ಹೆಂಗೆಳೆಯರ ಪ್ರಿಯವಾದ ವರಮಹಾಲಕ್ಷ್ಮಿ ಹಬ್ಬ

0
178

ಆಷಾಡ ಕಳೆದು ಶ್ರಾವಣ ಕಾಲಿಡುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ಭೀಮನ ಅಮಾವಾಸ್ಯೆಯ ನಂತರ ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ. ಇದಾದ ನಂತರ ಶ್ರಾವಣದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಹೆಂಗೆಳೆಯರೆಲ್ಲಾ ಅತ್ಯಂತ ಭಕ್ತಿಯಿಂದ ಶ್ರದ್ಧೆಯಿಂದ ಆಚರಿಸುತ್ತಾರೆ. ವರಮಹಾಲಕ್ಷ್ಮಿ ವ್ರತ ಮಾಡಿದರೆ ಅಷ್ಟ ಲಕ್ಷ್ಮಿಯರಿಗೂ ಪೂಜೆ ಸಲ್ಲಿಸಿದ ಫಲ ಸಿಗುತ್ತದೆನ್ನುವುದು ಹಲವರ ನಂಬಿಕೆ. ಹೀಗಾಗಿ ಹೆಣ್ಣುಮಕ್ಕಳಿಗೆ ಅತ್ಯಂತ ಸಂಭ್ರಮದ ಹಬ್ಬ ಕೂಡಾ ಇದಾಗಿದೆ.

ಪುರಾಣದ ಪ್ರಕಾರ ಅಮೃತ ಪಡೆಯುವ ಸಲುವಾಗಿ, ದೇವತೆಗಳು ಹಾಗೂ ರಾಕ್ಷಸರು ಮಂದಾರ ಪರ್ವತವನ್ನು ಕ್ಷೀರ ಸಾಗರದಲ್ಲಿ ಹಾಕಿ, ವಾಸುಕಿಯ ಸಹಾಯದಿಂದ ಸಮುದ್ರ ಮಂಥನ ಮಾಡುವಾಗ ಉದ್ಭವಿಸಿದ ಹಲವು ವಸ್ತುಗಳ ಜೊತೆಯಲ್ಲಿ ಶ್ವೇತ ವರ್ಣದ ವಸ್ತ್ರಧಾರಿಯಾಗಿ ಲಕ್ಷ್ಮಿಯೂ ಉದಯಿಸುತ್ತಾಳೆ. ನಂತರ ವಿಷ್ಣುವನ್ನು ವರಿಸಿ, ಆತನ ವಕ್ಷ ಸ್ಥಳದಲ್ಲಿ ಸ್ಠಾನ ಪಡೆದಳೆಂಬ ಪ್ರತೀತಿಯೂ ಇದೆ. ಶ್ವೇತ ವರ್ಣ ಶುಭ್ರತೆಯ ಸಂಕೇತ. ಹಾಗಾಗಿ ವರಮಹಾಲಕ್ಷ್ಮಿಯ ವ್ರತದ ಸಂದರ್ಭದಲ್ಲಿ ಲಕ್ಷ್ಮಿಗೆ ಕೆಂಪು ಅಂಚಿನ ಬಿಳಿಯ ಸೀರೆಯನ್ನು ಉಡಿಸುವ ಪದ್ಧತಿಯೂ ಇದೆ.

ಲಕ್ಷ್ಮಿ ಎಂದರೆ ಐಶ್ವರ್ಯ, ಸಂಪತ್ತು, ಹಣ ಎಂದು ಹೇಳುವ ವಾಡಿಕೆ ಇದೆ. ಆದರೆ ಲಕ್ಷ್ಮಿ ಎಂಬುದಕ್ಕೆ ವಿಶಾಲ ಅರ್ಥವೂ ಇದೆ. ಆರೋಗ್ಯ, ನೆಮ್ಮದಿ, ಸಂತಾನ ಎಲ್ಲವೂ ಸಂಪತ್ತೇ ಆಗಿದೆ. ಲಕ್ಷ್ಮಿಯು ನಮ್ಮ ಜೀವನದ ಎಲ್ಲಾ ಕ್ಷಣಗಳಲ್ಲೂ ಹಾಗೂ ಎಲ್ಲರ ಬದುಕಿನಲ್ಲೂ ಅವಶ್ಯವಾಗಿ ಬೇಕೇ ಬೇಕು. ವರ ಮಹಾಲಕ್ಷ್ಮಿಯ ವ್ರತದ ಆಚರಣೆಯನ್ನು ಹೀಗೇ ಮಾಡಬೇಕೆಂಬ ಕಟ್ಟುಪಾಡುಗಳಿಲ್ಲ. ಅವರವರ ಭಾವಕ್ಕೆ, ಅವರವರ ಭಕುತಿಗೆ ಎಂಬಂತೆ, ಎಲ್ಲರೂ ಅವರವರ ಅನುಕೂಲಕ್ಕೆ ತಕ್ಕಂತೆ ಆಚರಿಸುತ್ತಾರೆ. ಈ ವರ ಮಹಾಲಕ್ಷ್ಮಿ ವ್ರತಕ್ಕೆ ಚಾರುಮತಿ ಎಂಬ ಮಹಿಳೆಯ ಕಥೆಯೂ ಪ್ರೇರಣೆಯಾಗಿದೆ ಎನ್ನಲಾಗುತ್ತಿದೆ.

