ಗ್ರಾ.ಪಂ. ಪಿಡಿಒ ಗಳಿಗೆ ತರಬೇತಿ ಕಾರ್ಯಗಾರ, ಮಕ್ಕಳ ಗ್ರಾಮಸಭೆಗಳು ಮಾನವ ಅಭಿವೃದ್ಧಿಗೆ ಭದ್ರ ಬುನಾದಿಯಾಗಬೇಕು- ಡಾ.ವಿಜಯ ಮಹಾಂತೇಶ್

0
109

ದಾವಣಗೆರೆ ಡಿ. 23:ಪ್ರತಿ ಗ್ರಾಮ ಪಂಚಾಯತ್‍ಗಳಲ್ಲಿಯೂ ಮಕ್ಕಳ ಗ್ರಾಮಸಭೆಗಳನ್ನು ಆಯೋಜಿಸುವುದು ಕಡ್ಡಾಯವಾಗಿದ್ದು, ಇಂತಹ ಗ್ರಾಮಸಭೆಗಳು ಭವಿಷ್ಯದ ಮಾನವ ಅಭಿವೃದ್ಧಿಗೆ ಭದ್ರ ಬುನಾದಿಯಾಗುವಂತಿರಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ‘ಮಕ್ಕಳ ಗ್ರಾಮಸಭೆ ಅನುಷ್ಠಾನ ಮತ್ತು ಮಕ್ಕಳ ಸಂರಕ್ಷಣೆಯಲ್ಲಿ ಗ್ರಾಮ ಪಂಚಾಯತ್‍ಗಳ ಪಾತ್ರ’ ಕುರಿತು ಜಿ.ಪಂ. ಮುಖ್ಯ ಸಭಾಂಗಣದಲ್ಲಿ ಗ್ರಾ.ಪಂ. ಪಿಡಿಒಗಳು ಹಾಗೂ ಕಾರ್ಯದರ್ಶಿಗಳಿಗೆ ಗುರುವಾರ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
21ನೇ ಶತಮಾನ ಭಾರತದ್ದಾಗಿದ್ದು, ವಿಶ್ವದಲ್ಲಿಯೆ ಸೂಪರ್ ಪವರ್ ದೇಶವಾಗಿ, ಆರ್ಥಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಲಿದೆ ಎಂಬುದಾಗಿ ತಜ್ಞರು ಹೇಳಿದ್ದಾರೆ. ಇದಕ್ಕೆ ಕಾರಣವೆಂದರೆ, ಉತ್ತಮ ಹಾಗೂ ಶ್ರಮದಾಯಕ ಕೆಲಸ ಮಾಡಬಲ್ಲ 18 ರಿಂದ 50 ವರ್ಷದೊಳಗಿನವರ ಸಂಖ್ಯೆ ದೇಶದಲ್ಲಿ ಹೆಚ್ಚು ಇರಲಿದೆ. ಇದು ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎನ್ನುತ್ತಾರೆ. ಹೀಗಾಗಿ ದೇಶಕ್ಕೆ ಉತ್ತಮ ಮಕ್ಕಳ ಕೊಡುಗೆ ನೀಡುವಲ್ಲಿ ಸರ್ಕಾರ ಹಾಗೂ ಸಮಾಜದ ಕರ್ತವ್ಯ ಹೆಚ್ಚಿದೆ. ಕೋವಿಡ್ ನಿಯಂತ್ರಣಕ್ಕೆ ಜಾರಿಗೊಳಿಸಿದ ಲಾಕ್‍ಡೌನ್ ಮಕ್ಕಳ ಶಿಕ್ಷಣದ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರಿದ್ದು, ಬಹಳಷ್ಟು ಮಕ್ಕಳು ಶಾಲೆ ಬಿಟ್ಟು ವಿವಿಧ ವೃತ್ತಿಗಳಲ್ಲಿ ದುಡಿಯಲು ಹೋಗಿರುವ ಸಾಧ್ಯತೆಗಳು ಹೆಚ್ಚಿವೆ. ಇಂತಹ ಎಲ್ಲ ಮಕ್ಕಳನ್ನು ಗುರುತಿಸಿ, ಮರಳಿ ಶಿಕ್ಷಣ ವಾಹಿನಿಗೆ ತಲುಪಿಸುವ ಕಾರ್ಯ ಆಗಬೇಕಿದೆ. ಮಕ್ಕಳಿಗೆ ಉತ್ತಮ ಆರೋಗ್ಯ, ಶಿಕ್ಷಣ, ರಕ್ಷಣೆ, ಕುಡಿಯುವ ನೀರು ಮತ್ತು ಆಹಾರ ದೊರಕಿಸುವಲ್ಲಿ ಗ್ರಾಮ ಪಂಚಾಯತ್‍ಗಳಿಗೆ ಹೆಚ್ಚಿನ ಜವಾಬ್ದಾರಿಯಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ವಿವಿಧ ಬಗೆಯ ಶೋಷಣೆಯಿಂದ ಮಕ್ಕಳನ್ನು ರಕ್ಷಿಸಿ, ಅವರ ಬೆಳವಣಿಗೆಗೆ ಪೂರಕವಾದಂತಹ ವಾತಾವರಣ ಕಲ್ಪಿಸುವುದು ಗ್ರಾಮ ಪಂಚಾಯತ್‍ಗಳ ಹೊಣೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ಆಯೋಗ, ಸಮಿತಿ, ಕಾಯ್ದೆಗಳು ಎಲ್ಲವೂ ಇವೆ. ಭ್ರೂಣ ಹತ್ಯೆ ತಡೆಗಾಗಿ ಪಿಸಿಪಿಎನ್‍ಡಿಟಿ ಕಾಯ್ದೆಯಿದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಹಕ್ಕು, ಮಧ್ಯಾಹ್ನದ ಬಿಸಿಯೂಟ ಅಲ್ಲದೆ ಅನೇಕ ಯೋಜನೆಗಳು ಕೂಡ ಇವೆ. ಆದರೆ ಇಷ್ಟೆಲ್ಲ ಇದ್ದರೂ, ಮಕ್ಕಳ ರಕ್ಷಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗಿಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಆರೋಗ್ಯ, ಶಿಕ್ಷಣ, ಜೀವನಮಟ್ಟ ಆಧಾರದಲ್ಲಿಯೇ ದೇಶದ ಮಾನವ ಅಭಿವೃದ್ಧಿ ಸೂಚ್ಯಂಕ ನಿರ್ಧಾರವಾಗುತ್ತದೆ. ದೇಶದಲ್ಲಿ ಮೊಟ್ಟಮೊದಲ ಬಾರಿಗೆ 2015 ರಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಸಲಾದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ರಾಜ್ಯದ ಸುಮಾರು 5900 ಗ್ರಾಮ ಪಂಚಾಯತ್‍ಗಳ ಪೈಕಿ 3000 ಕ್ಕೂ ಹೆಚ್ಚು ಗ್ರಾ.ಪಂ. ಗಳ ಮಾನವ ಅಭಿವೃದ್ಧಿ ಸೂಚ್ಯಂಕ ಅತ್ಯಂತ ಕೆಳಮಟ್ಟದಲ್ಲಿರುವುದು ಕಂಡುಬಂದಿದೆ. ಹೆಣ್ಣುಮಕ್ಕಳಿಗೆ ಮದುವೆಗೆ ಕನಿಷ್ಟ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸುವಂಹ ತಿದ್ದುಪಡಿ ತರಲು ಕೇಂದ್ರ ನಿರ್ಧರಿಸಿರುವುದು ಸ್ವಾಗತಾರ್ಹವಾಗಿದೆ. ಗ್ರಾಮ ಪಂಚಾಯತ್‍ಗಳಲ್ಲಿ ಗ್ರಾಮಸಭೆಗಳು ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕು. ಕೇವಲ ಅಂಕಿ-ಅಂಶಕ್ಕಾಗಿ ಕಾಟಾಚಾರಕ್ಕೆ ನಡೆಬಾರದು. ಇಂತಹ ಸಭೆಯಲ್ಲಿ ಅತಿ ಹೆಚ್ಚು ಮಕ್ಕಳು ಭಾಗವಹಿಸಬೇಕು. ಅವರು ತಮ್ಮ ಸಮಸ್ಯೆಗಳನ್ನು ಬಹಿರಂಗಪಡಿಸುವಂತಹ ಹಾಗೂ ತಮ್ಮ ಹಕ್ಕುಗಳನ್ನು ಮಂಡಿಸುವಂತಹ ವಾತಾವರಣ ನಿರ್ಮಾಣವಾಗಬೇಕು. ದೇಶದ ಮಕ್ಕಳ ಮೇಲೆ ಹೂಡಿಕೆಯಾಗುವಂತಹ ಯೋಜನೆಗಳು, ಭವಿಷ್ಯದಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣವಾಗಲಿದೆ. ಬಾಲ್ಯವಿವಾಹ, ಬಾಲಕಾರ್ಮಿಕತೆ ಗ್ರಾಮ ಮಟ್ಟದಲ್ಲಿ ಜರುಗುತ್ತಿರುವುದು ಮೊದಲು ತಿಳಿಯುವುದೇ ಗ್ರಾಮ ಮಟ್ಟದ ಅಧಿಕಾರಿಗಳಿಗೆ. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯತ್‍ಗಳು ಒತ್ತಡ ಹಾಗೂ ಪ್ರಭಾವಗಳನ್ನು ಬದಿಗೊತ್ತಿ, ಹೆಚ್ಚಿನ ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಡಾ. ವಿಜಯಮಹಾಂತೇಶ್ ಅವರು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಪ್ರವೀಣ್ ನಾಯಕ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಸಾಕಷ್ಟು ಕಾಯ್ದೆಗಳು ಬಂದಿವೆ. ಶಾಸನ ಸಭೆಗಳು ಅನೇಕ ತಿದ್ದುಪಡಿಗಳನ್ನು ತಂದು, ಮಕ್ಕಳ ಹಕ್ಕುಗಳ ರಕ್ಷಣೆಗೆ ಅನುಕೂಲವಾಗಿದೆ. ಮುಂದೆಯೂ ಕೂಡ ಹೊಸ ಕಾಯ್ದೆಗಳ ಅವಶ್ಯಕತೆ ಬರಬಹುದಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವಂತಹ ಗ್ರಾಮ ಪಂಚಾಯತ್ ಅಧಿಕಾರಿಗಳು, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವಂತಹ ಯೋಜನೆ, ಕಾಯ್ದೆ, ನೀತಿಗಳನ್ನು ಸರಿಯಾಗಿ ಅರಿತುಕೊಂಡಾಗ ಮಾತ್ರ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ. ಹೀಗಾಗಿ ಇಂತಹ ತರಬೇತಿ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಂಡು, ಮಕ್ಕಳ ಗ್ರಾಮಸಭೆಗಳನ್ನು ಪರಿಣಾಮಕಾರಿಯಾಗಿ ಗ್ರಾ.