ಬಜೆಟ್ ಬಂಧಿಯಾಗಲಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ

0
178

ಮುಖ್ಯಮಂತ್ರಿ ಯಡಿಯೂರಪ್ಪ ಈಗ ಬಜೆಟ್ ಬಂಧಿಯಾಗಲು ತಯಾರಾಗಿದ್ದಾರೆ.
ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ತತ್ತರಿಸಿದ ರಾಜ್ಯವನ್ನು ಮುನ್ನಡೆಸಲು ಅಗತ್ಯವಾದ ವಾರ್ಷಿಕ ಬಜೆಟ್ ಅನ್ನು ರೂಪಿಸಲು ಹೊರಟಿರುವ ಅವರಿಗೆ ಈಗಾಗಲೇ ತಾವು ಬಜೆಟ್ ಬಂಧಿಯಾಗಲಿರುವುದು ನಿಕ್ಕಿಯಾಗಿದೆ.
ಯಾಕೆಂದರೆ 2020-21 ನೇ ಸಾಲಿನ ಬಜೆಟ್ ಅನ್ನು ಅನುಷ್ಟಾನಗೊಳಿಸುವ ವಿಷಯದಲ್ಲಿ ಅವರು ವಿಫಲರಾಗಿದ್ದಾರೆ.ಇಲ್ಲ,ಇಲ್ಲ,ಬಜೆಟ್ ಭರವಸೆಗಳ ಪೈಕಿ ಶೇಕಡಾ ಎಂಭತ್ತೈದರಷ್ಟನ್ನು ಮಾರ್ಚ್ ಅಂತ್ಯದೊಳಗೆ ಈಡೇರಿಸುತ್ತೇನೆ ಎಂದು ಅವರು ಹೇಳುತ್ತಿದ್ದರೂ ಅದನ್ನು ನಂಬಲು ಸಾಕ್ಷಿಗಳೇ ಇಲ್ಲ.
ಇದಕ್ಕೆ ಕೊರೋನಾ ಎಫೆಕ್ಟ್ ಕಾರಣ ಎಂಬುದು ನಿಜವಾದರೂ,ಜನರ ನಿರೀಕ್ಷೆಗಳು ಇಂತಹ ಕಾರಣಗಳ ಮೇಲೆ ನಿಂತಿರುವುದಿಲ್ಲ.ಹೀಗಾಗಿ ಮುಂದಿನ ಸಾಲಿನ ಬಜೆಟ್ ತಯಾರಿಯಲ್ಲಿರುವ ಯಡಿಯೂರಪ್ಪ ತಮಗೆ ಲಭ್ಯವಾಗಲಿರುವ ಗ್ಲೂಕೋಸ್ (ಹಣದ) ಪ್ರಮಾಣವನ್ನು ನೋಡಿಯೇ ಸುಸ್ತಾಗಿದ್ದಾರೆ.
ಅಂದ ಹಾಗೆ ಕಳೆದ ವರ್ಷ 2.31 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ,ಅದನ್ನು ಸರಿದೂಗಿಸಲು ಐವತ್ತೆರಡು ಸಾವಿರ ಕೋಟಿ ರೂಪಾಯಿಗಳ ಸಾಲ ಪಡೆಯುವುದಾಗಿ ಘೋಷಿಸಿದ್ದರು.
ಆದರೆ ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದಾಯ ಮಾತ್ರವಲ್ಲ,ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಡಿ ಬರಬೇಕಾದ ನಲವತ್ತೈದು ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಖೋತಾ ಆಯಿತು.
ಅದು ಜಿ.ಎಸ್.ಟಿ.ಪಾಲೇ ಇರಬಹುದು,ಹದಿನೈದನೇ ಹಣಕಾಸು ಆಯೋಗ ನಿಗದಿ ಪಡಿಸಿದ ಹಣವೇ ಇರಬಹುದು,ವಿವಿಧ ಯೋಜನೆಗಳಿಗೆ ದಕ್ಕುವ ಅನುದಾನವೇ ಇರಬಹುದು.ಒಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಬರಬೇಕಾದ ಸುಮಾರು ನಲವತ್ತೈದು ಸಾವಿರ ಕೋಟಿ ರೂಪಾಯಿಗಳಷ್ಟು ಹಣ ರಾಜ್ಯಕ್ಕೆ ಬರಲಿಲ್ಲ.
