ಸಾವು ಇರದ ಮನೆಯಿಂದ ಸಾಸಿವೆ ಕಾಳು ತರುವುದು ಹೇಗೆ?

0
132

“ಅರೇಸ್ಕೀ,ಏಳಲೋ ಮೇಲೆ,ವರದಾ ನದಿ ದಂಡೆಗೆ ಹೋಗಿ,ಅಲ್ಲಿರುವ ಬೂದಿ ಬೆಟ್ಟದ ಮೇಲಿಂದ ಜರ್ರಂತ ಜಾರಿ ನೀರಿಗೆ ಬೀಳೋಣ” ಅಂತ ನಮ್ಮ ಗಿರಿ ಹೇಳಿದಂತಾಗಿ ಮೊನ್ನೆ ಅರ್ಧರಾತ್ರಿ ಗಪ್ಪಂತ ಎದ್ದು ಕುಂತು ಬಿಟ್ಟೆ.
ಗಿರಿ ನಮ್ಮ ಚಿಕ್ಕತ್ತೆ ವನಜಾಕ್ಷಿ ಅವರ ಮಗ.ಅವನ ಹೆಸರು ಪ್ರಕಾಶ.ಮನೆಯಲ್ಲಿ ಎಲ್ಲರೂ ಅವನನ್ನು ಗಿರಿ ಎಂದು ಕರೆಯುತ್ತಿದ್ದರು.ನನ್ನ ಜೀವನದ ಪ್ರಪ್ರಥಮ ಗೆಳೆಯ ಅವನು.ಅಪಾರ ಧೈರ್ಯಶಾಲಿ.ಚಿಕ್ಕವನಿದ್ದಾಗ ಓದುವ ಗೀಳು ಹತ್ತಿಸಿಕೊಂಡಿದ್ದ ನನಗೆ ಸಾಗರದ ಅಶೋಕ ರಸ್ತೆಯಲ್ಲಿದ್ದ ಸೋನಗಾರ್(ಬಂಗಾರದ ಕೆಲಸ ಮಾಡುವವರು)ರಾಮಚಂದ್ರ ಅವರ ಅಂಗಡಿ ಎಂದರೆ ಪ್ರಾಣ.ಯಾಕೆಂದರೆ ಅವರು ಎರಡು ಡೈಲಿ ಪೇಪರು ಹಾಗೂ ಸೋವಿಯತ್ ಯೂನಿಯನ್ ಪ್ರಕಟಿಸುತ್ತಿದ್ದ ಒಂದು ಮ್ಯಾಗಜೀನ್ ತರಿಸುತ್ತಿದ್ದರು.
ಅದನ್ನು ಓದುವ ಸಲುವಾಗಿ ಎಷ್ಟೋ ಸಲ ನಾನಲ್ಲಿಗೆ ಹೋಗಿ ಕುಂತು ಬಿಡುತ್ತಿದ್ದೆ.ಆಗೆಲ್ಲ ರಷ್ಯದ ಅಧ್ಯಕ್ಷ ಲೆವೊನಿದ್ ಬ್ರೆಜ್ನೇವ್ ಹೆಸರು ಆ ಮ್ಯಾಗಜೀನ್ ನಲ್ಲಿ ಢಾಳಾಗಿ ಕಾಣುತ್ತಿತ್ತು.ಹೀಗೆ ಅದನ್ನು ಓದುತ್ತಾ ಕೂತಿರುವಾಗ ಅಲ್ಲಿಗೆ ಬರುತ್ತಿದ್ದ ಗಿರಿ,”ಲೋ,ಮೇಲೇಳೋ,ಯಾವಾಗ ನೋಡಿದರೂ ಅವುನ್ಯಾವುನೋ ಬ್ರೆಜ್ನೇವ್ ಅಂತೆ.ಅವನ ಕತೆ ಹಿಡ್ಕಂಡು ಕೂತಿರ್ತೀಯ.ಬಾ.ಮೊದ್ಲು ನಮ್ಕತೆ ನೋಡ್ಕಣಾನ,ನದಿ ಹತ್ತ ಹೋಗಿ ಗುಡ್ಡಿ ಗೇರುಹಣ್ಣು ತಗಂಡು,ಬೂದಿ ಬೆಟ್ಟದ ಮೇಲೆ ಜಾರಿ ನೀರಿಗೆ ಬಿದ್ದು ಈಜಿ ಬರೋಣ” ಎಂದು ವರಾತ ತೆಗೆಯುತ್ತಿದ್ದ.
