ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ
ಬಿಸಿಲಿನ ತಾಪಮಾನ ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಿ:ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ

0
84

ಬಳ್ಳಾರಿ,ಫೆ.22 :ಮುಂಬರುವ ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇಸಿಗೆ ಸಂದರ್ಭದಲ್ಲಿ ಯಾವ ರೀತಿಯ ಆರೋಗ್ಯ ಕಾಳಜಿ ವಹಿಸಬೇಕು ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಬೇಕು ಮತ್ತು ಅಗತ್ಯ ಔಷಧಿಗಳನ್ನು ಎಲ್ಲ ಆಸ್ಪತ್ರೆಗಳಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು.ಜಿಲ್ಲೆಯ ಅಲ್ಲಿಪುರ ಕೆರೆ ಸೇರಿದಂತೆ ಮೋಕಾ, ಕುರುಗೋಡು, ಕುಡುತಿನಿ, ಸಂಡೂರು, ಕಂಪ್ಲಿ ಮತ್ತು ಸಿರುಗುಪ್ಪ ಪಟ್ಟಣಗಳ ಕೆರೆಗಳ ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿ ಪಡೆದುಕೊಂಡರು.
ಎಚ್‍ಎಲ್‍ಸಿ ಕಾಲುವೆಗೆ ಇನ್ನು 8 ದಿನಗಳು ಮಾತ್ರ ನೀರು ಹರಿಯಲಿದ್ದು ಹಾಗೂ ಎಲ್‍ಎಲ್‍ಸಿ ಕಾಲುವೆಗೆ 60 ದಿನಗಳು ನೀರು ಹರಿಸಲಾಗುತ್ತಿದ್ದು, ಅಷ್ಟರೊಳಗೆ ಜಿಲ್ಲೆಯ ಎಲ್ಲಾ ಕೆರೆಗಳು ಭರ್ತಿಯಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಗರ ಪ್ರದೇಶಗಳಲ್ಲಿ ಯಾವುದೇ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ ಅವರು
ನೀರಿನ ಟ್ಯಾಂಕರ್‍ಗಳ ಅಗತ್ಯತೆ ಕಡಿಮೆಯಾಗಬೇಕು ಎಂದರು.
ಬಳ್ಳಾರಿ ನಗರದಲ್ಲಿ ನೀರಿನ ಸೋರಿಕೆ ಕಂಡುಬಂದಿದ್ದು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಹರಗಿನಡೋಣಿ ಮತ್ತು ಮಿಂಚೇರಿ ಪ್ರದೇಶಗಳಲ್ಲಿ ನೀರಿನ ಅಭಾವ ಹೆಚ್ಚು ಇದೆ ಎಂದು ಅವರು ತಿಳಿಸಿದರು.
ಬಳ್ಳಾರಿ ನಗರದಲ್ಲಿ ತಾಪಮಾನದಿಂದ ಮರಗಳು ಹೆಚ್ಚಾಗಿ ಒಣಗುತ್ತಿದ್ದು,ಅವುಗಳ ಸುತ್ತಲೂ ಗುಂಡಿ ತೋಡಿ ನೀರೆರೆಯುವ ಮೂಲಕ ಕಾಳಜಿ ವಹಿಸಬೇಕು ಎಂದರು.
ರೈತರ ಹಿತದೃಷ್ಟಿಯಿಂದ ಬೆಳೆಗಳಿಗೆ ನೀರು ಪೂರೈಕೆ ಸಂದರ್ಭದಲ್ಲಿ ರಾತ್ರಿ ಪಾಳಿಯ ವಿದ್ಯುತ್ ಸಮರ್ಪಕವಾಗಿ ಸರಬರಾಜು ಆಗುತ್ತದೆಯೇ ಎಂದು ವಿಚಾರಿಸಿದ ಅವರು ಸಮರ್ಪಕ ವಿದ್ಯುತ್ ಸರಬರಾಜಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಿದರು. ಬೇಸಿಗೆಯು ಆರಂಭಗೊಳ್ಳುತ್ತಿದ್ದಂತೆ ಶಾಲಾ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿಯನ್ನು ಆಡಳಿತ ಮಂಡಳಿಯು ಕ್ರಮವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್. ನಂದಿನಿ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಅಪರ ಜಿಲ್ಲಾಧಿಕಾರಿಗಳಾದ ಪಿ.ಎಸ್ ಮಂಜುನಾಥ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here