ಜಿಲ್ಲಾ ಪಂಚಾಯತಿಯ 354.65 ಕೋಟಿ ರೂ.ಗಳಡಿ ಅಭಿವೃದ್ಧಿ ಕಾರ್ಯಕ್ರಮಗಳ
ಕ್ರಿಯಾ ಯೋಜನೆಗೆ ಅನುಮೋದನೆ

0
87

ದಾವಣಗೆರೆ ಆ.12: ಜಿಲ್ಲಾ ಪಂಚಾಯತಿಯ 2021-22 ನೇ ಸಾಲಿನಲ್ಲಿ 354.65 ಕೋಟಿ ರೂ. ಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಗುರುವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.

ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಯಾಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.

ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಡಿ 354.65 ಕೋಟಿ ರೂ., ತಾಲ್ಲೂಕು ಪಂಚಾಯತ್ ಕಾರ್ಯಕ್ರಮಗಳಡಿ 716.87 ಕೋಟಿ ರೂ., ಗ್ರಾಮ ಪಂಚಾಯತಿ ಕಾರ್ಯಕ್ರಮಗಳಡಿ 35 ಲಕ್ಷ ರೂ. ಸೇರಿದಂತೆ ಒಟ್ಟಾರೆ ಈ ವರ್ಷ ಜಿಲ್ಲೆಗೆ 1071.88 ಕೋಟಿ ರೂ. ಅನುದಾನ ನಿಗದಿಪಡಿಸಿದ್ದು, ಇದರಲ್ಲಿ ಜಿ.ಪಂ. ಕಾರ್ಯಕ್ರಮಗಳಡಿ ನಿಗದಿಪಡಿಸಿರುವ 354.65 ಕೋಟಿ ರೂ. ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ 354.65 ಕೋಟಿ ರೂ. ಗಳ ಅನುದಾನವನ್ನು ಹಂಚಿಕೆ ಮಾಡಲು 30 ವಲಯಗಳನ್ನಾಗಿ ನಿಗದಿಪಡಿಸಲಾಗಿತ್ತು. ಹಂಚಿಕೆ ಮಾಡಲಾಗಿರುವ ಅನುದಾನದ ಪೈಕಿ ಸಾಮಾನ್ಯ ಶಿಕ್ಷಣ ವಲಯಕ್ಕೆ 160.27 ಕೋಟಿ ರೂ. ಗಳ ಅನುದಾನ ಅಂದರೆ ಶೇ. 45.19 ರಷ್ಟು ಅನುದಾನ ನಿಗದಿಪಡಿಸಲಾಗಿದೆ. ವೈದ್ಯಕೀಯ ಮತ್ತು ಜನಾರೋಗ್ಯ ವಲಯಕ್ಕೆ 47.32 ಕೋಟಿ ರೂ., ಕುಟುಂಬ ಕಲ್ಯಾಣ-24.52 ಕೋಟಿ, ಪರಿಶಿಷ್ಟ ಜಾತಿ ಕಲ್ಯಾಣ-25.64 ಕೋಟಿ, ಪರಿಶಿಷ್ಟ ಪಂಗಡ ಕಲ್ಯಾಣ-10.72 ಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣ-37.03 ಕೋಟಿ, ಅಲ್ಪಸಂಖ್ಯಾತರ ಕಲ್ಯಾಣ-2.81 ಕೋಟಿ, ಕೃಷಿ-2.84 ಕೋಟಿ, ತೋಟಗಾರಿಕೆ-4.44 ಕೋಟಿ, ಪಶುಸಂಗೋಪನೆ-4.82 ಕೋಟಿ, ಅರಣ್ಯ-6.68 ಕೋಟಿ, ಗ್ರಾಮೀಣಾಭಿವೃದ್ಧಿ-4.10 ಕೋಟಿ, ಆಯುಷ್-5.15 ಕೋಟಿ, ಲೋಕೋಪಯೋಗಿ ಕಾಮಗಾರಿ-5.62 ಕೋಟಿ, ಮೀನುಗಾರಿಕೆ-1.18 ಕೋಟಿ, ರಸ್ತೆ ಮತ್ತು ಸೇತುವೆ-3.29 ಕೋಟಿ ರೂ. ಅಲ್ಲದೆ ವಿವಿಧ ಒಟ್ಟು 30 ವಲಯಗಳಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒಟ್ಟಾರೆ 354.65 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದ್ದು, ಕ್ರಿಯಾ ಯೋಜನೆಗಳಿಗೆ ಸಾಮಾನ್ಯ ಸಭೆ ಅನುಮೋದನೆ ನೀಡಿದೆ.

ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯತಿಗೆ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನದಡಿ 5.41 ಕೋಟಿ ರೂ. ಗಳ ಅನುದಾನದ ವಿವಿಧ ಕಾರ್ಯಕ್ರಮಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಇದರಲ್ಲಿ ಪ್ರಮುಖವಾಗಿ ಕುಡಿಯುವ ನೀರು-26.23 ಲಕ್ಷ ರೂ., ನೈರ್ಮಲ್ಯ-71.64 ಲಕ್ಷ ರೂ., ಶಿಕ್ಷಣ- 170.13 ಲಕ್ಷ ರೂ., ಆರೋಗ್ಯ-53.84 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ-19.60 ಲಕ್ಷ, ರಸ್ತೆ-103.66 ಲಕ್ಷ, ವಸತಿ ನಿಲಯಗಳು-50.25 ಲಕ್ಷ, ಪಶುಚಿಕಿತ್ಸಾಲಯ-7.10 ಲಕ್ಷ ಸೇರಿದಂತೆ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನದಡಿ ಒಟ್ಟು 541.66 ಲಕ್ಷ ರೂ. ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಡಿ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ರೂಪಿಸಲಾದ ಜಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಕೇವಲ ಜಲ್ಲಿ ಹಾಕಿ ರಸ್ತೆ ಅಭಿವೃದ್ಧಿ ಮಾಡುತ್ತೇವೆ ಎಂದು ಯೋಜನೆ ರೂಪಿಸಿರುವುದು ಸರಿಯಲ್ಲ, ರಸ್ತೆಗಳ ಸಂಖ್ಯೆ ಕಡಿಮೆಯಾದರೂ ಚಿಂತೆಯಿಲ್ಲ, ರಸ್ತೆಗಳನ್ನು ಸಂಪೂರ್ಣವಾಗಿ ಡಾಂಬರೀಕರಣ ಮಾಡಿದರೆ ಅವು ಚೆನ್ನಾಗಿರುತ್ತವೆ. ಹೀಗಾಗಿ ಜಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುವುದಿಲ್ಲ, ರಸ್ತೆಯನ್ನು ಡಾಂಬರೀಕರಣಗೊಳಿಸುವ ಪರಿಷ್ಕøತ ಯೋಜನೆ ರೂಪಿಸಿ ಅನುಮೋದನೆಗೆ ಸಲ್ಲಿಸುವಂತೆ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ಜಿ.ಪಂ. ಗೆ ಒದಗಿಸಲಾದ 15 ನೇ ಹಣಕಾಸು ಅನುದಾನದಡಿ 325.53 ಲಕ್ಷ ರೂ. ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಇದರಲ್ಲಿ ಕುಡಿಯುವ ನೀರಿನ ನಿರ್ವಹಣೆಗೆ 195.32 ಲಕ್ಷ ರೂ., ವಿಶೇಷ ಚೇತನರ ಕಲ್ಯಾಣಕ್ಕೆ -16.54 ಲಕ್ಷ, ಶೌಚಾಲಯ ನಿರ್ಮಾಣ, ದುರಸ್ತಿಗೆ 4.96 ಲಕ್ಷ, ಚರಂಡಿ ನಿರ್ಮಾಣಕ್ಕೆ 28.32 ಲಕ್ಷ, ಶಾಲಾ ಕೊಠಡಿಗಳ ದುರಸ್ತಿ-7.53 ಲಕ್ಷ, ಗ್ರಾಮಗಳಲ್ಲಿ ಸಿ.ಸಿ ರಸ್ತೆ-24.87 ಲಕ್ಷ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಒಟ್ಟು 325.53 ಲಕ್ಷ ರೂ. ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.

