ಡಿಕೆಶಿ-ಸಿದ್ಧು ಮಧ್ಯೆ ಕದನ ಅರಳಿತು ಬಿಜೆಪಿಯ ವದನ

0
177

ಆಂತರಿಕ ಬೇಗೆಯಿಂದ ನರಳುತ್ತಿರುವ ಬಿಜೆಪಿಯ ಪಾಲಿಗೆ ಕಾಂಗ್ರೆಸ್ ನಲ್ಲಿನ ಬೆಳವಣಿಗೆ ಹರ್ಷ ಉಕ್ಕಿಸಿದೆ.

ಭವಿಷ್ಯದ ಸಿಎಂ ಹುದ್ದೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಶುರುವಾಗಿರುವ ಸಂಘರ್ಷ ಇಷ್ಟಕ್ಕೇ ನಿಲ್ಲುವುದಿಲ್ಲ ಎಂಬುದು ಬಿಜೆಪಿಯ ನಂಬಿಕೆ.

ಈ ನಂಬಿಕೆಯೇ ಅದರಲ್ಲಿ ಭರವಸೆಯನ್ನು ಮೂಡಿಸಿದೆ,ಪುನ: ರಾಜ್ಯದ ಅಧಿಕಾರ ಸೂತ್ರ ಹಿಡಿಯಬಹುದು ಎಂಬ ನಂಬಿಕೆ ಮೂಡಿಸುತ್ತಿದೆ.

ಸಧ್ಯದ ಬೆಳವಣಿಗೆಯಿಂದ ಕಾಂಗ್ರೆಸ್ ಬಗ್ಗೆ ಎಲ್ಲ ಮತಬ್ಯಾಂಕುಗಳಲ್ಲಿ ಅವಿಶ್ವಾಸ ಮೂಡುತ್ತದೆ ಎಂಬುದು ಅದರ ಲೆಕ್ಕಾಚಾರ.

ಅದರ ಲೆಕ್ಕಾಚಾರದ ಆಳಕ್ಕೇ ಇಳಿದು ನೋಡೋಣ.ಸಿಎಂ ಹುದ್ದೆಗಾಗಿ ನಡೆಯುತ್ತಿರುವ ಸಂಘರ್ಷ ಒಕ್ಕಲಿಗ ಸಮುದಾಯದ ಮೇಲೆ ಬೀರಬಹುದಾದ ಪರಿಣಾಮವೇನು?

ಈ ಪ್ರಶ್ನೆಗೆ ಉತ್ತರ ಬೇಕೆಂದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಡಿ.ಕೆ.ಶಿವಕುಮಾರ್ ಅವರು ಬಂದು ಕುಳಿತ ಬೆಳವಣಿಗೆಯನ್ನು ಗಮನಿಸಬೇಕು.

ಕರ್ನಾಟಕದ ಅಧಿಕಾರ ಸೂತ್ರವನ್ನು ಲಿಂಗಾಯತ ಸಮುದಾಯದ ಯಡಿಯೂರಪ್ಪ ಹಿಡಿದಿರುವುದರಿಂದ ಒಕ್ಕಲಿಗ ಪ್ಲಸ್ ಅಹಿಂದ ಮತ ಬ್ಯಾಂಕುಗಳನ್ನು ಕ್ರೋಢೀಕರಿಸುವುದು ಅನಿವಾರ್ಯ ಎಂಬುದು ಕೈ ಪಾಳೆಯದ ವರಿಷ್ಟರ ಲೆಕ್ಕಾಚಾರವಾಗಿತ್ತು.

1999 ರಲ್ಲಿ ಪ್ರಬಲ ಲಿಂಗಾಯತ ಸಮುದಾಯ ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟದ ನೆಲೆಯಲ್ಲಿ ಕಾಣಿಸಿಕೊಂಡಾಗ ಕಾಂಗ್ರೆಸ್ ವರಿಷ್ಟರು ಒಕ್ಕಲಿಗ ಪ್ಲಸ್ ಅಹಿಂದ ಸೂತ್ರಕ್ಕೆ ಶರಣಾಗಿದ್ದರು.

ಹೀಗಾಗಿಯೇ ವಿಧಾನಸಭೆ ಚುನಾವಣೆಗಳು ಹತ್ತಿರವಾದ ಕಾಲಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದ ಧರ್ಮಸಿಂಗ್ ಅವರನ್ನು ಕೆಳಗಿಳಿಸಿ ಒಕ್ಕಲಿಗ ಸಮುದಾಯದ ಎಸ್.ಎಂ.ಕೃಷ್ಣ ಅವರನ್ನು ಕೂರಿಸಲಾಗಿತ್ತು.

