ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಸೂಚನೆ ಕೋವಿಡ್ 2ನೇ ಅಲೆ ಭೀತಿ: ಜಿಲ್ಲೆಗೆ ಅಪ್ಪಳಿಸದಂತೆ ಸಕಲ ಕ್ರಮಕೈಗೊಳ್ಳಿ

0
141

ಬಳ್ಳಾರಿ,ಫೆ.23 : ಕೋವಿಡ್ 2ನೇ ಅಲೆ ಭೀತಿ ಕೇರಳ,ಮಹಾರಾಷ್ಟ್ರ ಸೇರಿದಂತೆ ಬಹುತೇಕ ಕಡೆ ಮತ್ತೇ ಸ್ಪೋಟಗೊಂಡಿದ್ದು, ಬಳ್ಳಾರಿ ಜಿಲ್ಲೆಗೆ ಇದನ್ನು ಅಪ್ಪಳಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾಡಳಿತ ಸಕಲ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಸೂಚನೆ ನೀಡಿದ್ದಾರೆ.

ನಗರದ ಜಿಪಂ ನಜೀರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಅಲೆ ನಮ್ಮ ಜಿಲ್ಲೆಗೆ ಅಪ್ಪಳಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೂಡಲೇ ಕೊರೊನಾ ಸೊಂಕು ಹೆಚ್ಚಳ ತಡೆಗೆ ಸರಕಾರ ಹೊರಡಿಸಿದ ಆದೇಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಇದನ್ನು ಎದುರಿಸುವ ನಿಟ್ಟಿನಲ್ಲಿ ಸಕಲ ಸಿದ್ಧತಾಕ್ರಮಗಳನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಕೈಗೆತ್ತಿಕೊಳ್ಳಬೇಕು ಎಂದು ಸೂಚನೆ ನೀಡಿದ ಅವರು ಹೋಟಲ್,ರೆಸ್ಟೋರೆಂಟ್,ದಾಬಾಗಳ ಮಾಲೀಕರೊಂದಿಗೆ ಸಭೆ ನಡೆಸಿ ಆದೇಶಗಳನ್ನು ಪಾಲಿಸಲು ತಿಳಿಸಬೇಕು;15ದಿನಗಳಿಗೊಮ್ಮೆ ಭೇಟಿ ನೀಡಿ ತಪಾಸಣೆ ನಡೆಸಬೇಕು ಎಂದರು.

ಜಿಲ್ಲೆಯ 11 ತಾಲೂಕುಗಳ ತಹಸೀಲ್ದಾರರು,ಸಹಾಯಕ ಆಯುಕ್ತರು ಕೂಡ 2ನೇ ಅಲೆಯ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ ಸಚಿವ ಆನಂದಸಿಂಗ್ ಅವರು ಜನರು ದಯವಿಟ್ಟು ಮಾಸ್ಕ್ ಧರಿಸುವಿಕೆ,ಸಾಮಾಜಿಕ ಅಂತರ ಕಾಪಾಡುವಿಕೆ ಮತ್ತು ಸ್ಯಾನಿಟೈಸರ್‍ಗಳಿಂದ ಕೈಗಳ ಸ್ವಚ್ಛಗೊಳಿಸುವಿಕೆಯನ್ನು ಮಾಡುವಂತೆ ಮನವಿ ಮಾಡಿಕೊಂಡರು;ಯಾವುದೇ ಕಾರಣಕ್ಕೂ ನಿಷ್ಕಾಳಜಿ ತೋರಬೇಡಿ ಎಂದರು.
ಕೊರೊನಾ ಬರುವುದಕ್ಕಿಂತ ಮುಂಚೆ ಮೊದಲಿನಂತೇ ಹೇಗೆ ಇದ್ದೇವೋ ಈಗ ಮತ್ತೇ ಮೊದಲಿನಂತೆಯೇ ಎಲ್ಲೆಡೆ ಇರಲು ಆರಂಭಿಸಿದೇವೆ; ಕೋವಿಡ್ ಮಾರ್ಗಸೂಚಿಗಳನ್ನು ಜನರು ಪಾಲಿಸುತ್ತಿಲ್ಲ ಎಂಬ ಬೇಸರವನ್ನು ಹೊರಹಾಕಿದರು.
ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಮಾತನಾಡಿ, ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ಪಡೆದುಕೊಂಡಿದ್ದು, 2ನೇ ಅಲೆ ಎದುರಿಸಲು ಅವರು ಸಜ್ಜಾಗಿದ್ದಾರೆ ಎಂದರು.
ಕೋವಿಡ್ ಅಲೆ ಸೊಂಕು ಹೆಚ್ಚಳ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಸಿದ್ಧತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದು ಅವರು ವಿವರಿಸಿದರು.
ಕೋವಿಡ್ 2ನೇ ಅಲೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಿದ್ಧತಾ ಕ್ರಮಕೈಗೊಳ್ಳಲಾಗುವುದು ಎಂದರು.
ಇನ್ನೂ ಕೆಲದಿನಗಳಲ್ಲಿ ಬೇಸಿಗೆ ಶುರು ಆಗಲಿದ್ದು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಆನಂದಸಿಂಗ್ ಅವರು ನೀರಿನ ಶುದ್ಧೀಕರಣ ಘಟಕಗಳ ಮಾಹಿತಿಯನ್ನು ಈ ಸಂದರ್ಭದಲ್ಲಿ ಪಡೆದುಕೊಂಡರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ 100ದಿನಗಳ ಕ್ರಿಯಾಯೋಜನೆ:

