ಪಂಚಾಯತ್‍ರಾಜ್ ಯೋಜನೆಗಳ ಕುರಿತು ಕಾರ್ಯಾಗಾರ,ಗ್ರಾಮ ಪಂಚಾಯತಿಗಳು ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಿ- ಮಹಾಂತೇಶ್ ಬೀಳಗಿ.

0
81

ದಾವಣಗೆರೆ ಜು. 23:ದೇಶದ ಹೃದಯ ಗ್ರಾಮಗಳಲ್ಲಿದೆ. ಗ್ರಾಮಗಳು ಬೆಳೆದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ, ಹೊಸ ಹೊಸ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿಸುವ ಮಹತ್ವದ ಜವಾಬ್ದಾರಿ ಗ್ರಾಮ ಪಂಚಾಯತಿಗಳ ಮೇಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

75ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ಹಾಗೂ ಜಿಲ್ಲಾ ಪಂಚಾಯತಿ ಇವರುಗಳ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅಭಿವೃದ್ಧಿ ವಿಷಯಗಳ ಕುರಿತು ನಗರದ ಹದಡಿ ರಸ್ತೆಯಲ್ಲಿನ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಅವರು ಮಾತಾಡಿದರು.

ಕೋವಿಡ್ ಸಂಕಷ್ಟದ ನಡುವೆಯೇ ಗ್ರಾಮ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿಸಿದ್ದು ಸವಾಲಿನ ವಿಷಯವಾಗಿತ್ತು. ಇವೆಲ್ಲವನ್ನೂ ಮೀರಿ ಯಶಸ್ವಿಯಾಗಿ ಚುನಾವಣೆ ನಡೆಸಿ ಅನುಷ್ಠಾನಗೊಳಿಸಿದ್ದೇವೆ. ಈ ಬಾರಿ ಸ್ನಾತಕೋತ್ತರ ಪದವಿ, ಸಾಫ್ಟ್‍ವೇರ್ ಇಂಜಿನಿಯರ್‍ಗಳು ಕೂಡ ಗ್ರಾಮ ಪಂಚಾಯತಿ ಸದಸ್ಯರು, ಅಧ್ಯಕ್ಷರುಗಳಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಅಂತಹವರು ತಮ್ಮ ಪ್ರತಿಭೆ, ಸಾಮಥ್ರ್ಯ ವಿನಿಯೋಗಿಸಿ, ಹೊಸ ಹೊಸ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಮಾದರಿ ಗ್ರಾಮಗಳನ್ನು ನಿರ್ಮಿಸಲು, ಸ್ವಾವಲಂಬಿ ಗ್ರಾಮಗಳ ನಿರ್ಮಾಣಕ್ಕೆ ಒಳ್ಳೆಯ ಸದಾವಕಾಶವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು, ವಿದ್ಯುತ್ ಪೂರೈಕೆ, ಗ್ರಾಮಗಳ ಸ್ವಚ್ಛತೆಯ ಸಂಪೂರ್ಣ ಜವಾಬ್ದಾರಿ ಗ್ರಾಮ ಪಂಚಾಯತಿಗಳ ಮೇಲಿದೆ. ಹೀಗಾಗಿಯೇ ಕೇಂದ್ರ ಸರ್ಕಾರದಿಂದ ವಿವಿಧ ಅಭಿವೃದ್ಧಿ ಯೋಜನೆಗಳ ಅನುದಾನ ನೇರವಾಗಿ ಗ್ರಾಮ ಪಂಚಾಯತಿಗಳಿಗೆ ಬಂದು ಸೇರುತ್ತದೆ. ಗ್ರಾಮ ಪಂಚಾಯತಿ ಚುನಾವಣೆ ಪಕ್ಷ ರಹಿತ ಚುನಾವಣೆಯಾಗಿದ್ದು, ಗ್ರಾ.ಪಂ. ಪ್ರತಿನಿಧಿಗಳು ರಾಜಕೀಯ ಮಾಡುವುದನ್ನು ಬಿಟ್ಟು, ಗ್ರಾಮಗಳ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಗ್ರಾಮ ಪಂಚಾಯತಿಗಳಲ್ಲಿ ಅಧ್ಯಕ್ಷರಾಗಿರುವ ಮಹಿಳೆಯರ ಗಂಡಂದಿರು ತಾವೇ ಗ್ರಾ.ಪಂ. ಅಧ್ಯಕ್ಷರೆಂದು ಹೇಳಿಕೊಂಡು ಓಡಾಡುತ್ತಾರೆ. ಖುದ್ದು ತಾವೇ ಇದನ್ನು ಕಂಡಿದ್ದೇನೆ. ಹೀಗಾಗಿ ಮಹಿಳಾ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ತಮ್ಮ ಅಧಿಕಾರವನ್ನು ತಾವೇ ಚಲಾಯಿಸಬೇಕು. ಒಂದು ವೇಳೆ ಯಾವುದೇ ಮಾಹಿತಿ ತಿಳಿಯದಿದ್ದರೆ ಪಿಡಿಒ ಗಳಿಗೆಅಥವಾ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಕೆಲಸಗಳಿಗೆ ಕೈ ಹಾಕಬೇಡಿ, ಒಂದು ವೇಳೆ ಒತ್ತಡ ಬಂದಲ್ಲಿ, ಉನ್ನತ ಅಧಿಕಾರಿಗಳಿಂದ ಮಾರ್ಗದರ್ಶನ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯತಿಗಳು ಸ್ವಾವಲಂಬಿಗಳಾಗಲು ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಕಳೆದ ವರ್ಷ ಉತ್ತಮವಾಗಿ ತೆರಿಗೆ ಸಂಗ್ರಹವಾಗಿದ್ದು, ಈ ಬಾರಿಯೂ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕರೆ ನೀಡಿದರು.