ಹೀಗಾಗಿ ಬಜೆಟ್ ನಲ್ಲಿ ಹೇಳಿದ ಕಾರ್ಯಕ್ರಮಗಳಿಗೆ ಮತ್ತಿತರ ಯೋಜನೇತರ ಬಾಬ್ತಿಗೆ ಹಣ ಹೊಂದಿಸಲು ಹೆಚ್ಚುವರಿಯಾಗಿ ಮೂವತ್ತಾರು ಸಾವಿರ ಕೋಟಿ ರೂಪಾಯಿಗಷ್ಟು ಸಾಲ ಪಡೆಯುವುದು ರಾಜ್ಯಕ್ಕೆ ಅನಿವಾರ್ಯವಾಯಿತು.
ಈ ಸಾಲ ಬಜೆಟ್ ಗಾತ್ರವನ್ನು ಸರಿದೂಗಿಸುತ್ತದೆ ಅಂತಲ್ಲ,ಬಜೆಟ್ ಮೂಲಕ ಕೆಲವು ಬಾಬ್ತುಗಳಿಗೆ ಅನಿವಾರ್ಯವಾಗಿ ಒದಗಿಸಬೇಕಾದ ಹಣ ಇದು.ಆದರೆ ಈ ಪ್ರಮಾಣದ ಸಾಲ ಪಡೆಯಲು ಹಲವು ಪ್ರಮುಖ ಷರತ್ತುಗಳನ್ನು ರಾಜ್ಯ ಸರ್ಕಾರ ಒಪ್ಪಬೇಕಿತ್ತು.ಮತ್ತು ಮೂರು ಷರತ್ತುಗಳಿಗೆ ಒಪ್ಪಿಗೆ ನೀಡಿದೆ ಕೂಡಾ.
ಈ ಷರತ್ತುಗಳಾದರೂ ಹೇಗಿವೆ ಎಂದರೆ ಮುಂದಿನ ದಿನಗಳಲ್ಲಿ ಅವು ಜನರ ತಲೆಯ ಮೇಲೆ ಹೊಸ ಭಾರಗಳನ್ನು ಹೊರಿಸಲಿವೆ.ಇದರನುಸಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವುದು ಮತ್ತಿತರ ವಿಷಯಗಳು ಸೇರಿವೆ.
ಅಂದ ಹಾಗೆ ಇತ್ತೀಚೆಗೆ ನಡೆದ ವಿಧಾನಮಂಡಲ ಕಲಾಪದ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಪೂರಕವಾಗಿ ಸರ್ಕಾರ ಕಾಯ್ದೆ ರೂಪಿಸಿದೆ.ಹಾಗೆಯೇ ಸ್ಥಳೀಯ ಸಂಸ್ಥೆಗಳಿಂದ ಪಡೆಯುವ ಹಲ ಸೌಲಭ್ಯಗಳಿಗೂ ಹೆಚ್ಚು ಹಣವನ್ನು ಜನ ತೆರಬೇಕಾಗುತ್ತದೆ.
ಈ ಮಧ್ಯೆ ಗಮನಿಸಬೇಕಾದ ಸಂಗತಿ ಎಂದರೆ ಆರ್ಥಿಕ ಸಮೀಕ್ಷೆಯೊಂದು:ಪಡಿತರ ಪದ್ಧತಿಯಿಡಿ ಒದಗಿಸುವ ಆಹಾರ ಧಾನ್ಯಗಳ ಬೆಲೆಯನ್ನು ಹೆಚ್ಚಳ ಮಾಡಬೇಕು ಎಂದು ಶಿಫಾರಸು ಮಾಡಿರುವುದು.ಇದು ಕೂಡಾ ಸಧ್ಯದಲ್ಲೇ ಜನ ಸಾಮಾನ್ಯರ ನೆತ್ತಿಯ ಮೇಲೆ ಭಾರ ಕೂರಿಸಲಿದೆ.