ಜಿಲ್ಲೆಯಲ್ಲಿ ನಾನಾ ಕಾರಣಗಳಿಂದ ಶಾಲೆ ತೊರೆದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ನಿಟ್ಟಿನಲ್ಲಿ ವಿಶೇಷ ಅಭಿಯಾನ ಕೈಗೆತ್ತಿಕೊಳ್ಳಲಾಗಿದ್ದು,ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸಭೆಗೆ ವಿವರಿಸಿದರು.ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ 100 ದಿನಗಳ ಕ್ರಿಯಾಯೋಜನೆ ರೂಪಿಸಲಾಗಿದೆ.ಈಗಾಗಲೇ ಮುಖ್ಯಗುರುಗಳ ಸಭೆ ನಡೆಸಲಾಗಿದ್ದು, 10 ದಿನಗಳಲ್ಲಿಯೇ ಶೇ.81ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ. ನಿನ್ನೆಯಿಂದ 6ರಿಂದ 8ನೇ ತರಗತಿ ಶಾಲೆಗಳು ಆರಂಭವಾಗಿದ್ದು,ಎಸ್‍ಒಪಿ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಡಿಡಿಪಿಐ ರಾಮಪ್ಪ ಅವರು ಸಭೆಗೆ ತಿಳಿಸಿದರು.

ಸಮಸ್ಯೆಗಳು ಗಮನಕ್ಕೆ ತನ್ನಿ:

