ಕುವೆಂಪು ವಿವಿಯಲ್ಲಿ 10 ದಿನಗಳ ಎನ್.ಸಿ.ಸಿ. ಕ್ಯಾಂಪ್‌ನ ಸಮಾರೋಪ ಸಮಾರಂಭ, ಎನ್.ಸಿ.ಸಿ.ಯ ಶಿಸ್ತಿನಿಂದ ಜೀವನದಲ್ಲಿ ಮುನ್ನಡೆ: ಪ್ರೊ. ವೀರಭದ್ರಪ್ಪ

0
138

ಶಂಕರಘಟ್ಟ, ಡಿ. ೦3: ಎನ್.ಸಿ.ಸಿ.ಯ ಶಿಸ್ತು ಮತ್ತು ದೇಶಪ್ರೇಮದ ಪಾಠಗಳು ಪ್ರತಿಯೊಬ್ಬ ವಿದ್ಯಾರ್ಥಿಗೂ ಜೀವನದಲ್ಲಿ ಉನ್ನತ ಗುರಿ ಸಾಧನೆಗೆ ಹಾಗೂ ದೇಶಸೇವೆಗೆ ಪ್ರೇರೇಪಿಸುತ್ತವೆ ಎಂದು ಕುವೆಂಪು ವಿವಿಯ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಕುವೆಂಪು ವಿವಿಯ ಮುಖ್ಯ ಆವರಣದಲ್ಲಿ ಶಿವಮೊಗ್ಗ ಎನ್.ಸಿ.ಸಿ. 20ನೇ ಬೆಟಾಲಿಯನ್ ಅಡಿ ಕಳೆದ ಹತ್ತು ದಿನಗಳ ಕಾಲ (ನವೆಂಬರ್ 25ರಿಂದ ಡಿಸೆಂಬರ್ 03) ನಡೆದ ನ್ಯಾಶನಲ್ ಕೆಡೆಟ್ ಕಾಪ್ಸ್ (ಎನ್.ಸಿ.ಸಿ.)ಯ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಶುಕ್ರವಾರ ಮಾತನಾಡಿದರು. 45 ವರ್ಷಗಳ ಹಿಂದೆ ತಾವು ಎನ್.ಸಿ.ಸಿ. ಶಿಬಿರಾರ್ಥಿಯಾಗಿ ಭಾಗವಹಿಸಿದ ಶಿಬಿರಗಳು, ಕಲಿತ ಮೌಲ್ಯಗಳನ್ನು ನೆನೆದ ಅವರು, ಸಾಮಾನ್ಯ ವಿದ್ಯಾರ್ಥಿ ಜೀವನದಿಂದ ಅರಂಭವಾದ ತಮ್ಮ ಬದುಕು ವಿವಿಯ ಕುಲಪತಿ ಸ್ಥಾನದಲ್ಲಿ ಸೇವೆಗೈಯುತ್ತಿರುವ ತಮ್ಮ ವಿನಮ್ರ ಸಾಧನೆಯ ಹಿಂದೆ ಎನ್.ಸಿ.ಸಿ. ಕಲಿಸಿದ ಶಿಸ್ತು, ಸಂಯಮ, ದೇಶಭಕ್ತಿ, ಗುರಿಸಾಧನೆಗಳ ಪಾಠಗಳಿವೆ ಎಂದರು.

ಹತ್ತು ದಿನಗಳ ಎನ್.ಸಿ.ಸಿ. ಶಿಬಿರದಲ್ಲಿ ಮಂಗಳೂರು, ಮಡಿಕೇರಿ, ಶಿವಮೊಗ್ಗ, ಉಡುಪಿ ಜಿಲ್ಲೆಗಳ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ 384 ಸೀನಿಯರ್ ವಿಂಗ್ ಕೆಡೆಟ್ (ವಿದ್ಯಾರ್ಥಿ)ಗಳು, ಇಬ್ಬರು ಮುಖ್ಯ ಆಫೀಸರ್‌ಗಳು ಹಾಗೂ 38 ವಿವಿಧ ಹಂತದ ಅಧಿಕಾರಿಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ ಎನ್.ಸಿ.ಸಿ. ದಿನ ಆಚರಣೆ, ದೈಹಿಕ ಪಟ್ಟುಗಳ ಕಲಿಕೆ, ಡ್ರಿಲ್, ನಕ್ಷೆ ಓದುವಿಕೆ, ಸಸ್ಯಗಳ ನೆಡುವಿಕೆ, ರಕ್ತದಾನ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಕ್ಯಾಂಪ್ ಲೆಫ್ಟಿನೆಂಟ್ ಕಮಾಂಡೆಂಟ್ ಅರುಣ್ ಯಾದವ್ ಮತ್ತು ಡೆಪ್ಯೂಟಿ ಕ್ಯಾಂಪ್ ಕಮಾಂಡೆಂಟ್ ಲೆಫ್ಟಿನೆಂಟ್ ಇಂಧ್ರನೀಲ್ ಘೋಷ್ ಹಾಜರಿದ್ದರು.

LEAVE A REPLY

Please enter your comment!
Please enter your name here