ಈ ತಂತ್ರಗಾರಿಕೆ ಯಶಸ್ವಿಯೂ ಆಯಿತು.ಈಗಲೂ ಅಷ್ಟೇ,1999 ರ ಸೂತ್ರವನ್ನೇ ಕಾಂಗ್ರೆಸ್ ವರಿಷ್ಟರು ನಂಬಿದ್ದಾರೆ.

ಆದರೆ ಈಗ ಪರಿಸ್ಥಿತಿ ಬದಲಾಗಿದೆ.ಮೊದಲನೆಯದಾಗಿ ಅವತ್ತಿನಂತೆ ಅಹಿಂದ ವರ್ಗಗಳು ಸಾಲಿಡ್ಡಾಗಿ ಕಾಂಗ್ರೆಸ್ ಜತೆ ನಿಂತಿಲ್ಲ.

ದಲಿತ ವರ್ಗದ ಎಡಗೈ ಸಮುದಾಯ ದೊಡ್ಡ ಮಟ್ಟದಲ್ಲಿ ಬಿಜೆಪಿ ಜತೆ ನಿಂತಿದೆ.

ಒಳಮೀಸಲಾತಿ ಒದಗಿಸುವ ವಿಷಯದಲ್ಲಿ ಕಾಂಗ್ರೆಸ್ ಗೆ ನಂಬಿಕೆ ಇಲ್ಲ,ಹೀಗಾಗಿ ಅದು ಬಲಗೈ ಸಮುದಾಯದ ಪರವಾಗಿದೆ ಎಂಬುದು ಎಡಗೈ ಸಮುದಾಯದ ಸಿಟ್ಟು.

ಇದೇ ಕಾರಣಕ್ಕಾಗಿ ಅದು 2004 ರಲ್ಲೇ ಬಿಜೆಪಿಯ ಕಡೆ ವಲಸೆ ಬಂತು.ಇವತ್ತಿಗೂ ಅದು ಅಲ್ಲೇ ನೆಲೆಯಾಗಿದೆ.

ಹೀಗೆ ಲಿಂಗಾಯತ ಪ್ಲಸ್ ಎಡಗೈ ಮತ ಬ್ಯಾಂಕು ಕೈ ಜೋಡಿಸಿದ್ದರಿಂದಲೇ ಬಿಜೆಪಿ ಅವತ್ತು ಎಪ್ಪತ್ತೊಂಭತ್ತು ಸೀಟುಗಳನ್ನು ಗಳಿಸಿ ನಂಬರ್ ಒನ್ ಶಕ್ತಿಯಾಗಿ ನಿಲ್ಲಲು ಸಾಧ್ಯವಾಗಿದ್ದು.

ಗಮನಿಸಬೇಕಾದ ಸಂಗತಿ ಎಂದರೆ ಹಿಂದುಳಿದ ವರ್ಗಗಳ ನಾಯಕ ಬಂಗಾರಪ್ಪ ಕೂಡಾ ಬಿಜೆಪಿಯ ಶಕ್ತಿ ವೃದ್ಧಿಯಾಗಲು ತಮ್ಮ ನೆರವು ನೀಡಿದರು.

ಹೀಗೆ ಅವತ್ತು ಬಿಜೆಪಿಯ ಜತೆ ಹೋದ ದಲಿತ ಮತ್ತು‌ ಹಿಂದುಳಿದ ಮತಬ್ಯಾಂಕಿನ ಷೇರುಗಳು ಅಲ್ಲೇ ಇರುವುದರಿಂದ 1999 ರಲ್ಲಿ ಪಡೆದಂತೆ ಹಿಂದ ವರ್ಗಗಳ ಸಾಲಿಡ್ಡು ವಿಶ್ವಾಸವನ್ನು ಪಡೆಯಲು ಕಾಂಗ್ರೆಸ್ ಗೆ ಸಾಧ್ಯವಿಲ್ಲ.

ಹೀಗಾಗಿ ಉಳಿದಿರುವ ಹಿಂದ ಮತ ಬ್ಯಾಂಕುಗಳ ಷೇರು ಪಡೆಯಲು ಅದಕ್ಕೆ ಸಿದ್ಧರಾಮಯ್ಯ ಅವರ ನೆರವು ಬೇಕೇ ಬೇಕು.

