟ್ಟೊಟ್ಟಿಗೇ ಬೆಳೆವಣಿಗೆ ಆಗಬೇಕು. ಹದಿ ವಯಸ್ಸಿನ ಮನಸ್ಸು ದ್ವಂದ್ವ ಸ್ಥಿತಿಯಲ್ಲಿರುತ್ತದೆ. ಇದಕ್ಕೆ ಪೂರಕವಾದ ಮಾರ್ಗದರ್ಶನ ಬೇಕು. ಪ್ರಸ್ತುತ ಕಾಲಮಾನದಲ್ಲಿ ಅವಕಾಶಗಳು ಹೆಚ್ಚಿವೆ. ಅದರ ಬಳಕೆ ಹೇಗೆ ಮಾಡಬೇಕು ಎಂಬ ಬಗ್ಗೆ ಮಿತಿ ಮತ್ತು ಮಾರ್ಗವಿಲ್ಲದೇ ಮಕ್ಕಳು ದಾರಿತಪ್ಪುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಮೊಬೈಲ್ ಬಳಕೆ ಅತಿ ಹೆಚ್ಚಾಗಿದ್ದು, ದುರ್ಬಳಕೆ ಆಗುತ್ತಿದೆ. 14, 15 ವಯಸ್ಸಿನ ಮಕ್ಕಳ ಮೊಬೈಲ್ ಅವಲಂಬನೆ ಹೆಚ್ಚಾಗಿದೆ. ಮೊಬೈಲ್ ಇತರೆ ಟೆಕ್ನಾಲಜಿಯ ಗೀಳು ಹೆಚ್ಚಾಗಿ ಮನೋದೈಹಿಕ ಸಮಸ್ಯೆಗಳು ಆಸ್ಪತ್ರೆಯಲ್ಲಿ ದಾಖಲಾಗುತ್ತಿವೆ. ಹಾಗೂ ಈ ರೀತಿ ಗೀಳು ಹತ್ತಿಸಿಕೊಂಡ ಮಕ್ಕಳು ಅಪರಾಧ ಕೃತ್ಯದಲ್ಲಿ ಭಾಗಿಯಾಗಲು ಕೂಡ ಹಿಂಜರಿಯುತ್ತಿಲ್ಲ.

ಮೊಬೈಲ್ ಬಳಕೆಯಿಂದಾಗಿ ಮಕ್ಕಳ ರೋಲ್ ಮಾಡೆಲ್‍ಗಳು ಕೂಡ ಟಿಕ್‍ಟಾಕ್, ಯೂಟ್ಯೂಬರ್‍ಗಳಾಗಿದ್ದು ವಾಸ್ತವತೆ ಅರಿಯುವಲ್ಲಿ ಸೋಲುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೌಶಲ್ಯ, ಉತ್ತಮ ಹವ್ಯಾಸಗಳು, ಸಾಮಾಜಿಕ ಜವಾಬ್ದಾರಿ, ಕಾನೂನಿನ ಅರಿವು ಮತ್ತು ಮಾನಸಿಕ ಆರೋಗ್ಯದ ಅರಿವು ಹೊಂದಿದಲ್ಲಿ ಮಾತ್ರ ಮಕ್ಕಳಿಗೆ ಒಳ್ಳೆಯ ಭವಿಷ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸಿಡಬ್ಲ್ಯುಸಿ ಮತ್ತು ಪಿಎಲ್‍ವಿ ಅಧ್ಯಕ್ಷೆ ರೇಖಾ ಜಿ.ಎಂ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಜಗತ್ತಿನ ಮೂರು ಪ್ರಮುಖ ಅಪರಾಧಗಳಲ್ಲಿ ಒಂದಾಗಿದ್ದು, ದೇಶಾದ್ಯಂತ ಈ ಅಪರಾಧ ನಡೆಯುತ್ತಲೇ ಇದೆ. ಅನಕ್ಷರತೆ, ನಿರುದ್ಯೋಗ, ಬಡತನ ಇತರೆ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ದುರ್ಬಲ ವರ್ಗವನ್ನು ಗುರಿಯಾಗಿಸಿಕೊಂಡು ಈ ಕೃತ್ಯವೆಸಲಾಗುತ್ತಿದೆ.

