ಜಿಲ್ಲೆಯಲ್ಲಿ ಸೆಪ್ಟಂಬರ್ ಮೊದಲ ವಾರದಿಂದ ಪಿ.ಸಿ.ವಿ ಲಸಿಕೆ ಚಾಲನೆ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

0
166

ಶಿವಮೊಗ್ಗ, ಆ.19 : ಸಣ್ಣ ಮಕ್ಕಳಿಗೆ ನ್ಯೂಮೊನಿಯಾ ಸೇರಿದಂತೆ ಹಲವು ರೋಗಗಳಿಂದ ರಕ್ಷಣೆ ನೀಡುವ ಪಿ.ಸಿ.ವಿ (Pneumococcal Conjugate Vaccine) ಲಸಿಕೆ ನೀಡುವ ಕಾರ್ಯಕ್ಕೆ ಸೆಪ್ಟಂಬರ್ ಮೊದಲ ವಾರದಿಂದ ಚಾಲನೆ ದೊರೆಯಲಿದ್ದು, ಎಲ್ಲಾ ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಿ.ಸಿ.ವಿ. ಲಸಿಕೆ ಅನುಷ್ಟಾನ ಕುರಿತು ಮೊದಲನೇ ಜಿಲ್ಲಾ ಮಟ್ಟದ ಚಾಲನಾ ಸಭೆಯಲ್ಲಿ ಮಾತನಾಡಿದರು.

ಡಬ್ಲುಎಚ್‍ಒ ಕನ್ಸಲ್ಟೆಂಟ್ ಡಾ. ಸತೀಶ್ಚಂದ್ರ ಅವರು ಮಾಹಿತಿ ನೀಡಿ, ಈ ಲಸಿಕೆಯನ್ನು ಪೆಂಟಾವಲೆಂಟ್ ಲಸಿಕೆಯೊಂದಿಗೆ ಹುಟ್ಟಿದ ಆರನೇ ವಾರದಲ್ಲಿ, 14 ನೇ ವಾರದಲ್ಲಿ ಮತ್ತು 9ನೇ ತಿಂಗಳಲ್ಲಿ ಬೂಸ್ಟರ್ ಡೋಸ್ ನೀಡಬೇಕಾಗಿದೆ. 146 ದೇಶಗಳಲ್ಲಿ ಈ ಲಸಿಕೆ ಬಳಸಲಾಗುತ್ತಿದ್ದು, ನಮ್ಮ ದೇಶದಲ್ಲಿ ಸಾರ್ವತ್ರಿಕ ಲಸಿಕೀಕರಣ ಆರಂಭಿಸಲಾಗುತ್ತಿದೆ. ದೇಶದಲ್ಲಿ ಪ್ರತಿ ವರ್ಷ 1.2 ಮಿಲಿಯನ್ ಮಕ್ಕಳು ಐದು ವರ್ಷಕ್ಕಿಂತ ಮೊದಲೇ ಸಾವಿಗೀಡಾಗುತ್ತಿದ್ದು, ಇದರಲ್ಲಿ ಶೇ.16ರಷ್ಟು ಸಾವುಗಳು ನ್ಯೂಮೊನಿಯಾದಿಂದ ಸಂಭವಿಸುತ್ತಿದೆ. ನ್ಯೂಮೊನಿಯಾ ತಡೆಗೆ ಈ ಲಸಿಕೆ ಶೇ.80ರಷ್ಟು ಪರಿಣಾಮಕಾರಿಯಾಗಿದ್ದು, ಯಾವುದೇ ಅಡ್ಡ ಪರಿಣಾಮ ಕಂಡುಬರುವುದಿಲ್ಲ ಎಂದು ಹೇಳಿದರು.

ಆರ್‍ಸಿಎಚ್‍ಒ ಡಾ.ನಾಗರಾಜ ನಾಯ್ಕ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಇತರ ಲಸಿಕೆ ಅನುಷ್ಟಾನ ನಿಗದಿ ಪ್ರಕಾರ ನಡೆಯುತ್ತಿದೆ. 2021-22 ನೇ ಸಾಲಿನಲ್ಲಿ ಜುಲೈವರೆಗೆ 7273 (ಶೇ.87) ಮಕ್ಕಳಿಗೆ ಬಿ.ಸಿ.ಜಿ, 7362 (ಶೇ.88) ಮಕ್ಕಳಿಗೆ ಪೆಂಟಾವಲಂಟ್-3, 7341 (ಶೇ.88) ಮಕ್ಕಳಿಗೆ ಪೋಲಿಯೊ, 7061 (ಶೇ.85) ಮಕ್ಕಳಿಗೆ ಹೆಪಟೈಟಸ್-ಬಿ, 7458 (ಶೇ.89) ಮಕ್ಕಳಿಗೆ ದಡಾರ ರುಬೆಲ್ಲಾ ಮತ್ತು 8863 (ಶೇ.96) ಮಕ್ಕಳಿಗೆ ಟಿ.ಡಿ. ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಆರೋಗ್ಯ ನಂದನ ಕಾರ್ಯಕ್ರಮ: ಸಂಭಾವ್ಯ ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 0-18 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣಾ ಕಾರ್ಯವನ್ನು ಆಗಸ್ಟ್ 15ರಿಂದ ಸೆಪ್ಟಂಬರ್ 15ರವರೆಗೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳ ಕುಟುಂಬದವರಿಗೆ ಬಂದಿರಬಹುದಾದ ಕೋವಿಡ್ ಕುರಿತು ಮಾಹಿತಿ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಬೇಕು. ಈ ಮೂಲಕ ಕೋವಿಡ್‍ಗೆ ತುತ್ತಾಗಬಹುದಾದ ಮಕ್ಕಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಆರೋಗ್ಯ ತಪಾಸಣಾ ಕಾರ್ಯ ಯಶಸ್ವಿಗೆ ಸಹಕರಿಸಬೇಕು. ಆರೋಗ್ಯ ತಪಾಸಣೆ, ಲಸಿಕೆ ನೀಡುವುದು, ಪೌಷ್ಟಿಕ ಆಹಾರ ಪೂರೈಕೆ, ರೋಗಕ್ಕೆ ತುತ್ತಾಗಬಹುದಾದ ಮಕ್ಕಳ ಗುರುತಿಸುವಿಕೆ ಇತ್ಯಾದಿ ಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ಮಾಡಬೇಕು ಎಂದು ಅವರು ಹೇಳಿದರು.

ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಹೊನ್ನಳ್ಳಿ, ಉಪ ವಿಭಾಗಾಧಿಕಾರಿ ಪ್ರಕಾಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ತಾಲೂಕು ಆರೋಗ್ಯ ಅಧಿಕಾರಿಗಳು ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here