ಶುದ್ದ ಕುಡಿಯುವ ನೀರಿನ ಧರದಲ್ಲಿ ಏಕಾಏಕಿ ಹೆಚ್ಚಳ; ಖಾಸಗಿ ನಿರ್ವಹಣೆಯನ್ನು ರದ್ದುಪಡಿಸಲು ಆಗ್ರಹ

0
276

ವಿಜಯನಗರ:ಹಗರಿಬೊಮ್ಮನಹಳ್ಳಿ; ಮೇ, 9
ಹಗರಿಬೊಮ್ಮನಹಳ್ಳಿ ಪುರಸಭೆಯ ಹದಿನೇಳನೇಯ ವಾರ್ಡ್ ವ್ಯಾಪ್ತಿಯ ಕೂಡ್ಲಿಗಿ ಸರ್ಕಲ್ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕದವರು ಏಕಾಏಕಿ ನೀರಿನ ಧರವನ್ನು ಹೆಚ್ಚಳ ಮಾಡಿರುವುದನ್ನು ಖಂಡಿಸಿ ಮತ್ತು ಘಟಕದ ನಿರ್ವಹಣೆಯನ್ನು ಖಾಸಗಿಯವರಿಂದ ಹಿಂಪಡೆದು, ಪುರಸಭೆ ನಿರ್ವಹಣೆಯನ್ನು ವಹಿಸಿಕೊಳ್ಳುವಂತೆ ಆಗ್ರಹಿಸಿ ಸೋಮವಾರ ಮುಂಜಾನೆ ವಿವಿಧ ಜನಪರ ಸಂಘಟನೆಯ ಮುಖಂಡರುಗಳು, ಪುರಸಭೆಯ ಸದಸ್ಯರು, ನಾಗರೀಕರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರ ಅರ್ಪಿಸಿದರು. ಮುಖ್ಯಾಧಿಕಾರಿ ಗೈರಿನಲ್ಲಿ ವ್ಯವಸ್ಥಾಪಕ ಚಂದ್ರಶೇಖರ ರವರು ಮನವಿ ಸ್ವೀಕರಿಸಿ ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ಭರವಸೆ ಕೊಟ್ಟರು.

ಪಟ್ಟಣದ ಯುವ ಮುಖಂಡ ಹಾಗೂ ಮಾಜಿ ಗ್ರಾಪಂ ಸದಸ್ಯ ಸಂಪತ್ ಕುಮಾರ, ಮನವಿಪತ್ರ ಅರ್ಪಿಸಿ ಮಾತನಾಡಿ, ಅಗ್ಗದ ಬೆಲೆಯಲ್ಲಿ ಜನತೆಗೆ ಶುದ್ದ ಕುಡಿಯುವ ನೀರು ಪೂರೈಸಲು ಪಟ್ಟಣದ ರಾಮನಗರದ ಕೂಡ್ಲಿಗಿ ಸರ್ಕಲ್ ನಲ್ಲಿ 2015ರಲ್ಲಿ ಅಂದಿನ ಚಿಂತ್ರಪಳ್ಳಿ ಗ್ರಾಮಪಂಚಾಯ್ತಿ ಆಡಳಿತ ಮಂಡಳಿ ತನ್ನ ಸ್ವಂತ ಕಟ್ಟಡದಲ್ಲಿ ಪ್ರವರ್ಗ ಒಂದರ ಅನುದಾನದಲ್ಲಿ ಬೊರೆವೆಲ್ ಕೊರೆಸಿ, ಪೈಪ್ ಲೈನ್ ಅಳವಡಿಸಿ, ಯಂತ್ರೋಪಕರಣ ಸಹಿತ ಸುಸಜ್ಜಿತವಾದ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿತ್ತು. ಇದರ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗಿತ್ತು.

