ಜಲಜೀವನ್ ಮಿಷನ್ ಅನುಷ್ಠಾನದ ಕುರಿತು ತರಬೇತಿ ಕಾರ್ಯಗಾರ; ಸರ್ಕಾರದ ಯೋಜನೆ ಜಾರಿಯಲ್ಲಿ ಜನಸಮುದಾಯದ ಸಹಕಾರ ಅಗತ್ಯ- ಸಿಇಒ

0
104

ದಾವಣಗೆರೆ ಮಾ.07: ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಅಧಿಕಾರಿಗಳ ಪಾತ್ರದ ಜೊತೆಗೆ ಜನಸಮುದಾಯಗಳ ಸಹಕಾರವು ಮುಖ್ಯವಾಗಿದೆ, ಗ್ರಾಮೀಣ ಭಾಗದ ಜನರಿಗೆ ನಿಯಮಿತವಾಗಿ, ನಿರಂತರವಾಗಿ, ನೀರು ಒದಗಿಸುವ ಉದ್ದೇಶದಿಂದ ಕಾರ್ಯಗಾರ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಹೇಳಿದರು.
ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಮತ್ತು ಜಿಲ್ಲಾ ಪಂಚಾಯತ್ ದಾವಣಗೆರೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ದಾವಣಗೆರೆ ಇವರ ಸಹಯೋಗದಲ್ಲಿ ಜಲಜೀವನ್ ಮಿಷನ್ ಅನುಷ್ಠಾನದ ಕುರಿತು ತಾಂತ್ರಿಕ ಸಿಬ್ಬಂದಿಗಳಿಗೆ ಕಾಲ ಹಮ್ಮಿಕೊಂಡಿರುವ ಎರಡು ದಿನಗಳ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು,
ಬದುಕಿಗೆ ನೀರು ಅತೀ ಮುಖ್ಯವಾದದ್ದು. ಜೀವಸಂಕುಲಗಳ ಬದುಕಿಗೆ ಪೋಷಕಾಂಶಗಳಂತೆ ನೀರು ಅತಿಮುಖ್ಯ. ಜನಸಂಖ್ಯೆ ಹೆಚ್ಚಾದಂತೆ ನೀರಿನ ಬವಣೆ ಹೆಚ್ಚುತ್ತಿದೆ. ಹಿಂದಿನ ಕಾಲದಲ್ಲಿ ಪ್ರತಿ ಊರಲ್ಲೂ ಕೆರೆ, ಬಾವಿಗಳಲ್ಲಿ ನೀರು ಹೊರ ತೆಗೆಯಲಾಗುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನೀರಿನ ಮೂಲಗಳನ್ನು ನಾಶ ಮಾಡಲಾಗುತ್ತಿದೆ. ಜಾಗತಿಕವಾಗಿ ಹವಾಮಾನ ಬದಲಾಗುತ್ತಿದ್ದು, ಒಂದೆಡೆ ಅತಿವೃಷ್ಟಿ ಒಂದೆಡೆ ಅನಾವೃಷ್ಟಿ ಉಂಟಾಗಲು ಹವಾಮಾನ ವೈಪರಿತ್ಯಗಳೇ ಕಾರಣ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಬಡಜನರು ದುಡಿಯಲು ಮೀಸಲಿಟ್ಟ ಸಮಯದಷ್ಟೆ ನೀರನ್ನು ತರಲು ವ್ಯರ್ಥ ಮಾಡುತ್ತಿದ್ದಾರೆ. ಕಲುಷಿತ ನೀರಿನಿಂದ ಅನೇಕ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆಗಳಿರುವ ಕಾರಣದಿಂದಾಗಿಯೇ ಪ್ರಧಾನ ಮಂತ್ರಿಗಳು 2019ರ ಆಗಸ್ಟ್ 15ರಂದು ಜಲ ಜೀವನ್ ಮಿಷನ್ ಯೋಜನೆಯನ್ನು ಘೋಷಿಸಿದರು. ಈ ಮೂಲಕ ದೇಶಾದ್ಯಂತ 3.5 ಲಕ್ಷ ಕೋಟಿ ರೂ. ವೆಚ್ಚ ಮಾಡಿ ಮನೆಮನೆಗೂ ನೀರನ್ನು ಒದಗಿಸುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿ ನೀರು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ತರಬೇತಿಯಿಂದ ಹೆಚ್ಚಿನ ಜ್ಞಾನ ಪಡೆದು, ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮತ್ತು ಸಹಕಾರ ನೀಡಬೇಕು. ಒಟ್ಟಾರೆ ಜಲ ಜೀವನ್ ಮಿಷನ್ ಮೂಲಕ ಪ್ರತಿ ಮನೆ ಮನೆಗೂ ನೀರು ಒದಗಿಸುವ ಉದ್ದೇಶದಿಂದ ಕಾರ್ಯಗಾರ ಅಯೋಜನೆ ಮಾಡಲಾಗಿದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತದ ಅಧೀಕ್ಷಕ ಇಂಜಿನಿಯರ್ ನಾಗರಾಜ್ ಕೆ.ಟಿ ಮಾತನಾಡಿ ಜಲಜೀವನ್ ಮಿಷನ್ ರಾಷ್ಟ್ರೀಯ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಇದರಲ್ಲಿ ತೊಡಗಿಸಿಕೊಂಡ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ. ಸರ್ಕಾರದ ಯೋಜನೆಯ ಕುರಿತು ಗ್ರಾಮಗಳಲ್ಲಿ ಸಭೆ ನಡೆಸಿ ಜನರ ಅಭಿಪ್ರಾಯ ಸಂಗ್ರಹಿಸಿ ನಂತರ ಕಾಲಮಿತಿಯಲ್ಲಿ ಗುಣಮಟ್ಟದಿಂದ ಯೋಜನೆ ಅನುಷ್ಠಾನಗೊಳ್ಳಬೇಕು. ನಿಗದಿತ ಪ್ರಮಾಣದ ಗುಣಮಟ್ಟದ ಕಾಲಮಿತಿಯ ಮೂಲಕ ನೀರನ್ನು ಒದಗಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ಯೋಜನೆಯ ಬಗ್ಗೆ ತಾಂತ್ರಿಕ ಗೊಂದಲಗಳ ಕುರಿತು ಅಭಿಯಂತರರಿಗೆ ಇರುವ ಅನುಮಾನಗಳನ್ನು ಬಗೆಹರಿಸುವ ಉದ್ದೇಶದಿಂದ ಕಾರ್ಯಗಾರವನ್ನು ಏರ್ಪಡಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಸಿ ಮಲ್ಲಿಕಾರ್ಜುನ, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಎ.ಎಸ್. ಅತ್ತರವಾಲಾ ಮತ್ತು ವೆಂಕಟೇಶ ಹಾಗೂ ಇಂಜಿನಿಯರ್‍ಗಳು, ಗುತ್ತಿಗೆದಾರರು, ಸಿಬ್ಬಂದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here