ಆಗೆಲ್ಲ ನಾನು ಮೇಲೆದ್ದು ಅವನ ಜತೆ ಹೋಗಿ ಬಿಡುತ್ತಿದ್ದೆ.ಬೂದಿ ಬೆಟ್ಟ ಅಂದರೆ ಅದು ನಿರ್ದಿಷ್ಟ ಬೆಟ್ಟವೇನಲ್ಲ.ಸಾಗರದ ಮಾರ್ಕೆಟ್ ರಸ್ತೆಯಲ್ಲಿ ಇಳಿದು ಕೆಳದಿ ರೋಡಿನ ಕಡೆ ನಡೆದುಕೊಂಡು ಹೋದರೆ ವರದಾ ನದಿ,ನದಿಯ ಬಲಭಾಗದಲ್ಲಿ ದೇವಸ್ಥಾನ.ಎಡಭಾಗದಲ್ಲಿ ಊರ ಹೋಟೆಲ್ಲುಗಳಿಂದ ಹಿಡಿದು ಹಲವರು ತಂದು ಹಾಕುವ ರಾಶಿ,ರಾಶಿ ಬೂದಿ.ಆ ರಾಶಿ ಬೆಟ್ಟದ ಗಾತ್ರಕ್ಕೆ ಬೆಳೆದಿತ್ತಲ್ಲ?ಅದಕ್ಕೆ ಬೂದಿ ಬೆಟ್ಟ ಅಂತ ನಾವು ಹೆಸರಿಟ್ಟಿದ್ದೆವು.
ಅದರ ಹಿಂಭಾಗದಲ್ಲಿ ದುರ್ಗಮ್ಮ ತಾಯಿಯ ದೇವಸ್ಥಾನ.ನಾನು,ಗಿರಿ ನಿರುಮ್ಮಳವಾಗಿ ಹೋಗಿ ಹದಿನೆಂಟಿಪ್ಪತ್ತು ಅಡಿಯಷ್ಟು ಎತ್ತರ ಇರುತ್ತಿದ್ದ ಬೂದಿಬೆಟ್ಟದ ಮೇಲಿಂದ ಜರ್ರೆಂದು ಜಾರುತ್ತಿದ್ದೆವು.ಹಾಗೇ ಜಾರಿ ನೀರಿನಲ್ಲಿ ಬಿದ್ದು ಈಜುತ್ತಿದ್ದೆವು.
ಹೀಗೆ ಬೆಳಿಗ್ಗೆ ಹೊರಟು ಸಿಕ್ಕಿದ್ದೆಲ್ಲ ತಿಂದು,ಆಡಿ,ಸಂಜೆ ಮನೆಗೆ ಹೋಗುವಾಗ ನಮ್ಮನ್ನು ನೋಡಬೇಕು.ಡಿಟ್ಟೋ ಬೂದಿ ಬುಕ್ಕಣ್ಣಗಳು.ಯಾವ ಫ್ಯಾನ್ಸಿ ಡ್ರೆಸ್ಸನ್ನೂ ನಿವಾಳಿಸಿ ಎಸೆಯಬೇಕು.ಹಾಗಿರುತ್ತಿತ್ತು ನಮ್ಮ ವೇಷ.ಹೀಗೆ ದಶಕಗಳಷ್ಟು ಕಾಲ ಒಟ್ಟಿಗೇ ಆಡಿ,ಬೆಳೆದ ಇಬ್ಬರು ಮಹಾನ್ ಗೆಳೆಯರು ಎಂಭತ್ತೊಂಭತ್ತರಲ್ಲಿ ದೂರವಾದೆವು.ಆತ ಊರಿನಲ್ಲಿ ಗಣಪತಿ ಬ್ಯಾಂಕಿನಲ್ಲಿ ಪಿಗ್ಮಿ ಕಲೆಕ್ಷನ್ ಗೆ ಅಂತ ಸೇರಿದ.ನಾನು ಬೆಂಗಳೂರಿಗೆ ಬಂದು ಪತ್ರಕರ್ತನಾದೆ.