ಆದರೆ ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಯಲು ಕಾಯ್ದೆ ಕಾನೂನುಗಳಿವೆ. ಇದರಡಿ ಪ್ರಕರಣ ದಾಖಲಾದಾಗ ಮಾತ್ರ ಇದು ಎಷ್ಟು ದೊಡ್ಡ ಅಪರಾಧ ಎಂದು ಅರಿವಾಗುತ್ತದೆ. ಅನೈತಿಕ ತಡೆ ಕಾಯ್ದೆ 1887, 2012 ರ ತಿದ್ದುಪಡಿ ಹಾಗೂ ಇದೀಗ 2021 ರಲ್ಲೂ ತಿದ್ದುಪಡಿಯಾಗುತ್ತಿದ್ದು ನೊಂದ ಮಹಿಳೆಯರು ಮತ್ತು ಮಕ್ಕಳಿಗೆ ಕಾಯ್ದೆಯಡಿ ರಕ್ಷಣೆ, ಕಾನೂನು ನೆರವು ಸೇರಿದಂತೆ ಹಲವು ಸೌಲಭ್ಯಗಳಿವೆ.

ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಗುರುತಿಸಲಾದ ಎನ್‍ಜಿಓ ಯಿಂದ ಸಂತ್ರಸ್ತರಿಗೆ ನೆರವು ಮತ್ತ ಪುನರ್ವಸತಿ ಸಿಗುತ್ತದೆ. ಹಾಗೂ 2014 ರಲ್ಲಿ ಜಿಲ್ಲೆಯಲ್ಲಿ ಆರಂಭವಾದ ಸಖಿ-ಒನ್ ಸ್ಟಾಪ್ ಸೆಂಟರ್‍ನಲ್ಲಿ ವೈದ್ಯಕೀಯ, ಕಾನೂನು, ಪೊಲೀಸ್, ಆಪ್ತಸಮಾಲೋಚನೆ ಮತ್ತು ಮಧ್ಯಂತರ ಪರಿಹಾರ ಸೇರಿದಂತೆ ಒಂದೇ ಸೂರಿನಡಿ ಎಲ್ಲ ರೀತಿಯ ನೆರವು ದೊರಕಲಿದೆ. ಆದರೆ ಅಪರಾಧಕ್ಕೂ ಮುನ್ನ ಇದರ ತಡೆ ಬಹು ಮುಖ್ಯವಾಗಿದೆ.

ಆದ ಕಾರಣ ಹೆಣ್ಣುಮಕ್ಕಳು ಯಾರಾದರೂ ಅನವಶ್ಯಕವಾಗಿ ಉಡುಗೊರೆ ನೀಡುತ್ತಿದ್ದರೆ, ಆಸೆ ಆಮಿಷ ತೋರುತ್ತಿದ್ದರೆ ಇದರಿಂದ ಎಚ್ಚೆತ್ತುಕೊಂಡು ಹಿರಿಯರ ಅಥವಾ ಸಹಾವಯವಾಣಿಗಳ ಸಹಾಯ ಪಡೆಯಬೇಕು. ಕಾಯ್ದೆಯಡಿ ಅಪರಾಧ ಸಾಬೀತಾದಲ್ಲಿ 7 ವರ್ಷದವರೆಗೆ ಜೀವಾವಧಿ ಸಜೆ ಮತ್ತು ದಂಡ ಹಾಕಲಾಗುವುದು. ಮಕ್ಕಳ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿ 1098 ಮತ್ತು ಮಹಿಳೆಯರ ದೌರ್ಜನ್ಯ ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ 181 ಸಹಾಯವಾಣಿ ಹಾಗೂ ಪೊಲೀಸ್ ಸಹಾಯವಾಣಿ 112 ಗೆ ಯಾವುದೇ ಅಳುಕಿಲ್ಲದೆ ಕರೆ ಮಾಡಬೇಕು. ಕರೆ ಮಾಡಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ಹಾಗೂ ಕಾಯ್ದೆಯನ್ವಯ ಸಂತ್ರಸ್ತರ ಗುರುತನ್ನು ಸಹ ಎಲ್ಲೂ ಬಹಿರಂಗಪಡಿಸುವ ಹಾಗಿಲ್ಲ.
ವಿಶೇಷವಾಗಿ ಮಕ್ಕಳು ಇಂದು ಮೊಬೈಲ್, ಆನ್‍ಲೈನ್ ಚಾಟ್ ಇತ್ಯಾದಿಯಿಂದ ಎಚ್ಚರಿಕೆಯಿಂದ ಇರಬೇಕು. ಮೊಬೈಲ್ ದುರ್ಬಳಕೆಯಿಂದ ಅನೇಕ ಪ್ರಕರಣ ದಾಖಲಾಗುತ್ತಿದ್ದು, ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಆದ್ದರಿಂದ ಮಕ್ಕಳು ಈ ಬಗ್ಗೆ ಎಚ್ಚೆತ್ತುಕೊಂಡು ಇತರರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

