ಭಾರತೀಯ ಸಂಗೀತ ಲೋಕದ ದೊಡ್ಡಸಾಧಕ ಮಹಾನ್ ಕೊಳಲು ವಾದಕರಾದ ಪಂಡಿತ್ ರೋನು ಮಜುಂದಾರ್ ಜನ್ಮ ದಿನ

0
217

ಮಹಾನ್ ಕೊಳಲು ವಾದಕರಾದ ಪಂಡಿತ್ ರೋನು ಮಜುಂದಾರ್ ಭಾರತೀಯ ಸಂಗೀತ ಲೋಕದ ದೊಡ್ಡಸಾಧಕರು.ರೋನು ಮಜುಂದಾರ್ 1965ರ ಜುಲೈ 28ರಂದು ‍ ವಾರಾಣಸಿಯಲ್ಲಿ ಜನಿಸಿದರು. ಮುಂದೆ ಅವರು ಬದುಕು ಕಂಡುಕೊಂಡಿದ್ದು ಮುಂಬೈನಲ್ಲಿ. ತಂದೆಯಿಂದ ಸಂಗೀತದ ಓಂಕಾರ ಹೇಳಿಸಿಕೊಂಡು, ಮುಂದೆ ತಂದೆಯ ಗುರುಗಳಾಗಿದ್ದ ಪಂಡಿತ್ ಪನ್ನಾಲಾಲ್ ಅವರಲ್ಲೇ ತಾವೂ ಕಲಿತರು. ನಂತರ ಪಂಡಿತ್ ಲಕ್ಷ್ಮಣ ಪ್ರಸಾದ್ ಅವರಲ್ಲಿ ಹಾಡುಗಾರಿಕೆ ಕಲಿಯಲು ಆರಂಭಿಸಿದರು. ಅಲ್ಲಿಂದ ಪಂಡಿತ್ ವಿಜಯರಾಘವ್ ರಾವ್ ಅವರ ಶಿಷ್ಯರಾದರು. ಅವರದ್ದು ವಾದ್ಯವೃಂದವಿತ್ತು. ಅವರ ಗುರುಗಳು ಪಂಡಿತ್ ರವಿಶಂಕರ್. ಹಾಗಾಗಿ ಇವರಿಗೆ ರವಿಶಂಕರ್ ಅವರ ಪರಿಚಯವಾಯಿತು. ಜೊತೆಗೆ ಶಿಷ್ಯತ್ವವೂ ಲಭಿಸಿತು.ರೋನು ಮಜುಂದಾರ್ ರವಿಶಂಕರ್ ಅವರೊಂದಿಗೆ ತಿರುಗಾಡುತ್ತಾ ಸಂಗೀತದಲ್ಲಿ ಬೆಳೆಯುತ್ತಾ ಹೋದರು. ಜೊತೆಗೆ ಬದುಕನ್ನೂ ಕಲಿತರು. ಆರ್.ಡಿ.ಬರ್ಮನ್ ಅವರ ಶಿಷ್ಯತ್ವ ಕೂಡ ಲಭಿಸಿತು. “ಸಂಗೀತ ಕಲಿಸುವವರು ಬೇಕಾದಷ್ಟು ಜನ ಸಿಗುತ್ತಾರೆ. ಸಂಗೀತದ ಜೊತೆಗೆ ಬದುಕನ್ನೂ ಕಲಿಸುವವರು ಸಿಗುವುದು ಕಷ್ಟ. ಆದರೆ ಅಂತಹ ಗುರುಗಳು ಸಿಕ್ಕಿದ್ದು ನನ್ನ ಅದೃಷ್ಟ” ಎನ್ನುತ್ತಾರೆ ರೋನು ಮಜುಂದಾರ್.