ಭ್ರಷ್ಟಾಚಾರಕ್ಕೆ ಒಳಗಾಗದೇ ಸರ್ಕಾರಿ ಕೆಲಸ ಶ್ರದ್ಧೆಯಿಂದ ಮಾಡಿ; ಜಗದೀಶ ಚಂದ್ರಭೋಸ್ ಅಭಿಪ್ರಾಯ

0
116

ಕೊಟ್ಟೂರು:21:ಏ:- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕೊಟ್ಟೂರು ಶಾಖೆ ಇವರು ಇಂದು ಮಹಾತ್ಮ ಗಾಂಧೀಜಿ ಸಭಾಂಗಣ ತಾಲೂಕ ಕಛೇರಿ, ಕೊಟ್ಟೂರಿನಲ್ಲಿ ಏರ್ಪಡಿಸಿದ್ದ “ರಾಜ್ಯ ಸರ್ಕಾರಿ ನೌಕರರ ದಿನಾಚರಣೆ-2022” ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಜಗದೀಶ ಚಂದ್ರಭೋಸ್ ಉಪನ್ಯಾಸಕರು, ಸರ್ಕಾರಿ ಪದವಿ-ಪೂರ್ವಕಾಲೇಜ್, ಕೂಡ್ಲಿಗಿ ಇವರು ಇಂದು ಪ್ರತಿಯೊಬ್ಬ ನೌಕರರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಹಿಂದಿನ ದಿನಗಳಲ್ಲಿ ಸರ್ಕಾರಿ ನೌಕರಿ ಎಂದರೆ ಗುಲಾಮಗಿರಿ, ಇನ್ನೊಬ್ಬರ ಕೈಕೆಳಗೆ ಕೆಲಸಮಾಡಬೇಕಾಗುತ್ತದೆ, ಕಾರಕೂನನಾಗಿ ಕಡಿಮೆ ವೇತನಕ್ಕೆ ದುಡಿಯಬೇಕಿದೆ ಎಂದು ನಿರಾಕರಿಸುತ್ತಿದ್ದರು. ಆದರೆ ಇಂದು ನೌಕರರಿಗೆ ಸರ್ಕಾರ ಸಾಕಷ್ಟು ವೇತನ, ಪಿಂಚಣಿ, ಅನಾರೋಗ್ಯದಲ್ಲಿ ಚಿಕಿತ್ಸೆ, ರಜಾ ಸೌಲಭ್ಯ ಮುಂತಾದ ಸೌಲಭ್ಯಗಳನ್ನು ನೀಡಿ ಉತ್ತಮ ರೀತಿಯಲ್ಲಿ ನೋಡುತ್ತಿದೆ. ನೌಕರರು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಸರ್ಕಾರಿ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕಿದೆ. ಭ್ರಷ್ಠಾಚಾರಕ್ಕೆ ಒಳಗಾಗದೇ ಸೇವಾ ಸೌಲಭ್ಯ ಬಯಸಿ ಬಂದ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಸಕಾಲದಲ್ಲಿ ಕೆಲಸ ಮಾಡಿಕೊಡುವ ಸೇವಾ ಮನೋಭಾವ ರೂಢಿಸಿಕೊಂಡು ಸಾರ್ವಜನಿಕರ ವಿಶ್ವಾಸ ಗಳಿಸಿಕೊಳ್ಳಬೇಕಿದೆ.
ಸರ್ಕಾರಿ ಕೆಲಸದಲ್ಲಿ ಸಮಯಪ್ರಜ್ಞೆ ರೂಢಿಸಿಕೊಳ್ಳಬೇಕು, ಉತ್ತಮ ಕೇಳುಗನಾಗಿ ಅವರ ಸಮಸ್ಯೆಯನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು. ಸರ್ಕಾರಿ ಕೆಲಸದ ಜೊತೆಗೆ ಆರೋಗ್ಯದ ಕಡೆ ಗಮನಹರಿಸಬೇಕು ಹಾಗೂ ಸಂಘಗಳು ಮತ್ತು ಪದಾಧಿಕಾರಿಗಳು ಬರೀ ಪ್ರಚಾರಕ್ಕೆ ಸೀಮಿತರಾಗದೇ ನೌಕರರ ಪ್ರಸ್ತುತ ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂತಿಸಿ ಬಗೆಹರಿಸುವ ಕಡೆ ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕುಮಾರಸ್ವಾಮಿ.