ಒಂದು ವೇಳೆ ಮುಂದಿನ ಸಿಎಂ ಯಾರು?ಎಂಬ ವಿಷಯದಲ್ಲಿ ಡಿಕೆಶಿ ಕೈ ಮೇಲಾದರೆ ಹಿಂದ ವರ್ಗದ ಮತ ಬ್ಯಾಂಕು ಮತ್ತಷ್ಟು ಕ್ಷೀಣವಾಗುತ್ತದೆ.

ಅದೇ ರೀತಿ ಬಿಜೆಪಿಯಲ್ಲಿ ಯಡಿಯೂರಪ್ಪ ಬದಲಾದರೆ ಕಾಂಗ್ರೆಸ್ ಕಡೆ ನೋಡಲು ಅಣಿಯಾಗುತ್ತಿರುವ ಲಿಂಗಾಯತ ಮತ ಬ್ಯಾಂಕು ಭ್ರಮ‌ನಿರಸನಗೊಳ್ಖುತ್ತದೆ.

ಯಾಕೆಂದರೆ ಯಡಿಯೂರಪ್ಪ ಕೆಳಗಿಳಿಯುವ ಕಾಲಕ್ಕೆ ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲರನ್ನು ರಾಜ್ಯ ಕಾಂಗ್ರೆಸ್ ಮುಂಚೂಣಿಗೆ ತಂದು ನಿಲ್ಲಿಸಲು ಸಿದ್ಧರಾಮಯ್ಯ ಬಯಸಿದ್ದಾರೆ.

ಆದರೆ ಡಿಕೆಶಿ ಕೈ ಮೇಲಾಗಿ ಸಿದ್ಧರಾಮಯ್ಯ ಶಕ್ತಿ‌ ಕುಸಿದರೆ ಲಿಂಗಾಯತ ಮತ ಬ್ಯಾಂಕು ಇದ್ದಲ್ಲೇ ಉಳಿಯುತ್ತದೆ.

ಹೀಗಾದಾಗ ಯಡಿಯೂರಪ್ಪ ಅವರನ್ನು ತೆಗೆದರೆ ಬಿಜೆಪಿ ಬಲ‌ ಕುಗ್ಗುವುದಿಲ್ಲ ಎಂಬುದು ನಾಯಕತ್ವ ಬದಲಾವಣೆಗಾಗಿ ಹೋರಾಡುತ್ತಿರುವವರ ವಾದ.

ಇದೇ ರೀತಿ ಸಿದ್ಧರಾಮಯ್ಯ ಕೈ ಮೇಲಾಗಿ ಡಿಕೆಶಿ ಶಕ್ತಿ ಕುಸಿದರೆ,ಮೂಲ ಕಾಂಗ್ರೆಸ್ಸಿಗರ ಜತೆ ಸೇರಿ ಪಕ್ಷ ಚುನಾವಣೆಯಲ್ಲಿ ಸೋಲುವಂತೆ ಮಾಡಲು ಡಿಕೆಶಿ ಹಿಂಜರಿಯುವುದಿಲ್ಲ ಎಂಬುದು ಇದೇ ಗುಂಪಿನ ವಾದ.

ಕುತೂಹಲದ ಸಂಗತಿ ಎಂದರೆ ಈ ಪೈಕಿ ಯಾವುದೇ ಬೆಳವಣಿಗೆ ನಡೆದರೂ ಮುಂದಿನ ಚುನಾವಣೆಯಲ್ಲಿ ನೂರೈವತ್ತು ಮಂದಿಯನ್ನು ಗೆಲ್ಲಿಸಿಕೊಂಡು ಬರುತ್ತೇನೆ.ಹೀಗಾಗಿ ನನ್ನನ್ನೇ ಮುಂದುವರಿಸಿ ಎಂಬುದು ಹೈಕಮಾಂಡ್ ಮುಂದೆ ಯಡಿಯೂರಪ್ಪ ಬೇಡಿಕೆ.

ಹೀಗೆ ಸಿದ್ಧರಾಮಯ್ಯ ವರ್ಸಸ್ ಡಿಕೆಶಿ ನಡುವಣ ಕದನ ಬಿಜೆಪಿ ಪಾಳೆಯದಲ್ಲಿ ಮೂಡಿಸಿರುವ ಲೆಕ್ಕಾಚಾರ ನಿಜಕ್ಕೂ ಕುತೂಹಲಕಾರಿ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here