ತರಬೇತಿಗಳ ಸದುಪಯೋಗ ಪಡೆದು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕು : ಎಸ್‍ಪಿ

0
155

ದಾವಣಗೆರೆ ಏ.21:ಜೀವನದಲ್ಲಿ ತರಬೇತಿಗಳಿಗೆ ಕೊನೆ ಎಂಬುದು ಇರುವುದಿಲ್ಲ. ತರಬೇತಿಗಳು ನಿರಂತರವಾದವು. ಇವುಗಳ ಸದುಪಯೋಗ ಪಡೆದುಕೊಂಡು ಉತ್ತಮ ರೀತಿಯಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ತಾತ್ಕಾಲಿಕ ಪೋಲೀಸ್ ತರಬೇತಿ ಶಾಲೆ, ದಾವಣಗೆರೆ ಜಿಲ್ಲೆ ಇವರ ವತಿಯಿಂದ ಬುಧವಾರದಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ 8 ನೇ ತಂಡದ ಸಶಸ್ತ್ರ ಪೋಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕಾರ ಹಾಗೂ ಪಥಸಂಚಲನ ಪರಿವೀಕ್ಷಿಸಿ 8ನೇ ತಂಡದ ಸಶಸ್ತ್ರ ಪೋಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿದರು.
ಕಳೆದ ಸಾಲಿನಲ್ಲಿ ಕೋವಿಡ್ ಮಹಾಮಾರಿ ನಮ್ಮೆಲ್ಲರನ್ನು ಕಂಗೆಡಿಸಿತ್ತು. ಈಗಲೂ ಎಡೆಬಿಡದೆ ಕಾಡುತ್ತಿದೆ. ಪೊಲೀಸ್ ಇಲಾಖೆಯವರು ಸಾಕಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಕೊರೊನಾದ ಭೀತಿಯಿಂದ ತರಬೇತಿಗಳನ್ನು ಹೇಗೆ ನಡೆಸಬೇಕು, ಪ್ರಶಿಕ್ಷಣಾರ್ಥಿಗಳಿಗೆ ಒಳಾಂಗಣ ಮತ್ತು ಹೊರಾಂಗಣ ತರಬೇತಿ ನೀಡಲು ಸಾಧ್ಯವಾಗುತ್ತದೆಯೋ ಇಲ್ಲವೋ ಎಂದು ಭಾವಿಸಿದ್ದೆವು. ಆದರೆ ಸರ್ಕಾರದ ಆದೇಶವನ್ನು ಸೂಕ್ತವಾಗಿ ಅನುಸರಿಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪ್ರಶಿಕ್ಷಣಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸತತ 8 ತಿಂಗಳುಗಳ ಕಾಲ ಕಠಿಣ ತರಬೇತಿಯನ್ನು ನೀಡಲಾಯಿತು.
ಪ್ರಶಿಕ್ಷಣಾರ್ಥಿಗಳು ಉತ್ತಮ ರೀತಿಯಲ್ಲಿ ಶ್ರಮವಹಿಸಿ ನಿಷ್ಠೆಯಿಂದ ತರೆಬೇತಿ ಪಡೆದುಕೊಂಡು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ ಹೊಂದಿದ್ದೀರಿ. ಈ ಬಗ್ಗೆ ನನಗೆ ತುಂಬಾ ಹೆಮ್ಮೆ ಎನ್ನಿಸುತ್ತದೆ. ಒಟ್ಟು 10 ಜಿಲ್ಲೆಗಳಿಂದ 67 ಜನ ಪ್ರಶಿಕ್ಷಣಾರ್ಥಿಗಳು ತರಬೇತಿ ಹೊಂದಿದ್ದು, ಅದರಲ್ಲಿ ಒಬ್ಬರು ಅನಾರೋಗ್ಯ ಕಾರಣದಿಂದ ತರಬೇತಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ತರಬೇತಿಯಲ್ಲಿ ಮಾಡಿದ ಪ್ರತಿಜ್ಞೆಯಂತೆ ನಿಷ್ಠೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ದೇಶದ ಸಂರಕ್ಷಣೆಯ ಹೊಣೆ ನಮ್ಮ ಮೇಲಿದೆ. ಆರಕ್ಷಕರ ಕೆಲಸ ಸಮಯಕ್ಕೆ, ಸಂದರ್ಭಕ್ಕೆ, ತಕ್ಕಂತೆ ಬದಲಾಗುತ್ತಿರುತ್ತದೆ. ಅದಕ್ಕಾಗಿ ಉತ್ತಮ ಕೌಶಲ್ಯ, ಬುದ್ಧಿವಂತಿಕೆ, ಹಾಗೂ ಪರಿಶ್ರಮ ಅಗತ್ಯ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಸೇವೆಯನ್ನು ಸಮಾಜಕ್ಕೆ ಕೊಡುಗೆಯಾಗಿ ಸಲ್ಲಿಸಿದರೆ ಅದು ಅರ್ಥಪೂರ್ಣವಾಗುತ್ತದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಒಳಾಂಗಣ ವಿಭಾಗದಲ್ಲಿ ರಮೇಶ್ ಸ ಬಿರಾದರ ಪಾಟೀಲ, ಡಿಂಡಿಮ ಶಂಕರ, ಮಂಜುನಾಥ ಹಡಪದÀ, ಹೊರಾಂಗಣ ಮತ್ತು ರೈಫಲ್ ಶೂಟಿಂಗ್ ವಿಭಾಗದಲ್ಲಿ ಲಕ್ಷ್ಮಣ, ಇಂದ್ರಕುಮಾರ್ ಡಿ, ರಾಘವೇಂದ್ರ ವಿ ಅವರಾದಿ, ಮಾರುತಿ ಅಂಕಲಗಿ ಹಾಗೂ ಕುಮಾರ್ ನಾಯ್ಕ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಉಪಪ್ರಾಶುಂಪಾಲರು ಮತ್ತು ಪೊಲೀಸ್ ಉಪಾಧೀಕ್ಷಾಕರು, ಡಿಎಆರ್ ಪಿ.ಬಿ.ಪ್ರಕಾಶ್, ಪ್ರಾಶುಂಪಾಲರು ಮತ್ತು ಎಎಸ್‍ಪಿ ರಾಜೀವ್ ಎಂ, ಕವಾಯಿತು ಉಪನಾಯಕ ಕಿರಣ್, ಜಿಲ್ಲಾ ಹಾಗೂ ತಾಲ್ಲೂಕು ನಿವೃತ್ತ ಪೊಲೀಸ್ ಅಧಿಕಾರಿಗಳು, ಪೋಷಕರು ಸಿಬ್ಬಂದಿ ವರ್ಗದವರು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here