ಸನ್ನತ್ತಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ತಂಡ ಭೇಟಿ: ಸನ್ನತ್ತಿ ಸಮಗ್ರ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸುವಂತೆ ಎ.ಎಸ್.ಐ ಹೆಚ್ಚುವರಿ ಮಹಾನಿರ್ದೇಶಕ ಜಾನವಿಜ್ ಶರ್ಮಾ ಸೂಚನೆ

0
119

ಕಲಬುರಗಿ,ಡಿ.28:ಸಾಮ್ರಾಟ್ ಅಶೋಕನು ತನ್ನ ಕುಟುಂಬದೊಂದಿಗಿರುವ ಅಪರೂಪದ ಶಾಸನ (ಮೂರ್ತಿ) ದೊರೆತಿರುವ ಸನ್ನತ್ತಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸಂರಕ್ಷಣೆ ದೃಷ್ಠಿಯಿಂದ ಸಮಗ್ರ ಅಭಿವೃದ್ಧಿಗೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಎ.ಎಸ್.ಐ. ಹಂಪಿ ವೃತ್ತದ ಅಧೀಕ್ಷಕ ಪುರಾತತ್ವ ವಿಧುರ ನಿಖಿಲದಾಸ್ ಅವರಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಜಾನವಿಜ್ ಶರ್ಮಾ ಸೂಚಿಸಿದ್ದಾರೆ.

ಇತ್ತೀಚೆಗೆ ಕಲಬುರಗಿ ಸಂಸದ ಡಾ.ಉಮೇಶ ಜಾಧವ ನೇತೃತ್ವದ ನಿಯೋಗವು ನಿರ್ಲಕ್ಷ್ಯಕ್ಕೊಳಗಾಗಿರುವ ಸನ್ನತಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕೇಂದ್ರ ರಾಜ್ಯ ಸಚಿವ ಅರ್ಜುನ ರಾಮ ಮೇಘವಾಲ್ ಮತ್ತು ಎ.ಎಸ್.ಐ ಮಹಾನಿರ್ದೇಶಕಿ ವಿ. ವಿದ್ಯಾವತಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಪರಿಣಾಮ ಮಂಗಳವಾರ ಎ.ಎಸ್.ಐ ತಂಡ ಸನ್ನತ್ತಿ ಉತ್ಖನನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಚಿತ್ತಾಪೂರ ತಾಲೂಕಿನ ಮಾಡಬೂಳ ಅತಿಥಿಗೃಹದಲ್ಲಿ ಸಂಸದ ಡಾ.ಉಮೇಶ ಜಾಧವ ಅವರೊಂದಿಗೆ ಚರ್ಚಿಸುತ್ತಾ ಅವರು ಮಾತನಾಡಿದರು.

ಉತ್ಖನನ ವೇಳೆ ಇಲ್ಲಿ ದೊರೆತಿರುವ ಶಾಸನಗಳಲ್ಲಿ ಬುದ್ಧ ಮತ್ತು ಬೌದ್ಧ ಧರ್ಮ, ಸಮ್ರಾಟ್ ಅಶೋಕನ ಕುರಿತು, ಅಶೋಕನ ಕಾಲದಲ್ಲಿನ ಕಲೆ, ಸಾಂಸ್ಕøತಿಕ ಮತ್ತು ಸಾಮಾಜಿಕ ಜೀವನ ಶೈಲಿ ಕುರಿತು ಕುರುಹುಗಳು ಪತ್ತೆಯಾಗಿವೆ. ಇವುಗಳ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ. ಸಂರಕ್ಷಣೆ ಮತ್ತು ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಸೂಕ್ತ ಪ್ರಸ್ತಾವನೆ ಸಲ್ಲಿಸಿದಲ್ಲಿ 2022ರ ಏಪ್ರಿಲ್ ದಿಂದಲೇ ಸಂರಕ್ಷಣೆ ಕಾರ್ಯ ಭರದಿಂದ ಆರಂಭಿಸಲಾಗುವುದು. ಹಣಕಾಸಿನ ಯಾವುದೇ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಅಶೋಕನ ಕಾಲಘಟ್ಟದಲ್ಲಿನ ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿಯಲ್ಲಿರುವ ಶಾಸನಗಳು ಇಲ್ಲಿ ದೊರೆತಿದ್ದು, ಇವುಗಳನ್ನು ಭಾಷಾಂತರ ಮಾಡಿ ಇತಿಹಾಸ ತಜ್ಞರನ್ನು ಆಹ್ವಾನಿಸಿ ಹೆಚ್ಚಿನ ಸಂಶೋಧನೆ ಮಾಡಬೇಕಿದೆ. ಬೌದ್ಧ ಸ್ತೂಪ ಇಲ್ಲಿ ಸಿಕ್ಕಿರುವುದರಿಂದ ಸಂಶೋಧನೆಗೆ ಸಹಕಾರಿಯಾಗಲಿದೆ. ಇಲ್ಲಿ ಅಶೋಕನ ಬಗ್ಗೆ ಸಿಕ್ಕಿರುವ ಕುರುಹುಗಳು ಎಲ್ಲಿಯೂ ಸಿಕ್ಕಿಲ್ಲ ಎಂಬುದೇ ಸನ್ನತ್ತಿಯ ವಿಶೇಷ ಎಂದರು.