ಇನ್ನು ರೈತರ ಪಂಪ್ ಸೆಟ್ ಗಳಿಗೆ ಒದಗಿಸುವ ಉಚಿತ ವಿದ್ಯುತ್ ವಿಷಯವನ್ನೇ ತೆಗೆದುಕೊಳ್ಳಿ.ಹೀಗೆ ಒದಗಿಸುವ ಉಚಿತ ವಿದ್ಯುತ್ ಪ್ರಮಾಣವನ್ನು ಅಳೆಯಲು ರೈತರು ಮೀಟರ್ ಬೋರ್ಡ್ ಅಳವಡಿಕೆ ಮಾಡಿಕೊಳ್ಳಬೇಕು.ಆನಂತರ ಎಷ್ಟು ವಿದ್ಯುತ್ ಅನ್ನು ಅವರು ಪಡೆಯುತ್ತಿದ್ದಾ ಎಂಬುದನ್ನು ಗಮನಿಸಿ ರೈತರ ಬ್ಯಾಂಕ್ ಖಾತೆಗಳಿಗೇ ಆ ಹಣವನ್ನು ಜಮಾ ಮಾಡಬೇಕು ಎಂಬ ಕರಾರು ರಾಜ್ಯ ಸರ್ಕಾರದ ಮುಂದಿದೆ.
ಇದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ ಎಂಬುದು ಬೇರೆ ಮಾತು.ಆದರೆ ಉಚಿತ ವಿದ್ಯುತ್ ಮೂಲಕ ಆಗುತ್ತಿರುವ ಹೊರೆಯನ್ನು ಹೊರಲು ನಿಮ್ಮ ಕೈಲಿ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಕ್ಕೆ ಪರೋಕ್ಷ ಸಂದೇಶ ನೀಡಿರುವುದಂತೂ ನಿಜ.
ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರ ತನ್ನ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೆಜ್ಜೆ ಇಡಬೇಕಾಗುತ್ತದೆ.ಮತ್ತು ರೈತರು ಪಡೆಯುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಹಿಂಪಡೆಯುವ ಕಟು ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂಬುದು ಈ ಸಂದೇಶದ ಮುಂದುವರಿದ ಭಾಗ.
ಇಂತಹ ಪರಿಸ್ಥಿತಿಯ ನಡುವೆಯೇ ಯಡಿಯೂರಪ್ಪ 2021-22 ನೇ ಸಾಲಿನ ಬಜೆಟ್ ಮಂಡನೆಗೆ ತಯಾರಾಗುತ್ತಿದ್ದಾರೆ.ಆದರೆ ಬಜೆಟ್ ಗೆ ಎಲ್ಲೆಲ್ಲಿಂದ ಹಣ ಹೊಂದಿಸಬೇಕು ಎಂಬುದೇ ಯಡಿಯೂರಪ್ಪ ಅವರ ಮುಂದಿರುವ ದೊಡ್ಡ ಸವಾಲು.
ಮೊದಲನೆಯದಾಗಿ ಕೊರೋನಾ ಸಂಕಷ್ಟದಿಂದಾಗಿ ರಾಜ್ಯ ಸರ್ಕಾರದ ಸ್ವಂತ ಆದಾಯ ಗಣನೀಯವಾಗಿ ಕುಗ್ಗಲಿದೆ.ಎರಡನೆಯದಾಗಿ ಕೇಂದ್ರ ಸರ್ಕಾರ ಕೂಡಾ ದೊಡ್ಡ ಮಟ್ಟದಲ್ಲಿ ರಾಜ್ಯದ ನೆರವಿಗೆ ಬರುವ ಲಕ್ಷಣಗಳು ಕಡಿಮೆ.
ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ತನ್ನ ಗಮನವನ್ನು ಸಾಲದ ಮೇಲೇ ಕೇಂದ್ರೀಕರಿಸಬೇಕು.ಈಗಾಗಲೇ ಸರ್ಕಾರ ಮಾಡಿರುವ ಸಾಲದ ಪ್ರಮಾಣ ನಾಲ್ಕು ಲಕ್ಷ ಕೋಟಿ ರೂಪಾಯಿಗಳ ಆಸುಪಾಸಿನಲ್ಲಿದೆ.ಹೀಗಿರುವಾಗ ಮುಂದಿನ ಬಜೆಟ್ ಗಾತ್ರವನ್ನು ಸರಿದೂಗಿಸಲು ಮಾಡುವ ಸಾಲದ ಪ್ರಮಾಣ ರಾಜ್ಯದ ಸಾಲದ ಗಾತ್ರ ಐದು ಲಕ್ಷ ಕೋಟಿ ರೂಪಾಯಿಗಳ ಸನಿಹಕ್ಕೆ ಹೋಗುವಂತೆ ಮಾಡುತ್ತದೆ.
