ಉತ್ತಮ ಆರೋಗ್ಯಕ್ಕೆ ಅಯೋಡಿನ್ ಅಂಶವಿರುವ ಉಪ್ಪು ಬಳಸಿ:ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ

0
87

ಬಳ್ಳಾರಿ,ನ.25 : ಅಯೋಡಿನ್ ಕೊರತೆಯಿಂದ ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಸರಿಪಡಿಸಲಾಗದ ದೈಹಿಕ ಹಾಗೂ ಮಾನಸಿಕ ವಿಕಲತೆ, ಬೆಳವಣಿಗೆಯಲ್ಲಿ ಕುಂಠಿತ, ಕಿವುಡು ಹಾಗೂ ಮೂಕತನ, ಮೆಳ್ಳಗಣ್ಣು, ಕುಬ್ಜತನ, ಅಂಗವಿಕಲತೆ, ನಡಿಗೆಯಲ್ಲಿ ಸರಿಪಡಿಸಲಾಗದಂತಹ ಲೋಪದೋಷಗಳು ಕಂಡುಬರುತ್ತವೆ ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳಾದ ಡಾ.ಮರಿಯಂಬಿ ವಿ.ಕೆ ಅವರು ತಿಳಿಸಿದರು.
ವಿಶ್ವ ಅಯೋಡಿನ್ ಕೊರತೆಯ ದಿನಾಚರಣೆ ಅಂಗವಾಗಿ ನಗರದ ಪಾರ್ವತಿ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಅಯೋಡಿನ್ ಅಂಶದ ಕೊರತೆಯಿಂದ ಉಂಟಾಗುವ ಸಮಸ್ಯೆಗಳ ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಹಾರದಲ್ಲಿ ಅಯೋಡಿನ್ ಅಂಶವಿಲ್ಲದ ಉಪ್ಪು ಬಳಸುವುದರಿಂದ ವಯಸ್ಕರಲ್ಲಿ ಮುಖ್ಯವಾಗಿ ನಿಶಕ್ತಿ, ಕಾರ್ಯನಿರ್ವಹಣೆಯಲ್ಲಿ ವೈಫಲ್ಯತೆ, ಗಳಗಂಡ ರೋಗ ಕಂಡು ಬರುತ್ತದೆ. ಗರ್ಭಿಣಿಯಲ್ಲಿ ಮೈ ಇಳಿತ, ಪದೇ ಪದೇ ಗರ್ಭಪಾತ, ಸತ್ತು ಹುಟ್ಟುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಸಂತಾನೋತ್ಪತ್ತಿ ತೊಂದರೆಗಳು ಸೇರಿದಂತೆ ಅನೇಕ ಸಮಸ್ಯೆಗಳು ಕಂಡುಬರುತ್ತವೆ. ಆದ್ದರಿಂದ ಅಯೋಡಿನ್ ಅಂಶವಿರುವ ಒಳ್ಳೆಯ ಉಪ್ಪನ್ನು ದಿನನಿತ್ಯ ಆಹಾರದಲ್ಲಿ ಬಳಸುವುದು ಸೂಕ್ತ ಎಂದು ಅವರು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಕುಮಾರಿ ಅವರು ಮಾತನಾಡಿ ಉಪ್ಪು ತಪಾಸಣಾ ಪರಿಕರ (Salt Testing Kit) ವನ್ನು ಬಳಸಿ ಉಪ್ಪಿನ ಪರೀಕ್ಷೆಯನ್ನು ಮಾಡುವ ಕುರಿತು ಮತ್ತು ಉಪ್ಪಿನ ಗುಣಮಟ್ಟದ ಅರಿವನ್ನು ಮೂಡಿಸಲು ಮಕ್ಕಳ ಮುಂದೆಯೇ ಉಪ್ಪಿನ ಮಾದರಿಯನ್ನು ಪರೀಕ್ಷಿಸಿ ‘0′ PPಒ ಹಾಗೂ ‘<15’PPಒ, ಮತ್ತು ‘>15’PPಒ ಅಯೋಡಿನ್ ಅಂಶವಿರುವ ಉಪ್ಪು ಹೇಗಿರುತ್ತದೆಂದು ಪರೀಕ್ಷೀಸಿದರು. ಆರೋಗ್ಯಕರ ಜೀವನಕ್ಕಾಗಿ ಎಲ್ಲರೂ ‘>I5’ PPಒ ಅಂಶವಿರುವ ಉಪ್ಪನ್ನು ಬಳಸಬೇಕೆಂದು ಸೂಚಿಸಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಧಾರಾಣಿ ಮಾತನಾಡಿ ಅಯೋಡಿನ್‍ಯುಕ್ತ ಉಪ್ಪನ್ನು ಬಳಸುವ ಮೂಲಕ ವ್ಯಕ್ತಿಯಲ್ಲಿ ಮುಂಬರುವ ರೋಗಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ವಯಸ್ಸಿಗೆ ಅನುಗುಣವಾಗಿ ಒಬ್ಬ ಮನುಷ್ಯನಿಗೆ ದಿನಕ್ಕೆ 150 ರಿಂದ 300 ಮೈಕ್ರೋಗ್ರಾಂ ಉಪ್ಪು ದೇಹಕ್ಕೆ ಬೇಕಾಗುತ್ತದೆ. 0-1 ತಿಂಗಳ ಮಗುವಿಗೆ 50 ಮೈಕ್ರೋಗ್ರಾಂ, 12-59 ತಿಂಗಳ ಮಕ್ಕಳಿಗೆ 90 ಮೈಕ್ರೋಗ್ರಾಂ, ಶಾಲಾ ವಯಸ್ಸಿನ ಮಕ್ಕಳಿಗೆ 120 ಮೈಕ್ರೋಗ್ರಾಂ, ಗರ್ಭಿಣಿಯರಿಗೆ 220 ಮೈಕ್ರೋಗ್ರಾಂ, ಹಾಲುಣಿಸುವ ತಾಯಂದಿರಿಗೆ 290 ಮೈಕ್ರೋಗ್ರಾಂ ಅಯೋಡಿನ್ ಅಂಶವಿರುವ ಉಪ್ಪು ದೇಹಕ್ಕೆ ಅವಶ್ಯಕವಾಗಿರುತ್ತದೆ ಎಂದು ಅರಿವು ಮೂಡಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಅವರು ಮಾತನಾಡಿ ಪ್ರತಿಯೊಬ್ಬರು ಕೂಡ ಐ.ಎಸ್.ಐ ಗುರುತು ಹೊಂದಿರುವ ಅಯೋಡಿನ್‍ಯುಕ್ತ ಉಪ್ಪನ್ನು ಬಳಸುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾ ಘಟಕದ ಪ್ರಭಾರ ಎಪಿಡಾಮೊಲಾಜಿಸ್ಟ್ ಶರತ್ ಬಾಬು, ಶಾಲಾ ಮುಖ್ಯಶಿಕ್ಷಕಿ ಲೀಮಾ, ಜಿಲ್ಲಾ ಡಿ.ಸಿ.ಸಿ.ಟಿ ವಿಭಾಗದ ಸಿಬ್ಬಂದಿಗಳು, ಶಾಲಾ ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಜಿಲ್ಲಾ ತಂಬಾಕು ಕೋಶದ ಸಲಹೆಗಾರ ದುರಗೇಶ ಮಾಚನೂರ್ ನಿರೂಪಿಸಿದರು.

LEAVE A REPLY

Please enter your comment!
Please enter your name here