ಆದರೆ ಇಬ್ಬರ ಮಧ್ಯೆ ಇದ್ದ ಆ ಗೆಳೆತನ ಮಾತ್ರ ಕಡಿಮೆಯಾಗಲೇ ಇಲ್ಲ.ಪತ್ರಿಕೋದ್ಯಮದ ಜಂಜಾಟದಲ್ಲಿ ನಾನು ಊರ ಕಡೆ ಹೋಗುವುದನ್ನೇ ಕಡಿಮೆ ಮಾಡಿದೆ.ಅರ್ಪಿತಾ,ಅಭಿಮಾನಿ,ಸುದ್ದಿಸಂಗಾತಿ,ಕರ್ನಾಟಕ ಮಲ್ಲ,ಮಂಗಳೂರು ಮಿತ್ರ,ರಾಜಕೀಯ ರಂಗ ಅಂತೆಲ್ಲ ಕೆಲಸ ಮಾಡಿದೆ.ಆಮೇಲೆ ಆಂದೋಲನ,ಹಾಯ್ ಬೆಂಗಳೂರ್,ನಾವಿಕ,ತರಂಗದಂತಹ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಾ ಬಿಜಿಯಾಗಿಬಿಟ್ಟೆ.
ಇಂತಹ ಸಂದರ್ಭದಲ್ಲೇ ಬಂತು ಆ ಆಘಾತಕಾರಿ ಸುದ್ದಿ.ಗಿರಿ, ಇದ್ದಕ್ಕಿದ್ದಂತೆ ತೀರಿಕೊಂಡು ಬಿಟ್ಟಿದ್ದ(2004)ಪಿಗ್ಮಿ ಕಲೆಕ್ಷನ್ ಗೆ ಅಂತ ಹೊರಟಿದ್ದ ಹುಡುಗನ ಬಳಿ ಹಣ ದೋಚಲು ಕೆಲವರು ಹಿಡಿದುಕೊಳ್ಳುವ ಯತ್ನ ಮಾಡಿದ್ದಾರೆ.ಈತ ತಪ್ಪಿಸಿಕೊಳ್ಳುವ ಭರದಲ್ಲಿ ಬಿದ್ದು ಬಿಟ್ಟಿದ್ದಾನೆ.ಫಿನಿಷ್.ಹುಡುಗ ತೀರಿಕೊಂಡು ಬಿಟ್ಟ.
ಸಾವಿಗೆ ಬಹುಶ: ನಾನು ಅವತ್ತು ಹೆದರಿಕೊಂಡಷ್ಟು ಯಾವತ್ತೂ ಹೆದರಿರಲಿಲ್ಲ.ಅಷ್ಟೊತ್ತಿಗಾಗಲೇ ಕಾರ್ಗಿಲ್ ನ ಯುದ್ಧರಂಗಕ್ಕೆ ರವಿಬೆಳಗೆರೆ ಅವರ ಜತೆಗೂಡಿ ಹೋಗಿ ಹೆಣಗಳ ದಂಡು ನೋಡಿ ಮಂಕಾಗಿದ್ದೆ,ಗುಜರಾತ್ ಭೂಕಂಪದ ಸಂದರ್ಭದಲ್ಲಿ ಹೋಗಿ ಹೆಜ್ಜೆ ಹೆಜ್ಜೆಗೂ ಹೆಣಗಳನ್ನು ನೋಡಿ ಕಣ್ನೀರಾಗಿದ್ದೆ.ಆದರೆ ಒಬ್ಬ ಗಿರಿಯ ಸಾವು ಮಾತ್ರ ನನ್ನ ಶಕ್ತಿಯನ್ನೇ ಕುಗ್ಗಿಸಿಬಿಟ್ಟಿತ್ತು.ಯಾರ ಜತೆಗಾದರೂ ನಮಗೆ ಆತ್ಮಸಾಂಗತ್ಯ ಅಂತಿದ್ದರೆ ಹೀಗಾಗುವುದು ಸಹಜ.
ಅವತ್ತು ವಿಷಯ ತಿಳಿದಾಗ ವಿಧಾನಸೌಧದಲ್ಲಿದ್ದವನು ಸೀದಾ ಊರಿಗೆ ಅಂತ ಹೊರಡಲು ಮೆಜೆಸ್ಟಿಕ್ ಗೆ ಹೊರಟೆ.ಯಾಕೋ ಏನೋ?ಬಸ್ಸು ಹತ್ತಲು ಮನಸ್ಸೇ ಬರಲಿಲ್ಲ.ಬಾಲ್ಯದಲ್ಲಿ ಬೂದಿಬೆಟ್ಟದಿಂದ ಹಾರಿ ಈಜುವುದರಿಂದ ಹಿಡಿದು,ರೈಲ್ವೇ ಸ್ಟೇಷನ್ನಿನ ಬಳಿ ಹೋಗಿ ಗುಡ್ಡಿಗೇರಣ್ಣು ತಿನ್ನುವ ತನಕ ಜತೆಯಲ್ಲಿರುತ್ತಿದ್ದ ಸ್ನೇಹಿತ.ನೋಡಿದವರು,”ಇವರಿಬ್ಬರ ದೇಹ ಮಾತ್ರ ಬೇರೆ,ಆತ್ಮ ಮಾತ್ರ ಒಂದೇ” ಅನ್ನುವಷ್ಟು ಸಲಿಗೆ ಇದ್ದ ಗೆಳೆಯ.ಈಗ ಇದ್ದಕ್ಕಿದ್ದಂತೆ ತೀರಿಕೊಂಡಿದ್ದಾನೆ.ಅ ಮುಖ ನೋಡುವುದು ಹೇಗೆ?