ಕಾರ್ಯಾಗಾರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಅವರು, ನೂತನವಾಗಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ, ಕೋವಿಡ್ 02ನೇ ಅಲೆಯ ಸಂಕಷ್ಟ ಎದುರಾಗಿತ್ತು. ಕೋವಿಡ್ ನಿಯಂತ್ರಣಕ್ಕೆ ರಚಿಸಲಾದ ಗ್ರಾ.ಪಂ. ಕಾರ್ಯಪಡೆಯ ಮುಖ್ಯಸ್ಥರಾಗಿ ಅಧ್ಯಕ್ಷರು, ಸೋಂಕು ದೃಢಪಟ್ಟವರಿಗೆ ಆಸ್ಪತ್ರೆ ಅಥವಾ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸುವುದು ಸೇರಿದಂತೆ ಕೋವಿಡ್ ಸರಪಳಿಯನ್ನು ತುಂಡರಿಸಲು ಕೈಗೊಂಡ ಕಾರ್ಯ ನಿಜಕ್ಕೂ ಶ್ಲಾಘನೀಯ. ಗ್ರಾಮ ಪಂಚಾಯತಿಗಳ ಅಭಿವೃದ್ಧಿಯ ದೃಷ್ಟಿಯಲ್ಲಿ ಗ್ರಾಮ ಸಭೆಗಳು ಅತ್ಯಂತ ಮಹತ್ವದ್ದ ವೇದಿಕೆಯಾಗಿದೆ. ಅಂಗನವಾಡಿ, ಶಾಲೆ, ಪಶುಪಾಲನೆ ವ್ಯವಸ್ಥೆ, ನ್ಯಾಯಬೆಲೆ ಅಂಗಡಿ, ಸಾಕ್ಷರತಾ ಕಾರ್ಯಕ್ರಮಗಳು, ಉದ್ಯೋಗಖಾತ್ರಿ ಯೋಜನೆಗಳ ಪರಿವೀಕ್ಷಣೆಯ ಸಂಪೂರ್ಣ ಹೊಣೆ ಗ್ರಾಮ ಪಂಚಾಯಿತಿಗಳಿಗಿದೆ. ಈ ವರ್ಷ ಕೋವಿಡ್ ಕಾರಣದಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಸ್ಥಳೀಯವಾಗಿಯೇ ಉದ್ಯೋಗ ದೊರಕಿಸಲು ‘ದುಡಿಯೋಣು ಬಾರಾ’ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರಕಿದೆ. ಈ ವರ್ಷ ನರೇಗಾ ಯೋಜನೆಯಡಿ 39 ಲಕ್ಷ ಮಾನವದಿನಗಳನ್ನು ಸೃಜಿಸುವ ಗುರಿ ಇದ್ದು, ಈವರೆಗೆ 12 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಘನ ತ್ಯಾಜ್ಯ ವಿಲೇವಾರಿಗಾಗಿ 195 ಗ್ರಾ.ಪಂ. ಗಳ ಪೈಕಿ 13 ಗ್ರಾಮಗಳಲ್ಲಿ ಘಟಕಗಳು ಕಾರ್ಯಾರಂಭಿಸಿವೆ. 100 ಗ್ರಾ.ಪಂ. ಗಳಲ್ಲಿ ಇನ್ನೂ ಕಾಮಗಾರಿ ನಡೆದಿದ್ದು, ಉಳಿದ ಗ್ರಾಮ ಪಂಚಾಯತಿಗಳಲ್ಲಿ ಇನ್ನೂ ಸ್ಥಳ ಅಂತಿಮಗೊಳಿಸುವ ಕಾರ್ಯ ಆಗಿಲ್ಲ, ಹೀಗಾಗಿ ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ದ್ರವ ತ್ಯಾಜ್ಯವನ್ನೂ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ವ್ಯವಸ್ಥೆಗೊಳಿಸಲಾಗುತ್ತಿದೆ ಎಂದರು.

ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳ ಜನರಿಗೆ ಕೈಗೆಟಕುವ ದರದಲ್ಲಿ ಶುದ್ಧ ಕುಡಿಯುವ ನೀರನ್ನು ಮನೆ ಮನೆಗೆ ತಲುಪಿಸಲು 356 ಗ್ರಾಮಗಳಿಗೆ ಯೋಜನೆ ಜಾರಿಗೊಳಿಸಿದ್ದು, ಈವರೆಗೆ 08 ಕಾಮಗಾರಿಗಳು ಪೂರ್ಣಗೊಂಡಿದ್ದು, 213 ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಯೋಜನೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರ ಬಗ್ಗೆ ಕೆಲವು ಗ್ರಾ.ಪಂ. ಸದಸ್ಯರುಗಳೇ ವಿನಾಕಾರಣ ಗೊಂದಲ ಹಾಗೂ ಸಮಸ್ಯೆ ಸೃಷ್ಟಿಸುತ್ತಿರುವುದು ಸಮಂಜಸವಲ್ಲ. ಯೋಜನೆ ಅನುಷ್ಠಾನ ಬಳಿಕ ಗ್ರಾಮ ಪಂಚಾಯತಿಗಳ ನೀರು ಮತ್ತು ನೈರ್ಮಲ್ಯ ಸಮಿತಿಗೇ ನಿರ್ವಹಣೆಯ ಹೊಣೆಯನ್ನು ವಹಿಸಲಾಗುವುದು ಎಂದರು. ವಿವಿಧ ವಸತಿ ಯೋಜನೆಗಳಡಿ ಕಳೆದ 2011 ರಿಂದಲೂ ಇನ್ನೂ ಮನೆಗಳ ನಿರ್ಮಾಣ ನಡೆಯುತ್ತಲೇ ಇದೆ. ದಶಕಗಳೇ ಕಳೆದರೂ ಸಣ್ಣ ಮನೆಗಳನ್ನೂ ಕೂಡ ಪೂರ್ಣಗೊಳಿಸಲಾಗುತ್ತಿಲ್ಲ. ಅನರ್ಹರು ಮತ್ತು ಆಸಕ್ತಿ ಇಲ್ಲದಂತಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಗ್ರಾಮ ಪಂಚಾಯತಿಗಳೇ ಇದಕ್ಕೆ ಹೊಣೆ ಎಂದು ಬೇಸರ ವ್ಯಕ್ತಪಡಿಸಿದ ಸಿಇಒ ಅವರು, ಇನ್ನಾದರೂ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ರಾಜ್ಯ ಕುಡಿಯುವ ನೀರು ಮತ್ತು ನೈರ್ಮಲ್ಯ ಆಯುಕ್ತಾಲಯದ ನಿರ್ದೇಶಕ ಪರಮೇಶ್ವರ ಹೆಗಡೆ ಅವರು ‘ಜಲಜೀವನ್ ಮಿಷನ್’ ಯೋಜನೆ ಕುರಿತು ಹಾಗೂ ಕಾರ್ಡಿಯಾ ಸಂಸ್ಥೆಯ ಮುಖ್ಯಸ್ಥ ಸುದರ್ಶನ ಅವರು ‘ಜೀವ ವೈವಿಧ್ಯತೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿ.ಪಂ. ಉಪಕಾರ್ಯದರ್ಶಿ ಬಿ. ಆನಂದ್, ಮುಖ್ಯ ಯೋಜನಾಧಿಕಾರಿ ಲೋಕೇಶಪ್ಪ, ಯೋಜನಾ ನಿರ್ದೇಶಕ ಜಗದೀಶ್ ಉಪಸ್ಥಿತರಿದ್ದರು.

ಕಾರ್ಯಗಾರದಲ್ಲಿ ಜಿಲ್ಲೆಯ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here