ಅಂದ ಹಾಗೆ ರಾಜ್ಯ ಸರ್ಕಾರ ತಾನು ಮಾಡಿರುವ ಸಾಲದ ಮೇಲಿನ ಅಸಲು,ಬಡ್ಡಿ,ಚಕ್ರ ಬಡ್ಡಿಯ ಬಾಬ್ತಿಗೆ ದೊಡ್ಡ ಪ್ರಮಾಣದ ಹಣ ಇಡಬೇಕು.ಹಾಗೆಯೇ ಆಡಳಿತ ಯಂತ್ರ ನಡೆಸಲು ಪೂರಕವಾಗಿ ಸರ್ಕಾರಿ ನೌಕರರಿಗೆ ವೇತನ ಒದಗಿಸಬೇಕು.
ಇಂತಹ ಬಾಬ್ತುಗಳಿಗೆ ಒದಗಿಸುವ ಹಣದ ಪ್ರಮಾಣ ಹೆಚ್ಚಾದರೆ ಸಹಜವಾಗಿಯೇ ಯೋಜನೇತರ ಬಾಬ್ತಿಗೆ ಹೆಚ್ಚುಹಣ ಒದಗಿಸಬೇಕಾಗುತ್ತದೆ.ಅಂದ ಹಾಗೆ ಒಂದು ಬಜೆಟ್ ನಲ್ಲಿರುವ ಯೋಜನೆ ಮತ್ತು ಯೋಜನೇತರ ಬಾಬ್ತುಗಳ ಪೈಕಿ ಯೋಜನಾ ಬಾಬ್ತುಗಳಿಗೆ ಹೆಚ್ಚು ಹಣ ನೀಡುವುದು ಆರ್ಥಿಕತೆಗೆ ಒಳ್ಳೆಯದು.
ಅರ್ಥಶಾಸ್ತ್ರಜ್ಞರ ಪ್ರಕಾರ:ಒಂದು ಬಜೆಟ್ ‍ನಲ್ಲಿ ಯೋಜನೇತರ ಬಾಬ್ತಿಗಿಂತಲೂ ಯೋಜನೆಯ ಬಾಬ್ತುಗಳಿಗೆ ಹೆಚ್ಚು ಹಣ ನೀಡುವ ಪರಿಸ್ಥಿತಿಯಿದ್ದರೆ ಅದು ಅತ್ಯುತ್ತಮ ಬಜೆಟ್.ಆದರೆ ಇವತ್ತಿನ ಸ್ಥಿತಿಯಲ್ಲಿ ಯೋಜನೇತರ ಬಾಬ್ತುಗಳಿಗಿಂತ ಯೋಜನೆಯ ಬಾಬ್ತುಗಳಿಗೆ ಹೆಚ್ಚಿನ ಹಣ ಕೊಡುವುದು ಕನಸಿನ ಮಾತು.
ಆದರೆ ಬಜೆಟ್ ಗಾತ್ರದ ಪೈಕಿ ಶೇಕಡಾ ಐವತ್ತರಷ್ಟನ್ನಾದರೂ ಯೋಜನೆಯ ಬಾಬ್ತಿಗೆ ನೀಡಿದರೆ ಒಳ್ಳೆಯದು.ಆದರೆ ದಿನ ಕಳೆದಂತೆ ಯೋಜನೆಯ ಬಾಬ್ತಿಗೆ ನೀಡುತ್ತಿರುವ ಹಣಕ್ಕಿಂತ ಹೆಚ್ಚಾಗಿ ಯೋಜನೇತರ ಬಾಬ್ತಿಗೆ ಹೆಚ್ಚು ಹಣ ನೀಡುವುದು ಅನಿವಾರ್ಯವಾಗಿ ಬಿಟ್ಟಿದೆ.
ಅಂದ ಹಾಗೆ ಯೋಜನೆಯ ಬಾಬ್ತು ಎಂದರೆ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಬಾಬ್ತು.ಆದರೆ ಅಭಿವೃದ್ಧಿಗೆ ಹೆಚ್ಚಿನ ಹಣ ಕೊಡಲಾಗದ ಸ್ಥಿತಿ ಯಾವುದೇ ಆರ್ಥಿಕತೆಗೆ ಒಳ್ಳೆಯದಲ್ಲ.ಇಂತಹ ಆತಂಕವನ್ನುಮುಂದಿಟ್ಟುಕೊಂಡೇ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ನೂತನ ಬಜೆಟ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಗಮನಿಸಬೇಕಾದ ಸಂಗತಿ ಎಂದರೆ ಈ ಬಾರಿ ತಮಗೆ ಹೆಚ್ಚು ಹಣ ಒದಗಿಸಬೇಕು ಎಂದು ರಾಜ್ಯ ಸರ್ಕಾರದ ಬಹುತೇಕ ಇಲಾಖೆಗೆಳು ಮುಖ್ಯಮಂತ್ರಿಗಳ ಮುಂದೆ ಮನವಿ ಸಲ್ಲಿಸಿವೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದೇ ತನಗೆ ಹೆಚ್ಚುವರಿಯಾಗಿ ಐನೂರು ಕೋಟಿ ರೂಗಿಂತ ಹೆಚ್ಚು ಹಣ ಬೇಕು ಎಂದು ಹೇಳಿದೆ.