ಸದಾ ಲವಲವಿಕೆಯಲ್ಲಿರುತ್ತಿದ್ದ ಜೀವ,ತಣ್ಣಗೆ ಮಲಗಿರುವುದನ್ನು ನೋಡುವುದು ಹೇಗೆ?ಏನೇ ಮಾಡಿದರೂ ಆ ಮುಖವನ್ನು ನೋಡಲು ಮನಸ್ಸು ಒಪ್ಪಲೇ ಇಲ್ಲ.ಹೀಗಾಗಿ ಕಾಲೆಳೆಯುತ್ತಲೇ ಮೆಜೆಸ್ಟಿಕ್ಕಿನಿಂದ ಪ್ರೆಸ್ ಕ್ಲಬ್ಬಿಗೆ ನಡೆದುಕೊಂಡು ಬಂದು ಸುಮ್ಮನೆ ಕುಂತು ಬಿಟ್ಟೆ.ಕಣ್ಣಿನಲ್ಲಿ ಆಯಾಚಿತವಾಗಿ ನೀರು ಸುರಿಯುತ್ತಿತ್ತು.ಅವತ್ತು ನನ್ನನ್ನು ನೋಡಿದ ಹಿರಿಯ ಪತ್ರಕರ್ತ ಮೀಸೆ ರಂಗಣ್ಣ, ವಿಷಯ ತಿಳಿದವರೇ, “ಜಾಣ ಮರಿ,ಅಳಬಾರದು.ಸತ್ತವರು ಎಲ್ಲಿಗೂ ಹೋಗಿರುವುದಿಲ್ಲ.ನಮ್ಮ ಅಕ್ಕ ಪಕ್ಕವೇ ಇರುತ್ತಾರೆ.ನಮ್ಮ ಸುಖ ಸಂತೋಷ ನೋಡಿ ಖುಷಿ ಪಡುತ್ತಾರೆ.ಸಾವಿಗಾಗಿ ಅಳಬಾರದು.ನಾವು ಅಳುತ್ತಿದ್ದರೆ ಅವರು ದೇವರ ಬಳಿ ನೆಮ್ಮದಿಯಾಗಿ ಹೋಗಬೇಕಲ್ಲ?ಎಂದು ಸಮಾಧಾನಿಸಿದರು.
ಆದರೆ ನನ್ನಂತವನಿಗೇ ಇಷ್ಟು ಆಘಾತವಾಗಿರಬೇಕು ಎಂದರೆ ಗಿರಿಯ ತಾಯಿ(ನನ್ನ ಚಿಕ್ಕತ್ತೆ)ಗೆ ಎಷ್ಟು ಆಘಾತವಾಗಿರಬೇಕು?ಬಾಲ್ಯದಿಂದಲೇ ಕಷ್ಟಗಳನ್ನು ಕಂಬಳಿಯಂತೆ ಹೊದ್ದವರು ನನ್ನ ಚಿಕ್ಕತ್ತೆ,ಸಣ್ಣ ವಯಸ್ಸಿನಲ್ಲೇ ಶಂಕರ ಶೆಂಡ್ಗೆ ಅವರನ್ನು ಮದುವೆಯಾಗಿ ಸಿರಸಿಗೆ ಹೋದವರು ಹತ್ತು ಹನ್ನೆರಡು ವರ್ಷ ಅನ್ನುವಷ್ಟರಲ್ಲಿ ಪತಿಯನ್ನು ಕಳೆದುಕೊಂಡರು.ಆರು ಮಕ್ಕಳೊಂದಿಗೆ ತವರು ಮನೆ ಇದ್ದ ಸಾಗರಕ್ಕೆ ಬಂದರು.
