ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು

0
127

ಭಕ್ತಿಗೆ ಧರ್ಮಸ್ಥಳದ ಮಂಜುನಾಥ ಹಾಗೂ ಅಲ್ಲಿನ ಅನ್ನ ಪ್ರಸಾದಕ್ಕೆ ಧರ್ಮಸ್ಥಳ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಈ ಕೈಂಕರ್ಯದ ರೂವಾರಿಯಾಗಿ ಮತ್ತು ಅದ್ಭುತ ರೀತಿಯ ಸಮಾಜಸೇವೆಗೆ ಹೆಸರಾದವರು ಅಲ್ಲಿನ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು.

ವೀರೇಂದ್ರ ಹೆಗ್ಗಡೆ ಅವರು 1948ರ ನವೆಂಬರ್ 25ರಂದು, ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ಹೆಗ್ಗಡೆ ಅವರ ಹಿರಿಯ ಸುಪುತ್ರರಾಗಿ ಜನಿಸಿದರು. ಈ ವಂಶ ತುಳು ನಾಡಿನ ಪೆರ್ಗಾಡೆ ಮನೆತನದ್ದಾಗಿದ್ದು ಮೂಲತಃ ಜೈನ ಕುಟುಂಬಕ್ಕೆ ಸೇರಿದ್ದರೂ, ಹಿಂದೂ ಧರ್ಮೀಯ ಆಚರಣೆಯ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ದೇಗುಲದ ಧರ್ಮದರ್ಶಿತ್ವವನ್ನು ಪಾಲಿಸುತ್ತಾ ಬಂದಿದೆ. ವೀರೇಂದ್ರ ಹೆಗ್ಗಡೆಯವರು ಈ ಧರ್ಮದರ್ಶಿ ವಂಶಪರಂಪರೆಯಲ್ಲಿ ಮೂಡಿಬಂದ 21ನೇ ಧರ್ಮದರ್ಶಿಗಳು.

ಹತ್ತೊಂಬತ್ತರ ಹರೆಯದಲ್ಲೇ ಧರ್ಮದರ್ಶಿಗಳಾದ ವೀರೇಂದ್ರ ಹೆಗ್ಗಡೆಯವರು ದೂರದೃಷ್ಟಿವುಳ್ಳವರು. ಅವರ ಆಲೋಚನೆಗಳು ಜನಪರವಾಗಿಯೂ, ಜನಹಿತದ್ದಾಗಿಯೂ ನಿರಂತರವಾಗಿ ಮುಂದುವರೆಯುತ್ತ ಸಾಗಿದೆ. ನಾಡಿನ ಹಿರಿಮೆ ಗರಿಮೆಗೆ ಡಾ. ಹೆಗ್ಗಡೆಯವರ ಮುಂದಾಳತ್ವದಲ್ಲಿ ಧರ್ಮಸ್ಥಳ ಅವಿರತವಾಗಿ ಕಾಣಿಕೆ ನೀಡುತ್ತಲೇ ಬಂದಿದೆ.

ಧರ್ಮಸ್ಥಳದ ಸಾಮಾಜಿಕ ಕಲ್ಯಾಣ
ಗ್ರಾಮೀಣ ಅಭಿವೃದ್ಧಿ ಎಂಬ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಇಂದು ಅಸಂಖ್ಯಾತ ಜನರು ಅದರ ನೆರಳಲ್ಲಿ ತಂಗಾಳಿಯನ್ನು ಪಡೆದುಕೊಂಡಿದ್ದಾರೆ. ಹತ್ತು ರೂಪಾಯಿ ಸಾಲ ಪಡೆಯಲು ಹಿಂಜರಿಯುತ್ತಿದ್ದ ಜನಗಳು ಇಂದು ಲಕ್ಷಾಂತರ ರೂಪಾಯಿಗಳ ಸಾಲ ಪಡೆದು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವಂತಾಗಿದೆ. ಗ್ರಾಮೀಣ ಅಭಿವೃದ್ಧಿ, ವ್ಯವಸಾಯ ಮತ್ತು ಜನಪರ ಕಾಳಜಿ, ಕೈಗಾರಿಕಾ ಅಭಿವೃದ್ಧಿ, ಬಡಜನ ಮತ್ತು ಸ್ತ್ರೀ ಸ್ವಾವಲಂಬನೆ ಮುಂತಾದ ವಿಧವಿಧ ರೀತಿಯ ವೀರೇಂದ್ರ ಹೆಗ್ಗಡೆ ಅವರ ಭಾಗವಹಿಕೆಯಲ್ಲಿ ಹಲವು ದಶಲಕ್ಷ ಜನ ಬದುಕನ್ನು ಉತ್ತಮಗೊಳಿಸಿಕೊಂಡಿದ್ದಾರೆ. ನೂರಾರು ಗ್ರಾಮಗಳಿಗೆ ಸೋಲಾರ್ ಶಕ್ತಿಯ ಬೆಂಬಲ ನೀಡಲಾಗಿದೆ. ಸ್ವಸ್ವಹಾಯ ಸಂಘಗಳು ಇಂದು ಹಲವರ ಹೊಸ ಮನೆ, ಶುಭಕಾರ್ಯಗಳಿಗೆ ಇಂಬನ್ನು ನೀಡಿದೆ.