ಹಾಲಿವುಡ್, ಬಾಲಿವುಡ್‌ಗಳಲ್ಲಿಯೂ ಕೊಳಲಿನ ನಿನಾದ ಹರಿಸಿದ್ ಮಜುಂದಾರ್ ಹಾಡುಗಾರಿಕೆಯಿಂದ ಕೊಳಲು ವಾದನಕ್ಕೆ, ಹಿಂದೂಸ್ತಾನಿಯಿಂದ ಕರ್ನಾಟಕಿ ಸಂಗೀತಕ್ಕೆ, ಮತ್ತೆ ಹಿಂದೂಸ್ತಾನಿಗೆ ಜಿಗಿಯುತ್ತ ಎತ್ತರಕ್ಕೆ ಬೆಳೆದಿದ್ದಾರೆ. ರೋನು ಮಜುಂದಾರ್ ಕೊಳಲು ನುಡಿಸುತ್ತಿದ್ದರೆ ಕೇಳುಗರ ಮನದಲ್ಲಿ ಆನಂದದ ಅಲೆ. ತಮ್ಮ ಕೊಳಲಿನ ಜೊತೆಗೆ ಇತರ ಎಲ್ಲ ವಾದನಗಳ ಜುಗಲ್ಬಂದಿಗೆ ಅವರು ಸದಾ ಮುಂದು. ಕೇಳುಗರಿಗೆ ಕರ್ನಾಟಕಿ, ಸಿನೆಮಾ ಸಂಗೀತದ ರುಚಿಯನ್ನೂ ಹತ್ತಿಸಿ ತಾವೂ ಖುಷಿಪಡುವವರು.ರೋನು ಮಜುಂದಾರ್ ತಮ್ಮ ವೃತ್ತಿಯ ಪ್ರಾರಂಭಿಕ ವರ್ಷಗಳಲ್ಲಿ ಗುರು ಪಂಡಿತ್ ವಿಜಯ ರಾಘವ್ ಅವರ ಜೊತೆ ಬೆಂಗಳೂರಿಗೆ ಬಂದು ಪ್ರಭಾತ್ ಕಲಾವಿದರ ಜೊತೆ ಕೆಲಕಾಲ ಇದ್ದರು. ಇಲ್ಲಿಯೇ ಕರ್ನಾಟಕಿ ಕೊಳಲು ವಾದಕ ನಟರಾಜನ್, ತಬಲಾ ವಾದಕ ರವೀಂದ್ರ ಯಾವಗಲ್ ಜೊತೆಗೆ ಕೊಳಲು ನುಡಿಸಿದ್ದರು. ಮೈಸೂರು ಮಂಜುನಾಥ್ ಅವರ ಜೊತೆಗೆ ಮೊದಲ ಜುಗಲ್ಬಂದಿ ನಡೆದಿದ್ದೂ ಇಲ್ಲೇ. ಕದ್ರಿ ಅವರ ಜೊತೆ ಜುಗಲ್ಬಂದಿ ಕೂಡಾ ಇಲ್ಲೇ ನಡೆದಿತ್ತು.ವಿಶ್ವದಾದ್ಯಂತ ತಮ್ಮ ವೇಣುವಾದನದ ಸುಧೆ ಹರಿಸಿರುವ ರೋನು ಮಜುಂದಾರ್ ಅನೇಕ ಪ್ರಖ್ಯಾತ ಅಲ್ಬಂಗಳಲ್ಲೂ ತಮ್ಮ ಸಂಗೀತ ಮೂಡಿಸಿದ್ದಾರೆ. ಎಲ್ಲ ಮಹಾನ್ ಸಂಗೀತಗಾರರೊಂದಿಗಿನ ಅವರ ನಿರಂತರ ಜುಗಲ್ಬಂದಿಗಳು ಪ್ರಸಿದ್ಧಗೊಂಡಿದೆ.ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಗೌರವಗಳು ರೋನು ಮಜುಂದಾರ್ ಅವರಿಗೆ ಸಂದಿವೆ.

ಕೃಪೆ:- ಕನ್ನಡ ಸಂಪದ

LEAVE A REPLY

Please enter your comment!
Please enter your name here