ಅವರ ಆರು ಮಕ್ಕಳ ಪೈಕಿ ದೊಡ್ಡವರು ರೇಣುಕಕ್ಕ,ಆನಂತರ ವಿಠ್ಢಲ,ಶೋಭಾ,ವಜ್ರೇಶ್ವರಿ,ಪ್ರಕಾಶ(ಗಿರಿ)ಹಾಗೂ ಮೀರಾ.ಈ ಆರು ಮಕ್ಕಳನ್ನು ಸಾಕುವುದರ ಜತೆಗೆ ಮಧ್ಯೆ ಮಧ್ಯೆ ನಮ್ಮನ್ನೂ ಕಾಲಕಾಲಕ್ಕೆ ನೋಡಿಕೊಳ್ಳುವ ಅನಿವಾರ್ಯತೆ ಅವರಿಗೆ ಬರುತ್ತಿತ್ತು.ನಮ್ಮಜ್ಜಿ ತುಳಸೀಬಾಯಿ,ತನ್ನ ಇಳಿವಯಸ್ಸಿನಲ್ಲೂ ಸಾಗರದಿಂದ ಇಪ್ಪತ್ತೈದು ಕಿಲೋಮೀಟರು ದೂರ ಇರುವ ಆನಂದಪುರದ ಸಂತೆಗೆ ಹೊಲಿದ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿಕೊಂಡು ಬರುತ್ತಿದ್ದರು.ಆನಂತರ ಈ ಕೆಲಸ ನಮ್ಮ ಚಿಕ್ಕತ್ತೆಯ ಹೆಗಲಿಗೇರಿತು.
ಆಗ ಬಹುತೇಕ ಎಲ್ಲರ ಮನೆಯಲ್ಲೂ ಕಷ್ಟ ಅಂತಿತ್ತು.ಆದರೆ ನಮ್ಮ ಚಿಕ್ಕತ್ತೆಯದು ದುಪ್ಪಟ್ಟು ಕಷ್ಟ.ಈಗ ಮಕ್ಕಳೆಲ್ಲ ದೊಡ್ಡವರಾಗಿ ನೆಲೆಯಾಗುವ ಕಾಲಕ್ಕೆ ಗಿರಿ ಹೋಗಿಬಿಟ್ಟ.ಅದನ್ನು ಆ ತಾಯಿ ಹೇಗೆ ಸಹಿಸಿಕೊಳ್ಳುತ್ತಾರೋ?ನಾನಂತೂ ನಾಲ್ಕು ದಿನ ಚಡಪಡಿಸಿಬಿಟ್ಟೆ.
ಬದುಕು ಎಂದರೆ ಇಷ್ಟೆಲ್ಲ ಕಷ್ಟ ಪಡಬೇಕೇ?ಕನಿಷ್ಟ ಅದಕ್ಕೆ ಒಂದು ಮಟ್ಟದ ಕರುಣೆಯಾದರೂ ಇರಬಾರದೇ?ನನ್ನತ್ತೆಯ ವಿಷಯದಲ್ಲಿ ಅದು ಇಷ್ಟು ನಿಷ್ಕರುಣಿಯಾಗಬೇಕೇ?ಮೊದಲೇ ಸಾವು ಅಂತ ಕೇಳಿದರೆ ಆ ಜಾಗಕ್ಕೇ ಹೋಗದವನು ನಾನು.ಗಿರಿಯ ಸಾವಿನಿಂದ ಆ ಭಾವ ಮನಸ್ಸಿನಲ್ಲಿ ಮತ್ತಷ್ಟು ಗಟ್ಟಿಯಾಗಿ ಬಿಟ್ಟಿತು.
ಹೋಗಬೇಕು ಅಂತ ಜೀವ ತುಡಿಯುತ್ತಿದ್ದರೂ,ಬದುಕಿದ್ದಾಗ ಚುಟುಪುಟು ಅಂತ ಮಾತನಾಡುತ್ತಿದ್ದ ಜೀವಗಳು ಸತ್ತ ಕೂಡಲೇ ತಣ್ಣಗೆ ಮಲಗಿಕೊಂಡು ಬಿಡುತ್ತವಲ್ಲ?ಅದನ್ನು ನೋಡಲು ನನ್ನ ಮನಸ್ಸು ಒಪ್ಪುತ್ತಲೇ ಇರಲಿಲ್ಲ.ಹೀಗಾಗಿ ನಾನು ನನ್ನ ದೊಡ್ಡಪ್ಪಂದಿರಾದ ತುಳಜಪ್ಪ,ರಾಣೋಜಿರಾವ್,ದತ್ತೋಜಿರಾವ್,ದೊಡ್ಡತ್ತೆ ಸರಸ್ವತಿ ಬಾಯಿ,ನನ್ನ ದೊಡ್ಡಮ್ಮ ಸಾವಿತ್ರಿಬಾಯಿ,ವರಮಹಾಲಕ್ಷ್ಮೀ ಅವರೆಲ್ಲ ಬದುಕಿನ ಒಂದೊಂದು ಕಾಲಘಟ್ಟದಲ್ಲಿ ತೀರಿಕೊಂಡಾಗ ಅವರ ಅಂತ್ಯಸಂಸ್ಕಾರಕ್ಕೆ ಅಂತ ಹೋಗಲೇ ಇಲ್ಲ.
