ತಂಬಾಕು ಮುಕ್ತ ಜೀವನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ನ್ಯಾ.ಮಂಜುನಾಥ ನಾಯಕ್

0
15

ಶಿವಮೊಗ್ಗ, ನವೆಂಬರ್ 06: ತಂಬಾಕು ಸೇವನೆಯಿಂದ ತನ್ನ ಆರೋಗ್ಯ ಮಾತ್ರವಲ್ಲ ಸುತ್ತಮುತ್ತಲಿನ ಆರೋಗ್ಯವೂ ಕೆಡುತ್ತದೆ. ತಂಬಾಕು ಮುಕ್ತ ಜೀವನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಜಿಲ್ಲಾ ತರಬೇತಿ ಕೇಂದ್ರದಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳಿಗೆ ‘ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕೋಟ್ಪಾ 2003 ಕಾಯ್ದೆಯ ಪರಿಣಾಮಕಾರಿ ಅನುಷ್ಟಾನ’ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂಬಾಕು ಸೇವನೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದೊಡ್ಡ ದುಷ್ಪರಿಣಾಮ ಬೀರುತ್ತದೆ. ತಂಬಾಕು, ಬೀಡಿ, ಸಿಗರೇಟು ಸೇದುವುದು ತನಗೆ ಮಾತ್ರವಲ್ಲ ಅಕ್ಕಪಕ್ಕದವರ ಮೇಲೆ, ಸುತ್ತಮುತ್ತಲಿನ ವಾತಾವರಣದ ಮೇಲೆ ಸಹ ದುಷ್ಪರಿಣಾಮ ಬೀರುತ್ತದೆ. ಈ ವಿಷಯವನ್ನು ಸಮುದಾಯ ಆರೋಗ್ಯಾಧಿಕಾರಿಗಳು ಎಲ್ಲರಿಗೂ ಮುಟ್ಟಿಸಬೇಕು. ತಂಬಾಕು ಬಳಕೆ ವಿರುದ್ದ ಜಾಗೃತಿ ಮೂಡಿಸಬೇಕು.

ತಂಬಾಕು ಮೊದಲನೇ ಹಂತವಾದರೆ, ಗಾಂಜಾ ಎರಡನೇ ಹಂತ. ಯುವಜನತೆ ಮೊದಲು ತಂಬಾಕು, ಬೀಡಿ ಸಿಗರೇಟ್ ಸೇವನೆಯಿಂದ ಆರಂಭಿಸಿ ಗಾಂಜಾ ಸೇದಲು ಶುರುವಿಡುತ್ತಾರೆ. ಶಿವಮೊಗ್ಗದಲ್ಲಿ ಗಾಂಜಾ ಬಳಕೆ ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕಬೇಕು. ಜಾಗೃತಿ ಮೂಡಿಸಬೇಕು. ತಂಬಾಕು ಚಟಕ್ಕೆ ಬೀಳದಂತೆ ನೋಡಿಕೊಳ್ಳಬೇಕು. ಸಮುದಾಯ ಆರೋಗ್ಯಾಧಿಕಾರಿಗಳು ಜನ ಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಂಬಾಕು ಸೇವನೆ ದುಷ್ಪರಿಣಾಮದ ಬಗ್ಗೆ ತಿಳಿಸಬೇಕು. ಆಗ ಇಂತಹ ಕಾರ್ಯಾಗಾರಗಳು ಯಶಸ್ಸು ಕಾಣುತ್ತವೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಲ್ಲಪ್ಪ ಓ ಮಾತನಾಡಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಲ್ಲಿ ಶಾಲಾ ತರಬೇತಿ, ಕೋಟ್ಪಾ ಪ್ರಕರಣದ ಡ್ರೈವ್‍ಗಳು, ವಿವಿಧ ಅಧಿಕಾರಿಗಳಿಗೆ ತರಬೇತಿ, ಮಾಹಿತಿ, ಶಿಕ್ಷಣ ಸಂಪರ್ಕ ಕಾರ್ಯಕ್ರಮಗಳು ಮತ್ತು ತಂಬಾಕು ವ್ಯಸನಮುಕ್ತಿ ಸೇವೆಗಳು ಜಿಲ್ಲೆಯಲ್ಲಿ ಜಾರಿಯಲ್ಲಿರುತ್ತವೆ.

ಜಿಲ್ಲೆಯಲ್ಲಿ 2016 ರಿಂದ ಇಲ್ಲಿಯವರೆಗೆ ಒಟ್ಟು 700 ಶಾಲಾ ಕಾಲೇಜುಗಳಲ್ಲಿ ತರಬೇತಿ ನೀಡಲಾಗಿದೆ. ಸುಮಾರು 50,000 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದಿದ್ದು 389 ವಿದ್ಯಾಸಂಸ್ಥೆಗಳನ್ನು ತಂಬಾಕು ಮುಕ್ತ ವಿದ್ಯಾಸಂಸ್ಥೆಗಳೆಂದು ಘೋಷಿಸಲಾಗಿದೆ.

ಈವರೆಗೆ ಕೋಟ್ಪಾ ಕಾಯ್ದೆ ಉಲ್ಲಂಘನೆಗಳನ್ನು ಪತ್ತೆಹಚ್ಚಿ ಒಟ್ಟು 493 ದಾಳಿಗಳು, ಸೆಕ್ಷನ್ 4 ರಡಿ 5272 ಪ್ರಕರಣಗಳು, ಸೆಕ್ಷನ್ 61 ಅಡಿ 2498, ಸೆ.6ಬಿ ಅಡಿ 1292 ಸೇರಿದಂತೆ ಒಟ್ಟು 10242 ಪ್ರಕರಣ ದಾಖಲಿಸಿ ರೂ.6,25,140 ದಂಡ ಸಂಗ್ರಹಿಸಲಾಗಿದೆ. 2016 ರಿಂದ ಇಲ್ಲಿಯವರೆಗೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ, ಸಂಘ ಸಂಸ್ಥೆಗಳಿಗೆ, ತಂಬಾಕು ಮಾರಾಟಗಾರರಿಗೆ ಒಟ್ಟು 35 ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕೋಟ್ಪಾ ಕಾಯ್ದೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಹೋರ್ಡಿಂಗ್ಸ್‍ಗಳು, ಕರಪತ್ರಗಳು, ಗೋಡೆ ಬರಹಗಳು, ಬೀದಿ ನಾಟಕಗಳು, ಎಲ್‍ಇಡಿ ಪ್ರದರ್ಶನಗಳು, ಆಕಾಶವಾಣಿ ಕಾರ್ಯಕ್ರಮಗಳು ಹಾಗೂ ಗುಲಾಬಿ ಆಂದೋಲನಗಳನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ತಂಬಾಕು ವ್ಯಸನಮುಕ್ತಿ ಕೇಂದ್ರ ಸ್ಥಾಪಿಸಲಾಗಿದ್ದು 2016 ರಿಂದ ಇಲ್ಲಿಯವರೆಗೆ 20286 ಫಲಾನುಭವಿಗಳು ಭೇಟಿ ನೀಡಿದ್ದು 2727 ಜನರು ವ್ಯಸನ ಮುಕ್ತಿ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್.ಚಂದನ್, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಲಹೆಗಾರ ಹೇಮಂತ್‍ರಾಜ್, ಸಮಾಜ ಕಾರ್ಯಕರ್ತ ರವಿರಾಜು, ಸಮುದಾಯ ಆರೋಗ್ಯಾಧಿಕಾರಿಗಳು ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here