ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ವಿವರ ಪಟ್ಟಿ ಸಲ್ಲಿಸಬೇಕು– -ಡಾ.ದಿಲೀಷ್ ಶಶಿ:

0
100

ಕಲಬುರಗಿ,ಡಿ.28: ಎಸ್.ಸಿ.ಪಿ.-ಟಿ.ಎಸ್.ಪಿ ಯೋಜನೆಯಡಿ ರಸ್ತೆ, ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸುವ ಇಲಾಖೆಗಳು ಸಭೆಗೆ ಆರ್ಥಿಕ ಮತ್ತು ಭೌತಿಕ ಮಾಹಿತಿ ಜೊತೆಗೆ ಪ್ರತಿ ಕಾಮಗಾರಿಗಳ ವಿವರ ನೀಡಬೇಕು ಎಂದು ಪ್ರಭಾರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಶಿ ಅವರು ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ 2021-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸುತ್ತಿರುವ ಎಸ್.ಸಿ.ಪಿ.-ಟಿ.ಎಸ್.ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ಗ್ರಾಮೀಣ ಜನರಿಗೆ ಕುಡಿಯುವ ನೀರು ಪೂರೈಕೆ ಯೋಜನೆಯಾದ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರಸಕ್ತ ಸಾಲಿನ ಕಾಮಗಾರಿಗಳನ್ನು 2022ರ ಫೆವ್ರವರಿ ಅಂತ್ಯದವರೆಗೆ ಮುಗಿಸಬೇಕು ಎಂದು ಸಂಬಂಧಿಸಿದ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.
ಸಭೆಗೆ ಕೆಲವೊಂದು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಿಯಾದ ಕಾರಣ ಅಸಮಾಧಾನ ವ್ಯಕ್ತಪಡಿಸಿದ ಡಾ. ದಿಲೀಷ್ ಶಶಿ ಅವರು ಗೈರಾದವರಿಗೆ ನೋಟಿಸ್ ಜಾರಿ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಅಲ್ಲಾಭಕ್ಷ ಅವರಿಗೆ ಸೂಚಿಸಿದರು.
ಇನ್ನು ಕೆಲವು ಇಲಾಖೆಗಳ ಅಧಿಕಾರಿಗಳು ಅಂಕಿ-ಸಂಖ್ಯೆ ಮಾಹಿತಿಯನ್ನು ಸರಿಯಾಗಿ ನೀಡಿದಿದ್ದಕ್ಕೆ ಸಿಡಿಮಿಡಿಗೊಂಡ ಡಾ.ದಿಲೀಷ್ ಶಶಿ ಅವರು ಈ ಕುರಿತು ಆಯಾ ಇಲಾಖೆಯಲ್ಲಿ ಪ್ರಸಕ್ತ 2021-22ನೇ ಸಾಲಿಗೆ ಜಾರಿಯಲ್ಲಿರುವ ಯೋಜನೆಗಳ ವಿವರವನ್ನು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಾದ್ಯಂತ ವಿವಿಧ ಇಲಾಖೆಯ ಎಸ್.ಸಿ.ಪಿ.-ಟಿ.ಎಸ್.ಪಿ ಕಾರ್ಯಕ್ರಮಕ್ಕೆ ಹಂಚಿಕೆಯಾದ 22,582.09 ಲಕ್ಷ ರೂ. ಮೊತ್ತದ ಪೈಕಿ ನವೆಂಬರ್ ಅಂತ್ಯದ ವರೆಗೆ 9,297.88 ಲಕ್ಷ ರೂ. ಖರ್ಚು ಮಾಡಿ ಶೇ.61.62ರಷ್ಟು ಪ್ರಗತಿ ಸಾಧಿಸಲಾಗಿದೆ. ಎಸ್.ಸಿ.ಪಿ.ಯಲ್ಲಿ ಶೇ. 5,009.48 ಲಕ್ಷ ರೂ. ಮತ್ತು ಟಿ.ಎಸ್.ಪಿ.ಯಡಿ 719.52 ಲಕ್ಷ ರೂ. ಖರ್ಚು ಮಾಡಲಾಗಿದೆ. 507 ಕಾಮಗಾರಿಗಳನ್ನು ಕೈಗೆತ್ತಿಕೊಂಡು ಇದೂವರೆಗೆ 366 ಪೂರ್ಣಗೊಳಿಸಲಾಗಿದೆ. ಭೌತಿಕ ಪ್ರಗತಿಗೆ 6,19,529 ಫಲಾನುಭವಿಗಳ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ 1,44,605 ಸಾಧನೆ ಮಾಡಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಅಲ್ಲಾಭಕ್ಷ ಮಾತನಾಡಿ ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಗಳ ಕುರಿತು ಮತ್ತು ಫಲಾನುಭವಿಗಳ ವಿವರ ಅಪ್ಲೋಡ್ ಮಾಡುವ ಬಗ್ಗೆ ಡಿಸೆಂಬರ್ 30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ತರಬೇತಿ ಆಯೋಜಿಸಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

LEAVE A REPLY

Please enter your comment!
Please enter your name here