ಹೋದರೆ ನಗುನಗುತ್ತ ಎದುರುಗೊಳ್ಳುತ್ತಿದ್ದ ಆ ಜೀವಗಳು ತಣ್ಣಗೆ ಮಲಗಿರುವುದನ್ನು ನಾನು ಹೇಗೆ ನೋಡಲಿ?ಎಂಬ ನೋವು.ಒಂದೊಂದು ಸಲ ನೆನಪಿಗೆ ಬಂದರೆ ನನ್ನಜ್ಜಿ ಗಂಗಮ್ಮ(ನನ್ನ ತಾಯಿ ಪ್ರಭಾವತಿ ಬಾಯಿ ಅವರ ತಾಯಿ)ಅವರಿಂದ ಹಿಡಿದು ಚಿಕ್ಕಜ್ಜ ನಾಗೇಶ್ ರಾವ್,ರಘುರಾಮಪ್ಪ ಅವರಿದ್ದ ದಿನಗಳು ಕಾರಂಜಿಯಂತೆ ಚಿಮ್ಮಿ ಬಿಡುತ್ತವೆ.ಮನಸ್ಸು ಮಂಕಾಗಿ ಬಿಡುತ್ತದೆ.
ಬಾಲ್ಯದ ಸುಖದ ದಿನಗಳೆಲ್ಲ ಮುಗಿದ ನಂತರ ಮನುಷ್ಯ ಬರೀ ನೆಮ್ಮದಿಯನ್ನು ಅರಸುವ ಭ್ರಮೆಯಲ್ಲೇ ಕಾಲ ಕಳೆಯುತ್ತಾನಾ?ಅನ್ನಿಸುತ್ತದೆ.ಯಾಕೆಂದರೆ ನಾವು ಮಾಡುತ್ತಿರುವ ಕೆಲಸದಿಂದ ಹಿಡಿದು ಎಲ್ಲವೂ ಒಂದೊಂದು ಸಲ ಬೋರ್ ಅನ್ನಿಸಿ ಬಿಡುತ್ತದೆ.ಯಾಕೆ ಇದನ್ನೆಲ್ಲ ಮಾಡುತ್ತಿದ್ದೇವೆ ಅನ್ನಿಸುತ್ತದೆ.
ಆಗೆಲ್ಲ ಜೀವನದ ಅಶಾಶ್ವತೆಯನ್ನು ನೆನಪಿಸುವ ಕತೆಗಳನ್ನು ನೆನಪಿಸಿಕೊಳ್ಳುತ್ತೇನೆ.ಇಂತದೇ ಒಂದು ಕತೆ ಅಲೆಗ್ಸಾಂಡರ್ ನದು.ಇತಿಹಾಸದ ಪುಟಗಳಲ್ಲಿ ಆತ ಜಗದೇಕ ವೀರ.ಆತನಿಗೊಬ್ಬ ಗುರು ಇರುತ್ತಾನೆ.ಡಯೋಜಿನಿಯಸ್ ಅಂತ.ಒಂದು ಸಲ ಆತ ಸಮುದ್ರದ ದಡದಲ್ಲಿ ಮಲಗಿದ್ದಾಗ ಅಲೆಗ್ಸಾಂಡರ್ ಅಲ್ಲಿಗೆ ಬರುತ್ತಾನೆ.
ಬಂದವನು ಗುರುಗಳನ್ನು ನೋಡಿದ ಕೂಡಲೆ ವಂದಿಸಿ,ಗುರುಗಳೇ ನನಗೆ ಆಶೀರ್ವದಿಸಿ.ನಾನು ಜಗತ್ತನ್ನು ಗೆಲ್ಲಲು ಹೊರಟಿದ್ದೇನೆ.ನಿಮ್ಮ ಆಶೀರ್ವಾದವಿರಲಿ ಎನ್ನುತ್ತಾನೆ.ಆಗ ಡಯೋಜಿನಿಯಸ್ ಮಲಗಿದ ಜಾಗದಿಂದ ತಿರುಗಿ ನೋಡಿ,ಓ! ಜಗತ್ತನ್ನು ಗೆಲ್ಲಲು ಹೊರಟಿದ್ದೀಯ?ಒಳ್ಳೆಯದು.ಗೆದ್ದು ಏನು ಮಾಡುತ್ತೀಯ?