ಅಧಿಕಾರಿಗಳು ಸಭೆಗೆ ಬಂದು ಮೂಕಪ್ರೇಕ್ಷರಾಗಿ ಕುಳಿತುಕೊಳ್ಳದೇ ಜಿಲ್ಲೆಯ ಸಮಸ್ಯೆಗಳು ಗಮನಕ್ಕೆ ತನ್ನಿ;ಅವುಗಳನ್ನು ಬಗೆಹರಿಸುವುದಕ್ಕೆ ಸಹಕಾರ ಕೋರಿ;ಬಗೆಹರಿಸಲು ಪ್ರಯತ್ನಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಬಳ್ಳಾರಿ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಅನುಷ್ಠಾನವಾಗುತ್ತಿದ್ದು, ಕಳೆದ 5 ತಿಂಗಳಿಂದ ನಮ್ಮ ಜಿಲ್ಲೆಯು ರಾಜ್ಯದಲ್ಲಿ ಪ್ರಥಮಸ್ಥಾನದಲ್ಲಿ ಮುಂದುವರಿದಿದೆ. ಮಣ್ಣು ಮತ್ತು ನೀರಿನ ಸಂರಕ್ಷಣೆ,ಅಂತರ್ಜಲಮಟ್ಟ ಹೆಚ್ಚಿಸುವ ಕಾಮಗಾರಿಗಳನ್ನು ವಿಶೇಷ ಆದ್ಯತೆ ಮೇರೆಗೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ವರ್ಷ ನರೇಗಾ ಅಡಿ 24 ಸಾವಿರ ಕಾಮಗಾರಿಗಳನ್ನು ಮಾಡಲಾಗಿದೆ. 667.09 ಲಕ್ಷ ಲೀಟರ್ ನೀರು ಸಂಗ್ರಹಿಸಲಾಗಿದೆ. 7,611.99 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸಭೆಗೆ ವಿವರಿಸಿದರು.
18872 ಬಚ್ಚಲು ಗುಂಡಿಗಳ ನಿರ್ಮಾಣ: ಬಚ್ಚಲು ಗುಂಡಿ ಅಭಿಯಾನವನ್ನು ಜಿಲ್ಲೆಯ 11 ತಾಲೂಕಿನ 22 ಗ್ರಾಪಂಗಳ 86 ಗ್ರಾಮಗಳಲ್ಲಿ ದ್ರವತ್ಯಾಜ್ಯ ಮುಕ್ತ ಮಾಡಲು ಉದ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 18872 ಬಚ್ಚಲು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ವಿವರಿಸಿದರು.
ಈಗಾಗಲೇ 12 ಗ್ರಾಮಗಳಲ್ಲಿ ಶೇ.100ರಷ್ಟು ಬಚ್ಚಲು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಮಾರ್ಚ್ ಅಂತ್ಯದೊಳಗೆ 86 ಗ್ರಾಮಗಳನ್ನು ಶೇ.100 ರಷ್ಟು ಬಚ್ಚಲುಗುಂಡಿಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಸಚಿವರಿಗೆ ವಿವರಿಸಿದರು.
ಅಂತರ್ಜಲ ಪುನಶ್ಚೇತನ ಯೋಜನೆ ಅಡಿ ಪ್ರತಿ ತಾಲೂಕಿಗೆ ಕನಿಷ್ಠ 1ನಾಲಾ ಪುನಶ್ಚೇತನ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದ ಅವರು ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಗ್ರಾಮೀಣ ಪ್ರದೇಶದಲ್ಲಿರುವ ಹಳೆ ಕಾಲದ ಕಲ್ಯಾಣಿಗಳನ್ನು ನರೇಗಾ ಯೋಜನೆ ಅಡಿ ಜೀರ್ಣೋದ್ಧಾರಗೊಳಿಸಲು ತೀರ್ಮಾನಿಸಲಾಗಿದ್ದು,ಮೊದಲ ಹಂತದಲ್ಲಿ 45 ದಿನಗಳಲ್ಲಿ 45 ಕಲ್ಯಾಣಿ ಕಾಮಗಾರಿಗಳನ್ನು ಪ್ರತಿ ತಾಲೂಕಿಗೆ 4 ಕಲ್ಯಾಣಿಗಳನ್ನು ಕೈಗೆತ್ತಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ನರೇಗಾ ಯೋಜನೆ ಅಡಿ ದುರ್ಬಲ ಮತ್ತು ಮಹಿಳೆಯರ ಪಾಲ್ಗೊಳ್ಳಿವಿಕೆ ಹೆಚ್ಚಿಸುವಿಕೆ ನಿಟ್ಟಿನಲ್ಲಿ ಮಹಿಳಾ ಕಾಯಕೋತ್ಸವ ಅಭಿಯಾನ ನಡೆಸಲಾಗಿದೆ ಎಂದರು.

14ನೇ ಹಣಕಾಸು ಯೋಜನೆ ಅಡಿ ಉಪಯೋಗವಾಗದ ಹಣದಲ್ಲಿ ವಿಶೇಷ ಕಾಮಗಾರಿಗಳ ಅನುಷ್ಠಾನ:

ಬಳ್ಳಾರಿ ಜಿಪಂಗೆ 14ನೇ ಹಣಕಾಸು ಯೋಜನೆ ಅಡಿ ಉಪಯೋಗವಾಗದ ಹಣದಲ್ಲಿ ಮತ್ತು ಬಡ್ಡಿ ಮತ್ತು ಇತರೇ ಅನುದಾನದಲ್ಲಿ ವಿಶೇಷ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ತಿಳಿಸಿದರು.
ಇದರಡಿ ಗ್ರಂಥಾಲಯ,ಅಂಗನವಾಡಿ,ಶಾಲೆಗಳ ಉನ್ನತೀಕರಣ,ತಾಪಂ ಕಚೇರಿಯಲ್ಲಿ ಸಖಿ ಕೊಠಡಿಗಳ ಸ್ಥಾಪನೆಯಂತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಗ್ರಾಪಂ ನಡೆ ಮಹಿಳಾ ಮತ್ತು ಮಕ್ಕಳ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ವಿವಿಧ ವಿಷಯಗಳ ಕುರಿತು ಸುಧೀರ್ಘ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ,ತುಕಾರಾಂ, ಸೋಮಲಿಂಗಪ್ಪ, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ,ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಪ್ರೋಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಸಂಕನೂರು ಸೇರಿದಂತೆ ಅನೇಕರು ಇದ್ದರು.

LEAVE A REPLY

Please enter your comment!
Please enter your name here