ಮರದ ತೊಗಟೆಯೂ, ಜೇಡವೂ…..

0
172

ಮೊನ್ನೆ ಕ್ಲಾಸ್ ಮುಗಿಸಿಕೊಂಡು ಕಾಲೇಜಿನ ಕಂಪೌಂಡ್ ನಲ್ಲಿದ್ದ ಮರದ ಬಳಿ ಫೋನ್ ನಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದೆ. ಮಾತನಾಡುತ್ತಲೇ ಮರದ ತೊಗಟೆಯನ್ನು ನೋಡುತ್ತ, ಅದರ ತೊಗಟೆಯ ವಿನ್ಯಾಸ, ಬಣ್ಣ ಆಕೃತಿಯನ್ನು ಗಮನಿಸುತ್ತಿದ್ದೆ. ಮಾತಿನ ಕಡೆ ಲಕ್ಷ್ಯವಿದ್ದರೂ ನನ್ನ ಗಮನ ತೊಗಟೆಗಳ ಸಂದುಗಳ ಕಡೆಯೇ ಇತ್ತು. ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಅದೂ ಒಂದು. ಅಲ್ಲಿ ವಿವಿಧ ಬಗೆಯ ಕೀಟಗಳು ಕಾಣುತ್ತವೆ ಅಂತ ಹಾಗೆ ಗಮನಿಸೋದು

ತೊಗಟೆಯ ಮಧ್ಯೆ ಏನೋ ಸರಿದಂತಾಯಿತು. ತೊಗಟೆಯೇ ಸರಿಯಿತೋ ಏನೋ ಗೊತ್ತಾಗಲಿಲ್ಲ. ಮತ್ತೆ ಮಾತಿನ ಕಡೆ ಗಮನ. ಈ ಬಾರಿ ಮತ್ತೆ ತೊಗಟೆ ಸರಿದಂತಾಯಿತು. ಅರೆ ! ಇದೇನಿದು ? ಎಂದು ದಿಟ್ಟಿಸಿ ನೋಡಿದೆ. ಹೌದು ತೊಗಟೆಯ ಬಣ್ಣ, ವಿನ್ಯಾಸವನ್ನೇ ಹೊಂದಿದ ಜೇಡವೊಂದು ಬೇಟೆಯೊಂದನ್ನು ಹಿಡಿದಿತ್ತು. ಬಹುಶ: ಅದು ಕಣಜ ಇರಬಹುದೇನೋ. ನೇರವಾಗಿ ತನ್ನ ಮುಂಭಾಗದ ಕೊಂಡಿಗಳಿಂದಲೇ ಅದು ಬೇಟೆ್ಯನ್ನು ಹಿಡಿದಿತ್ತು. ಮೊದಲಿಗೆ ಅದು ನನಗೆ ಸ್ಪಷ್ಟವಾಗಿ ಕಂಡಿರಲಿಲ್ಲ. ಯಾಕೆಂದರೆ ಮರದ ತೊಗಟೆಯ ಬಣ್ಣ ವಿನ್ಯಾಸ ಈ ಜೇಡಕ್ಕೆ ಎಷ್ಟೊಂದು ಹೊಂದಿಕೆಯಾಗಿತ್ತೆಂದರೆ ನಾನು ಸ್ವಲ್ಪ ಕಣ್ಣನ್ನು ಆಚೀಚೇ ತಿರುಗಿಸಿದ್ದರೂ ಇದನ್ನು ಮತ್ತೆ ಹುಡುಕಬೇಕಿತ್ತು. ಅಷ್ಟೊಂದು ಹೊಂದಾಣಿಕೆ. ತಕ್ಷಣವೇ ಸ್ನೇಹಿತನಿಗೆ ’ಇರು ಇರು ’ ಎಂದು ಹೇಳಿ ಕಾಲ್ ಕಟ್ ಮಾಡಿ, ಮೊಬೈಲ್ ನಲ್ಲಿ ಈ ಜೇಡನ ಚಿತ್ರ ಸೆರೆ ಹಿಡಿದೆ.

