ಗಡಿಕೇಶ್ವರದಲ್ಲಿ ಟಿನ್ ಶೆಡ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ
-ಯಶವಂತ ವಿ. ಗುರುಕರ್

0
92

ಕಲಬುರಗಿ.ಫೆ.22 – ಜಿಲ್ಲೆಯ ಚಿಂಚೋಳಿ ತಾಲೂಕಿನ ಭೂಕಂಪ ಪೀಡಿತ ಗಡಿಕೇಶ್ವರ ಗ್ರಾಮದಲ್ಲಿ ಸಂತ್ರಸ್ತ ಕುಟುಂಬಗಳ ಮನೆಯ ಅಕ್ಕಪಕ್ಕದಲ್ಲಿ 10*10 ಅಡಿ ಅಳತೆಯ ಟಿನ್ ಶೆಡ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಒಂದು ತಿಂಗಳಲ್ಲಿಯೆ ಟಿನ್ ಶೆಡ್ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ತಿಳಿಸಿದ್ದಾರೆ.

ಮಂಗಳವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿಕೇಶ್ವಾರ ಗ್ರಾಮದಲ್ಲಿ ಭೂಕಂಪನದಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲು ಗ್ರಾಮದಲ್ಲಿ ಗುರುತಿಸಲಾದ 853 ಮನೆಗಳ ಅಕ್ಕಪಕ್ಕದಲ್ಲಿ 1010 ಅಳತೆಯ ಟಿನ್ ಶೆಡ್ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ ಎಂದರು. ಟಿನ್ ಶೆಡ್ ನಿರ್ಮಾಣ ಕುರಿತಂತೆ ಲೋಕೋಪಯೋಗಿ ಇಲಾಖೆಯ ಕಲಬುರಗಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಗಡಿಕೇಶ್ವರ ಗ್ರಾಮದ 853 ಮನೆಗಳ ಅಕ್ಕಪಕ್ಕದಲ್ಲಿ ತಲಾ 23,500 ರೂ. ಮೊತ್ತದಲ್ಲಿ 1010 ಅಡಿ ಅಳತೆಯ ಟಿನ್ ಶೆಡ್ ನಿರ್ಮಾಣಕ್ಕೆ ಒಟ್ಟು 2,00,45,550 ರೂ. ಮೊತ್ತದ ಅಂದಾಜು ಪತ್ರಿಕೆ ಸಲ್ಲಿಸಿದ್ದು, ಇದಕ್ಕೆ ಕಳೆದ ಜನವರಿ 28ರಂದೇ ಆಡಳಿತಾತ್ಮಕ ಅನುಮೋದನೆ ನೀಡಿ ಇದರ ಅನುಷ್ಠಾನಕ್ಕಾಗಿ ಪ್ರಥಮ ಹಂತವಾಗಿ ಶೇ.75ರಷ್ಟು ಮೊತ್ತ 1,50,34,125 ರೂ. ಗಳನ್ನು ಲೊಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯ ರೈತರ ಹಿತದೃಷ್ಠಯಿಂದ ಕಟಾವಿಗೆ ಬಂದ ಕಬ್ಬುಗಳನ್ನು ಕಟಾವು ಮಾಡಿ ರೈತರಿಂದ ಖರೀದಿಸುವಂತೆ ಕಳೆದ ಜನವರಿ 31 ರಂದು ನಡೆದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಕಬ್ಬು ಬೆಳೆಯಲಾದ ಗ್ರಾಮವಾರು ಪಟ್ಟಿಯನ್ನು ಕಾರ್ಖಾನೆಯ ಆಡಳಿತ ಮಂಡಳಿಗೆ ನೀಡಲಾಗಿದೆ.

ಇದಲ್ಲದೆ 2021-22ನೇ ಸಾಲಿನ ಹಂಗಾಮಿನಲ್ಲಿ ಜಿಲ್ಲೆಯ ಕಬ್ಬು ಬೆಳೆಗಾರರಿಂದ ಖರೀದಿಸಿದ ಕಬ್ಬಿನ ಮೊತ್ತವನ್ನು ಸರ್ಕಾರ ನಿಗದಿಪಡಿಸಿದ ಎಫ್.ಆರ್.ಪಿ ದರದಂತೆ ನಿಗಧಿತ ಅವಧಿಯೊಳಗೆ ರೈತರಿಗೆ ಪಾವತಿಸದ ಕಾರಣ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ, ಜೇವರ್ಗಿ ತಾಲೂಕಿನ ಮಳ್ಳಿ ಗ್ರಾಮದ ಉಗಾರ ಸಕ್ಕರೆ ಕಾರ್ಖಾನೆ ಹಾಗೂ ಆಳಂದ ತಾಲೂಕಿನ ಭೂಸನೂರಿನ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದರು.

ಸಕ್ಕರೆ ಕಾರ್ಖಾನೆವಾರು ಕಬ್ಬು ಪಾವತಿ ಬಾಕಿ ವಿವರ: 2021-22ನೇ ಸಾಲಿಗೆ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯು ಎಫ್.ಆರ್.ಪಿ. ದರ 2926 ರೂ. ಗಳಂತೆ ರೈತರಿಂದ 239230 ಮೆಟ್ರಿಕ್ ಟನ್ ಕಬ್ಬು ಖರೀದಿಸಿ, ಈ ಪೈಕಿ 4511.12 ಲಕ್ಷ ರೂ. ಹಣ ಪಾವತಿಸಿದ್ದು, 2488.75 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ಎನ್.ಎಸ್.ಎಲ್. ಸುಗರ್ದ್ ಲಿ. ಕಾರ್ಖಾನೆಯು ಎಫ್.ಆರ್.ಪಿ. ದರ 2915 ರೂ. ಗಳಂತೆ ರೈತರಿಂದ 700740 ಮೆಟ್ರಿಕ್ ಟನ್ ಕಬ್ಬು ಖರೀದಿಸಿದ್ದು, 16134.61 ಲಕ್ಷ ರೂ. ಹಣ ಪಾವತಿಸಿ 4291.94 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ರೇಣುಕಾ ಸುಗರ್ಸ್ ಲಿ. ಕಾರ್ಖಾನೆಯು ಎಫ್.ಆರ್.ಪಿ. ದರ 2964 ರೂ. ಗಳಂತೆ ರೈತರಿಂದ 928790 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 19206.76 ಲಕ್ಷ ರೂ. ಹಣ ಪಾವತಿಸಿದ್ದು, 4343.60 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ಉಗರ್ ಸುಗರ್ಸ್ ಲಿ. ಕಾರ್ಖಾನೆಯು ಎಫ್.ಆರ್.ಪಿ. ದರ 3109 ರೂ. ಗಳಂತೆ ರೈತರಿಂದ 360860 ಮೆಟ್ರಿಕ್ ಟನ್ ಕಬ್ಬು ಖರೀದಿಸಿ 6028.74 ಲಕ್ಷ ರೂ. ಹಣ ಪಾವತಿಸಿದ್ದು, 5190.39 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ.

LEAVE A REPLY

Please enter your comment!
Please enter your name here