ಗರ್ಭಿಣಿಯರಿಗೆ ಶೇ.100ರಷ್ಟು ಕೋವಿಡ್ ಲಸಿಕೆ ನೀಡುವಂತೆ ಸೂಚನೆ

0
91

ಹಾಸನ ಸೆ.7 :-ಜಿಲ್ಲೆಯಲ್ಲಿರುವ ಎಲ್ಲಾ ಗರ್ಭಿಣಿಯರಿಗೆ ಶೇ.100ರಷ್ಟು ಕೋವಿಡ್ ಲಸಿಕೆಯನ್ನು ಆದ್ಯತೆ ಮೇರೆಗೆ ಹಾಕಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿಂದು ಶಿಶು ಮತ್ತು ತಾಯಿ ಮರಣ ಪ್ರಗತಿ ಪರಿಶೀಲನೆ ಹಾಗೂ ನ್ಯೂಮೋನಿಯಾ ಲಸಿಕೆ ಕುರಿತು ಸಭೆ ನಡೆಸಿ ಮಾತನಾಡಿದ ಅವರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಜಿಲ್ಲೆಯಲ್ಲಿರುವ ಎಲ್ಲಾ ಗರ್ಭಿಣಿ ಸ್ತ್ರೀಯರಿಗೆ ಮುಂದಿನ ಒಂದು ವಾರದೊಳಗೆ ಸಂಪೂರ್ಣ ಲಸಿಕೆಯನ್ನು ನೀಡಲು ಹೆಚ್ಚಿನ ನಿಗಾವಹಿಸಿ ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ತೀವ್ರ ಸಮಸ್ಯೆಯುಂಟಾಗಿರುವ ಗರ್ಭಿಣಿಯರನ್ನು ಗುರುತಿಸಿ ಪಟ್ಟಿ ಮಾಡಿ ಅವರ ಆರೋಗ್ಯದ ಬಗ್ಗೆ ನಿರಂತರ ಮೇಲ್ವಿಚಾರಣೆ ಮಾಡುತ್ತಿರಬೇಕು ಯಾವುದೇ ಸಮಯದಲ್ಲಿ ಆಸ್ಪತ್ರೆಗೆ ಬಂದರೂ ತಕ್ಷಣ ಅವರಿಗೆ ಚಿಕಿತ್ಸೆ ದೊರೆಯುವಂತಾಗಬೇಕು ಎಂದರು.

ಮಾನಸಿಕ ಖಿನ್ನತೆಗೆ ಒಳಗಾಗಿರುವ ಗರ್ಭಿಣಿ ಸ್ತ್ರೀಯರಿಗೆ ಸ್ತ್ರೀರೋಗ ತಜ್ಞರಿಂದ ಸಮಾಲೋಚನೆ ನಡೆಸಿ ಸೂಕ್ತ ತರಬೇತಿ ನೀಡಿ ಎಂದು ಅವರು ಹೇಳಿದರು.

ತಾಲ್ಲೂಕುವಾರು ನಿಗದಿ ಪಡಿಸಿರುವ ಕೋವಿಡ್ ಲಸಿಕೆ ಗುರಿಯನ್ನು ಪೂರ್ಣಗೊಳಿಸಲು ಹೆಚ್ಚಿನ ನಿಗಾವಹಿಸಬೇಕು, ಅಗತ್ಯವಿದ್ದಲ್ಲಿ ಲಸಿಕೆ ನೀಡಲು ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳನ್ನೂ ಬಳಸಿಕೊಳ್ಳಿ ಎಂದರಲ್ಲದೆ, ಎಸ್.ಡಿ.ಆರ್.ಎಫ್. ನಿಧಿಯಲ್ಲಿ ಅಗತ್ಯವಿದ್ದಲ್ಲಿ ವಾಹನಗಳನ್ನು ಬಳಸಿಕೊಳ್ಳಿ ಎಂದರು.

ಕೊಳಚೆ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಸ್ಯಾನಿಟೈಸರ್ ಮಾಡುವುದರ ಜೊತೆಗೆ ಅವರಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಅರಿವು ಮೂಡಿಸಿ ಎಂದರು.

