ಆತ್ಮ ನಿರ್ಭರ ಭಾರತ್ ಅಭಿಯಾನದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ; ಸಾರ್ವಜನಿಕರಲ್ಲಿ ಅರಿವು ಮೂಡಿಸಿ: ಜಿಲ್ಲಾಧಿಕಾರಿ.

0
185

ಮಂಡ್ಯ, ಡಿ. 02 :- ಆತ್ಮ ನಿರ್ಭರ ಭಾರತ್ ಅಭಿಯಾನದ ಒಂದು ಜಿಲ್ಲೆ ಒಂದು ಉತ್ಪನ್ನ (ಬೆಲ್ಲ) ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರವನ್ನು ನೀಡಿ ಹೆಚ್ಚು ರೈತರು, ಉದ್ದಿಮೆದಾರರುಗಳಿಂದ ಅರ್ಜಿಗಳನ್ನು ಪಡೆದು ನಿಯಾಮಾನುಸಾರ ಸಾಲ ಮಂಜೂರು ಮಾಡಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಎಲ್ಲಾ ಇಲಾಖಾ ಹಾಗೂ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಆತ್ಮ ನಿರ್ಭರ ಭಾರತ್ ಅಭಿಯಾನದ ಒಂದು ಜಿಲ್ಲೆ ಒಂದು ಉತ್ಪನ್ನ (ಬೆಲ್ಲ) ಯೋಜನೆಯ ಹಾಗೂ ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಯೋಜನೆಯಡಿ ಮಂಡ್ಯ ಜಿಲ್ಲೆಗೆ (ಬೆಲ್ಲ) ಉತ್ಪನ್ನವು ಆಯ್ಕೆಯಾಗಿದ್ದು, ಇದುವರೆವಿಗೂ ಒಟ್ಟು 63 ರೈತ ಫಲಾನುಭವಿಗಳು ಯೋಜನೆಯಡಿ ಅರ್ಜಿ ಸಲ್ಲಿಸಲಾಗಿದ್ದು, 41 ಅರ್ಜಿಗಳು ಜಿಲ್ಲಾ ಮಟ್ಟದ ಸಮಿತಿಯಿಂದ ಅನುಮೋದನೆಗೊಂಡು 05 ಜನ ರೈತರಿಗೆ ಸಾಲ ಮಂಜೂರು ಮಾಡಲಾಗಿರುತ್ತದೆ ಎಂದರು.

ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ಕೊಯ್ಲಿನ್ನೋತ್ತರ ಮೂಲಭೂತ ಸೌಕರ್ಯ ಮತ್ತು ಸಾಮೂಹಿಕ ಕೃಷಿ ಆಸ್ತಿ ,ಸೃಷ್ಟಿಸಲು ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮೇಲಿನ ಶೇ.9ರ ಬಡ್ಡಿಗೆ ಶೇ.3ರ ಬಡ್ಡಿ ಸಹಾಯಧನವನ್ನು ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ ಎಂದರು.
ಈ ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರವನ್ನು ನೀಡಿ ಹೆಚ್ಚು ರೈತ ಫಲಾನುಭವಿಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಲು ಎಲ್ಲಾ ಎಲ್ಲಾ ಇಲಾಖಾ ಹಾಗೂ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತ ಉತ್ಪಾದಕರ ಸಂಸ್ಥೆಗಳ ಉತ್ತೇಜನ ಮತ್ತು ಮೇಲ್ವೀಚಾರಣೆ ಸಮಿತಿ ಸಭೆ

ಅಮೃತ ರೈತ ಉತ್ಪಾದಕ ಸಂಸ್ಥೆ ರಚನೆ ಯೋಜನೆಯಡಿ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಿಂದ ಒಟ್ಟು 12 ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಲು ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಯಿಂದ ಅನುಮೋದನೆ ಪಡೆಯಲಾಯಿತು.

ಈ ಸಂಸ್ಥೆಗಳಿಂದ ಕೃಷಿ ಪರಿಕರ ವಿತರಣೆ, ಕೃಷಿ ಉತ್ಪನ್ನ ಸಂಸ್ಕರಣೆ, ಬೆಳೆ ಮೌಲ್ಯವರ್ಧನೆ, ಉಪ ಉತ್ಪನ್ನಗಳ ತಯಾರಿಕೆ, ಕೋಯ್ಲೋತ್ತರ ಸಂಗ್ರಹಣೆಯಲ್ಲಿ ತಾಂತ್ರಿಕತೆ ಬಳಸುವುದರ ಮೂಲಕ ಕೃಷಿಕರಿಗೆ ಲಾಭ, ಸ್ವಾವಲಂಬಿ ಹಾಗೂ ಆರ್ಥಿಕವಾಗಿ ಸದೃಢಗೊಳಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿ ಹೆಚ್ಚು ರೈತರಿಗೆ ಅನುಕೂಲ ಮಾಡಿಕೊಡುವಂತೆ ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಹಾಗೂ ಸಂಪನ್ಮೂಲ ಸಂಸ್ಥೆಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಬೆಳೆ ವಿಮಾ ಯೋಜನೆ ಉಸ್ತುವಾರಿ ಸಮಿತಿ ಸಭೆ

ಇದುವರೆವಿಗೂ ಜಿಲ್ಲೆಯಲ್ಲಿ 2266 ಸಂಖ್ಯೆಯ ರೈತರು ಬೆಳೆ ವಿಮೆಗೆ ನೋಂದಾಯಿಸಿದ್ದು, ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ರಾಗಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ) ಹಾಗೂ ಟೊಮ್ಯಾಟೋ ಬೆಳೆಗಳಿಗೆ ಬೆಳೆ ವಿಮೆಗೆ ನೋಂದಾಯಿಸಲು ಕೊನೆಯ ದಿನಾಂಕ ಮುಕ್ತಾಯವಾಗಿದ್ದು, ಭತ್ತ (ನೀರಾವರಿ) ಹಾಗೂ ರಾಗಿ (ನೀರಾವರಿ) ಬೆಳೆಗಳಿಗೆ ವಿಮೆ ಮಾಡಿಸಲು ಡಿಸೆಂಬರ್ 16 ರವರೆಗೆ ಕಾಲಾವಕಾಶವಿರುತ್ತದೆ ಎಂದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಬಿ.ಎಸ್.ಚಂದ್ರಶೇಖರ್, ಜಿ.ಪಂ ಉಪಕಾರ್ಯದರ್ಶಿ ಎನ್.ಡಿ ಪ್ರಕಾಶ್, ಉಪವಿಭಾಗಾಧಿಕಾರಿ ಐಶ್ವರ್ಯ, ಅಗ್ರಿಕಲ್ಚರಲ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ, ಬೆಂಗಳೂರು ಸಂಸ್ಥೆಯ ಪ್ರತಿನಿಧಿಗಳು, ಮುಖ್ಯ ವ್ಯವಸ್ಥಾಪಕರು, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಮಂಡ್ಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಎಂ.ಡಿ.ಸಿ.ಸಿ.ಬ್ಯಾಂಕ್ ಅಧಿಕಾರಿಗಳು, ಸಹಕಾರ ಸಂಘಗಳ ಉಪ ನಿಬಂಧಕರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ಮಂಡ್ಯ ಜಿಲ್ಲೆ ಹಾಗೂ ಎಲ್ಲಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here