ತುಮಕೂರ‍್ಲಹಳ್ಳಿ ಗಾಯಕನಿಗೆ ದಿಲ್ಲಿಯಲ್ಲಿ ಹಾಡುವ ಅವಕಾಶ ! ಯಾಕೆ ಗೊತ್ತಾ..?

0
200

ಚಿತ್ರದುರ್ಗ:ಆ:31- ಚಿತ್ರದುರ್ಗ ಜಿಲ್ಲೆಯ ತುಮಕೂರ‍್ಲಹಳ್ಳಿ ಸಂಗೀತ ಶಿಕ್ಷಕ ಕೆ.ಓ.ಶಿವಣ್ಣ ಅವರ ಕಂಠಸಿರಿಗೆ ಮನಸೋಲದವರಿಲ್ಲ ನವದೆಹಲಿಯ ಕರ್ನಾಟಕ ಭವನದಲ್ಲಿ ನ.1 ರಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹರಿಯಲಿದೆ ಗಾನಸುಧೆ

ಕಂಚಿನ ಕಂಠದ ಗಾಯಕ ತುಮಕೂರ‍್ಲಹಳ್ಳಿ ಕೆ.ಓ.ಶಿವಣ್ಣ ಮತ್ತು ತಂಡದವರು ಈ ವರ್ಷದ ನವೆಂಬರ್ 1 ರಂದು ನವದೆಹಲಿಯ ಕರ್ನಾಟಕ ಭವನದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಗಾಯನಕ್ಕೆ ಆಯ್ಕೆಯಾಗಿದ್ದು, ಈ ಮೂಲಕ “ಹಳ್ಳಿ ಗಾಯಕನಿಗೆ ದಿಲ್ಲಿಯಲ್ಲಿ ಹಾಡುವ ಅವಕಾಶ” ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ತಮ್ಮೇನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುವ ಕೆ.ಓ.ಶಿವಣ್ಣ ಅವರು ಮೊಳಕಾಲ್ಮೂರು ತಾಲೂಕಿನ ತುಮಕೂರ‍್ಲಹಳ್ಳಿಯವರು. ಇವರು ಬಡ ಕುಟುಂಬದಲ್ಲಿ ಜನಿಸಿದ್ದರೂ, ಚಿಕ್ಕವಯಸ್ಸಿನಿಂದಲೂ ಸಂಗೀತದೆಡೆಗೆ ಸೆಳೆದ ತಮ್ಮ ಮನಸ್ಸಿನಂತೆ ಸಾಗಿ ಈಗ ಸಂಗೀತ ಕ್ಷೇತ್ರದಲ್ಲಿ ಸಾಧನೆಯ ಶ್ರೀಮಂತಿಕೆ ಮೆರೆದಿರುವುದು ಮಾತ್ರ ಸೋಜಿಗವೇ ಸರಿ.

ಹಳ್ಳಿಗಾಡಿನಲ್ಲಿ ಸಂಗೀತಾಭ್ಯಾಸ ಮಾಡುವ ಯಾವುದೇ ಅವಕಾಶ ಇಲ್ಲದಿದ್ದರೂ, ಅವರ ಹಂಬಲ ಮಾತ್ರ ಕುಗ್ಗಿರಲಿಲ್ಲ. ಸಂಗೀತದ ದಿಗ್ಗಜರೊಡನೆ ಸೇರಿ ಹಾಗೂ ಸಂಗೀತದ ಶಾಲೆಯಲ್ಲಿ ಅಭ್ಯಾಸ ಮಾಡುವ ಮೂಲಕ ತಮ್ಮ ಗುರಿ ಸಾಧನೆಯತ್ತ ಸಾಗಿರುವ ಶಿವಣ್ಣ ಅವರಲ್ಲಿ ಈಗಲೂ ಸಂಗೀತ ಕಲಿಕೆಯ ಉತ್ಸಾಹ ಕುಂದಿಲ್ಲ.

ಈಗಾಗಲೇ ರಾಜ್ಯ, ಜಿಲ್ಲೆ ಸೇರಿ ಅನೇಕ ಕಡೆ ಸಾಕಷ್ಟು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದು, ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಇಂಥ, ಹಳ್ಳಿ ಪ್ರತಿಭೆ ತುಮಕೂರ‍್ಲಹಳ್ಳಿ ಕೆ.ಓ.ಶಿವಣ್ಣ ಮತ್ತು ತಂಡದವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯ್ಕೆ ಮಾಡಿದೆ. ಅದೇರೀತಿ ಜಾನಪದ ಸಮೂಹ ನೃತ್ಯ ವಿಭಾಗದಲ್ಲಿ ಬೆಂಗಳೂರಿನ ನಾಗಭೂಷಣ ಮತ್ತು ತಂಡದವರು ಇದೇ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

ಒಟ್ಟಾರೆಯಾಗಿ, ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ನಾಟಕ ಭವನದಲ್ಲಿ ನವೆಂಬರ್ 1 ರಂದು ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ “ಹಳ್ಳಿ ಕೋಗಿಲೆ ಕೆ.ಓ.ಶಿವಣ್ಣ” ಮತ್ತು ತಂಡದವರ ಸುಗಮ ಸಂಗೀತದ ಗಾನಸುಧೆ ಹರಿಯಲಿದೆ.

ವರದಿ:-ಗೋಪಾಲ್

LEAVE A REPLY

Please enter your comment!
Please enter your name here