ಆದರೆ ಎಲ್ಲ ಇಲಾಖೆಗಳಿಗೆ ಹೆಚ್ಚುವರಿಯಾಗಿ ಹಣ ಒದಗಿಸುವುದಿರಲಿ,ಕಳೆದ ವರ್ಷ ನಿಗದಿ ಮಾಡಿದ ಪ್ರಮಾಣದಷ್ಟು ಹಣ ಒದಗಿಸುವುದೂ ಯಡಿಯೂರಪ್ಪ ಅವರಿಗೆ ಕಷ್ಟವಾಗಲಿದೆ.ವಸ್ತುಸ್ಥಿತಿ ಎಂದರೆ 2020-21 ನೇ ಸಾಲಿನ ಬಜೆಟ್ ನಲ್ಲಿ ಇಲಾಖೆಗಳಿಗೆ ನೀಡಿದ್ದ ಹಣದ ಪೈಕಿ ಶೇಕಡಾ ಇಪ್ಪತ್ತರಿಂದ ಇಪ್ಪತ್ತೈದರಷ್ಟು ಪ್ರಮಾಣದ ಹಣವನ್ನು ಕಡಿತ ಮಾಡಲಾಗಿದೆ.
ಕೆ.ಎಸ್.ಈಶ್ವರಪ್ಪ ಅವರು ನೋಡಿಕೊಳ್ಳುವ ಗ್ರಾಮೀಣಾಭಿವೃದ್ಧಿ ಖಾತೆಗೆ ನಿಗದಿ ಮಾಡಲಾಗಿದ್ದ ಹಣದ ಪೈಕಿ ಎಂಟುನೂರು ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಇದುವರೆಗೆ ಬಿಡುಗಡೆ ಮಾಡಲಾಗಿಲ್ಲ
ಇದರ ಪರಿಣಾಮವೇನಾಗಿದೆ ಎಂದರೆ ಸಚಿವ ಕೆ.ಎಸ್.ಈಶ್ವರಪ್ಪ ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಖಕ್ಕೆ ಮುಖ ಕೊಟ್ಟು ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ.
ಇದು ಕೇವಲ ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರ ನಡುವೆ ಸೃಷ್ಟಿಯಾಗಿರುವ ಪರಿಸ್ಥಿತಿಯಲ್ಲ.ಹಲ ಸಚಿವರು ಇದೇ ರೀತಿ ತಮ್ಮ ಖಾತೆಗೆ ನಿಗದಿತ ಹಣ ಬಿಡುಗಡೆ ಮಾಡದ ಮುಖ್ಯಮಂತ್ರಿಗಳ ವಿರುದ್ಧ ಮುನಿಸಿಕೊಂಡಿದ್ದಾರೆ.
ಇಂತವರ ಸಮಾನ ನೋವು ಎಂದರೆ ಕೆಲವೇ ಖಾತೆಗಳಿಗೆ ಮುಖ್ಯಮಂತ್ರಿಗಳು ಗಣನೀಯ ಪ್ರಮಾಣದ ಹಣ ಬಿಡುಗಡೆ ಮಾಡುತ್ತಿದ್ದಾರೆ.ಆದರೆ ತಮ್ಮ ಇಲಾಖೆಯನ್ನು ನಿರ್ಲಕ್ಷಿಸಿದ್ದಾರೆ ಎಂಬುದು.