ಸಾಮೂಹಿಕ ವಿವಾಹ ವ್ಯವಸ್ಥೆಯಡಿ ಸರಳ ವಿವಾಹದ ಮೂಲಕ ಅದೆಷ್ಟೋ ಜೋಡಿಗಳು ದಾಂಪತ್ಯ ಜೀವನಕ್ಕೆ ಪ್ರವೇಶಿಸಿವೆ. ಪ್ರಾಕೃತಿಕ ಅಸಮತೋಲನದಿಂದಾಗಿ ಮನುಷ್ಯನ ಆರೋಗ್ಯ ಹಾಳಾಗುತ್ತಿರುವುದನ್ನು ಮನಗಂಡ ಹೆಗ್ಗಡೆಯವರು ವಿಶ್ವದಲ್ಲಿಯೇ ಮೊದಲ ಬಾರಿಗೆ ಪ್ರಕೃತಿ ಆಸ್ಪತ್ರೆಯೊಂದನ್ನು ನಿರ್ಮಿಸಿದರು. ಅತೀ ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ಪ್ರಕೃತಿಯ ಮೂಲಕವಾಗಿಯೇ ಇಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಪ್ರಾಚೀನ ಪರಂಪರೆಯಾದ ಆಯುರ್ವೇದ ಪದ್ಧತಿಗೂ ಧರ್ಮಸ್ಥಳದಿಂದ ಮಹತ್ತರ ಕೊಡುಗೆ ಸಂದಿದೆ. ಉಚಿತ / ಕಡಿಮೆ ವೆಚ್ಚದ ಚಿಕಿತ್ಸೆಯನ್ನು ಧರ್ಮಸ್ಥಳದಿಂದ ನಡೆಸಲ್ಪಡುವ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ.

ಉನ್ನತ ಗುಣಮಟ್ಟದ ಕಡಿಮೆ ವೆಚ್ಚದ ಶಿಕ್ಷಣ ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳಿಂದ ದೊರಕುತ್ತಿದೆ. ಧರ್ಮಸ್ಥಳ ದೇವಳದ ವತಿಯಿಂದ ಶ್ರೀ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರಾರಂಭಿಸಿ ಉನ್ನತ ಶಿಕ್ಷಣವನ್ನು ನೀಡುವ ಸುಮಾರು 50ಕ್ಕೂ ಹೆಚ್ಚು ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಈ ಸಂಸ್ಥೆಗಳು ಧರ್ಮಸ್ಥಳದ ಸಮೀಪದ ಉಜಿರೆಯಿಂದ ಮೊದಲಾಗಿ ಧಾರವಾಡ, ಮೈಸೂರು, ಮಂಗಳೂರು, ಹಾಸನ, ಉಡುಪಿ ಹೀಗೆ ವಿವಿಧಡೆಗಳಿಗೆ ವ್ಯಾಪಿಸಿವೆ. ಇದಲ್ಲದೆ ಧರ್ಮಸ್ಥಳದ ವತಿಯಿಂದ ಅನೇಕ ಊರುಗಳಲ್ಲಿನ ಶಾಲಾಸಂಸ್ಥೆಗಳು ಮತ್ತು ಸದುದ್ದೇಶಿತ ಸಂಸ್ಥೆಗಳಿಗೆ ನೆರವು, ಬೆಂಬಲ ಮತ್ತು ಮಾರ್ಗದರ್ಶನಗಳು ಸಹಾ ಸಂದಿವೆ.

ಅಭಯ ಪ್ರಸಾದ ಧರ್ಮಸ್ಥಳದ ಅನ್ನದಾನವು ಅತ್ಯಂತ ಶ್ರೇಷ್ಟವಾಗಿದೆ. ಹಸಿದು ಬಂದ ಭಕ್ತಾದಿಗಳ ಹೊಟ್ಟೆತಣಿಸುವ ಕೈಂಕರ್ಯ ನಾಡು ಕಂಡು ಕೇಳರಿಯದ ಸೋಜಿಗವಾಗಿದೆ. ಧರ್ಮಸ್ಥಳವು ಭಯಗೊಂಡವನಿಗೆ ಅಭಯವನ್ನು ಕರುಣಿಸುವ ದೇಗುಲವಾಗಿದೆ. ಕೋರ್ಟು ಮೆಟ್ಟಿಲು ಏರಬೇಕಾಗಿದ್ದ ಅದೆಷ್ಟೋ ಸಂಗತಿಗಳು ಧರ್ಮಾಧಿಕಾರಿಯವರ ಸನ್ನಿಧಾನದಲ್ಲಿ ಮಂಗಳವನ್ನು ಹಾಡಿವೆ. ಲಕ್ಷಾಂತರ ಜನರಿಗೆ ಸ್ವಉದ್ಯೋಗದ ಪಾಠವನ್ನು ಬೋಧಿಸಿ ಯುವ ಜನತೆಯ ಬಾಳ ದೀವಿಗೆಯನ್ನು ಬೆಳಗಿಸಿದೆ.