ಅಶೋಕನ ಅಪರೂಪದ ಶಾಸನ ದೊರೆತಿರುವ ಕಾರಣದಿಂದ ಸನ್ನತ್ತಿ ಬೌದ್ಧ ಧರ್ಮದ ವಿಶ್ವದ ಬಹುದೊಡ್ಡ ತಾಣವಾಗಿದ್ದು, ಇದನ್ನು ಯೂನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲು ಸಹ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ನಿಖಿಲದಾಸ್ ಅವರಿಗೆ ಜಾನವಿಜ್ ಶರ್ಮಾ ನಿರ್ದೇಶನ ನೀಡಿದರು.

ಎ.ಎಸ್.ಐ. ಹಂಪಿ ವೃತ್ತದ ಅಧೀಕ್ಷಕ ಪುರಾತತ್ವ ವಿಧುರ ನಿಖಿಲದಾಸ್ ಮಾತನಾಡಿ ಕಳೆದ ವಾರ ಸಂಸದ ಡಾ. ಉಮೇಶ ಜಾಧವ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಅವರ ನಿರ್ದೇಶನದಂತೆ ಕನಗನಹಳ್ಳಿಯಲ್ಲಿ ಅಶೋಕನ ಶಾಸನವನ್ನು ಗಾಜಿನಲ್ಲಿಟ್ಟು ಸಂರಕ್ಷಿಸಿದೆ. ಕುಡಿಯುವ ನೀರಿನ ಆರ್.ಓ ಪ್ಲ್ಯಾಂಟ್ ಸ್ಥಾಪಿಸಿ ಪ್ರದೇಶ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿದೆ ಎಂದರು.

ಎ.ಎಸ್.ಐ. ದಕ್ಷಿಣ ಭಾರತದ ಪ್ರಾದೇಶಿಕ ನಿರ್ದೇಶಕಿ ಜಿ. ಮಹೇಶ್ವರಿ ಮಾತನಾಡಿ ಬೌದ್ಧ ಧರ್ಮ ಅಲ್ಲದೆ ಇತರೆ ಧರ್ಮಗಳ ಬಗ್ಗೆಯೂ ಉತ್ಖನನದಲ್ಲಿ ಲಭ್ಯವಾಗಿರುವ ಕುರುಹುಗಳಿಂದ ಪತ್ತೆಯಾಗಿರುವ ಕಾರಣ ಭೀಮಾ ನದಿ ದಂಡೆಯ ಸುತ್ತ ಹೆಚ್ಚಿನ ಉತ್ಖನನದ ಅವಶ್ಯಕತೆ ಇದೆ ಎಂದರು.

ಕಾಶಿ ಮಾದರಿಯಲ್ಲಿ ಸನ್ನತ್ತಿ ಕಂಗೊಳಿಸಲಿ:

ಸಾಮ್ರಾಟ್ ಅಶೋಕನ ಶಾಸನ ಮತ್ತು ಬೌದ್ಧ ಸ್ತೂಪ ಪತ್ತೆಯಾಗಿರುವ ಸನ್ನತ್ತಿ ಮತ್ತು ಸುತ್ತಮುತ್ತಲಿನ ಪ್ರದೇಶ ಉತ್ತರ ಪ್ರದೇಶದ ಕಾಶಿ ಮಾದರಿಯಲ್ಲಿ ಐತಿಹಾಸಿಕ ಮತ್ತು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕೆಂದು ಕಲಬುರಗಿ ಸಂಸದ ಡಾ.ಉಮೇಶ ಜಾಧವ ಎ.ಎಸ್.ಐ. ತಂಡಕ್ಕೆ ಮನವಿ ಮಾಡಿಕೊಂಡರು.