ಪಂ. ಮಟ್ಟದಲ್ಲಿ ಆಯೋಜಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ರಾಘವೇಂದ್ರಭಟ್ ಅವರು ಮಾತನಾಡಿ, ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ‘ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’ ಎಂದು ಭಾಷಣಗಳಲ್ಲಿ ಹೇಳುತ್ತಾರೆ. ಆದರೆ ಇದು ಸಂವಿಧಾನಕ್ಕೆ ವಿರುದ್ಧವಾಗಿದ್ದು, ಮಗುವಿನ ಜನನವಾದ ಕೂಡಲೆ ಆ ಮಗುವಿಗೆ ದೇಶದ ಪ್ರಜೆತನ ಬರುತ್ತದೆ. ಹೀಗಾಗಿ ‘ಇಂದಿನ ಮಕ್ಕಳು ಕೂಡ ಇಂದಿನ ಪ್ರಜೆಗಳೇ’. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಸುಮಾರು 68 ಇಂಡೆಕ್ಸ್‍ಗಳು ಮಕ್ಕಳ ರಕ್ಷಣೆಗೆ ಸಂಬಂಧಿಸಿದ್ದಾಗಿವೆ. ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದರಿಂದ ರಾಜ್ಯದ ಅರ್ಧಕ್ಕೂ ಹೆಚ್ಚು ಗ್ರಾಮ ಪಂಚಾಯತ್‍ಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿರಲು ಕಾರಣವಾಗಿದೆ. ರಾಜ್ಯದಲ್ಲಿ ಈಗಲೂ ಶೇ. 23.3 ರಷ್ಟು ಮದುವೆಗಳು ಬಾಲ್ಯವಿವಾಹಗಳಾಗಿರುವುದು ಕಂಡುಬಂದಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಹೆಚ್ಚು ಇರುವಂತಹ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಮೇಲೇರಲು ಸಾಧ್ಯವಿಲ್ಲ. ಮಕ್ಕಳ ಪ್ರತಿಯೊಂದು ಹಂತದ ಬೆಳವಣಿಗೆಯ ಮೇಲೆ ನಿಗಾ ಇರಿಸುವುದು ಗ್ರಾಮ ಪಂಚಾಯತ್‍ಗಳ ಜವಾಬ್ದಾರಿಯಾಗಿದ್ದು, 0-6 ವರ್ಷದ ಮಕ್ಕಳಿಗೆ 09 ಬಗೆಯ ಚುಚ್ಚುಮದ್ದು ಕೊಡಿಸುವುದು, ಅಂಗನವಾಡಿ ಹಾಗೂ ಶಾಲೆಗಳಿಗೆ ಮಕ್ಕಳ ದಾಖಲಾತಿ, ಅವರಿಗೆ ಉತ್ತಮ ಆಹಾರ, ನೀರು ಪೂರೈಕೆ, ಜನನ ಪ್ರಮಾಣಪತ್ರ ನೀಡುವುದು, ಹದಿಹರೆಯದವರ ಸಬಲೀಕರಣ, ವಿವಿಧ ಇಲಾಖೆಗಳ ಸಮನ್ವಯತೆ ಸಾಧಿಸುವುದು ಇವೆಲ್ಲವುಗಳ ಮೇಲಿನ ಮೇಲುಸ್ತುವಾರಿ ಗ್ರಾಮ ಪಂಚಾಯತ್‍ಗಳ ಹೊಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಪ್ರವೀಣ್ ನಾಯಕ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಟಿ. ತಿಪ್ಪೇಶಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲ ತಾಲ್ಲೂಕುಗಳ ಗ್ರಾ.ಪಂ. ಪಿಡಿಒ ಗಳು, ಕಾರ್ಯದರ್ಶಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here