ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಹಕ್ಕೊತ್ತಾಯಗಳಿಗಾಗಿ ಧರಣಿ ಸತ್ಯಾಗ್ರಹ.

0
100

ಸಂಡೂರು:ಡಿ:20:-ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಸಂಡೂರು ತಾಲೂಕು ಸಮಿತಿಯಿಂದ ತಾಲೂಕು ಕಚೇರಿಯ ಆವರಣದಲ್ಲಿ ದೇವದಾಸಿ ಮಹಿಳೆಯರ ಮರು ಸರ್ವೆ ಮತ್ತು ಮಾಸಿಕ ಸಹಾಯಧನ 3000 ರೂಗಳು ಹಾಗೂ ಇತರೆ ಹಕ್ಕೊತ್ತಾಯಗಳಿಗಾಗಿ 20.12.22 ರಿಂದ21.12.2022 ರವರೆಗೆ ಎರಡು ದಿನಗಳ ಕಾಲ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ, ತಹಶೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಹಲವು ಬೇಡಿಕೆಗಳುಳ್ಳ ಮನವಿಪತ್ರವನ್ನು ಸಲ್ಲಿಸಲಿದ್ದಾರೆ.

ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷೆ ಹೆಚ್ ದುರುಗಮ್ಮ ಮಾತನಾಡಿ..
ರಾಜ್ಯ ಸರಕಾರ ಕೈಗೊಳ್ಳಬೇಕಾದ ಪುನರ್ವಸತಿ ಯೋಜನೆಗಳನ್ನು ಗಂಭೀರವಾಗಿ ಕೈಗೊಳ್ಳದೆ ಮತ್ತು ದೌರ್ಜನ್ಯದ ದೇವದಾಸಿ, ಪದ್ದತಿ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ನಾವು ನಿರಂತರ ಒತ್ತಾಯ ಮಾಡುತ್ತಾ ಬರುತ್ತಿದ್ದರೂ ಸರಕಾರ ಗಂಭೀರವಾಗಿ ಪರಿಗಣಿಸದಿರುವುದು ವಿಷಾಧನೀಯವಾಗಿದೆ. ರಾಜ್ಯ ಸರಕಾರ ಎರಡು ಬಾರಿ ರಾಜ್ಯದಾದ್ಯಂತ ಗಣತಿ ಮಾಡಿದರೂ ಈಗಲೂ ಗಣತಿಯಾಚೆ ಉಳಿದ ಮಹಿಳೆಯರ ಸಂಖ್ಯೆ 25 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವುದು ಕಂಡು ಬಂದಿದೆ. ಅದೇ ರೀತಿ ಗಣತಿ ಪಟ್ಟಿಯಲ್ಲಿರುವ ಮಹಿಳೆಯರಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ, ಮಾಸಿಕ ಪಿಂಚಣಿ ಅಥವಾ ಸಹಾಯಧನ ನೀಡಲಾಗುತ್ತಿದೆ. ಕಳೆದ ಐದು ವರ್ಷಗಳಿಂದಲೂ ಎಲ್ಲ ರಾಜ್ಯ ಸರಕಾರಗಳು ಮಾಸಿಕ ಸಹಾಯಧನ ಹೆಚ್ಚಳ ಮಾಡುವುದಾಗಿ ಹೇಳುತ್ತಿವೆಯಾದರೂ ಹೆಚ್ಚಳ ಘೋಷಿಸಲಿಲ್ಲ, ದೇವದಾಸಿ ಮಹಿಳೆಯರ ಮಕ್ಕಳ ಪುನರ್ವಸತಿ, ಪರಿತ್ಯಕ್ತ ಹೆಣ್ಣು ಮಕ್ಕಳ ಗಣತಿ ಕೆಲಸಗಳು ಇದುವರೆಗೂ ಗಂಭೀರವಾಗಿ ಕೈಗೊಳ್ಳಲಿಲ್ಲ.

ಹಾಗೇ ದಲಿತ ಕುಟುಂಬಗಳ ಸ್ವಾವಲಂಬಿ ಬದುಕು ಪಡೆಯುವಂತೆ ಮಾಡುವಲ್ಲಿಯೂ ಸರಕಾರಗಳು ಸೋತಿರುವುದರಿಂದ ಮತ್ತು ದೌರ್ಜನ್ಯದ ದೇವದಾಸಿ ಪದ್ಧತಿಯ ಫಲಾನುಭವಿಗಳಿಗೆ ಹೊಣೆಗಾರಿಕೆ ಮತ್ತು ಶಿಕ್ಷೆ ಕಾನೂನಿನಲ್ಲಿಲ್ಲದಿರುವುದು ರಾಜ್ಯದಲ್ಲಿ, ದೌರ್ಜನ್ಯದ ದೇವದಾಸಿ ಪದ್ಧತಿ ಕದ್ದು ಮುಚ್ಚಿ ನಡೆಯಲು ಕಾರಣವಾಗುತ್ತಿದೆ. ಆದ್ದರಿಂದ ರಾಜ್ಯ ಸರಕಾರ ಈ ಕೆಳಕಂಡ ಹಕ್ಕೊತ್ತಾಯಗಳನ್ನು ತಕ್ಷಣವೇ ಪರಿಗಣಿಸಬೇಕೆಂದು ಮನವಿಯನ್ನು ಮಾಡಿಕೊಳ್ಳುತ್ತೇವೆ ಎಂದರು.