ಉತ್ಖನನದಲ್ಲಿ ಸಿಕ್ಕ ಶಾಸನಗಳು ಸೂಕ್ಷ ಸಂರಕ್ಷಣೆಯಿಲ್ಲದೆ ಎರಡು ದಶಕಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದು, ಮೊದಲು ಇವುಗಳ ಸಂರಕ್ಷಣೆಗೆ ಎ.ಎಸ್.ಐ ಆದ್ಯತೆ ನೀಡಬೇಕು. ಜೊತೆಗೆ ಪ್ರವಾಸಿ ತಾಣವಾಗಿಯೂ ಅಭಿವೃದ್ಧಿಪಡಿಸುವ ಅಗತ್ಯತೆ ಇದೆ. ವಿಶೇಷವಾಗಿ ರಸ್ತೆ, ಕುಡಿಯುವ ನೀರು, ಸ್ವಚ್ಛತಾ ಕಾರ್ಯ ಒಳಗೊಂಡಂತೆ ಮೂಲಭೂತ ಸೌಲಭ್ಯಗಳನ್ನು ಇಲ್ಲಿ ಒದಗಿಸಬೇಕು ಎಂದರು.

ಸನ್ನತ್ತಿ ಭಾರತದ ಅತಿದೊಡ್ಡ ಬೌದ್ಧ ತಾಣವಾಗಿ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದರೂ ಕೂಡ ಭಾರತದ ಪ್ರವಾಸಿ ನಕ್ಷೆಯಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಂಸದರು ಇನ್ನು ಮುಂದೆಯಾದರು ಯುದ್ದೋಪಾದಿಯಲ್ಲಿ ಈ ಪ್ರದೇಶ ಅಭಿವೃದ್ಧಿಯಾಗಬೇಕಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಎ.ಎಸ್.ಐ ಅಧಿಕಾರಿಗಳು ಕೇಂದ್ರ ಕಚೇರಿಗೆ ವಾಸ್ತವದ ವರದಿ ನೀಡಬೇಕು. ಇದರ ಸಮಗ್ರ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಾಗುವುದು ಎಂದರು.

ಇದಕ್ಕು ಮುನ್ನ ಎ.ಎಸ್.ಐ ನಿರ್ದೇಶಕ ಅಜಯ್ ಯಾದವ, ಹೆಚ್ಚುವರಿ ಮಹಾನಿರ್ದೇಶಕ ಜಾನವಿಜ್ ಶರ್ಮಾ, ಎ.ಎಸ್.ಐ. ದಕ್ಷಿಣ ಭಾರತದ ಪ್ರಾದೇಶಿಕ ನಿರ್ದೇಶಕಿ ಜಿ. ಮಹೇಶ್ವರಿ ಸೇರಿದಂತೆ ಇನ್ನಿತರ ಅಧಿಕಾರಿಗಳ ತಂಡ ಸನ್ನತ್ತಿ ಉತ್ಖನನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಈ ಸಂದರ್ಭದಲ್ಲಿ ಎ.ಎಸ್.ಐ ಜಂಟಿ ಮಹಾ ನಿರ್ದೇಶಕ ಎಂ. ನಂಬಿರಾಜನ್, ಹಂಪಿ ಎ.ಎಸ್.ಐ. ಕಚೇರಿಯ ಉಪ ಇಂಜಿನೀಯರ್ ಕೆಂಪೆಗೌಡ, ಸಹಾಯಕ ಪುರಾತತ್ವ ವಿಧುರ ರವಿಕುಮಾರ ಎಂ.ಜೆ., ಹೈದ್ರಾಬಾದ್ ಎ.ಎಸ್.ಐ. ಕೆಮಿಕಲ್ ವಿಭಾಗದ ರಾಜೇಶ್ವರಿ, ಸೇಡಂ ಸಹಾಯಕ ಆಯುಕ್ತೆ ಬಿ.ಅಶ್ವಿಜಾ, ತಹಶೀಲ್ದಾರ ಉಮಾಕಾಂತ ಹಲ್ಲೆ, ತಾಲೂಕ ಪಂಚಾಯತ್ ಇ.ಓ. ನೀಲಗಂಗಾ ಬಬಲಾದ, ಕಲಬುರಗಿ ಎ.ಎಸ್.ಐ. ಕಚೇರಿಯ ಸಹಾಯಕ ಸಂರಕ್ಷಣಾಧಿಕಾರಿ ವಿನಾಯಕ ಶಿರಹಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಇದ್ದರು.

LEAVE A REPLY

Please enter your comment!
Please enter your name here