ಚಾರುಮತಿ ಎಂಬ ಮಹಿಳೆ ಲಕ್ಷ್ಮಿ ಯ ಪರಮ ಭಕ್ತೆಯಾಗಿದ್ದಳು. ತವರಿನಲ್ಲಿ ಆಕೆ ಒಳ್ಳೆಯ ಮಗಳಾಗಿ, ಗಂಡನ ಮನೆಯಲ್ಲಿ ಅತ್ತೆ ಮಾವನಿಗೆ ಒಳ್ಳೆಯ ಸೊಸೆಯಾಗಿ, ಗಂಡನಿಗೆ ತಕ್ಕ ಹೆಂಡತಿಯಾಗಿ ಎಲ್ಲರನ್ನೂ ಅನುಸರಿಸಿಕೊಂಡು ಜೀವನ ನಡೆಸುತ್ತಿದ್ದಳು. ಆದರೆ ಆಕೆಯ ಕುಟುಂಬಕ್ಕೆ ಬಡತನದ ನೋವು ಕಾಡುತ್ತಿತ್ತು. ಹೀಗಿರುವಾಗ ಒಮ್ಮೆ ಆಕೆಯ ಶ್ರದ್ಧೆ ಮತ್ತು ಭಕ್ತಿಗೆ ಮೆಚ್ಚಿದ ಲಕ್ಷ್ಮಿದೇವಿಯು ಚಾರುಮತಿಯ ಕನಸಿನಲ್ಲಿ ಕಾಣಿಸಿಕೊಂಡು, ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ನನ್ನನ್ನು ಆರಾಧಿಸು. ಅದರಿಂದ ಅಷ್ಟ ಐಶ್ವರ್ಯಗಳು ನಿನಗೆ ಲಭಿಸುತ್ತವೆ. ಹಾಗೆಯೇ ನಿನ್ನೆಲ್ಲಾ ಕಷ್ಟಗಳು ಕೊನೆಗೊಂಡು ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಹೇಳುತ್ತಾಳೆ. ಅದರಂತೆ ಚಾರುಮತಿ ವರ ಮಹಾಲಕ್ಷ್ಮಿಯ ವ್ರತವನ್ನಾಚರಿಸಿ ಸಕಲ ಸೌಭಾಗ್ಯವನ್ನೂ ಪಡೆಯುತ್ತಾಳೆ ಎಂದು ಹೇಳಲಾಗುತ್ತದೆ. ಹೀಗಾಗಿ ವರ ಮಹಾಲಕ್ಷ್ಮಿ ವ್ರತ ವಿಶೇಷ ಎನಿಸಿಕೊಂಡಿದೆ.

