ವಿಶ್ವದೆಲ್ಲೆಡೆ ಹಸಿರಿದ್ದರೆ ಮಾತ್ರ ಉಸಿರು: ತಹಶಿಲ್ದಾರ್ ಎಂ.ಕುಮಾರಸ್ವಾಮಿ!

0
174

ಕೊಟ್ಟೂರು:ಜೂನ್:06:-ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕೊಟ್ಟೂರಿನಲ್ಲಿ ಇಂದು “ವಿಶ್ವ ಪರಿಸರ ದಿನಾಚರಣೆ” ಮತ್ತು “ಮತದಾರರ ಜಾಗೃತಿ ಕಾರ್ಯಕ್ರಮ” ಹಮ್ಮಿಕೊಳ್ಳಲಾಗಿತ್ತು.

ಪಟ್ಟಣ ಪಂಚಾಯತ್ ಅಧ್ಯಕ್ಷೆ ಭಾರತಿ ಸುಧಾಕರ ಪಾಟೀಲ್ ಸಸಿ ನೆಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಹಶಿಲ್ದಾರ್ ಎಂ.ಕುಮಾರಸ್ವಾಮಿ ಮಾತನಾಡಿ, ಪರಿಸರ ಉಳಿದರೆ ನಾವು ಉಳಿಯುತ್ತೇವೆ. ಪರಿಸರ ಹಾಳಾದರೆ, ಕಲುಷಿತಗೊಂಡರೆ ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಉಳಿಗಾಲವಿಲ್ಲ. ಸಕಾಲಕ್ಕೆ ಮಳೆಯಾಗದೇ ಕ್ಷಾಮವನ್ನು ಎದುರಿಸಬೇಕಾಗುತ್ತದೆ. ನಮಗೆಲ್ಲಾ ಕೊರೋನಾ ಸಮಯದಲ್ಲಿ ಆಮ್ಲಜನಕದ ಮಹತ್ವ ಅರಿವಾಗಿದೆ. ಹೀಗಾಗಿ ನಾವೆಲ್ಲಾ ಗಿಡ-ಮರಗಳನ್ನು ನೆಡುವುದಷ್ಟೇ ಅಲ್ಲಾ ಸಂರಕ್ಷಿಸಬೇಕಿದೆ ಎಂದರು.

ಈ ಕಾಳಜಿ ಬರೀ ದಿನಾಚರಣೆಗೆ ಮೀಸಲಾಗದೇ ನಿತ್ಯ ಚಲಾವಣೆಯಲ್ಲಿರಬೇಕು. ಸಾಲುಮರದ ತಿಮ್ಮಕ್ಕನಂತೆ ಪ್ರೀತಿಸಿ ಬೆಳೆಸಿ ಉಳಿಸಬೇಕು. 18 ವರ್ಷ ತುಂಬಿದ ಎಲ್ಲಾ ಯುವ ಮತದಾರರು ನೊಂದಣಿ ಮಾಡಿಸಿ ಮತದಾರರ ಗುರುತಿನ ಚೀಟಿ ಪಡೆಯಬೇಕು. ಎಲ್ಲರೂ ಚುನಾವಣೆಯ ಸಮಯದಲ್ಲಿ ಸಂವಿಧಾನ ನೀಡಿರುವ ಮತದಾನ ಹಕ್ಕನ್ನು ಉಪಯೋಗಿಸಿಕೊಳ್ಳಬೇಕು. ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ಜ್ಞಾನ ಸುಧಾ ಶಾಲಾ ಮಕ್ಕಳು ಪ್ರದರ್ಶನ ಮಾಡಿದ ಪರಿಸರ ಪ್ರಜ್ಞೆಯ ಬೀದಿ ನಾಟಕ ಎಲ್ಲರ ಗಮನ ಸೆಳೆಯಿತು. ಸದಾ ಪರಿಸರದ ಕಾಳಜಿ ಹೊಂದಿರುವ ಹಸಿರು ಹೊನಲು ತಂಡದ ಸದಸ್ಯರು ಸಹಕರಿಸಿದರು. ಕೊಟ್ಟೂರೇಶ್ವರ ಕಾಲೇಜಿನ ಎನ್.ಸಿ.ಸಿ. ತಂಡದವರು ಜಾಗೃತಿ ಜಾಥ ನಡೆಸಿದರು.

ಈ ಸಮಯದಲ್ಲಿ ವಿಜಯಕುಮಾರ್.ಹೆಚ್. ಎಡಿ ನರೇಗಾ ಯೋಜನೆ, ನಸರುಲ್ಲಾ ಮುಖ್ಯಾಧಿಕಾರಿ ಪಟ್ಡಣ ಪಂಚಾಯಿತಿ, ಸಿ. ಅಜ್ಜಪ್ಪ ಇಸಿಇ, ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದಯ್ಯ ಗಂಗನಹಳ್ಳಿ, ಡಿ.ಶಿವಕುಮಾರ್ ಚುನಾವಣೆ ವಿಷಯ ನಿರ್ವಾಹಕರು ಹಾಗು ಇತರರು ಹಾಜರಿದ್ದರು.

ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಬಿಎಲ್‌ಒ ಹಾಗು ಇತರೆ ಅಧಿಕಾರಿಗಳು, ಗ್ರಾಮಸ್ತರ ಸಹಕಾರದೊಂದಿಗೆ ಸಸಿ ನೆಡುವುದರೊಂದಿಗೆ ಮತದಾರರ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಸ್ವೀಪ್ ಅಧಿಕಾರಿ ಮೈದೂರು ಶಶಿಧರ ಕಾರ್ಯಕ್ರಮ ನಿರ್ವಹಿಸಿದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here