ಆದರೆ ಪರಿಸ್ಥಿತಿ ಅಷ್ಟು ಸರಳವಾಗಿಲ್ಲ.ಒಂದು ಅಂದಾಜಿನ ಪ್ರಕಾರ:2020-21 ನೇ ಸಾಲಿನ ಬಜೆಟ್ ಗೆ ಎಷ್ಟುಪ್ರಮಾಣದ ಹಣ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತೋ?ಅದರಲ್ಲಿ ಕನಿಷ್ಟ ಎಂಭತ್ತು ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಬಂದಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಯಾವ ಇಲಾಖೆಯನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಯಡಿಯೂರಪ್ಪ ನಡೆದುಕೊಳ್ಳುತ್ತಿದ್ದಾರೆ.ಆದರೆ ಅವರ ಸಂಪುಟ ಸಹೋದ್ಯೋಗಿಗಳಿಗೇ ಇದರ ಬಗ್ಗೆ ಸಮಾಧಾನವಿಲ್ಲ.
ಈ ಮಧ್ಯೆ ಲೋಕೋಪಯೋಗಿ,ಜಲಸಂಪನ್ಮೂಲ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಗುತ್ತಿಗೆದಾರರಿಗೆ ನೀಡಬೇಕಾದ ಹಲವು ಸಹಸ್ರ ಕೋಟಿ ರೂಗಳಷ್ಟು ಹಣವನ್ನು ಇದುವರೆಗೆ ಕೊಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಅಂದರೆ?2021-22 ರ ಸಾಲಿನ ಬಜೆಟ್ ನಲ್ಲಿ ಲಭ್ಯವಾಗುವ ಹಣದಿಂದ ಯಥಾ ಪ್ರಕಾರ ಎಲ್ಲ ಇಲಾಖೆಗಳ ಬೇಡಿಕೆಯನ್ನು ಈಡೇರಿಸುವ ಸ್ಥಿತಿಯಲ್ಲಿ ಯಡಿಯೂರಪ್ಪ ಇರುವುದಿಲ್ಲ.ಇಂತಹ ಸ್ಥಿತಿಯಲ್ಲಿ ಜನಸಾಮಾನ್ಯರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಲು ಅವರ ಬಜೆಟ್ ಗೆ ಸಾಧ್ಯವೂ ಇಲ್ಲ.
ಈಗಾಗಲೇ ಹೆಚ್ಚುತ್ತಿರುವ ಜೀವನಾವಶ್ಯಕ ವಸ್ತುಗಳ ಬೆಲೆಯಿಂದ ಕಂಗಾಲಾಗಿರುವ,ಮೂಲಭೂತ ಅಗತ್ಯಗಳನ್ನು ಈಡೇರಿಸಿಕೊಳ್ಳುವ ವಿಷಯದಲ್ಲೂ ಪಡಿಪಾಟಲು ಪಡುತ್ತಿರುವ ಜನರಿಗೆ 2021-22 ನೇ ಸಾಲಿನ ಯಡಿಯೂರಪ್ಪ ಬಜೆಟ್ ಕನಿಷ್ಟ ಪಕ್ಷ ಕನ್ನಡಿಯೊಳಗಿನ ಗಂಟೂ ಆಗಿರುವುದಿಲ್ಲ.
ಏನಿಲ್ಲವೆಂದರೂ ಬಜೆಟ್ ಎಂಬುದು ಕನಿಷ್ಟ ಪಕ್ಷ ಕನ್ನಡಿಯೊಳಗಿನ ಗಂಟಾದರೂ ಆಗಿರಬೇಕು.ಆದರೆ ಅಂತಹ ಗಂಟು ತೋರಿಸಲೂ ಯಡಿಯೂರಪ್ಪ ಅವರಿಗೆ ದಾರಿ ಕಾಣುತ್ತಿಲ್ಲ.
ವಾಸ್ತವವಾಗಿ ಈ ಪರಿಸ್ಥಿತಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸವಾಲು.ಇದನ್ನು ಅವರು ಹೇಗೆ ನಿಭಾಯಿಸುತ್ತಾರೆ?ಎಂಬುದೇ ಸಧ್ಯದ ಕುತೂಹಲ.ಕೊಟ್ಟ ಕುದುರೆಯನೇರಲರಿಯದವನು ವೀರನೂ ಅಲ್ಲ,ಧೀರನೂ ಅಲ್ಲ ಎಂದು ಈ ಹಿಂದೆ ತಾವೇ ಉಚ್ಚರಿಸಿದ್ದ ಮಾತುಗಳನ್ನು ನೆನಪಿಸಿಕೊಂಡೇ ಅವರು ಮುಂದಿನ ಹೆಜ್ಜೆ ಇಡಬೇಕಾಗಿದೆ.

ಅರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here