ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ರಟ್ಟೆಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ

0
421

-ಹುಳ್ಳಿಪ್ರಕಾಶ

ಹಗರಿಬೊಮ್ಮನಹಳ್ಳಿ; ಮೇ,31
ರಾಷ್ಟ್ರೀಯ ಹಿರಿಯ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ,ಅವರ ಮುಖಕ್ಕೆ ಮಸಿ ಎರಚಿದ್ದನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ಮುಖಂಡರುಗಳು ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಕೃತ್ಯ ಎಸಗಿದವರ ಮೇಲೆ ಕಠಿಣ ಕ್ರಮವಹಿಸುವಂತೆ ಆಗ್ರಹಿಸುವ ಮನವಿಪತ್ರವನ್ನು ತಹಶಿಲ್ದಾರರಿಗೆ ನೀಡಿದರು.

ರಾಜ್ಯ ರೈತ ಸಂಘ, ಹಸಿರುಸೇನೆ, ಪ್ರಾಂತ ರೈತ ಸಂಘ, ಎಐಕೆಎಸ್, ಜನವಾದಿ ಮಹಿಳಾ ಸಂಘಟನೆಗಳಿಗೆ ಸೇರಿದ ಮುಖಂಡರುಗಳು ತಮ್ಮ ರಟ್ಟೆಗಳಿಗೆ ಕಪ್ಪು ಬಟ್ಟೆಯನ್ನು ಕಟ್ಟಿ ಕೊಂಡು ಸೋಮವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುತ್ತಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಯುದ್ಧವೀರ್ ಸಿಂಗ್, ಕವಿತಾ ಗುರಗುಂಟೆ ಮೇಲೆ ನಡೆಸಿದ ಹಲ್ಲೆಗೆ ತಮ್ಮ ಖಂಡನೆ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಭದ್ರತೆಯ ವೈಫಲ್ಯದ ವಿರುದ್ಧವಾಗಿ ಮತ್ತು ಜನವಿರೋಧಿ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗುವ ಮೂಲಕ ನಿನ್ನೆಯ ಘಟನೆಗೆ ಬಿಜೆಪಿ ನೇತೃತ್ವದ ಡಬ್ಬಲ್ ಇಂಜಿನ್ ಸರ್ಕಾರಗಳೇ ಕಾರಣ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.

ರಾಜ್ಯ ರೈತ ಸಂಘ-ಹಸಿರುಸೇನೆ ರಾಜ್ಯ ಮುಖಂಡ ಗೋಣಿಬಸಪ್ಪ ಮಾತನಾಡಿ, ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ, ಮಸಿ ಬಳಿದ ಪ್ರಕರಣ ನಮ್ಮ ನಾಡಿನ ಸಂಸ್ಕೃತಿಗೆ ಶೋಭೆ ತರುವಂತಹದ್ದಲ್ಲ. ಈ ಘಟನೆಯ ನಂತರ ದೇಶ, ವಿದೇಶಗಳಲ್ಲಿ ನಮ್ಮ ರಾಜ್ಯದ ಬಗ್ಗೆ ತಪ್ಪು ಸಂದೇಶ ರವಾನೆಯಾಗಿದೆ. ಬಿಜೆಪಿ ಪಕ್ಷ ತನ್ನ ಮುಖಕ್ಕೆ ತಾನೇ ಮಸಿ ಬಳಿದುಕೊಂಡಿದೆಂದರು.

ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ಕರ್ನಾಟಕ ಮತ್ತು ದೇಶ ವ್ಯಾಪ್ತಿ ಬಿಜೆಪಿ ಸರ್ಕಾದ ವಿರುದ್ಧ ಸಂಯುಕ್ತ ಹೋರಾಟದ ವತಿಯಿಂದ ‘ಕರಾಳ ದಿನ’ ಆಚರಣೆ ನಡೆದಿದೆ. ಇದರ ಭಾಗವಾಗಿ ನಾವಿಂದು ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟಿಸುತ್ತಿದ್ದೇವೆ. ನಮ್ಮ ದೇಶ ವಿವಿಧ ಸಂಸ್ಕೃತಿಗಳ, ವೈವಿಧ್ಯಮಯವಾದ ಪರಂಪರೆಗಳ ಬೀಡು ಇಲ್ಲಿ ಎಲ್ಲರ ಅಭಿಪ್ರಾಯಗಳನ್ನು ಗೌರವಿಸಿದಾಗ ಮಾತ್ರವೇ ನಮ್ಮ ಪ್ರಜಾಪ್ರಭುತ್ವದ ಆಂದ ಹೆಚ್ಚುತ್ತದೆ. ಆದರೇ ಭಾರತೀಯ ಜನತಾ ಪಕ್ಷ ಭಿನ್ನ ಅಭಿಪ್ರಾಯಗಳನ್ನು ಗೌರವಿಸುವುದಿರಲಿ, ಯಾವುದನ್ನು ಪರಿಗಣಿಸುವುದೇ ಇಲ್ಲ. ಇದು ಪ್ರಜಾತಂತ್ರ ವ್ಯವಸ್ಥೆಗೆ ಎಸಗುವ ದ್ರೋಹ ಎಂದು ವಿಷಾದಿಸಿದರು.

ಜನವಾದಿ ಮಹಿಳಾ ಸಂಘದ ಮುಖಂಡರಾದ ಸರ್ದಾರ ವಿನೋದ, ರತ್ನಮ್ಮ, ಎಐಕೆಎಸ್ ಮುಖಂಡ ಅನ್ವರ ಭಾಷ, ರೈತ ಸಂಘದ ಜೆಎಂ.ರುದ್ರಮುನಿ, ನಾಗಭೂಷಣ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here