ಅರೇ,ಜಗತ್ತನ್ನು ಗೆದ್ದೆ ಅಂದರೆ ನಾನು ಹೇಳಿದಂತೆ ಎಲ್ಲವೂ ನಡೆಯುತ್ತದೆ.ಸುಖವಾಗಿರೋಣ ಗುರುಗಳೇ ಎನ್ನುತ್ತಾನೆ ಅಲೆಗ್ಸಾಂಡರ್.ಹೌದಾ,ಅದಕ್ಕಾಗಿ ಅಷ್ಟೇಕೆ ಕಷ್ಟ ಪಡುತ್ತೀಯ?ಇಲ್ಲಿ ನೋಡು ನಾನು ಸುಖವಾಗಿದ್ದೀನಲ್ಲ?ಈಗಲೇ ಸುಖವಾಗಿರು ಬಾ ಎನ್ನುತ್ತಾನೆ.ಆಗ ಅಲೆಗ್ಸಾಂಡರ್ ಮೌನಿ.
ಆಗ ಡಯೋಜಿನಿಯಸ್ ವಿಷಾದದಿಂದ ನಕ್ಕು,ಸ್ವಲ್ಪ ಪಕ್ಕಕ್ಕೆ ಸರಿ ಎನ್ನುತ್ತಾನೆ.ಅಲೆಗ್ಸಾಂಡರ್ ಗೆ ಮತ್ತೆ ಆಶ್ಚರ್ಯ.ಯಾಕೆ ಗುರುಗಳೇ?ಅನ್ನುತ್ತಾನೆ.ನಾನು ಸೂರ್ಯನ ಶಾಖ ತೆಗೆದುಕೊಳ್ಳುತ್ತಿದ್ದೇನೆ.ನೀನು ಜಗತ್ತನ್ನು ಗೆದ್ದ ಮೇಲೆ ನಾನು ಬಯಸಿದಾಗ ಸೂರ್ಯನ ಈ ಶಾಖ ಸಿಗುವಂತೆ ಮಾಡುತ್ತೀಯ?ಎಂದು ಪ್ರಶ್ನಿಸುತ್ತಾನೆ.
ಅಲೆಗ್ಸಾಂಡರ್ ಮರು ಮಾತನಾಡದೆ ತಲೆ ಬಗ್ಗಿಸಿ ಅಲ್ಲಿಂದ ಹೊರಟು ಹೋಗುತ್ತಾನೆ.ಬದುಕೆಂದರೆ ಇದೇ ಅಲ್ಲವೇ?ಸಿಕ್ಕಷ್ಟನ್ನು ನೆಮ್ಮದಿಯಾಗಿ ಅನುಭವಿಸುವುದು?ಸಿಗದೇ ಇದ್ದರೆ ತಣ್ಣಗೆ ಎದ್ದು ಹೋಗುವುದು?ಸಾವಿರಾರು ಕೋಟಿ ರೂ ದುಡಿದೂ ನೆಮ್ಮದಿಯಿಂದ ಊಟ ಮಾಡದ ಜನರನ್ನೂ ಈ ಮೂವತ್ತೆರಡು ವರ್ಷಗಳಲ್ಲಿ ನೋಡಿದ್ದೇನೆ.ಮರುದಿನಕ್ಕೇನು ಅನ್ನುವ ಯೋಚನೆ ಇದ್ದರೂ ದಂಡಿಯಾಗಿ ಉಂಡು,ಹಾಯಾಗಿ ಮಲಗುವವರನ್ನೂ ನೋಡಿದ್ದೇನೆ.ಆದರೆ ಬದುಕಿನಿಂದ ತಣ್ಣಗೆ ಎದ್ದು ಹೋಗುವವರನ್ನು ನೋಡುವುದು ಹೇಗೆ?
