ರೂಪನಗುಡಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿ “ಮಲೇರಿಯಾ ವಿರೋಧಿ ಮಾಸಾಚರಣೆ”

0
80

ಬಳ್ಳಾರಿ,ಜು.01:ತಾಲೂಕಿನ ರೂಪನಗುಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರದಂದು ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೇಕರ್ ಅವರು ಮಾತನಾಡಿ, ಮಲೇರಿಯ ರೋಗವು ಅನಾಪಿಲಿಸ್ ಹೆಣ್ಣು ಸೊಳ್ಳೆ ಕಡಿತದಿಂದ ಬರುತ್ತದೆ. ರೋಗವು ತಗುಲಿದ ವ್ಯಕ್ತಿಗೆ ಅತೀ ಶೀಘ್ರವಾಗಿ ಚಿಕಿತ್ಸೆ ಕೊಡಿಸಬೇಕು ಇಲ್ಲದಿದ್ದರೆ ರೋಗವು ಉಲ್ಬಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.

ಈ ರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತದೆ. ಸೊಳ್ಳೆಗಳ ಉತ್ಪತ್ತಿ ತಾಣಗಳ (ನಿಷ್ಪ್ರಯೋಜಕ ಟೈರುಗಳಲ್ಲಿ ನೀರು ನಿಲ್ಲುವುದು, ಪ್ಲಾಸ್ಟಿಕ್ ಬಾಟಲಿಗಳಲ್ಲಿ ಇತ್ಯಾದಿ) ನಿಂತ ನೀರಿನ ಗುಂಡಿಗಳನ್ನು ಮುಚ್ಚಬೇಕು. ಗ್ರಾಮದ ಕೆರೆ ಕಟ್ಟೆಗಳಲ್ಲಿ ಕಪ್ಪೆ ಮೀನುಗಳನ್ನು ಬಿಡುವುದು. ಗ್ರಾಮದ ಚರಂಡಿ ನೀರು ನಿಲ್ಲದಂತೆ ಸರಾಗವಾಗಿ ಹರಿಯುವಂತೆ ಕ್ರಮ ವಹಿಸಬೇಕು. ರಾತ್ರಿ ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು. ಈ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದರಿಂದ ಮಲೇರಿಯ ರೋಗವನ್ನು ತಡೆಗಟ್ಟಬಹುದು ಎಂದು ತಿಳಿಸಿ ಕೊಟ್ಟರು.

ಆಯುಷ್ ವೈದ್ಯಾಧಿಕಾರಿ ಡಾ.ನಾರಾಯಣಬಾಬು ಅವರು ಮಾತನಾಡಿ, ಮಲೇರಿಯಾ ರೋಗವು ಸೋಂಕಿತ ಸೊಳ್ಳೆಯ ಕಡಿತದಿಂದ ಹರಡುವ ಗಂಭೀರ ಖಾಯಿಲೆಯಾಗಿದೆ. ಇದು ಒಬ್ಬ ವ್ಯಕ್ತಿಗೆ ಜ್ವರ ಮತ್ತು ಶೀತವನ್ನು ಉಂಟು ಮಾಡಬಹುದು ಹಾಗೂ ತಕ್ಷಣ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿಯ ಜೀವಕ್ಕೆ ಮಾರಕವಾಗಬಹುದು ಎಂದು ಹೇಳಿದರು.
ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಮುಸ್ಸಂಜೆ ವೇಳೆ ಸೊಳ್ಳೆಗಳು ಹೆಚ್ಚು ಇರುವ ಸಮಯದಲ್ಲಿ ಸೊಳ್ಳೆ ಬತ್ತಿಗಳನ್ನು ಬಳಸಿ ಸೊಳ್ಳೆಗಳಿಂದ ಸುರಕ್ಷಿತವಾಗಿರುವ ಮೂಲಕ ಮಲೇರಿಯವನ್ನು ತಡೆಗಟ್ಟಲು ಸಹಕರಿಸಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಂತ ತಜ್ಞೆ ಡಾ.ಪ್ರಿಯಾಂಕಾ ರೆಡ್ಡಿ, ನೇತ್ರಾ ಸಹಾಯಕ ಅಧಿಕಾರಿ ಭಂಡಾರು ಮಂಜುನಾಥ, ಹೆಚ್.ಐ.ಓ ವೀರಾರೆಡ್ಡಿ ಸೇರಿದಂತೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here