ಮಂದಾಸನ ಅಥವಾ ದೇವರ ಮಂಟಪ ಇದ್ದರೆ ಲಕ್ಷ್ಮಿಯನ್ನು ಅದರಲ್ಲಿ ಕೂಡಿಸುತ್ತಾರೆ. ಇನ್ನೂ ಕೆಲವರು ಮೇಜಿನ ಮೇಲೆ ಅಥವಾ ಮಣೆಯ ಮೇಲೆ ಕೂಡಿಸುತ್ತಾರೆ. ತಾಮ್ರದ ಅಥವಾ ಬೆಳ್ಳಿಯ ಬಿಂದಿಗೆಯಲ್ಲಿ ಪರಿಶುದ್ಧವಾದ ಜಲವನ್ನು ತುಂಬಿ, ಅದಕ್ಕೆ ಖರ್ಜೂರ ಮತ್ತು ದ್ರಾಕ್ಷಿಯನ್ನು ಹಾಕುತ್ತಾರೆ. ಒಂದು ಚಿಕ್ಕ ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದನ್ನು ಬಿಂದಿಗೆಯ ಮೇಲಿಟ್ಟು, ಅದರ ಮೇಲೆ ಕಳಶವನ್ನು ಇಡುತ್ತಾರೆ. ಕಳಶದ ಸುತ್ತಲೂ ಮಾವಿನ ಎಲೆ ಮತ್ತು ವೀಳ್ಯದೆಲೆ ಯನ್ನು ಜೋಡಿಸುತ್ತಾರೆ. ಅರಿಶಿಣ ಹಚ್ಚಿದ ತೆಂಗಿನಕಾಯಿಗೆ ಬೆಳ್ಳಿಯ ಅಥವಾ ಬಂಗಾರದ ಅಥವಾ ಹಿತ್ತಾಳೆ ಲೋಹದ ಲಕ್ಷ್ಮಿದೇವಿಯ ಮುಖವನ್ನು ಹಚ್ಚುತ್ತಾರೆ. ಸೀರೆ, ಒಡವೆಗಳಿಂದ ಮತ್ತು ಹಲವು ಹೂಗಳಿಂದ ಅಲಂಕರಿಸುತ್ತಾರೆ. ಲಕ್ಷ್ಮಿಗೆ ಪ್ರಿಯವಾದ ಹೂಗಳನ್ನು ಪೂಜೆಯಲ್ಲಿ ಬಳಸುತ್ತಾರೆ. ಬಿಲ್ವ ಪತ್ರೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆಂಬ ನಂಬಿಕೆಯಿರುವುದರಿಂದ ಪೂಜೆಯಲ್ಲಿ ಬಿಲ್ವ ಪತ್ರೆಗೂ ಮಹತ್ವವುಂಟು. ಪೂಜೆಯಲ್ಲಿ
ಕಡಲೆಬೇಳೆಯ ಪಾಯಸ, ಹಾಲು ಸಕ್ಕರೆ, ಹೋಳಿಗೆ, ಕೋಸಂಬರಿ ವಿವಿಧ ಫಲಗಳನ್ನು ಲಕ್ಷ್ಮಿದೇವಿಯ ನೈವೇದ್ಯಕ್ಕೆ ಅರ್ಪಿಸುತ್ತಾರೆ. ಪರಿಚಯದವರನ್ನು ಮನೆಗೆ ಕರೆದು ಫಲ ತಾಂಬೂಲಾದಿಗಳನ್ನು ಮತ್ತು ಬಾಗಿನವನ್ನೂ ಕೊಡುವ ವಾಡಿಕೆಯೂ ಇದೆ. ಎಲ್ಲವೂ ಅವರವರ ಅನುಕೂಲಕ್ಕೆ ಬಿಟ್ಟದ್ದು. ಇತ್ತೀಚಿನ ದಿನಗಳಲ್ಲಿ ವರ ಮಹಾಲಕ್ಷ್ಮಿಯ ದಿನದಂದು ಅನೇಕ ಕಡೆ ಸಾಮೂಹಿಕ ವಿವಾಹಗಳೂ ಜರುಗುತ್ತಿವೆ. ಆದರೆ ಈ ವರ್ಷ ಕೊರೋನಾ ವೈರಸ್ ಹಾವಳಿಯಿಂದಾಗಿ ಹಬ್ಬದ ಸಡಗರವೆಲ್ಲಾ ಮಾಯವಾಗಿದೆ. ದಿನೇದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜನರ ಮಾನಸಿಕ ಆರೋಗ್ಯದಲ್ಲಿಯೂ ಏರುಪೇರಾಗಿದೆ. ಅದ್ದರಿಂದ ಭಕ್ತಿಯಿಂದ ಲಕ್ಷ್ಮಿಯನ್ನು ಪ್ರಾರ್ಥಿಸುವುದರ ಮೂಲಕ ಎಲ್ಲರಿಗೂ ಆರೋಗ್ಯ ಸಂಪತ್ತು ಸಿಗುವಂತಾಗಲಿ ಎಂದು ಬಯಸೋಣವೇ?

ವಿನೋದಾ ಕರಣಂ. ಬಳ್ಳಾರಿ

LEAVE A REPLY

Please enter your comment!
Please enter your name here