ಹಕ್ಕೊತ್ತಾಯಗಳು:-

■ವಯೋಮಿತಿ ಭೇದವಿಲ್ಲದೇ ಎಲ್ಲ, ದೇವದಾಸಿ ಮಹಿಳೆಯರಿಗೂ, ಮಾಸಿಕ ಸಹಾಯಧನ ಅಥವಾ ಪಿಂಚಣಿಯನ್ನು ಮಾಸಿಕ 3000 ರೂ.ಗಳಿಗೆ ಹೆಚ್ಚಿಸಬೇಕು.ಮುಂಬರುವ ಬಜೆಟ್ ಗಳಲ್ಲಿ ಪ್ರತಿವರ್ಷ ಕನಿಷ್ಠ 1,000 ಕೋಟಿ ರೂ ದೌರ್ಜನ್ಮದ ದೇವದಾಸಿ, ಪದ್ದತಿ ನಿರ್ಮೂಲನೆಗಾಗಿ ಒದಗಿಸಬೇಕು.
■ಗಣತಿ ಪಟ್ಟಿಗೆ ಸೇರದ ಎಲ್ಲ ದೇವದಾಸಿ ಮಹಿಳೆಯರನ್ನು ಗಣತಿ ಮಾಡಿ ಗಣತಿ ಪಟ್ಟಿಗೆ ಸೇರ್ಪಡೆ ಮಾಡಬೇಕು, ಅದೇ ರೀತಿ, ದೇವದಾಸಿ ಮಹಿಳೆಯರ ಮಕ್ಕಳ ಮತ್ತು ದೇವದಾಸಿ ಮಹಿಳೆಯರ ಪರಿತ್ಯಕ್ತ ಹೆಣ್ಣು ಮಕ್ಕಳ ಗಣತಿಯನ್ನು ಕೈಗೊಳ್ಳಬೇಕು.
■ದೇವದಾಸಿ ಮಹಿಳೆಯರ ಮಕ್ಕಳ ಮದುವೆಗೆ ನೀಡುವ ಪ್ರೋತ್ಸಾಹ ಧನದಲ್ಲಿ ಇರುವ ಎಲ್ಲ ಷರತ್ತುಗಳನ್ನು ಮತ್ತು ಹಲವು ಅನಗತ್ಯ ರೆಕಾರ್ಡ್ ಗಳನ್ನು ಕೇಳುವುದನ್ನು ವಾಪಾಸು ಪಡೆದು ಸರಳೀಕರಿಸಬೇಕು. ಒಳ ಮೀಸಲಾತಿ ಆಧಾರದಲ್ಲಿ ಶಿಕ್ಷಣ ಮತ್ತು ಉದ್ಯೋಗ ನೀಡಲು ಕ್ರಮವಹಿಸಬೇಕು, ಉದ್ಯೋಗ ದೊರೆಯುವವರೆಗೆ ಮಾಸಿಕ 10,000 ರೂಗಳಂತೆ ನಿರುದ್ಯೋಗ ಭತ್ಯೆ, ಒದಗಿಸಬೇಕು.
■ಎಲ್ಲಾ ದೇವದಾಸಿ ಮಹಿಳೆಯರು ಹಾಗೂ ಅವರ ಮಕ್ಕಳಿಗೆ ತಲಾ ಐದು ಎಕರೆ ನೀರಾವರಿ ಜಮೀನು ಒದಗಿಸಬೇಕು. ಇದಕ್ಕಾಗಿ ಪ್ರತಿ ವರ್ಷ ಪ್ರತಿ ತಾಲೂಕಿಗೂ ಕನಿಷ್ಟ 50 ದೇವದಾಸಿ ಮಹಿಳೆಯರಿಗೆ ಭೂಮಿ ದೊರೆಯುವಂತೆ ಭೂ ಸ್ವಾಧೀನದ ಮೂಲಕ ಕ್ರಮವಹಿಸಬೇಕು.
■ದೇವದಾಸಿ ಮಹಿಳೆಯರ ಸಾಲ ಸೌಲಭ್ಯ ಹಾಗೂ ಸಹಾಯಧನ ಕಡಿತ ಮಾಡಿರುವುದನ್ನು ವಾಪಾಸು ಪಡೆಯಬೇಕು, ಶೇ 75 ಸಹಾಯಧನವಿರುವ ಮತ್ತು ಐದು ವರ್ಷಕಾಲ ಬಡ್ಡಿ ಇರದ ಕನಿಷ್ಟ 5 ಲಕ್ಷ ರೂಗಳ ಸಾಲ ಒದಗಿಸಬೇಕು.
■ಫಲಾನುಭವಿ ದೇವದಾಸಿ ಮಹಿಳೆಯರನ್ನು ಆಯ್ಕೆ ಮಾಡುವಾಗ ಸೀನಿಯಾರಿಟಿ ಆಧಾರದಲ್ಲಿ ಲಾಟರಿ ಎತ್ತುವ ಮೂಲಕ ಆಯ್ಕೆಗೆ ಕ್ರಮವಹಿಸಬೇಕು. ಫಲಾನುಭವಿ ಆಯ್ಕೆಯಲ್ಲಿ ನಡೆಯುವ ವಿಳಂಬವನ್ನು ತಡೆಯಬೇಕು.

ಈ ಸಂಧರ್ಭದಲ್ಲಿ ದೇವದಾಸಿ ಮಹಿಳಾ ವಿಮೋಚನಾ ಸಂಘದ ಹೆಚ್ ದುರುಗಮ್ಮ, ಹಾಗೂ ದೇವದಾಸಿ ಮಹಿಳೆಯರ ಮಕ್ಕಳ ಸಂಘದ ಕಾರ್ಯದರ್ಶಿ ಧನುಂಜಯ ಹೆಚ್, ಮತ್ತು ಮಾರೇಕ್ಕ, ಬಸಮ್ಮ, ಪಕಿರಮ್ಮ, ರಾಜಮ್ಮ ಹಾಗೂ ಇತರರಿದ್ದರು

LEAVE A REPLY

Please enter your comment!
Please enter your name here