ಸೆ.17 ರಂದು ವಿಶೇಷ ಲಸಿಕಾ ಅಭಿಯಾನ, ಲಸಿಕಾಕರಣದ ಯಶಸ್ಸಿಗೆ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಡಿಸಿ ಸೂಚನೆ.

0
54

ಶಿವಮೊಗ್ಗ, ಸೆಪ್ಟೆಂಬರ್ 15:ಸೆಪ್ಟೆಂಬರ್ ಮಾಹೆಯಲ್ಲಿ ಗರಿಷ್ಟ ಕೋವಿಡ್ ಲಸಿಕಾಕರಣ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿಯವರು ಸೆಪ್ಟೆಂಬರ್ 17 ರಂದು ರಾಜ್ಯಾದ್ಯಂತ ವಿಶೇಷ ಲಸಿಕಾ ಅಭಿಯಾನಕ್ಕೆ ಕರೆ ಕೊಟ್ಟಿದ್ದು, ಜಿಲ್ಲೆಗೆ 80 ಸಾವಿರ ಲಸಿಕೆ ನೀಡುವ ಗುರಿ ನೀಡಲಾಗಿದೆ. ನಿಗದಿತ ಗುರಿ ತಲುಪಲು ತಾಲ್ಲೂಕುಗಳ ತಹಶೀಲ್ದಾರರು ಎಲ್ಲ ರೀತಿಯ ಅಗತ್ಯ ತಯಾರಿ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ತಾಲ್ಲೂಕುಗಳ ತಹಶೀಲ್ದಾರರೊಂದಿಗೆ ಸಭೆ ನಡೆಸಿದ ಅವರು, ಸೆಪ್ಟೆಂಬರ್ 17 ರ ವಿಶೇಷ ಲಸಿಕಾ ಅಭಿಯಾನದಲ್ಲಿ ನಿಗದಿತ ಗುರಿ ತಲುಪಿ ಯಶಸ್ಸು ಸಾಧಿಸಲು ಅಗತ್ಯ ಸಿದ್ದತೆಯನ್ನು ಈಗಿನಿಂದಲೇ ಮಾಡಿಕೊಳ್ಳುವಂತೆ ತಿಳಿಸಿದರು.
ತಹಶೀಲ್ದಾರರು ಸ್ಥಳೀಯ ನಗರ ಮತ್ತು ಗ್ರಾಮೀಣ ಸಂಸ್ಥೆಗಳ ಸಹಯೋಗದೊಂದಿಗೆ ಲಸಿಕಾಕರಣಕ್ಕೆ ಅಗತ್ಯವಾದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಮತ್ತು ಡಾಟಾ ಎಂಟ್ರಿ ಆಪರೇಟರ್ ನಿಯೋಜನೆ, ವಾಹನ ವ್ಯವಸ್ಥೆ ಮತ್ತು ಲಸಿಕಾ ಸ್ಥಳ ಗುರುತು ಮಾಡಿ ಸಿದ್ದತೆ ಮಾಡಿಕೊಳ್ಳಬೇಕು. ಅಗತ್ಯ ಸೇವೆಗಳ ಇಲಾಖೆಗಳನ್ನು ಹೊರತುಪಡಿಸಿ ಇತರೆ ಇಲಾಖೆಗಳಿಂದ ಅಗತ್ಯ ಸಿಬ್ಬಂದಿ, ವಾಹನ ವ್ಯವಸ್ಥೆ ಮಾಡಿಕೊಳ್ಳಬೇಕು.
ಲಸಿಕಾಕರಣಕ್ಕೆ ಸಂಬಂಧಿಸಿದಂತೆ ಗ್ರಾ.ಪಂ ಮತ್ತು ವಾರ್ಡ್‍ವಾರು ಪಟ್ಟಿಯು ತಾಲ್ಲೂಕು ವೈದ್ಯಾಧಿಕಾರಿಗಳ ಬಳಿ ಇದ್ದು ತಹಶೀಲ್ದಾರರು ಅದನ್ನು ಪಡೆದು ಲಸಿಕಾಕರಣಕ್ಕೆ ಅಗತ್ಯವಾದ ಸಿದ್ದತೆ ಬಗ್ಗೆ ಇಂದೇ ಕ್ರಿಯಾ ಯೋಜನೆ ತಯಾರಿಸಿ ನೀಡಬೇಕು. ಹಾಗೂ ನಾಳೆ ಕ್ಷೇತ್ರ ಭೇಟಿ ನೀಡಿ ಎಲ್ಲ ಸಿದ್ದತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ ಅವರು ಇಂದು ಸಂಜೆ ಪುನಃ ಲಸಿಕಾಕರಣ ಅಭಿಯಾನ ಸಿದ್ದತೆ ಕುರಿತು ಸಭೆ ನಡೆಸುವುದಾಗಿ ತಿಳಿಸಿದರು.
ಸಭೆಯಲ್ಲಿ ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಓ.ಮಲ್ಲಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಇತರರು ಇದ್ದರು.

LEAVE A REPLY

Please enter your comment!
Please enter your name here