ಗುಡೇಕೋಟೆ ಕರಡಿಧಾಮದಲ್ಲಿ ಪ್ರಾಣಿಗಳಿಗೆ ಆಸರೆಯಾದ ಖಾತ್ರಿಯೋಜನೆ ಮಳೆನೀರನ್ನು ಸಂಗ್ರಹಿಸುವ 1000 ಗುಂಡಿಗಳು

0
141

ವರದಿ ಇಬ್ರಾಹಿಂ ಖಲೀಲ್ .ಟಿ

ಕೂಡ್ಲಿಗಿ :-ತಾಲೂಕಿನ ಗುಡೇಕೋಟೆ ಕರಡಿಧಾಮ ಅರಣ್ಯಪ್ರದೇಶದಲ್ಲಿ ಎಲ್ಲಿ ನೋಡಿದರೂ ಮುಂಗಾರು ಮಳೆ ನೀರಿನಿಂದ ತುಂಬಿಕೊಂಡ ಗುಂಡಿಗಳೇ ಕಾಣುತ್ತವೆ. ಈ ಮಳೆನೀರಿನ ಗುಂಡಿಗಳು ಪ್ರಾಣಿಪಕ್ಷಿಗಳಿಗೆ ಕುಡಿಯುವ ನೀರಿನ ದಾಹ ಇಂಗಿಸುವುದಲ್ಲದೇ ಕಾಡಿನಲ್ಲಿರುವ ಗಿಡಮರಗಳು ಸಮೃದ್ದವಾಗಿ ಬೆಳೆಯಲು ಆಸರೆಯಾಗುತ್ತಿದ್ದು ಅರಣ್ಯಾಧಿಕಾರಿಗಳು ನೀರು ಹರಿಯುವ ಸ್ಥಳಗಳಲ್ಲಿ ಗುಂಡಿಗಳನ್ನು ನಿರ್ಮಿಸುವ ಮೂಲಕ ಉಧ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡಿದ್ದು ವಿಶ್ವಪರಿಸರ ದಿನಾಚರಣೆಯ ಮುಂಚೆ 3 ದಿನಗಳಿಂದ ಉತ್ತಮ ಮಳೆಯಾಗಿದ್ದರಿಂದ ಈ ಗುಂಡಿಗಳು ತುಂಬಿಕೊಂಡು ಅರಣ್ಯ ಮತ್ತು ವನ್ಯಜೀವಿಗಳಿಗೆ ಆಸರೆಯಾಗಿವೆ.
ತಾಲೂಕಿನ ಗುಡೇಕೋಟೆ,ಅಪ್ಪೇನಹಳ್ಳಿ, ಸಿಡೇಗಲ್ಲು, ರಾಮದುರ್ಗ ಅರಣ್ಯಪ್ರದೇಶಗಳಲ್ಲಿ ಇಂತಹ ನೀರು ಸಂಗ್ರಹಿಸುವ (ಟ್ರೆಂಚ್)ಗಳನ್ನು ಉಧ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ್ದು ಅರಣ್ಯದ ಗಿಡಮರಗಳಿಗೆ ಹಾಗೂ ವನ್ಯಜೀವಿಗಳಿಗೆ ಆ ಗುಂಡಿಗಳು ಆಸರೆಯಾಗುವುದಲ್ಲದೇ ಸ್ಥಳೀಯ ಕೂಲಿಕಾರ್ಮಿಕರಿಗೆ, ರೈತರಿಗೆ ಲಾಕ್ ಢೌನ್ ಸಮಯದಲ್ಲಿ ಸಹಸ್ರಾರು ಮಾನವ ದಿನಗಳ ಕೂಲಿಯನ್ನು ಒದಗಿಸಿದಂತಾಗಿದೆ. ಮಳೆನೀರನ್ನು ಸಹ ಅಲ್ಲಲ್ಲೇ ಇಂಗಿಸಿದಂತಾಗುವುದಲ್ಲದೇ ಪ್ರಾಣಿ,ಪಕ್ಷಿಗಳಿಗೆ ಮಳೆಗಾಲದಲ್ಲಿ ಕುಡಿಯುವ ನೀರು ಎಲ್ಲಾ ಪ್ರದೇಶಗಳಲ್ಲಿ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ.