ಕೇರಳದಿಂದ ಜಿಲ್ಲೆಗೆ ಅಗಮಿಸುವ ಎಲ್ಲಾ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ವೃದ್ಧಾಶ್ರಮಗಳಿಗೆ ಪ್ರತಿ 15 ದಿವಸಕ್ಕೊಮೆ ತೆರಳಿ ಕೋವಿಡ್ ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಿದಲ್ಲದೆ ಪ್ರತಿ ಬುಧವಾರದಂದು ನಡೆಯುವ ಲಸಿಕಾ ಮೇಳದಲ್ಲಿ 50 ಸಾವಿರ ಲಸಿಕೆ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದರಲ್ಲದೆ ನ್ಯುಮೋನಿಯಾ ರೋಗ ಲಕ್ಷಣಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಂದರು.

ಆರೋಗ್ಯ ಕಾರ್ಯಕರ್ತೆಯರು ಆಪರೇಶನ್‍ಗೆ ಬರುವ ಸಾರ್ವನಿಕರಿಗೆ ವೇಳಾ ಪಟ್ಟಿಯನ್ನು ಸಿದ್ಧಪಡಿಸಿ ಎಂದರಲ್ಲದೇ, ತಾಲ್ಲೂಕುವಾರು ಶಿಶು ಮತ್ತು ತಾಯಿ ಮರಣ ಪ್ರಮಾಣ ಪರಿಶೀಲನೆ ನಡೆಸಿ ಮರಣ ಪ್ರಮಾಣವನ್ನು ಕಡಿಮೆಗೊಳಿಸುವಂತೆ ವೈದ್ಯರುಗಳಿಗೆ ಸಲಹೆ ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರು ಮಾತನಾಡಿ ಪ್ರಸವ ವೇಳೆಯಲ್ಲಿ ತಾಯಿ ಮತ್ತು ನವಜಾತ ಶಿಶು ಮರಣ ಹಾಗೂ ಬಾಣಂತಿಯರ ಮರಣ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹೆಚ್ಚಿನ ಕಾಳಜಿವಹಿಸಬೇಕು ಎಂದರು.

ಆಸ್ಪತ್ರೆಗಳಿಗೆ ದಾಖಲಾಗುವ ಗರ್ಭಿಣಿಯರು ಮಕ್ಕಳ ಬಗ್ಗೆ ವೈದ್ಯರು ಸಕಾಲದಲ್ಲಿ ಸ್ಪಂದಿಸಿ ಸೂಕ್ತ ಚಿಕಿತ್ಸೆ ನಿಡಬೇಕು ತೀವ್ರ ಸಮಸ್ಯೆ ಇರುವವರನ್ನು ಬೇರೆ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ಬಳಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಗರ್ಭಿಣಿಯರಲ್ಲಿ ಅನಿಯಂತ್ರಿತ ರಕ್ತದೊತ್ತಡ, ರಕ್ತಸ್ರಾವ ತೊಂದರೆಗಳು ಕಂಡುಬಂದರೆ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ರಕ್ತ ಪರೀಕ್ಷೆಗೊಳಪಡಿಸಿ ಎಂದರು.

ಆಶಾ ಕಾರ್ಯಕರ್ತೆಯರು ಎಲ್ಲಾ ಗರ್ಭಿಣಿ ಬಾಣಂತಿಯರ ಮನೆಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ಕ್ಷೇಮ ವಿಚಾರಿಸುವುದರ ಜೊತೆಗೆ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಳ್ಳುವಂತೆ ಸಲಹೆ ನೀಡಿ ಎಂದು ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ಸತೀಶ್, ಆರ್. ಸಿ. ಎಚ್ ಅಧಿಕಾರಿ ಡಾ||ಕಾಂತರಾಜ್, ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ|| ನಾಗೇಶ್ ಆರಾಧ್ಯ, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣಧಿಕಾರಿ ಮಂಜುಳಾ, ಸ್ತ್ರೀ ರೋಗ ತಜ್ಞರಾದ ಡಾ|| ಭಾರತಿ ರಾಜಶೇಖರ್ ಹಾಗೂ ಮತ್ತಿತರ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here