ಜೀವಜಾಲದಲ್ಲಿ ಶತ್ರುಗಳಿಂದ ತಪ್ಪಿಸಿಕೊಳ್ಳಲು ಮತ್ತು ಬೇಟೆಯಾಡಲು ಹಲವಾರು ಜೀವಿಗಳು ಈ ತಂತ್ರವನ್ನು ಉಪಯೋಗಿಸುತ್ತವೆ. ಶತ್ರುಗಳ ಕಣ್ಣಿಗೆ ಮಣ್ಣೆರಚುವ ಸುಲಭ ವಿಧಾನವಿದು. ಹಸಿರು ಮಿಡತೆ ಹುಲ್ಲಿನಲ್ಲಿ ಕಾಣದು, ಹಸಿರು ಹಾವು ಹಸಿರು ಗಿಡದ ಎಲೆಗಳ ಮರೆಯಲ್ಲಿ ಕಾಣದು. ಹುಲಿ ಒಣ ಹುಲ್ಲುಗಾವಲಿನಲ್ಲಿ ಕಾಣದು, ಹಿಮಕರಡಿ ಹಿಮದಲ್ಲಿ ಕಾಣದು ಹೀಗೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಈ ಜೇಡವೂ ಸಹ ಇದೇ ತಂತ್ರವನ್ನೇ ಉಪಯೋಗಿಸಿ ಬಹುಶ: ಬೇಟೆಯಾಡಿರುತ್ತದೆ. ಇದರ ದೇಹ ಪುಟ್ಟದಾದರೂ ಅಷ್ಟು ದೊಡ್ದ ಕಣಜವನ್ನು ಬೇಟೆಯಾಡಿರುವುದು ಅಚ್ಚರಿಗಳಲ್ಲೊಂದು.

ಜೇಡಗಳಲ್ಲಿಯೇ ಹಲವಾರು ಬಗೆಗಳಿವೆ. ಸಾಮಾನ್ಯವಾಗಿ ನಾವು ನೋಡುವ ಜೇಡಗಳು ಬಲೆಗಳನ್ನು ಹೆಣೆದರೆ, ಮತ್ತೆ ಕೆಲವು ಬಲೆ ಹೆಣೆಯದೇ ನೇರವಾಗಿ ಬೇಟೆಯಾಡುತ್ತವೆ. ಎಲ್ಲವೂ ಮಾಂಸಾಹಾರಿಗಳೇ. ಆದರೆ ಇವುಗಳ ಸಾಮರ್ಥ್ಯ ಮಾತ್ರ ಅಸಾಮಾನ್ಯ. ಬಲೆಯನ್ನು ನಿರ್ಮಿಸುವ ಜೇಡಗಳು, ಬಲೆಯಲ್ಲಿ ಬೇಟೆಯನ್ನು ಹಿಡಿದು ಅವುಗಳನ್ನು ತಮ್ಮ ಬಲೆಯಿಂದ ಸುತ್ತಿ ಸುತ್ತಿ ಕೊಂದು ತಿಂದರೆ, ಈ ಬಗೆಯ ಜೇಡಗಳು ತಮ್ಮ ಇಕ್ಕಳದಂತಹ ಕೊಂಡಿಯಿಂದ ಬೇಟೆಯನ್ನು ಹಿಡಿದು ಸಾಯಿಸಿ ತಿನ್ನುತ್ತವೆ. ಒಂದೊಂದೂ ಒಂದೊಂದು ಬಗೆ. ಇದನ್ನೆಲ್ಲ ಕಂಡೋ ಏನೋ ’ಸ್ಪೈಡರ್ ಮ್ಯಾನ್’ ಚಲನಚಿತ್ರ ತಯಾರಾಗಿ ಜಗತ್ತಿನಾದ್ಯಂತ ಸ್ಪೈಡರ್ ಮ್ಯಾನ್ ಪ್ರಸಿದ್ಧನಾದದ್ದು.

ಜೀವಜಗತ್ತೇ ವಿಚಿತ್ರವಾದುದು, ಅರಿತಷ್ಟೂ ಕಡಿಮೆಯೇ.

ಸಿದ್ಧರಾಮ ಕೂಡ್ಲಿಗಿ
ನನ್ನ ಮೊಬೈಲ್ ನಲ್ಲಿ ಕ್ಲಿಕ್ಕಿಸಿದ ಚಿತ್ರಗಳು.

LEAVE A REPLY

Please enter your comment!
Please enter your name here