ಹಿರಿಯ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂವಿಧಾನ ಸರ್ವರಿಗೂ ಸಮನಾದ ನ್ಯಾಯ ಒದಗಿಸಿದೆ. ಜಾತಿ, ಮತ, ವರ್ಗ ಇತರೆ ಯಾವುದೇ ತಾರತಮ್ಯವಿದಲ್ಲದೇ ಸಮನಾದ ನ್ಯಾಯ ಒದಗಿಸುವ ಪರಿಕಲ್ಪನೆಯಿಂದ ರಾಷ್ಟ್ರ ಮಟ್ಟದಿಂದ ತಾಲ್ಲೂಕು ಮಟ್ಟದವರೆಗೆ ಉಚಿತವಾಗಿ ನ್ಯಾಯದಾನ ಮಾಡುವ ಕಾನೂನು ಸೇವಾ ಪ್ರಾಧಿಕಾರಗಳ ಸ್ಥಾಪನೆಯಾಗಿದ್ದು, ಇವುಗಳ ಮೂಲಕ ಪ್ರತಿ ದಿನ ಜನಸಾಮಾನ್ಯರಿಗೆ ಅಗತ್ಯ ಕಾನೂನುಗಳ ಅರಿವು ಮತ್ತು ಅಗತ್ಯ ಜನತೆಗೆ ಉಚಿತ ಕಾನೂನು ನೆರವನ್ನು ಒದಗಿಸಲಾಗುತ್ತಿದೆ.
ಕಾನೂನು ಸೇವೆಗಳ ಅಧಿನಿಯಮ 09-11-1995 ರಲ್ಲಿ ಜಾರಿಗೆ ಬಂದ ಅಂಗವಾಗಿ ಇಂದು ರಾಷ್ಟ್ರೀಯ ಕಾನೂನು ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಹಾಗೂ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ಎಲ್ಲ ಹಳ್ಳಿ ಹಳ್ಳಿಗಳಲ್ಲಿ ಒಂದೂವರೆ ತಿಂಗಳ ಕಾಲ ಪ್ರತಿ ನಿತ್ಯ ಕಾನೂನು ಅರಿವು ಕಾರ್ಯಕ್ರಮ, ವಿವಿಧ ಶಿಬಿರ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಎಲ್ಲರೂ ಇದರ ಸದುಪಯೋಗ ಪಡೆಯಬೇಕೆಂದರು.

ಕಾರ್ಯಕ್ರಮದಲ್ಲಿ ಎಟಿಎನ್‍ಸಿಸಿ ಕಾಲೇಜು ಪ್ರಾಂಶುಪಾಲ ಪ್ರೊ.ಹೆಚ್.ಎಂ.ಸುರೇಶ್, ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಅಶ್ವಥ್ ನಾರಾಯಣ ಶೆಟ್ಟಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ದೇವೇಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎಟಿಎನ್‍ಸಿಸಿ ಕಾರ್ಯಕ್ರಮಾಧಿಕಾರಿ ಪ್ರೊ.ಕೆ.ಎಂ.ನಾಗರಾಜು ಸ್ವಾಗತಿಸಿದರು. ಪಿಯು ಮತ್ತು ಪದವಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here