ನಿರ್ವಹಣೆಯನ್ನು ಪಡೆದುಕೊಂಡವರು ಆರಂಭದಲ್ಲಿ ಒಂದಿಷ್ಟು ದಿನ ಒಂದು ಕ್ಯಾನ್ ಗೆ ಎರಡು ರೂಪಾಯಿ ಧರ ನಿಗದಿ ಪಡಿಸಿ, ಆ ನಂತರ ಅದನ್ನು ನಾಲ್ಕು ರೂಗೆ ಏರಿಸಿದರು. ಈಗ ಇದ್ದಕ್ಕಿದ್ದಂತೆಯೇ ಆರು ರೂಪಾಯಿಗೆ ಹೆಚ್ಚಳ ಮಾಡಿದ್ದಾರೆ. ಸಾರ್ವಜನಿಕ ತೆರಿಗೆ ಹಣದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ತಮ್ಮ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

ಬಿಜೆಪಿ ಯುವ ಮುಖಂಡ ಸಂದೀಪ್ ಮಾತನಾಡಿ,

ನಮ್ಮ ಪಟ್ಟಣದಲ್ಲಿ ಸುತ್ತಲೂ ಹಲವು ವಾರ್ಡ್ ನಲ್ಲಿ ಪುರಸಭೆ ಯಿಂದ ಕಾರ್ಯನಿರ್ವಹಿಸುವ ಘಟಕಗಳಲ್ಲಿ ಕ್ಯಾನ್ ಒಂದಕ್ಕೆ ರೂ ಎರಡನ್ನು ಪಡೆಯುತ್ತಾರೆ. ಮೊನ್ನೆ ವಿದ್ಯುತ್ ಬಿಲ್ಲ್ ಹೆಚ್ಚಳವಾದ ಬಳಿಕ ನಾಲ್ಕುರೂ ಮಾಡಿದ್ದಾರೆ. ಆದರೇ ಕೂಡ್ಲಿಗಿ ಸರ್ಕಲ್ ನಲ್ಲಿ ಜನರಿಂದ ಹಣವನ್ನು ಕಿತ್ತುಕೊಳ್ಳುತ್ತಿದ್ದಾರೆ, ಈ ಕೂಡಲೇ ಈ ಘಟಕದ ಜವಾಬ್ದಾರಿಯನ್ನು ಪುರಸಭೆ ವಹಿಸಿಕೊಳ್ಳಬೇಕೆಂದರು.

ಕರವೇ ನಾರಾಯಣಗೌಡ ಬಣದ ಅಧ್ಯಕ್ಷ ಎನ್.ಎಂ.ಗೌಸ್ ಮಾತನಾಡಿ, ಕಳೆದ ಏಳು ವರ್ಷಗಳಿಂದಲೂ ಜನರಿಂದ ಡಬ್ಬಲ್ ಹಣ ದೋಚಲಾಗಿದೆ. ಈಗ 6ರೂ ದರ ಮಾಡುತಿರುವುದಕ್ಕೆ ನಮ್ಮ ಉಗ್ರವಿರೋಧ ವಿದೆ. ಶುದ್ಧ ಕುಡಿಯುವ ನೀರನ್ನು ಪುಕ್ಕಟೆಯಾಗಿ ಪೂರೈಸುವುದು ಸ್ಥಳೀಯ ಸಂಸ್ಥೆಗಳ ಕರ್ತವ್ಯವಾಗಿದೆ. ಹಾಗಾಗಿ ಪುರಸಭೆ ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ… ಘಟಕ ನಿರ್ವಹಣೆಗೆ ಬೇಕಾದ ವೆಚ್ಚದಲ್ಲಿ ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವವರಿಗೆ
ನೀಡಬೇಕೆಂದು ಒತ್ತಾಯಿಸಿದರು.

ಪುರಸಭೆ ನೂತನ ಸದಸ್ಯ ಗಣೇಶ್, ಮಾಜಿ ಸದಸ್ಯ ಕೆಜಿಎನ್ ಅಲ್ಲಾಭಕ್ಷಿ, ಹಿರಿಯ ನಾಗರೀಕ ಮಸ್ತಾನ್ ಸಾಬ್ ಸೇರಿದಂತೆ ಹಲವರು ಭಾಗವಹಿಸಿದ್ದರು.

  • ಹುಳ್ಳಿಪ್ರಕಾಶ

LEAVE A REPLY

Please enter your comment!
Please enter your name here