ಹಾಗಂತ ಯಾವುದೇ ಸಾವುಗಳನ್ನುನೋಡಿಲ್ಲ ಅಂತಲ್ಲ,ತಂದೆ ಸಮಾನರಾಗಿದ್ದ ಗಣಪತಿರಾವ್ ಅವರಿಂದ ಹಿಡಿದು,ತಾಯಿಯ ಪ್ರೀತಿ ತೋರುತ್ತಿದ್ದ ಹಿರಿಯ ಪತ್ರಕರ್ತ ಮೀಸೆ ರಂಗಣ್ಣ ಅವರ ತನಕ ಕೆಲವರ ಸಾವುಗಳಿಗೆ ಹೋಗಿ ಬಂದಿದ್ದೇನೆ.ಆದರೆ ನೋಡಿ ಬಂದ ಮೇಲೆ ಆವರಿಸುತ್ತಿದ್ದ ಖಿನ್ನತೆ ಮಾತ್ರ ತಿಂಗಳುಗಟ್ಟಲೆ ನನ್ನನ್ನು ಕಾಡಿದೆ.ಹೀಗಾಗಿ ಯಾರೋ ತೀರಿಕೊಂಡಿದ್ದಾರೆ ಎಂದ ಕೂಡಲೇ ನನ್ನದು ಬೆನ್ ಜಾನ್ಸನ್ ಓಟ.
ಮೊನ್ನೆ ಹೀಗೇ ಮಧ್ಯರಾತ್ರಿ,ಗಿರಿ ಕರೆದಂತಾಗಿ ಗಪ್ಪನೆ ಎದ್ದು ಕುಳಿತವನು ಆಮೇಲೆ ಅದು ಕನಸು ಅಂದುಕೊಂಡು ಮಲಗಿಕೊಂಡೆ,ಆದರೆ ಮರುದಿನ ನಿದ್ರೆಯೇ ಬರಲಿಲ್ಲ.ಯಾಕೆಂದರೆ,ಸದಾ ಲವಲವಿಕೆಯಿಂದ ಚುಟುಪುಟು ಅಂತ ಓಡಾಡಿಕೊಂಡಿದ್ದ ನನ್ನ ದೊಡ್ಡತ್ತೆಯ ಮಗಳು ಶರಾವತಕ್ಕ(ಶಿಕ್ಷಣ ಇಲಾಖೆಯಲ್ಲಿದ್ದವರು) ಅವತ್ತು ಇದ್ದಕ್ಕಿದ್ದಂತೆ ತೀರಿಕೊಂಡಿದ್ದರು.ಹೀಗೆ ಅವಾಕ್ಕಾಗಿ ನೋಡುತ್ತಿದ್ದಂತೆಯೇ ನನ್ನ ದೊಡ್ಡಪ್ಪ ರಾಣೋಜಿರಾವ್ ಅವರ ಮಗ ಸುಬ್ಬಣ್ಣ,ಮೂರನೇ ದೊಡ್ಡಪ್ಪ ವಸಂತರಾವ್ ಅವರ ಮಗ ಅಮರಣ್ಣ ತೀರಿಕೊಂಡರು.ಇದೇ ರೀತಿ ನನ್ನ‌ಬದುಕಿಗೆ ದಕ್ಕಿದ ಸಹೋದರ ವಿಲಿಯಂ ಫರ್ನಾಂಡೀಸ್ ಅನೂಹ್ಯ ರೀತಿಯಲ್ಲಿ ಮರೆಯಾದರು.
ಯಥಾ ಪ್ರಕಾರ ನನ್ನದು ತಲ್ಲಣಗೊಂಡ ಆತ್ಮ.
ಕೊರೋನಾ ಬಂದ ಮೇಲಂತೂ ಬಾಲ್ಯದ ನನ್ನ ಬದುಕಿಗೆ ದಕ್ಕಿದ್ದ ಅದೆಷ್ಟು ಜೀವಗಳು ಮರೆಯಾದವು?
ಹೀಗೆಲ್ಲ ಆಗದೆ ಬಾಲ್ಯದ ಬದುಕು ಸ್ಥಿರವಾಗಿದ್ದಿದ್ದರೆ ಈ ಸಾವುಗಳ ಸುದ್ದಿಯೇ ನನ್ನ‌ ಮನಸ್ಸಿಗೆ ಅಪ್ಪಳಿಸುತ್ತಿರಲಿಲ್ಲ ಅಲ್ಲವೇ ಅನ್ನಿಸುತ್ತದೆ.
ಅದರ ಬೆನ್ನಿಗೇ ಮನಸ್ಸಿಗೆ ಕತ್ತಲು ಕವಿದಂತಾಗಿ,
ಸಾವು ಇರದ ಮನೆಯಿಂದ ಸಾಸಿವೆ ಕಾಳು ತರುವುದು ಹೇಗೆ?ಅನ್ನಿಸಿ ಸುಸ್ತಾಗುತ್ತದೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here