ಅರಣ್ಯದಲ್ಲಿ 1೦೦೦ಕ್ಕೂ ಹೆಚ್ಚು ಟ್ರೆಂಚ್ ಗುಂಡಿಗಳುಃ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕರಡಿಧಾಮ ಪ್ರದೇಶದಲ್ಲಿ 1೦೦೦ಕ್ಕೂ ಹೆಚ್ಚು ಮಳೆನೀರು ಸಂಗ್ರಹಿಸುವ ಗುಂಡಿಗಳನ್ನು ನಿರ್ಮಿಸಲಾಗಿದ್ದು , ನೀರಿನ ಹರಿವಿನ ಪ್ರಮಾಣ ನೋಡಿ (ಟ್ರೆಂಚ್) ಗುಂಡಿಗಳ ಅಳತೆಯನ್ನು ಮಾಡಲಾಗಿದೆ. ನೀರು ಹೆಚ್ಚು ಹರಿಯುವ ಪ್ರದೇಶದಲ್ಲಿ 5 ಮೀಟರ್ ಉದ್ದ, 2ರಿಂದ 3 ಮೀಟರ್ ಅಗಲ, 1 ಮೀಟರ್ ಆಳದ ಗುಂಡಿಗಳನ್ನು ತೆಗೆಯಲಾಗಿದ್ದು ನೀರು ಕಡಿಮೆ ಹರಿಯುವ ಪ್ರದೇಶದಲ್ಲಿ 3 ಮೀ ಉದ್ದ, 1ಮೀಟರ್ ಅಗಲ, 1ಮೀಟರ್ ಆಳದ ಗುಂಡಿಗಳನ್ನು ತೆಗೆಸಲಾಗಿದೆ. ಈ ಎಲ್ಲಾ ಟ್ರೆಂಚ್ ಗಳನ್ನು ಉಧ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರ್ಮಿಕರು ತೆಗೆಯಲಾಗಿದ್ದು , 23605ಮಾನವದಿನಗಳನ್ನು ಬಳಸಿಕೊಂಡು ಅರಣ್ಯದಲ್ಲಿ 1೦೦೦ಕ್ಕೂ ಹೆಚ್ಚು ಟ್ರೆಂಚ್ ಗಳನ್ನು ನಿರ್ಮಿಸುವ ಮೂಲಕ ಖಾತ್ರಿ ಯೋಜನೆಯನ್ನು ಅರಣ್ಯಾಧಿಕಾರಿಗಳು ಸದುಪಯೋಗಪಡಿಸಿಕೊಂಡಿರುವುದು ಶ್ಲಾಘನೀಯ.
ಕೋಟ್- ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಅರಣ್ಯಪ್ರದೇಶದಲ್ಲಿ 23605 ಮಾನವ ದಿನಗಳಲ್ಲಿ ಬಳಸಿಕೊಂಡು 1೦೦೦ಕ್ಕೂ ಹೆಚ್ಚು ಟ್ರೆಂಚ್ ಗಳನ್ನು ನಿರ್ಮಿಸಲಾಗಿದ್ದು ಮುಂಗಾರು ಮಳೆಗೆ ಈಗಾಗಲೇ ಎಲ್ಲಾ ಗುಂಡಿಗಳು ತುಂಬಿಕೊಂಡಿವೆ, ಈಗಾಗಲೇ ಈ ಪ್ರದೇಶ ಗುಡೇಕೋಟೆ ಕರಡಿಧಾಮ ಪ್ರದೇಶವ್ಯಾಪ್ತಿಗೆ ಬರುವುದ್ದರಿಂದ ಕರಡಿಗಳು ಸೇರಿದಂತೆ ಇತರೆ ಕಾಡುಪ್ರಾಣಿಗಳಿಗೆ, ಗಿಡಮರಗಳಿಗೆ ಆಸರೆಯಾಗಿವೆ. ಭೂಮಿಯ ಮಣ್ಣಿನ ಸವಕಳಿಯನ್ನು ತಪ್ಪಿಸಿದಂತಾಗಿದೆ ಎನ್ನುತ್ತಾರೆ ಗುಡೇಕೋಟೆ ವಲಯ ಅರಣ್ಯಾಕಾರಿ ಎ.ರೇಣುಕಾ.

LEAVE A REPLY

Please enter your comment!
Please enter your name here