ಬೆಂಗಳೂರು, ಕಲ್ಲಹಳ್ಳಿ, ಭದ್ರಾವತಿ, ಮೈಸೂರು, ಶ್ರವಣಬೆಳಗೊಳ ಮತ್ತು ಬಂಟ್ವಾಳಗಳಲ್ಲಿ ಮಧ್ಯಮ ಮತ್ತು ಬಡಜನರಿಗೆ ಕೈಗೆಟಕುವ ಹಾಗೆ ಉತ್ತಮ ಕಲ್ಯಾಣ ಮಂಟಪಗಳು ನಿರ್ಮಾಣಗೊಂಡಿವೆ.

ಸರ್ವಧರ್ಮ ಸಮ್ಮೇಳನ, ಸಾಂಸ್ಕೃತಿಕ ಸಂಗಮ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನಗಳಂತ ಬೃಹತ್ ಸಮಾವೇಶಗಳು ಇಲ್ಲಿ ಯಶಸ್ವಿಯಾಗಿ ನಡೆಯುತ್ತ ಬಂದಿವೆ.

ಧರ್ಮಸ್ಥಳದಲ್ಲಿ ದೇವಸ್ಥಾನದ ವತಿಯಿಂದ ಹಳೆ ಕಾರುಗಳ ಸಂಗ್ರಹಾಲಯ ಮತ್ತು ಮಂಜೂಷಾ ವಸ್ತು ಸಂಗ್ರಹಾಲಯವಿದೆ. ಹಳೆಯ ಹಸ್ತ ಪ್ರತಿಗಳು, ಗ್ರಂಥಗಳ ರಕ್ಷಣೆಯನ್ನು ಮಾಡುವ ಗ್ರಂಥಾಲಯವೂ ಇಲ್ಲಿದೆ. ಧರ್ಮಸ್ಥಳದಲ್ಲಿ ಬಾಹುಬಲಿಮೂರ್ತಿ ಬಂದು ನೆಲೆಸಿದ್ದು ಕೂಡಾ ವೀರೇಂದ್ರ ಹೆಗ್ಗಡೆ ಅವರ ಉತ್ಸಾಹದಿಂದ. ಹೀಗೆ ಅವರ ಸಾಧನೆಗಳನ್ನು ಹೇಳುತ್ತಾ ಹೋದರೆ ಕೊನೆಮೊದಲಿಲ್ಲ. ಅನೇಕ ಧಾರ್ಮಿಕ ಕ್ಷೇತ್ರಗಳು ಹೇಗೆ ಜನರಿಗೆ ಅನುಕೂಲ ಕಲ್ಪಿಸಿ ಕ್ಷೇತ್ರವೂ ಅಭಿವೃದ್ಧಿ ಹೊಂದಬಹುದು ಎಂಬುದಕ್ಕೆ ವೀರೇಂದ್ರ ಹೆಗ್ಗಡೆ ಮತ್ತು ಧರ್ಮಸ್ಥಳ ನೀಡಿರುವ ಮಾದರಿ ಮಹತ್ವಪೂರ್ಣವಾದದ್ದು.

ವೀರೆಂದ್ರ ಹೆಗ್ಗಡೆ ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ, ಕರ್ನಾಟಕ ರತ್ನ ಮುಂತಾದ ಅನೇಕ ಗೌರವಗಳು ಮತ್ತು ಅವರು ಸಾದರಪಡಿಸಿದ ಆಭಿವೃದ್ಧಿ ಕಾರ್ಯಯೋಜನೆಗಳಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳು ಸಂದಿವೆ.

ವೀರೇಂದ್ರ ಹೆಗ್ಗಡೆ ಅವರಿಗೆ ಹುಟ್ಟು ಹಬ್ಬದ ಶುಭಹಾರೈಸುತ್ತಾ ಅವರ ಮಾರ್ಗದರ್ಶನ ಸಮಾಜಕ್ಕೆ ಬಹುಕಾಲ ಸಲ್ಲುತ್ತಿರಲಿ ಎಂದು ಆಶಿಸೋಣ.

LEAVE A REPLY

Please enter your comment!
Please enter your name here