ಎಂ. ತಹಶೀಲ್ದಾರರು ಇಂದು ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ 50 ವರ್ಷಗಳ ಕೆಳಗೆ ಇದ್ದಷ್ಟೆ ಹುದ್ದೆಗಳಿವೆ. ಜನಸಂಖ್ಯೆಗನುಗುಣವಾಗಿ ಹುದ್ದೆಗಳು ಹೆಚ್ಚಾಗಬೇಕಿದೆ. ಆಗ ಮಾತ್ರ ಸರ್ಕಾರದ ಯೋಜನೆಗಳನ್ನು ತ್ವರಿತವಾಗಿ ಜನರಿಗೆ ತಲುಪಿಸಲು ಸಹಾಯವಾಗುತ್ತದೆ. ಅಲ್ಲದೇ ನೌಕರರು ಸಹಾ ಒತ್ತಡವಿಲ್ಲದೇ ಸಾರ್ವಜನಿಕರ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ಅಧ್ಯಕ್ಷರಾದ ಜಗದೀಶ ಇವರು ನೌಕರರಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಎನ್.ಪಿ.ಎಸ್ ರದ್ದತಿ ಹೋರಾಟ ಮೊದಲ ಬೇಡಿಕೆಯಾಗಿದ್ದು, ರಾಜ್ಯಾಧ್ಯಕ್ಷರು ಈಡೇರಿಸುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಅವಧಿಯಲ್ಲಿ ಕೊಟ್ಟೂರಿನಲ್ಲಿ ಸುಸಜ್ಜಿತವಾದ ನೌಕರರ ಭವನ ನಿರ್ಮಿಸಲು ಪ್ರಯತ್ನ ಮಾಡುತ್ತೇನೆ. ಇದಕ್ಕೆ ತಮ್ಮೆಲ್ಲರ ಸಹಕಾರ ಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಣ್ಣಿ ವಿಜಯಕುಮಾರ್ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ಕೊಟ್ಟೂರು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಣಜಿ ಸಿದ್ದಲಿಂಗಪ್ಪ, ಹಿರಿಯ ಉಪಾಧ್ಯಕ್ಷರಾದ ಜೆ.ಎಂ.ಮನೋಹರಸ್ವಾಮಿ, ಸಹಕಾರ್ಯದರ್ಶಿ ಈಶ್ವರಪ್ಪ ತುರಕಾಣಿ, ಸಾವಿತ್ರಿಬಾಯಿ ಬಾಬುಲೇ ಸಂಘದ ಅಧ್ಯಕ್ಷರಾದ ಬಿ ಶೈಲಜ, ಸದಸ್ಯರಾದ ಎ.ಅಕ್ಕಮಹಾದೇವಿ, ಪ್ರೌಢಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ರಾಮನಗೌಡ, ಮಹಿಳಾ ಸಂಘಟನಾ ಕಾರ್ಯದರ್ಶಿ ಪೊನ್ನಮ್ಮ, ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷರಾದ ಕೊಟ್ರೇಶ್, ಎ.ಬಸವರಾಜ ಖಚಾಂಚಿ ಶ್ರೀನಿವಾಸ ಹಾಗೂ ಇತರೆ ಸದಸ್ಯರು ಹಾಜರಿದ್ದರು. ಕೆ ಹೇಮಚಂದ್ರ ಸಾಮಾಜಿಕ ಉಪ ಅರಣ್ಯ ವಲಯಾಧಿಕಾರಿ ಪ್ರಾರ್ಥಿಸಿದರು, ಜಿ.ಸಿದ್ದಪ್ಪ ಕಾರ್ಯದರ್ಶಿ ಸ್ವಾಗತಿಸಿದರು. ಸಿ.ಮ.ಗುರುಬಸವರಾಜ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಖಜಾನೆ ಅಧಿಕಾರಿಯಾದ ಸುಜಾತ ಎಂ, ದೈಹಿಕ ಶಿಕ್ಷಣ ಶಿಕ್ಷಕರಾದ ಬಂಜಾರ ನಾಗರಾಜ, ಸಂಡೂರು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ|| ಕೆ.ರವಿಪ್ರಕಾಶ್, ಕೊಟ್ಟೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ದೇವರಮನಿ ಕೊಟ್ರೇಶ್ ಇವರನ್ನು ಸನ್ಮಾನಿಸಲಾಯಿತು.

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here