ಜಿ.ಪಂ. ಆಡಳಿತಾಧಿಕಾರಿಯಾಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮಾತನಾಡಿ, ಪ್ರಸಕ್ತ ವರ್ಷ ಆಗಸ್ಟ್ ತಿಂಗಳಿನಲ್ಲಿಯೇ ಜಿ.ಪಂ. ನ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಹೀಗಾಗಿ ಡಿಸೆಂಬರ್ ಒಳಗಾಗಿಯೇ ನಿಗದಿಪಡಿಸಿದ ಕಾಮಗಾರಿ, ಹಾಗೂ ಕಾರ್ಯಕ್ರಮಗಳಿಗೆ ಅನುದಾನ ವೆಚ್ಚ ಮಾಡಿದಲ್ಲಿ, ಮಾರ್ಚ್ ವೇಳೆಗೆ ಇನ್ನಷ್ಟು ಹೆಚ್ಚುವರಿ ಅನುದಾನ ಲಭ್ಯವಾಗುತ್ತದೆ. ಅಧಿಕಾರಿಗಳು ಯಾವುದೇ ನೆಪಗಳನ್ನು ಹೇಳದೆ, ಕ್ರಿಯಾ ಯೋಜನೆಯಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು. ಗುಣಮಟ್ಟದ ಬಗ್ಗೆ ದೂರುಗಳು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ಖಚಿತ. ಜಿ.ಪಂ. ಜನಪ್ರತಿನಿಧಿಗಳ ಕೊರತೆಯನ್ನು ಅಧಿಕಾರಿಗಳೇ ನೀಗಿಸಿ, ಸಂಪೂರ್ಣ ಜವಾಬ್ದಾರಿ ಹೊರಬೇಕು. ಯೋಜನೆಗಳಡಿ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಅರ್ಹರನ್ನೇ ಪಾರದರ್ಶಕವಾಗಿ ಆಯ್ಕೆ ಮಾಡಿ ಕಾಳಜಿ ತೋರಬೇಕು. ಯಾವುದೇ ಕಾರಣಕ್ಕೂ ಯೋಜನೆಗಳ ಅನುಷ್ಠಾನ ವಿಳಂಬವಾಗಬಾರದು, ಅಲ್ಲದೆ ದುರುಪಯೋಗಕ್ಕೆ ಅವಕಾಶ ಇರಬಾರದು ಎಂದು ತಾಕೀತು ಮಾಡಿದರು.

ಎಲ್ಲ ವಸತಿ ನಿಲಯಗಳಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಲು, ಪ್ರತಿ ಹಾಸ್ಟೆಲ್‍ಗಳಲ್ಲೂ ಕಾಂಪೋಸ್ಟ್ ಪಿಟ್ ಅಳವಡಿಸಬೇಕು ನರೇಗಾ ಯೋಜನೆಯಡಿ ಪೌಷ್ಠಿಕ ತೋಟ ನಿರ್ಮಿಸಲು ಅವಕಾಶಗಳಿದ್ದು, ಎಲ್ಲ ಹಾಸ್ಟೆಲ್‍ಗಳಲ್ಲೂ ಪೌಷ್ಠಿಕ ತೋಟ ನಿರ್ಮಿಸಬೇಕು ಎಂದರು.

ಈ ವರ್ಷ ಹೆಚ್ಚಿನ ಮಳೆಯ ಕಾರಣ ಶಾಲಾ ಕಟ್ಟಡಗಳು ಹಾನಿಗೊಳಗಾಗಿದ್ದಲ್ಲಿ ಪ್ರತಿ ಕಟ್ಟಡ ದುರಸ್ತಿಗೊಳಿಸಲು 2 ಲಕ್ಷ ರೂ. ಅನುದಾನ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಡಿಡಿಪಿಐ ಪರಮೇಶಪ್ಪ, ಜಿಲ್ಲೆಯಲ್ಲಿ ಈಗಾಗಲೆ ಶಾಲೆಗಳ ಕಟ್ಟಡ ದುರಸ್ತಿಗಾಗಿ 338 ಶಾಲೆಗಳ ಪಟ್ಟಿ ಮಾಡಿಕೊಳ್ಳಲಾಗಿದೆ. ಕೋವಿಡ್ ಕಾರಣದಿಂದ ಶಾಲೆಗಳು ಆರಂಭವಾಗದ ಕಾರಣ ಸೇತುಬಂಧ ಕಾರ್ಯಕ್ರಮ ರೂಪಿಸಿದ್ದು, ತರಗತಿವಾರು ಮಕ್ಕಳಿಗೆ ವರ್ಕ್ ಶೀಟ್ ಸಿದ್ಧಪಡಿಸಿ ನೀಡಲಾಗಿದೆ. ಈ ವರ್ಷ ಸುಮಾರು 6 ಸಾವಿರ ಮಕ್ಕಳು ಹೆಚ್ಚುವರಿಯಾಗಿ ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ಶಾಲಾ ಶುಲ್ಕ ಪಾವತಿಸದ ಮಕ್ಕಳಿಗೆ ವರ್ಗಾವಣೆ ಪತ್ರ ನೀಡುವ ಬಗ್ಗೆ ಖಾಸಗಿ ಶಾಲೆಗಳು ಮಕ್ಕಳು ಹಾಗೂ ಪಾಲಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದರು. ಪ್ರತಿಕ್ರಿಯಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ವರ್ಗಾವಣೆ ಪತ್ರದ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಪಾಲಕರು ಅಥವಾ ಮಕ್ಕಳು ಸಂಬಂಧಪಟ್ಟ ಬಿಇಒ ಅವರ ಗಮನಕ್ಕೆ ತರಬೇಕು. ಬಿಇಒ ಅವರು ಇಂತಹ ಪ್ರಕರಣಗಳಲ್ಲಿ ವರ್ಗಾವಣೆ ಪತ್ರ ದೊರಕಿಸಲು ನೆರವು ನೀಡಬೇಕು ಎಂದು ಸೂಚನೆ ನೀಡಿದರು.

ಕೋವಿಡ್ ಕಾರಣದಿಂದಾಗಿ ವರ್ಷಗಟ್ಟಲೆ ಮಕ್ಕಳು ಶಾಲೆಯಿಂದ ದೂರ ಉಳಿಯಬೇಕಾಗಿ ಬಂದಿದೆ. ಇದರಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಹಾನಿಯಾಗಿದೆ. ಮಕ್ಕಳು ಕಲಿಕೆ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಪಿಯುಸಿ ಓದುವ ವಿದ್ಯಾರ್ಥಿನಿಯರಿಗೆ ಮದುವೆಗಳಾಗಿರುವ ಪ್ರಕರಣಗಳು ಸಾಕಷ್ಟಿವೆ. ಹೀಗಾಗಿ ಶಿಕ್ಷಣ ಕ್ಷೇತ್ರಕ್ಕೆ ಪುನಃ ಜೀವ ತುಂಬುವ ಕೆಲಸ ಆಗಬೇಕಿದೆ. ನರೇಗಾ ಯೋಜನೆಯಡಿ ಕನ್ವರ್ಜೆನ್ಸ್ ಮೂಲಕ ಶಾಲಾ ಕಾಂಪೌಂಡ್, ಅಡುಗೆ ಕೋಣೆ, ಶೌಚಾಲಯ ನಿರ್ಮಾಣ, ಆಟದ ಮೈದಾನ ಅಭಿವೃದ್ಧಿ, ಪೌಷ್ಠಿಕ ತೋಟ ನಿರ್ಮಾಣದಂತಹ ಕಾಮಗಾರಿಗಳನ್ನು ಕೈಗೊಂಡು, ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳು ಉತ್ತಮವಾಗಿ ನಿರ್ಮಾಣವಾಗುವಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು. ದಾವಣಗೆರೆ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರೌಢಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗುತ್ತಿದ್ದು, ಇದೇ ರೀತಿ ಗ್ರಾಮೀಣ ಶಾಲೆಗಳಿಗೂ ಸ್ಮಾರ್ಟ್ ಕ್ಲಾಸ್ ಅಳವಡಿಸಲು ಸಾಧ್ಯವಿರುವ ಯೋಜನೆಗಳ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಬೇಕು. ಇದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಉತ್ತಮ ಶಿಕ್ಷಣ ಮಕ್ಕಳಿಗೆ ಲಭ್ಯವಾಗುವಂತೆ ಮಾಡಬಹುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್, ಉಪಕಾರ್ಯದರ್ಶಿ ಆನಂದ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here